Showing posts with label ಪ್ರವಾಸ ಕಥನ. Show all posts
Showing posts with label ಪ್ರವಾಸ ಕಥನ. Show all posts

Friday, June 5, 2009

ಹಿಮಾಚಲ ಪರ್ಯಟನೆ - ಬೈಜನಾಥ್



ಹಿಮಾಚಲದ ಕಾಂಗ್ರ ಗುಡ್ಡಗಾಡಿನ ತಪ್ಪಲಲ್ಲಿರುವ ಊರು - ಬೈಜನಾಥ್. ಧರ್ಮಶಾಲಾದಿಂದ ಪೂರ್ವಕ್ಕಿರುವ ಈ ಊರು ಬಿನ್ವಾ ಎಂಬ ನದಿಯ ತಟದಲ್ಲಿದೆ. ಬಿಯಾಸ್ ನದಿಯ ಉಪನದಿ ಈ ಬಿನ್ವಾ.
ಊರಿನ ಹೆಸರೇ ಸೂಚಿಸುವಂತೆ ಇಲ್ಲಿ ಬೈಜನಾಥ್ ದೇವಾಲಯವಿದೆ. ಬೈಜನಾಥನೆಂದರೆ ವೈದ್ಯನಾಥ, ಶಿವ.
ಈ ಸ್ಥಳದಲ್ಲಿ ಶಾರದಾ ಲಿಪಿಯಲ್ಲಿ ಬರೆದ ಶಿಲಾಶಾಸನಗಳು ದೊರೆಕಿವೆ. ಈ ಶಿಲಾಶಾಸನಗಳಿಂದ ಈ ಊರಿನ ಹಳೆಯ ಹೆಸರು ’ಕೀರಗ್ರಾಮ’ ಎಂದೂ, ಬಿನ್ವಾ ನದಿಯ ಹಳೆಯ ಹೆಸರು ’ಬಿಂದುಕಾ’ ಎಂದೂ ತಿಳಿದುಬರುತ್ತದೆ. ಈ ಶಿಲಾಶಾಸನಗಳಿಂದ, ಈ ದೇಗುಲವನ್ನು ಕ್ರಿ.ಶ. ೧೨೦೪ರಲ್ಲಿ ಕಟ್ಟಿದರೆಂದೂ ಹೇಳುತ್ತಾರೆ.
ಉತ್ತರ ಭಾರತದ ನಾಗರ ಶೈಲಿಯಲ್ಲಿ ಕಟ್ಟಿರುವ ಸುಂದರ ದೇಗುಲ - ಬೈಜನಾಥ್. ಇಲ್ಲಿ, ವೈದ್ಯನಾಥನ ಎದುರು(ಲಿಂಗಕ್ಕೆ ನೇರವಾಗಿ) ಎರಡು ನಂದಿ ವಿಗ್ರಹಗಳು ಕಾಣಸಿಗುತ್ತವೆ. ಪುಟ್ಟ ಮಂಟಪದೊಳಗೆ ಕುಳಿತ ನಂದಿಯೊಂದಾದರೆ, ಅದರ ಹಿಂದೆ ನಿಂತಿರುವ ನಂದಿಯೊಂದು. ಪಶ್ಚಿಮಕ್ಕೆ ಮುಖ ಮಾಡಿರುವ ಈ ದೇಗುಲದ ಮುಖಮಂಟಪಕ್ಕೆ ನಾಲ್ಕು ಕಂಬಗಳಿವೆ.
ದೇಗುಲದ ಮುಖ್ಯದ್ವಾರದ ಎಡ ಭಾಗಕ್ಕೆ, ನಿಂತಿರುವ ಗಣಪನ ವಿಗ್ರಹವೊಂದು ಕಾಣಸಿಗುತ್ತದೆ. ದೇಗುಲದ ಹೊರಭಾಗದ ಸುತ್ತಲೂ, ಸುಬ್ರಮಣ್ಯ, ಕಾಳಿ, ಪಾರ್ವತಿ ಮುಂತಾದ ಮನಸೆಳೆವ ವಿಗ್ರಹಗಳಿವೆ.

ಈ ಊರಿನಲ್ಲಿ ನಡೆವ ದಸರೆಯಲ್ಲೊಂದು ವೈಶಿಷ್ಟ್ಯವಿದೆ.
ಉತ್ತರ ಭಾರತದಲ್ಲಿ, ಸಾಮಾನ್ಯವಾಗಿ ದಸರೆಯ ಸಮಯದಲ್ಲಿ ಕಾಣಸಿಗುವುದು ’ರಾಮ-ಲೀಲ’ ಉತ್ಸವ. ಈ ಉತ್ಸವದಲ್ಲಿ, ರಾವಣ-ಕುಂಭಕರ್ಣ-ಮೇಘನಾದರ ಬೊಂಬೆಗಳನ್ನು ಸುಡುವುದು ಸರ್ವೇ ಸಾಮಾನ್ಯ.
ಆದರೆ ಈ ಊರಿನಲ್ಲಿ ರಾವಣನನ್ನು ಸುಡುವುದಿಲ್ಲ. ಈ ಸ್ಥಳದಲ್ಲಿ ಬೈಜನಾಥನನ್ನು ಕುರಿತು ರಾವಣ ತಪಗೈದಿದ್ದನೆಂಬುದು ಇಲ್ಲಿಯವರ ನಂಬಿಕೆ. ಇಲ್ಲಿ ಕೂಡ ಕೆಲ ವರ್ಷಗಳ ಹಿಂದೆ ದಸರಾ ಸಮಯದಲ್ಲಿ, ಬೇರೆಡೆಯಂತೆ ದಸರೆಯ ಸಮಯದಲ್ಲಿ ರಾವಣನ ಬೊಂಬೆ ಸುಟ್ಟಾಗ ಉತ್ಸವ ನಡೆಸಿಕೊಟ್ಟವರಿಗೆ ಸಾವಾಯ್ತಂತೆ.
ಇದೇ ರೀತಿ, ಪ್ರತಿ ವರ್ಷವೂ ರಾವಣನನ್ನು ಸುಟ್ಟಾಗ, ಒಂದಿಲ್ಲೊಂದು ಕೆಡುಕಾಗಿ, ಕೊನೆಗೆ ರಾವಣನ ಸುಡುವ ಪ್ರತೀತಿಯನ್ನು ಈಗ ನಿಲ್ಲಿಸಿದ್ದಾರೆ.

ಒಟ್ಟಿನಲ್ಲಿ, ಬೆಟ್ಟದಿಂದ ಸುತ್ತುವರಿದ, ಸಿಂಧೂ ನದಿಯ ಉಪನದಿಯ ಉಪನದಿಯ ತಟದ ಈ ಬೈಜನಾಥ್, ಕುತೂಹಲಭರಿತ ಪ್ರೇಕ್ಷಣೀಯ ಸ್ಥಳ.

--ಶ್ರೀ

Wednesday, April 1, 2009

ಹಿಮಾಚಲ ಪರ್ಯಟನೆ - ಯಾಕೂ (ಝಾಕೂ) ದೇಗುಲ, ಶಿಮ್ಲಾ



ಶಿಮ್ಲಾ ನಗರದಲ್ಲಿನ ಪೂರ್ವಕ್ಕಿರುವ ಎತ್ತರದ ಬೆಟ್ಟ - ಝಾಕೂ(ಯಾಕೂ). ಸಮುದ್ರ ಮಟ್ಟದಿಂದ, ಸುಮಾರು ೮೫೦೦ ಅಡಿಗಳ ಮೇಲೆ ಇರುವ ಈ ಬೆಟ್ಟದ ಮೇಲೆ, ಹನುಮಂತನ ದೇಗುಲವೊಂದಿದೆ.
ಈ ದೇಗುಲವನ್ನು ತಲುಪಲು, ಬೆಟ್ಟದ ಬುಡದಿಂದ ೨ ಕಿ.ಮೀ. ಕಡಿದಾದ ದಾರಿ ಇದ್ದು, ಇದನ್ನು ಹತ್ತಿ ತಲುಪಬಹುದು ಇಲ್ಲವೇ ಬೆಟ್ಟಗಳನ್ನು ಸುಲುಭವಾಗಿ ಹತ್ತುವ(೪-wheel drive) ಕಾರಿನಲ್ಲಿ ತಲುಪಬಹುದು.

ಈ ಝಾಕು ಬೆಟ್ಟಕ್ಕೆ ಹನುಮಂತನು ಭೇಟಿ ಕೊಟ್ಟಿದ್ದನೆಂಬ ಪ್ರತೀತಿ. ಈ ದೇಗುಲದಲ್ಲಿ ಕೆಳಕಂಡ ಇತಿಹಾಸ(ನಂಬಿಕೆ)ಯನ್ನು ದಾಖಲಿಸಿದ್ದಾರೆ:

ರಾಮಾಯಣದಲ್ಲಿ, ಲಕ್ಷ್ಮಣನು ಇಂದ್ರಜಿತುವಿನ ಬಾಣದಿಂದ ಪ್ರಜ್ಞಾಹೀನನಾದಾಗ, ಹನುಮಂತನು ವಾನರ ಸಹಚರರೊಂದಿಗೆ ಹಿಮಾಲಯಕ್ಕೆ ಧಾವಿಸುತ್ತಾನೆ.
ಸಂಜೀವಿನಿಯನ್ನು ಹುಡುಕುತ್ತಾ ಹಿಮಾಲಯದಲ್ಲಿ ಸಂಚರಿಸುತ್ತಿರುವಾಗ, ಝಾಕೂ ಎಂಬ ಋಷಿಯು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿರುವುದು ಹನುಮನ ಕಣ್ಣಿಗೆ ಬೀಳುತ್ತದೆ.
ಆಗ ಹನುಮನು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ಹೆಚ್ಚು ತಿಳಿಯಲು, ಝಾಕೂ ಋಷಿಯ ಸಹಾಯವನ್ನು ಕೋರುತ್ತಾನೆ.
ಝಾಕೂ ಋಷಿಯು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ತಿಳಿಸಿ, ಅದು ದ್ರೋಣ ಪರ್ವತದಲ್ಲಿ ಸಿಗುವುದಾಗಿ ವಿವರಿಸುತ್ತಾನೆ.
’ಸಂಜೀವಿನಿ ಮೂಲಿಕೆ ಸಿಕ್ಕ ಮೇಲೆ, ಈ ಬೆಟ್ಟಕ್ಕೆ ಬಂದು, ತನ್ನನ್ನು ಭೇಟಿ ನೀಡಿ ಲಂಕೆಗೆ ಹೋಗು’ ಎಂದು ಹನುಮನ ಬಳಿ ವಚನ ತೆಗೆದುಕೊಳ್ಳುತ್ತಾನೆ.

ಹನುಮನು ದ್ರೋಣ ಪರ್ವತದ ಕಡೆಗೆ ಹೊರಡಲು ಅನುವಾದಾಗ, ತನ್ನ ಸಹಚರರು ನಿದ್ರೆಯಲ್ಲಿರುದುವುದನ್ನರಿತು, ಅವರನ್ನು ಅಲ್ಲೇ ಬಿಟ್ಟು ದ್ರೋಣ ಪರ್ವತಕ್ಕೆ ಹೊರಟು ಹೋಗುತ್ತಾನೆ.
ಹನುಮಂತನಿಗೆ ಸಂಜೀವಿನಿ ದೊರಕುವ ವೇಳೆಗೆ, ಹೆಚ್ಚು ಕಾಲ ಕಳೆದಿದ್ದು, ಹನುಮನು ಝಾಕೂ ಋಷಿಯನ್ನು ಭೇಟಿ ಮಾಡದೆ ಲಕ್ಷ್ಮಣನನ್ನು ಉಳಿಸಲು ಲಂಕೆಗೆ ಹೊರಡುತ್ತಾನೆ.
ಲಕ್ಷ್ಮಣನು ಲಂಕೆಯಲ್ಲಿ ಸಂಜೀವಿನಿ ಮೂಲಿಕೆಯಿಂದ ಚೇತರಿಸುಕೊಳ್ಳುತ್ತಾನೆ.

ಇತ್ತ, ಝಾಕೂ ಋಷಿಯು ಹನುಮನನ್ನು ಮರು ಕಾಣದೆ ಚಡಪಡಿಸುತ್ತಿರುತ್ತಾನೆ. ಹನುಮನು ತನ್ನ ಮಾತನ್ನು ಉಳಿಸಿಕೊಳ್ಳಲು, ಮತ್ತೆ ಝಾಕೂ ಋಷಿಯನ್ನು ಭೇಟಿ ಮಾಡುತ್ತಾನೆ.
ಝಾಕೂ ಋಷಿಗೆ ಸಂಜೀವಿನಿ ದೊರಕಿದ ವಿವರವನ್ನು ತಿಳಿಸಿ, ಹೆಚ್ಚು ಕಾಲವಿಲ್ಲದ್ದರಿಂದ ಲಂಕೆಗೆ ತಮ್ಮನ್ನು ಭೇಟಿ ಮಾಡದೆ ಹಾಗೆ ಹೊರಟು ಹೋಗಬೇಕಾಯಿತೆಂದು ಅರಿಕೆ ಮಾಡಿಕೊಳ್ಳುತ್ತಾನೆ.
ಈ ಸ್ಥಳದಿಂದ ಹನುಮನು ಹೊರಟ ಮೇಲೆ, ಇಲ್ಲಿ ಹನುಮನ ಒಂದು ಉದ್ಭವ ಮೂರ್ತಿ ಕಾಣಿಸುಕೊಳ್ಳುತ್ತದೆ.

ಹನುಮಂತನ ನೆನಪಿಗಾಗಿ ಝಾಕು ಋಷಿ ಈ ಮಂದಿರವನ್ನು ಕಟ್ಟಿದ್ದರೆಂದು ಪ್ರತೀತಿ.
ಅಂದಿನಿಂದ ಈ ಮೂರ್ತಿಯನ್ನೇ ಇಲ್ಲಿ ಪೂಜಿಸುತ್ತಿದ್ದಾರಂತೆ...ಹನುಮನ ಸಹಚರರು ಅಂದಿನಿಂದ ಇಂದಿನವರೆಗೂ ಇಲ್ಲೇ ಇದ್ದಾರೆಂದು, ಹಾಗಾಗಿ ಈ ಸ್ಥಳದಲ್ಲಿ ಕೋತಿಗಳ ಸಂಖ್ಯೆ ಹೆಚ್ಚು ಎಂಬ ನಂಬಿಕೆ.

ಈ ದೇಗುಲದ ಪರಿಸರ ರಮ್ಯವಾಗಿದ್ದು, ದೇವದಾರು, ಪೈನ್ ಮರಗಳ ಮಧ್ಯೆ ಈ ಮಂದಿರವಿದೆ.
ಇಲ್ಲಿಂದ, ಶಿಮ್ಲಾ ನಗರದ ಮನಮೋಹಕ ದೃಶ್ಯ ಕಾಣ ಸಿಗುತ್ತದೆ.
ಇಲ್ಲಿನ ಕೋತಿಗಳು, ಪ್ರವಾಸಿಗರ ಜೇಬುಗಳನ್ನು ಆಹಾರಕ್ಕಾಗಿ ಪರೀಕ್ಷಿಸುತ್ತದೆಂದೂ, ಬ್ಯಾಗ್‍ಗಳನ್ನು ಕಸಿಯುತ್ತದೆಂದೂ ಕುಪ್ರಸಿದ್ಧಿ ಪಡೆದಿವೆ.
ಹಲವಾರು ಮಂದಿ, ಕೋತಿಗಳನ್ನು ಓಡಿಸಲು ದೊಣ್ಣೆಗಳನ್ನು ಬಳಸುತ್ತಿದ್ದುದೂ, ಕೋತಿಗಳು ಪ್ರವಾಸಿಗರ ಚಪ್ಪಲಿಗಳನ್ನು ಎತ್ತೊಯ್ದದ್ದೂ ಕಣ್ಣಾರೆ ಕಂಡೆವು.
ಇಲ್ಲಿಗೆ ಭೇಟಿ ನೀಡುವವರು ತುಸು ಎಚ್ಚರಿಕೆಯಿಂದಿದ್ದರೆ ಒಳಿತು...
ರಾಮ ಜಪದ ಮಹಿಮೆಯೋ / ನಮ್ಮ ಅದೃಷ್ಟವೋ ನಮ್ಮ ಸುತ್ತ-ಮುತ್ತ ಹತ್ತು-ಹಲವಾರು ಕೋತಿಗಳು ಬೇರೆಯವರನ್ನು ದಾಳಿ ಮಾಡಿದರೂ ಒಂದೂ ನಮ್ಮ ತಂಟೆಗೆ ಬರಲಿಲ್ಲ... :)

--ಶ್ರೀ

Thursday, November 6, 2008

ಗಣೇಶ ಬಂದ ಕಾಯಿ ಕಡುಬು ತಿಂದ...



ಏನಪ್ಪಾ, ದೀಪಾವಳಿ ಕೂಡ ಆಗೋಯ್ತು ಈಗ ’ಗಣೇಶ ಬಂದ...ಕಾಯಿ ಕಡುಬು ತಿಂದ’ ಅಂತಿದಾನೆ ಅಂದುಕೊಂಡಿರಾ...?
ಇದಕ್ಕೆ ಕಾರಣವಿದೆ...ತುಮಕೂರಿನಿಂದ ಕುಣಿಗಲ್ ದಾರಿಯಲ್ಲಿ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗೂಳೂರು ಗಣೇಶನ ನೋಡಲು ಇದೇ ಸರಿ ಸಮಯ...!
ಗೂಳೂರಿನ ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಊರಿನ ಮಂದಿ ಹೇಳುತ್ತಾರೆ...
ನಮಗೆ ಇಲ್ಲಿನ ಅರ್ಚಕರು ತಿಳಿಸಿದ್ದನ್ನು ಹಾಗೆ ಕೆಳಗಿಳಿಸಿದ್ದೇನೆ...

"ಬಹಳ ಬಹಳ ಹಿಂದೆ...
ಒಮ್ಮೆ ಭೃಗು ಮಹರ್ಷಿಗಳು ಈ ದಾರಿಯಲ್ಲಿ ಸಾಗುತ್ತಿರಲು, ರಾತ್ರಿಯ ಹೊತ್ತಾಯಿತು ಹಾಗಾಗಿ ಅವರು ಇಲ್ಲಿಯೇ ತಂಗಲು ನಿರ್ಧರಿಸಿದರು...ಆದರೆ, ಇಲ್ಲಿ ಎಲ್ಲೂ ಪೂಜಾ ವಿಧಿಗಳಿಗೆ ದೇವಸ್ಥಾನಗಳು ಕಾಣ ಸಿಗಲಿಲ್ಲ. ಆದುದರಿಂದ, ಇಲ್ಲಿ ಒಂದು ಗಣೇಶನ ಪ್ರತಿಮೆಯನ್ನು ತಾವೇ ನಿರ್ಮಿಸಿ, ಪೂಜಾ ವಿಧಿಗಳನ್ನು ಮಾಡಿದರು. ಇವರು ಪೂಜೆ ಮಾಡುತ್ತಿದ್ದ ಜಾಗದ ಬಳಿ ಸಾಗುತ್ತಿದ್ದ ಕೆಲವು ಹಳ್ಳಿಗರು ಇದನ್ನು ನೋಡಿ, ’ಹೇಗೆ ಮಾಡಿದಿರಿ ನಮಗೂ ಇದನ್ನು ತಿಳಿಸಿ ಹೇಳಿ’ ಎಂದು ಕೇಳಿಕೊಂಡರು. ಆಗ ಭೃಗು ಮಹರ್ಷಿಗಳು, ಹಳ್ಳಿಯವರನ್ನು ಕರೆದು ಗಣೇಶನನ್ನು ಹೇಗೆ ಮಾಡಬೇಕು ಎಂದು ತಿಳಿಹೇಳಿ, ಪೂಜಾ ವಿಧಿಗಳನ್ನು ತಿಳಿಸಿದರಂತೆ. ಅಂದಿನಿಂದ ಇಂದಿನವರೆಗೂ ಗಣೇಶನ ಪೂಜೆ ಸತತವಾಗಿ ನೆರವೇರಿದೆ ಎಂದು ಹೇಳುತ್ತಾರೆ.

ಗಣೇಶನ ಹಬ್ಬದಂದು, ಕೆರೆಯ ಮಣ್ಣಿನಿಂದ ಪುಟ್ಟ ಗಣೇಶನನ್ನು ಮಾಡಿ, ಗುಡಿಗೆ ತರುತ್ತಾರೆ. ಪೂಜಾ ವಿಧಿಗಳನ್ನು ಮುಗಿಸಿ, ದೊಡ್ಡ ಗಣೇಶನನ್ನು ಕಟ್ಟಲು ಆರಂಭಿಸುತ್ತಾರೆ. ನವರಾತ್ರಿ ಹಬ್ಬದ ಹೊತ್ತಿಗೆ, ಗಣೇಶನ ಮುಕ್ಕಾಲು ಭಾಗ ಆಕಾರ ಪೂರ್ಣಗೊಳ್ಳುತ್ತದೆ. ವಿಜಯ ದಶಮಿ ದಿನದಂದು, ಪುಟ್ಟ ಗಣೇಶನನ್ನು ದೊಡ್ಡ ಗಣೇಶನ ಹೊಟ್ಟೆಯ ಒಳಗೆ ಇರಿಸಿ, ಕಡುಬುಗಳನ್ನು ಇಟ್ಟು ತುಂಬುತ್ತಾರೆ.
ದೀಪಾವಳಿ ಸಮಯಕ್ಕೆ ದೊಡ್ಡ ಗಣೇಶನ ಆಕಾರ ಪೂರ್ಣಗೊಳ್ಳುತ್ತದೆ. ದೀಪಾವಳಿ ದಿನದಿಂದ, ಕಾರ್ತಿಕ ಮಾಸ ಪೂರ್ಣಗೊಳ್ಳುವವರೆಗೂ, ನಿತ್ಯ ಪೂಜೆಗಳು ನಡೆಯುತ್ತವೆ. ಕಾರ್ತಿಕ ಮಾಸ ಮುಕ್ತಾಯವಾದಾಗ, ಈ ದೊಡ್ಡ ಗಣೇಶನನ್ನು ವಿಸರ್ಜಿಸುತ್ತಾರೆ. ಈ ದೊಡ್ಡ ಗಣೇಶನನ್ನು ಮಾಡಲು ೧೯ ಹಳ್ಳಿಯ ಜನರಿಗೆ ವಿಧ ವಿಧವಾದ ಕೆಲಸಗಳನ್ನು ಹಂಚಿದ್ದಾರಂತೆ. ಆಯಾ ಕೆಲಸಗಳನ್ನು ಅವರೇ ಮಾಡಬೇಕೆಂದಿದೆ" ಎಂದು ತಿಳಿಸಿದರು.

ಗೂಳೂರು ಗಣಪನ ದರ್ಶನ ಪಡೆದ ನಾವು, ಹತ್ತಿರದಲ್ಲಿರುವ ಕೈದಾಳ ಎಂಬ ಸ್ಥಳಕ್ಕೆ ಭೇಟಿ ನೀಡಿದೆವು.
ಗೂಳೂರಿನಿಂದ ಸುಮಾರು ಒಂದು ಮೈಲಿ ದೂರದಲ್ಲಿ ಕೈದಾಳವಿದೆ.



ಇಲ್ಲಿ, ಹೊಯ್ಸಳರ ಕಾಲದಲ್ಲಿ ಕಟ್ಟಿಸಿದ ಚೆನ್ನಕೇಶವನ ಮತ್ತು ಶಿವನ ಗುಡಿಗಳಿವೆ.
ಈ ಚೆನ್ನಕೇಶವನ ಗುಡಿಯನ್ನು, ಅಮರಶಿಲ್ಪಿ ಜಕಣಾಚಾರಿ ಕಟ್ಟಿದುದಾಗಿಯೂ, ಇಲ್ಲಿಯೇ ಇವನಿಗೆ ಕೈ ಮರಳಿ ಬಂತೆಂದೂ, ಅದಕ್ಕಾಗಿಯೇ ಈ ಸ್ಥಳ ಕೈದಾಳವೆಂದು ಹೆಸರು ಪಡೆದುದಾಗಿಯೂ, ಐತಿಹ್ಯವಿದೆ.



ಇಲ್ಲಿನ ಚೆನ್ನಕೇಶವನ ವಿಗ್ರಹವು, ತ್ರಿಮೂರ್ತಿ ರೂಪವೆಂದೂ ಹೇಳುವರು. ಮೂಲ ವಿಗ್ರಹದ ಕೆಳ ಭಾಗವು ಲಿಂಗದಂತೆ ಕೆತ್ತಿದ್ದು, ಲಿಂಗದ ಮೇಲೆ, (ಬ್ರಹ್ಮ) ಕಮಲವನ್ನು ಬಿಡಿಸಲಾಗಿದೆ. ಇದರ ಮೇಲೆ ಚೆನ್ನಕೇಶವನ ವಿಗ್ರಹವನ್ನು ಕೆತ್ತಲಾಗಿದೆ. ಈ ವಿಗ್ರಹ ಸುಮಾರು ೮ ಅಡಿಗಳಷ್ಟು ಎತ್ತರವಿದೆ. ಹೊಯ್ಸಳರ ಕಲ್ಲ ಕುಸುರಿಯ ಬಗ್ಗೆ ಹೆಚ್ಚು ಹೇಳಬೇಕಿಲ್ಲವಷ್ಟೆ, ಮೂಲ ವಿಗ್ರಹವು ಅತ್ಯಂತ ಸುಂದರ ಹಾಗೂ ಅದ್ಭುತವಾಗಿದೆ. ಇಲ್ಲಿನ ಚೆನ್ನಕೇಶವನ ವಿಗ್ರಹದ ಸುತ್ತ ದಶಾವತಾರವನ್ನು ಚಿತ್ರಿಸಲಾಗಿದೆ. ಈ ಗುಡಿಯ ಮಂಟಪದ ಕಂಬಗಳು, ಸುತ್ತಲಿರುವ ಹೊರಗೋಡೆ ಹೊಯ್ಸಳರ ಶೈಲಿಯಲ್ಲಿ ಇಲ್ಲವಾದ್ದರಿಂದ, ಇದನ್ನು ಅನಂತರ ಕಟ್ಟಿರಬಹುದೆಂಬುದು ನನ್ನ ಊಹೆ.



ಗುಡಿಯ ಹೊರಗೋಡೆಯ ಮೇಲೆ ಒಂಟೆ, ಕುದುರೆಗಳ ಮೇಲೆ ಸೈನಿಕರು ಸಾಗುತ್ತಿರುವ ಚಿತ್ರಗಳು, ಆನೆಯ ಚಿತ್ರಗಳೂ ಕಾಣಸಿಗುತ್ತದೆ. ಒಂಟೆಯನ್ನು ಕಂಡು ಅಚ್ಚರಿಯಾಗಿದ್ದೂ ನಿಜ. ಹೊರಗೋಡೆಯ ಮೇಲೆ, ಎರಡು ಮೀನುಗಳು ಒಂದು ಮರಿ ಮೀನನ್ನು ಎತ್ತಿಹಿಡಿದದ್ದೂ ಆಕರ್ಷಿಸಿತು. ಈ ಗುಡಿಯ ಆವರಣದಲ್ಲಿ, ಒಂದು ವೀರ(ಮಾಸ್ತಿ?) ಕಲ್ಲು ಕೂಡ ಕಂಡು ಬಂತು.
ಚೆನ್ನಕೇಶವನ ಗುಡಿಯ ಪಕ್ಕದಲ್ಲೇ ಹೊಯ್ಸಳರೇ ಕಟ್ಟಿಸಿದ ಶಿವನ ಗುಡಿಯಿದೆ.
ಈ ಗುಡಿಗೆ ಬೀಗ ಜಡೆದದ್ದರಿಂದ, ಗುಡಿಯ ಒಳಹೋಗಲಿಲ್ಲವಾದ್ದರಿಂದ, ಕಿಟಕಿಯಿಂದಲೇ ಇಣುಕಿ ನೋಡಿ ತೃಪ್ತರಾಗಬೇಕಾಯಿತು. ಚೆನ್ನಕೇಶವನ ಗುಡಿಯಲ್ಲಿ ನಿತ್ಯ ಪೂಜೆ ನಡೆಯುತ್ತಿದೆಯಾದರೂ, ಶಿವನ ಗುಡಿಯಲ್ಲಿ ನಿತ್ಯಪೂಜೆಗಳಿಲ್ಲ ಕೇವಲ ಸೋಮವಾರ ಪೂಜೆ ನಡೆಯುತ್ತಿದೆ ಎಂದು ತಿಳಿದು ತುಸು ಬೇಸರವಾಯಿತು. ಈ ಶಿವನ ಗುಡಿಯ ಮಂಟಪದ ಕಂಬಗಳಲ್ಲಿ ಹೊಯ್ಸಳರ ಶೈಲಿ ಕಂಡು ಬಂತು. ಒಳಗಿರುವ ಎರಡು ಹೞೆಗನ್ನಡದ ಶಾಸನಗಳೂ ಕಂಡು ಬಂದವು. ಒಂದು ಕಂಬವನ್ನು ಜಕಣನು ಕೆತ್ತದೇ ಹಾಗೇ ಉಳಿಸಿದ್ದು, ಮುಂದೆ ತನಗಿಂತ ಉತ್ತಮ ಶಿಲ್ಪಿ ಕೆತ್ತಲಿ ಎಂದು ಬಿಟ್ಟಿರುವನೆಂದು ಹೇಳಿದರಾದರೂ ನಮಗೆ ಯಾವುದದೆಂದು ಕಿಟಕಿಯಿಂದ ತಿಳಿದು ಬರಲಿಲ್ಲ. ಈ ಗುಡಿಯ ಮಂಟಪದ ಮೇಲೆ, ಆಕರ್ಷಕ ಚಂದ್ರಮೌಳೇಶ್ವರನ ವಿಗ್ರಹವೊಂದು ಕಾಣಸಿಗುತ್ತದೆ.



ಕೈದಾಳದ ಕೇಶವನ ದರ್ಶನ ಮಾಡಿ ಅಲ್ಲೇ ಬುತ್ತಿಯ ಊಟವ ಮಾಡಿ ಬೆಂಗಳೂರಿಗೆ ಹಿಂತಿರುಗಿದೆವು.

--ಶ್ರೀ

ಕೊ:
ಕೈದಾಳದಲ್ಲಿ ಗುಡಿಗೆ ಸರ್ಕಾರ ಬಣ್ಣ ಬಳಿಯುವ ಕೆಲಸವನ್ನು ಮಾಡುತ್ತಿದೆ ಎಂದು ಕಾಣುತ್ತದೆ, ಬಣ್ಣದ ಆಯ್ಕೆ ನನಗೆ ಸರಿ ಕಾಣಲಿಲ್ಲ.
ಹೊಸ ಬಣ್ಣದೊಂದಿಗೆ, ಹನ್ನೆರಡನೇ ಶತಮಾನದ ಗುಡಿ ಎಂದೆನಿಸುವುದೇ ಇಲ್ಲ...

ಕೈದಾಳದಲ್ಲಾಗಲಿ, ಗೂಳೂರಿನಲ್ಲಾಗಲಿ ಊಟ, ತಿಂಡಿಗಳ ವ್ಯವಸ್ಥೆಯಿಲ್ಲ, ಆದರೆ ಹತ್ತಿರದಲ್ಲೇ ತುಮಕೂರಿದೆಯಲ್ಲ! :)

Thursday, October 9, 2008

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ ಮೈಸೂರು ಮತ್ತು ಹಿಮವದ್ ಗೋಪಾಲನನ್ನು ನೋಡಲು ಸರಿ ಸಮಯ ಎಂದು ಲೆಕ್ಕ ಹಾಕಿದ ನಾವು, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿದೆವು.

ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಹಿಂದಿನ ದಿನವೇ ಮೈಸೂರಿನಲ್ಲಿ ಬಿಡಾರ ಹೂಡಿ, ಬೆಳಗ್ಗೆ ಬೇಗ ಏಳುತ್ತಲೆ, ನಾವು ಬಾಡಿಗೆಗೆ ಪಡೆದ ಸುಮೋದಲ್ಲಿ ಸುಮಾರು ೬.೨೦ಕ್ಕೆ ಹೊರಟೆವು. ಈ ಹಿಮವದ್-ಗೋಪಾಲಸ್ವಾಮಿ ಬೆಟ್ಟ, ಮೈಸೂರಿನಿಂದ ಗುಂಡ್ಲುಪೇಟೆಯ ಬಳಿ ಬಂಡೀಪುರ(ಊಟಿ) ಮಾರ್ಗದಲ್ಲಿ ಇದೆ. ಗೋಪಾಲಸ್ವಾಮಿ ಬೆಟ್ಟವನ್ನು ತಲುಪಲು, ಗುಂಡ್ಲುಪೇಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಹಂಗಳ ಎಂಬ ಸಣ್ಣ ಊರಿನ ಬಳಿ ಬಲಕ್ಕೆ ತಿರುಗಿ, ಸುಮಾರು ೧೧ ಕಿ.ಮೀ ದೂರ ಕ್ರಮಿಸಬೇಕು. ಗುಂಡ್ಲುಪೇಟೆಯ ನಂತರದ ರಸ್ತೆ ಸುಮಾರಾಗಿದ್ದು ನಮ್ಮ ಪ್ರಯಾಣದ ವೇಗ ಕಡಿಮೆಯಾಗಿತ್ತು. ಹಂಗಳದಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ದಾರಿ ಅತ್ಯಂತ ರಮ್ಯವಾಗಿದ್ದು, ಪ್ರಕೃತಿಯ ಮಾತೆಯ ಸೌಂದರ್ಯಕ್ಕೆ ನಮ್ಮ ಮನ ಸೋತಿತು. ಗೋಪಾಲಸ್ವಾಮಿ ಬೆಟ್ಟ ಪ್ರದೇಶ ಬಂಡೀಪುರ ಅಭಯಾರಣ್ಯಕ್ಕೆ ಸೇರಿರುವುದರಿಂದ, ಬೆಳಗ್ಗೆ ೭.೩೦ಕ್ಕೆ ಮುಂಚೆ, ಈ ಪ್ರದೇಶವನ್ನು ಪ್ರವೇಶಿಸುವ ಅನುಮತಿ ಇಲ್ಲ ಎಂದು ನಮಗೆ ಮೊದಲೇ ತಿಳಿಸಲಾಗಿತ್ತು. ಮುಂಜಾನೆ ಹಾಗೂ ರಾತ್ರಿಯ ಹೊತ್ತಲ್ಲಿ ಆನೆ, ಜಿಂಕೆ, ಹುಲಿ ಮುಂತಾದ ಕಾಡು ಪ್ರಾಣಿಗಳು ಈ ಜಾಗದಲ್ಲಿ ಓಡಾಡುವುದರಿಂದ ಜನರನ್ನು ಬಿಡುವುದಿಲ್ಲ ಎಂದು ನಮಗೆ ಬಲ್ಲವರು ಮುಂಚೆಯೇ ತಿಳಿಸಿದ್ದರು. ಹಂಗಳದಿಂದ ಮುಂದಕ್ಕೆ, ಈ ಸುರಕ್ಷಿತ ವನ್ಯ ಪ್ರದೇಶವನ್ನು ಪ್ರವೇಶಿಸಲು ಅರಣ್ಯ ಇಲಾಖೆಯ ಚೆಕ್-ಪೋಸ್ಟ್ ನಲ್ಲಿ ಪ್ರವೇಶ ಶುಲ್ಕವನ್ನು ಕೊಟ್ಟು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.ದಾರಿಯಲ್ಲಿ ಹೋಗುವಾಗ ಮಂಜು ಕವಿದ ವಾತಾವರಣ, ತಂಪಾದ ಗಾಳಿ, ಸುತ್ತಲೂ ಹಸಿರ ಹೊದ್ದ, ಮೋಡ ಹೊದ್ದ, ಮಂಜ ಹೊದ್ದ ಬೆಟ್ಟಗಳು ತುಂಬಾ ಸುಂದರವಾಗಿ ಕಾಣುತ್ತಿದ್ದವು. ಸಣ್ಣನೆ ಸುರಿಯುತ್ತಿದ್ದ ಜಿಟಿ-ಜಿಟಿ ಮಳೆ, ವಾತಾವರಣವನ್ನು ಇನ್ನಷ್ಟು ಮೋಹಕಗೊಳಿಸಿತ್ತು.


ನಾವು ಗೋಪಾಲಸ್ವಾಮಿ ದೇಗುಲದ ಬಳಿ ತಲುಪಿದಾಗ ಸುಮಾರು ೮.೨೦. ಮಳೆಯನ್ನು ನಿರೀಕ್ಷಿಸದ ನಾವು, ಮಳೆಯಿಂದ ರಕ್ಷಣೆಗಾಗಿ ಏನನ್ನು ಕೊಂಡೊಯ್ದಿರಲಿಲ್ಲ, ದಾಪುಗಾಲು ಹಾಕಿ ದೇಗುಲದ ಮಂಟಪದಲ್ಲಿ ಮಳೆಯಿಂದ ರಕ್ಷಣೆ ಪಡೆದೆವು. ಸದ್ಯ, ನಮಗೆ ಹೆಚ್ಚು ತೊಂದರೆ ನೀಡದೆ ಮಳೆ ಸ್ವಲ್ಪ ಸಮಯದ ನಂತರ ತಗ್ಗಿತು.ಸುತ್ತಲೂ ಮಂಜು, ಮೋಡ ಮುಸುಕಿದ ಹವೆ. ದೇವಸ್ಥಾನದ ಸುತ್ತಲೂ ಬೆಟ್ಟಗಳು...ಪಕ್ಕದಲ್ಲೇ ಒಂದು ಪುಟ್ಟ ಕೊಳ...ಆಹ್! ಆ ನೀಲಿ-ಬಿಳಿ-ಹಸಿರು ಮಿಶ್ರಿತ ನಿಸರ್ಗದ ರಂಗಿನಾಟ ನಿಜಕ್ಕೂ ಅದ್ಭುತವೇ! ಮಂಜಿನ ಭರಾಟೆ ಎಷ್ಟಿತ್ತೆಂದರೆ, ನಮಗೆ ೩೦ ಅಡಿ ದೂರದಲ್ಲಿರುವುದೂ ಕಾಣುತ್ತಿರಲಿಲ್ಲ! ಹೀಗೆ ನೋಡು-ನೋಡುತ್ತಲೇ ಮಂಜು ಮಾಯ! ಇದೇ ರೀತಿ ಮಂಜಿನ ಕಣ್ಣ-ಮುಚ್ಚಾಲೆ ಆಟ ನಡೆದಿತ್ತು ನಮ್ಮ ಮುಂದೆ. ನಾವು ತಲುಪಿದಾಗ ದೇವಸ್ಥಾನದ ಬಾಗಿಲನ್ನು ಇನ್ನೂ ತೆರೆದಿರಲಿಲ್ಲ. ಹಾಗೇ ಸುಮ್ಮನೆ, ಪ್ರಕೃತಿಯನ್ನು ಸವಿದು ಬರೋಣವೆಂದು ನಾವು ಹೊರೆಟೆವು.




ದೇವಸ್ಥಾನದ ಹಿಂದೆ, ಚಾರಣಿಗರಿಗಾಗಿ ಹಲವಾರು ಕಾಲುದಾರಿಗಳಿವೆ. ಅವುಗಳಲ್ಲಿ ಒಂದು ಜಾಡನ್ನು ಹಿಡಿದು ಹೊರೆಟೆವು. ಸ್ವಲ್ಪ ಸಮಯದ ನಂತರ, ಮಂಜು, ಮೋಡ ಸರಿದಾಗಲೇ ನಮಗೆ ತಿಳಿದಿದ್ದು, ಅಲ್ಲಿ ಬೆಟ್ಟಗಳ ಸಾಲಿನ ಹಲವಾರು ನೆರಿಗೆಗಳಿವೆ ಎಂದು! ಹೀಗೆ, ಮೆಲ್ಲನೆ ಹುಲ್ಲ ಹಾಸಿನ ಮೇಲೆ ನೋಡುತ್ತ ಪ್ರಕೃತಿಯನ್ನು ಸವಿಯುತ್ತಾ ನಡೆಯುತ್ತಿರುವಾಗ ನಮಗೆ ಕಂಡದ್ದು ನಂಬಲಾಗಲಿಲ್ಲ! ಪಕ್ಕದ ಬೆಟ್ಟದಲ್ಲಿ, ಕಪ್ಪನೆ ಕರಿ ಗುಡ್ಡೆಗಳು ಚಲಿಸಿದಂತಿತ್ತು...ನಾವು ಸರಿಯಾಗಿ ಗಮನಿಸಿದಾಗ ತಿಳಿದಿದ್ದು, ಅದು ಒಂದು ಆನೆಯ ಹಿಂಡೆಂದು! ಇದನ್ನು ನೋಡಿದ ನಾವು, ಆನೆಯನ್ನು ಹಿಂದೆಂದೂ ಕಾಣದ ಪುಟ್ಟ ಮಕ್ಕಳಂತೆ ಕುಣಿದಾಡಿದೆವು! ಹೀಗೆ ಬೆಟ್ಟಗಳ ನಡುವೆ ನಡೆಯುತ್ತಾ, ದಾರಿಯಲ್ಲಿ ಪಾಳು ಬಿದ್ದ ಕೋಟೆಯಂತಿರುವ ಸಣ್ಣ ಗೋಡೆಗಳನ್ನೂ ಕಂಡೆವು. ನಾವು ಮೈಸೂರಿಗೆ ಬೇಗನೆ ವಾಪಸ್ ಹೋಗಬೇಕಾದ್ದರಿಂದ, ಹೆಚ್ಚು ದೂರ ಕ್ರಮಿಸದೇ ದೇಗುಲದ ಕಡೆಗೆ ನಡೆದೆವು. ನಮಗಿಂತ ತುಸು ಹೆಚ್ಚು ದೂರ ಬೆಟ್ಟಗಳ ಹಾದಿಯಲ್ಲಿ ಹೋಗಿದ್ದ ನನ್ನ ಅತ್ತೆಯ ಮಗ, ತಾನು ಎರಡು ಜಿಂಕೆಗಳನ್ನೂ ಕಂಡನೆಂದು ನಮಗೆ ತಿಳಿಸಿದನು. ಈ ಭಾಗ್ಯ ನಮಗೆ ದೊರಕದಾಯಿತಲ್ಲ ಎಂಬ ಪೇಚು ಮಿಕ್ಕವರಿಗೆ.







ವಾಪಸ್ ಬಂದಾಗ ವೇಣುಗೋಪಾಲನ ದರ್ಶನಕ್ಕಾಗಿ ದೇವಸ್ಥಾನದ ಬಾಗಿಲು ತೆರೆದಿತ್ತು. ಈ ದೇವಸ್ಥಾನದ ಆವರಣವು ಹೆಚ್ಚು ದೊಡ್ಡದೇನಿಲ್ಲ.
ಇಲ್ಲಿ ವೇಣುಗೋಪಾಲನ ಏಕ ಶಿಲಾಶಿಲ್ಪವಿದೆ. ಈ ಏಕ ಶಿಲಾಶಿಲ್ಪದಲ್ಲಿ, ಕೃಷ್ಣ ತ್ರಿಭಂಗಿಯಲ್ಲಿ ನಿಂತಿದ್ದು, ಸುರಹೊನ್ನೆ ವೃಕ್ಷದ ಕೆಳಗೆ ವೇಣು ವಾದವನ್ನು ಮಾಡುತ್ತಿರುವನು.ಕೃಷ್ಣನ ಸುತ್ತ ಗೋವುಗಳು, ರುಕ್ಮಿಣಿ, ಸತ್ಯಭಾಮ, ಗೋಪಿಕೆಯರು ಹಾಗೂ ಕೃಷ್ಣನ ಗೆಳೆಯ ಮಕರಂದನ್ನು ಕೆತ್ತಲಾಗಿದೆ. ಈ ವೇಣುಗೋಪಾಲ ಮೂರ್ತಿಯ ವಿಗ್ರಹವು ಮನಮೋಹಕವಾಗಿದೆ.ವೇಣುಗೋಪಾಲ ಮೂರ್ತಿಯ ಶಿರದ ಮೇಲೆ ಹಾಗೂ ದೇವಸ್ಥಾನದ ಗರ್ಭಗುಡಿಯ ದ್ವಾರದ ಮೇಲೆ ಸದಾ ಹಿಮವಿರುವುದರಿಂದ, ಈ ಗೋಪಾಲನನ್ನು, ’ಹಿಮವದ್-ಗೋಪಾಲಸ್ವಾಮಿ’ ಎಂದು ಕರೆಯುವರು.
ಇಲ್ಲಿ ಭೇಟಿ ಮಾಡುವವರು, ಗರ್ಭಗುಡಿಯ ದ್ವಾರದ ಮೇಲಿನ ಹಿಮವನ್ನು ಮುಟ್ಟಿ ಅನುಭವಿಸಬಹುದು.

ದೇವಸ್ಥಾನದ ಅರ್ಚಕರು ಈ ದೇಗುಲದ ಐತಿಹ್ಯವನ್ನು ಹೀಗೆ ತಿಳಿಸಿದರು:
"ಸುಮಾರು ಕ್ರಿ.ಶ.೧೨೫೦-೧೩೦೦ ಆಸುಪಾಸಿನಲ್ಲಿ, ಈ ಪ್ರದೇಶವನ್ನು ಮಾಧವ ಢಣನಾಯಕ (ದಂಡನಾಯಕ) ಎಂಬ ಹೊಯ್ಸಳರ ಪಾಳೆಗಾರನೊಬ್ಬ ಆಳುತ್ತಿದ್ದನು. ಈ ಕೃಷ್ಣ ಭಕ್ತನಿಗೆ ಮಕ್ಕಳಿರಲಿಲ್ಲವಾಗಿ ದುಃಖತಪ್ತನಾಗಿದ್ದನು. ಒಮ್ಮೆ ಶ್ರೀಕೃಷ್ಣ ಪರಮಾತ್ಮನು ಕನಸಲ್ಲಿ ಬಂದು, ನೀನು ದುಷ್ಟತನವನ್ನು ತ್ಯಜಿಸಿ, ನನ್ನನ್ನು ಭಜಿಸಿದರೆ, ನಿನಗೆ ಸಂತಾನ ಪ್ರಾಪ್ತಿಯಾಗುವುದೆಂದು ತಿಳಿಸಿದನು. ಕೃಷ್ಣನನ್ನು ಭಕ್ತಿಯಿಂದ ಪೂಜಿಸಿದ ಇವನಿಗೆ ಗಂಡು ಸಂತಾನ ಪ್ರಾಪ್ತಿಯಾಗಲು, ಇಲ್ಲಿ ದೇವಸ್ಥಾನವನ್ನು ಕಟ್ಟಿದನು. ಈ ಪಾಳೆಗಾರನ ಮಗ, ಪೆರುಮಾಳ್ ಢಣನಾಯಕ(ದಂಡನಾಯಕ)ನು, ತಂದೆಯ ಹರಕೆಯಂತೆ ೪-ಸುತ್ತಿನ ಕೋಟೆಯನ್ನು ದೇಗುಲದ ಸುತ್ತ ಕಟ್ಟಿದನು. ಈ ದೇಗುಲದ ಸುತ್ತ ೮ ಕೊಳಗಳಿದ್ದು ಇವಕ್ಕೆ ಹಂಸತೀರ್ಥ, ಶಂಖತೀರ್ಥ, ಚಕ್ರತೀರ್ಥ, ಗಧಾತೀರ್ಥ, ಪದ್ಮತೀರ್ಥ, ಶಾಙ್ಗತೀರ್ಥ, ವನಮೂಲಕ ತೀರ್ಥ ಎಂಬ ಹೆಸರುಗಳಿವೆ. ಇಲ್ಲಿನ ಹಂಸತೀರ್ಥದಲ್ಲಿ ಮುಳುಗಿದ ಕಾಗೆಗಳು, ಹಂಸಗಳಾಗಿ ಹೊರಬಂದುದರಿಂದ ಈ ಜಾಗದಲ್ಲಿ ಕಾಗೆಗಳು ಕಾಣುವುದಿಲ್ಲ."



ಈ ವೇಣುಗೋಪಾಲ ದೇವಸ್ಥಾನದಲ್ಲಿ ಸಂತಾನ ಭಾಗ್ಯವಿಲ್ಲದವರು, ಹರಕೆ ಮಾಡಿಕೊಳ್ಳುವುದು ವಾಡಿಕೆ. ಆದ್ದರಿಂದ ಈ ದೇವರಿಗೆ, ಸಂತಾನ ಗೋಪಾಲ ಕೃಷ್ಣ ಎಂದೂ ಕರೆಯುವರು. ದೇವರ ಪೂಜೆಯಾದ ಮೇಲೆ, ನಮ್ಮಗಳ ಹೊಟ್ಟೆ-ಪೂಜೆಯನ್ನು ನಡೆಸಿ, ಮುಂದೆ, ’ಹುಲುಗಿನ ಮುರುಡಿ’ ಎಂಬ ಸ್ಥಳಕ್ಕೆ ಭೇಟಿ ನೀಡಲು ಹೊರಟೆವು.
ಈ ಸ್ಥಳವನ್ನು ತಲುಪಲು, ಗುಂಡ್ಲುಪೇಟೆಯಿಂದ ತೆರಕಣಾಂಬಿಗೆ ಹೋಗಬೇಕು; ಇದು ಸುಮಾರು ೮ ಕಿ.ಮೀ ದೂರದಲ್ಲಿದೆ. ತೆರಕಣಾಂಬಿಯಿಂದ ಬಲಕ್ಕೆ ತಿರುಗಿ, ಸುಮಾರು ೧೨ ಕಿ.ಮೀ, ದೂರ ಕ್ರಮಿಸಿದರೆ ’ಹುಲುಗಿನ ಮುರುಡಿ’ ಎಂಬ ಸ್ಥಳವಿದೆ. ಇಲ್ಲಿ ಬೆಟ್ಟದ ಮೇಲೆ, ವೆಂಕಟರಮಣ ಸ್ವಾಮಿಯ ದೇವಸ್ಥಾನವಿದ್ದು, ಇಲ್ಲಿ ರಾಮ-ಲಕ್ಷ್ಮಣರು ಬಂದಿದ್ದರೆಂದು ಪ್ರತೀತಿ. ರಾಮ-ಲಕ್ಷ್ಮಣರು ಇಲ್ಲಿಗೆ ಬಂದಾಗ ಬಾಣದಿಂದ ನೀರನ್ನು ತರಿಸಿದ್ದಾಗಿ ಹೇಳುವರು. ಈ ಸ್ಠಳದಿಂದ ರಾಮ-ಲಕ್ಷ್ಮಣರು ಹೊರಡುವಾಗ, ಬಿಲ್ಲನ್ನು ಇಲ್ಲೇ ಮರೆತು ಹೋದರೆಂದು ಅರ್ಚಕರು ಒಂದು ಬಿಲ್ಲನ್ನು ತೋರಿದರು. ಇಲ್ಲಿನ ಬಿಲ್ಲು ರಾಮ-ಲಕ್ಷ್ಮಣರ ಕಾಲದ್ದೇ, ಎಂಬುದನ್ನು ಇತಿಹಾಸಕಾರರೇ ಹೇಳಬೇಕು. ಈ ದೇಗುಲದ ವೆಂಕಟರಮಣನ ದರ್ಶನವನ್ನು ಪಡೆದು ನಾವು ಮೈಸೂರಿಗೆ ಹಿಂತಿರುಗಿದೆವು.

--ಶ್ರೀ

ಕೊ.ಕೊ: ಹಿಮವದ್-ಗೋಪಾಲಸ್ವಾಮಿ ಬೆಟ್ಟದಲ್ಲಿ ಹಾಗೂ ಹುಲುಗಿನ ಮುರುಡಿಯಲ್ಲಿ, ಯಾವುದೇ ರೀತಿಯ ಊಟ/ತಿಂಡಿಯ ವ್ಯವಸ್ಥೆ ಇಲ್ಲ. ನಾವುಗಳು ಬುತ್ತಿಯನ್ನು ಕಟ್ಟಿಕೊಂಡು ಹೋದದ್ದರಿಂದ ತೊಂದರೆಯಾಗಲಿಲ್ಲ. ಹತ್ತಿರದ ಗುಂಡ್ಲುಪೇಟೆಯಲ್ಲಿ ಸುಮಾರಾದ ಹೋಟೆಲ್’ಗಳು ಇವೆ.