Thursday, November 6, 2008

ಗಣೇಶ ಬಂದ ಕಾಯಿ ಕಡುಬು ತಿಂದ...



ಏನಪ್ಪಾ, ದೀಪಾವಳಿ ಕೂಡ ಆಗೋಯ್ತು ಈಗ ’ಗಣೇಶ ಬಂದ...ಕಾಯಿ ಕಡುಬು ತಿಂದ’ ಅಂತಿದಾನೆ ಅಂದುಕೊಂಡಿರಾ...?
ಇದಕ್ಕೆ ಕಾರಣವಿದೆ...ತುಮಕೂರಿನಿಂದ ಕುಣಿಗಲ್ ದಾರಿಯಲ್ಲಿ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗೂಳೂರು ಗಣೇಶನ ನೋಡಲು ಇದೇ ಸರಿ ಸಮಯ...!
ಗೂಳೂರಿನ ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಊರಿನ ಮಂದಿ ಹೇಳುತ್ತಾರೆ...
ನಮಗೆ ಇಲ್ಲಿನ ಅರ್ಚಕರು ತಿಳಿಸಿದ್ದನ್ನು ಹಾಗೆ ಕೆಳಗಿಳಿಸಿದ್ದೇನೆ...

"ಬಹಳ ಬಹಳ ಹಿಂದೆ...
ಒಮ್ಮೆ ಭೃಗು ಮಹರ್ಷಿಗಳು ಈ ದಾರಿಯಲ್ಲಿ ಸಾಗುತ್ತಿರಲು, ರಾತ್ರಿಯ ಹೊತ್ತಾಯಿತು ಹಾಗಾಗಿ ಅವರು ಇಲ್ಲಿಯೇ ತಂಗಲು ನಿರ್ಧರಿಸಿದರು...ಆದರೆ, ಇಲ್ಲಿ ಎಲ್ಲೂ ಪೂಜಾ ವಿಧಿಗಳಿಗೆ ದೇವಸ್ಥಾನಗಳು ಕಾಣ ಸಿಗಲಿಲ್ಲ. ಆದುದರಿಂದ, ಇಲ್ಲಿ ಒಂದು ಗಣೇಶನ ಪ್ರತಿಮೆಯನ್ನು ತಾವೇ ನಿರ್ಮಿಸಿ, ಪೂಜಾ ವಿಧಿಗಳನ್ನು ಮಾಡಿದರು. ಇವರು ಪೂಜೆ ಮಾಡುತ್ತಿದ್ದ ಜಾಗದ ಬಳಿ ಸಾಗುತ್ತಿದ್ದ ಕೆಲವು ಹಳ್ಳಿಗರು ಇದನ್ನು ನೋಡಿ, ’ಹೇಗೆ ಮಾಡಿದಿರಿ ನಮಗೂ ಇದನ್ನು ತಿಳಿಸಿ ಹೇಳಿ’ ಎಂದು ಕೇಳಿಕೊಂಡರು. ಆಗ ಭೃಗು ಮಹರ್ಷಿಗಳು, ಹಳ್ಳಿಯವರನ್ನು ಕರೆದು ಗಣೇಶನನ್ನು ಹೇಗೆ ಮಾಡಬೇಕು ಎಂದು ತಿಳಿಹೇಳಿ, ಪೂಜಾ ವಿಧಿಗಳನ್ನು ತಿಳಿಸಿದರಂತೆ. ಅಂದಿನಿಂದ ಇಂದಿನವರೆಗೂ ಗಣೇಶನ ಪೂಜೆ ಸತತವಾಗಿ ನೆರವೇರಿದೆ ಎಂದು ಹೇಳುತ್ತಾರೆ.

ಗಣೇಶನ ಹಬ್ಬದಂದು, ಕೆರೆಯ ಮಣ್ಣಿನಿಂದ ಪುಟ್ಟ ಗಣೇಶನನ್ನು ಮಾಡಿ, ಗುಡಿಗೆ ತರುತ್ತಾರೆ. ಪೂಜಾ ವಿಧಿಗಳನ್ನು ಮುಗಿಸಿ, ದೊಡ್ಡ ಗಣೇಶನನ್ನು ಕಟ್ಟಲು ಆರಂಭಿಸುತ್ತಾರೆ. ನವರಾತ್ರಿ ಹಬ್ಬದ ಹೊತ್ತಿಗೆ, ಗಣೇಶನ ಮುಕ್ಕಾಲು ಭಾಗ ಆಕಾರ ಪೂರ್ಣಗೊಳ್ಳುತ್ತದೆ. ವಿಜಯ ದಶಮಿ ದಿನದಂದು, ಪುಟ್ಟ ಗಣೇಶನನ್ನು ದೊಡ್ಡ ಗಣೇಶನ ಹೊಟ್ಟೆಯ ಒಳಗೆ ಇರಿಸಿ, ಕಡುಬುಗಳನ್ನು ಇಟ್ಟು ತುಂಬುತ್ತಾರೆ.
ದೀಪಾವಳಿ ಸಮಯಕ್ಕೆ ದೊಡ್ಡ ಗಣೇಶನ ಆಕಾರ ಪೂರ್ಣಗೊಳ್ಳುತ್ತದೆ. ದೀಪಾವಳಿ ದಿನದಿಂದ, ಕಾರ್ತಿಕ ಮಾಸ ಪೂರ್ಣಗೊಳ್ಳುವವರೆಗೂ, ನಿತ್ಯ ಪೂಜೆಗಳು ನಡೆಯುತ್ತವೆ. ಕಾರ್ತಿಕ ಮಾಸ ಮುಕ್ತಾಯವಾದಾಗ, ಈ ದೊಡ್ಡ ಗಣೇಶನನ್ನು ವಿಸರ್ಜಿಸುತ್ತಾರೆ. ಈ ದೊಡ್ಡ ಗಣೇಶನನ್ನು ಮಾಡಲು ೧೯ ಹಳ್ಳಿಯ ಜನರಿಗೆ ವಿಧ ವಿಧವಾದ ಕೆಲಸಗಳನ್ನು ಹಂಚಿದ್ದಾರಂತೆ. ಆಯಾ ಕೆಲಸಗಳನ್ನು ಅವರೇ ಮಾಡಬೇಕೆಂದಿದೆ" ಎಂದು ತಿಳಿಸಿದರು.

ಗೂಳೂರು ಗಣಪನ ದರ್ಶನ ಪಡೆದ ನಾವು, ಹತ್ತಿರದಲ್ಲಿರುವ ಕೈದಾಳ ಎಂಬ ಸ್ಥಳಕ್ಕೆ ಭೇಟಿ ನೀಡಿದೆವು.
ಗೂಳೂರಿನಿಂದ ಸುಮಾರು ಒಂದು ಮೈಲಿ ದೂರದಲ್ಲಿ ಕೈದಾಳವಿದೆ.



ಇಲ್ಲಿ, ಹೊಯ್ಸಳರ ಕಾಲದಲ್ಲಿ ಕಟ್ಟಿಸಿದ ಚೆನ್ನಕೇಶವನ ಮತ್ತು ಶಿವನ ಗುಡಿಗಳಿವೆ.
ಈ ಚೆನ್ನಕೇಶವನ ಗುಡಿಯನ್ನು, ಅಮರಶಿಲ್ಪಿ ಜಕಣಾಚಾರಿ ಕಟ್ಟಿದುದಾಗಿಯೂ, ಇಲ್ಲಿಯೇ ಇವನಿಗೆ ಕೈ ಮರಳಿ ಬಂತೆಂದೂ, ಅದಕ್ಕಾಗಿಯೇ ಈ ಸ್ಥಳ ಕೈದಾಳವೆಂದು ಹೆಸರು ಪಡೆದುದಾಗಿಯೂ, ಐತಿಹ್ಯವಿದೆ.



ಇಲ್ಲಿನ ಚೆನ್ನಕೇಶವನ ವಿಗ್ರಹವು, ತ್ರಿಮೂರ್ತಿ ರೂಪವೆಂದೂ ಹೇಳುವರು. ಮೂಲ ವಿಗ್ರಹದ ಕೆಳ ಭಾಗವು ಲಿಂಗದಂತೆ ಕೆತ್ತಿದ್ದು, ಲಿಂಗದ ಮೇಲೆ, (ಬ್ರಹ್ಮ) ಕಮಲವನ್ನು ಬಿಡಿಸಲಾಗಿದೆ. ಇದರ ಮೇಲೆ ಚೆನ್ನಕೇಶವನ ವಿಗ್ರಹವನ್ನು ಕೆತ್ತಲಾಗಿದೆ. ಈ ವಿಗ್ರಹ ಸುಮಾರು ೮ ಅಡಿಗಳಷ್ಟು ಎತ್ತರವಿದೆ. ಹೊಯ್ಸಳರ ಕಲ್ಲ ಕುಸುರಿಯ ಬಗ್ಗೆ ಹೆಚ್ಚು ಹೇಳಬೇಕಿಲ್ಲವಷ್ಟೆ, ಮೂಲ ವಿಗ್ರಹವು ಅತ್ಯಂತ ಸುಂದರ ಹಾಗೂ ಅದ್ಭುತವಾಗಿದೆ. ಇಲ್ಲಿನ ಚೆನ್ನಕೇಶವನ ವಿಗ್ರಹದ ಸುತ್ತ ದಶಾವತಾರವನ್ನು ಚಿತ್ರಿಸಲಾಗಿದೆ. ಈ ಗುಡಿಯ ಮಂಟಪದ ಕಂಬಗಳು, ಸುತ್ತಲಿರುವ ಹೊರಗೋಡೆ ಹೊಯ್ಸಳರ ಶೈಲಿಯಲ್ಲಿ ಇಲ್ಲವಾದ್ದರಿಂದ, ಇದನ್ನು ಅನಂತರ ಕಟ್ಟಿರಬಹುದೆಂಬುದು ನನ್ನ ಊಹೆ.



ಗುಡಿಯ ಹೊರಗೋಡೆಯ ಮೇಲೆ ಒಂಟೆ, ಕುದುರೆಗಳ ಮೇಲೆ ಸೈನಿಕರು ಸಾಗುತ್ತಿರುವ ಚಿತ್ರಗಳು, ಆನೆಯ ಚಿತ್ರಗಳೂ ಕಾಣಸಿಗುತ್ತದೆ. ಒಂಟೆಯನ್ನು ಕಂಡು ಅಚ್ಚರಿಯಾಗಿದ್ದೂ ನಿಜ. ಹೊರಗೋಡೆಯ ಮೇಲೆ, ಎರಡು ಮೀನುಗಳು ಒಂದು ಮರಿ ಮೀನನ್ನು ಎತ್ತಿಹಿಡಿದದ್ದೂ ಆಕರ್ಷಿಸಿತು. ಈ ಗುಡಿಯ ಆವರಣದಲ್ಲಿ, ಒಂದು ವೀರ(ಮಾಸ್ತಿ?) ಕಲ್ಲು ಕೂಡ ಕಂಡು ಬಂತು.
ಚೆನ್ನಕೇಶವನ ಗುಡಿಯ ಪಕ್ಕದಲ್ಲೇ ಹೊಯ್ಸಳರೇ ಕಟ್ಟಿಸಿದ ಶಿವನ ಗುಡಿಯಿದೆ.
ಈ ಗುಡಿಗೆ ಬೀಗ ಜಡೆದದ್ದರಿಂದ, ಗುಡಿಯ ಒಳಹೋಗಲಿಲ್ಲವಾದ್ದರಿಂದ, ಕಿಟಕಿಯಿಂದಲೇ ಇಣುಕಿ ನೋಡಿ ತೃಪ್ತರಾಗಬೇಕಾಯಿತು. ಚೆನ್ನಕೇಶವನ ಗುಡಿಯಲ್ಲಿ ನಿತ್ಯ ಪೂಜೆ ನಡೆಯುತ್ತಿದೆಯಾದರೂ, ಶಿವನ ಗುಡಿಯಲ್ಲಿ ನಿತ್ಯಪೂಜೆಗಳಿಲ್ಲ ಕೇವಲ ಸೋಮವಾರ ಪೂಜೆ ನಡೆಯುತ್ತಿದೆ ಎಂದು ತಿಳಿದು ತುಸು ಬೇಸರವಾಯಿತು. ಈ ಶಿವನ ಗುಡಿಯ ಮಂಟಪದ ಕಂಬಗಳಲ್ಲಿ ಹೊಯ್ಸಳರ ಶೈಲಿ ಕಂಡು ಬಂತು. ಒಳಗಿರುವ ಎರಡು ಹೞೆಗನ್ನಡದ ಶಾಸನಗಳೂ ಕಂಡು ಬಂದವು. ಒಂದು ಕಂಬವನ್ನು ಜಕಣನು ಕೆತ್ತದೇ ಹಾಗೇ ಉಳಿಸಿದ್ದು, ಮುಂದೆ ತನಗಿಂತ ಉತ್ತಮ ಶಿಲ್ಪಿ ಕೆತ್ತಲಿ ಎಂದು ಬಿಟ್ಟಿರುವನೆಂದು ಹೇಳಿದರಾದರೂ ನಮಗೆ ಯಾವುದದೆಂದು ಕಿಟಕಿಯಿಂದ ತಿಳಿದು ಬರಲಿಲ್ಲ. ಈ ಗುಡಿಯ ಮಂಟಪದ ಮೇಲೆ, ಆಕರ್ಷಕ ಚಂದ್ರಮೌಳೇಶ್ವರನ ವಿಗ್ರಹವೊಂದು ಕಾಣಸಿಗುತ್ತದೆ.



ಕೈದಾಳದ ಕೇಶವನ ದರ್ಶನ ಮಾಡಿ ಅಲ್ಲೇ ಬುತ್ತಿಯ ಊಟವ ಮಾಡಿ ಬೆಂಗಳೂರಿಗೆ ಹಿಂತಿರುಗಿದೆವು.

--ಶ್ರೀ

ಕೊ:
ಕೈದಾಳದಲ್ಲಿ ಗುಡಿಗೆ ಸರ್ಕಾರ ಬಣ್ಣ ಬಳಿಯುವ ಕೆಲಸವನ್ನು ಮಾಡುತ್ತಿದೆ ಎಂದು ಕಾಣುತ್ತದೆ, ಬಣ್ಣದ ಆಯ್ಕೆ ನನಗೆ ಸರಿ ಕಾಣಲಿಲ್ಲ.
ಹೊಸ ಬಣ್ಣದೊಂದಿಗೆ, ಹನ್ನೆರಡನೇ ಶತಮಾನದ ಗುಡಿ ಎಂದೆನಿಸುವುದೇ ಇಲ್ಲ...

ಕೈದಾಳದಲ್ಲಾಗಲಿ, ಗೂಳೂರಿನಲ್ಲಾಗಲಿ ಊಟ, ತಿಂಡಿಗಳ ವ್ಯವಸ್ಥೆಯಿಲ್ಲ, ಆದರೆ ಹತ್ತಿರದಲ್ಲೇ ತುಮಕೂರಿದೆಯಲ್ಲ! :)

No comments: