Showing posts with label ಹೀಗೆ-ಸುಮ್ಮನೆ. Show all posts
Showing posts with label ಹೀಗೆ-ಸುಮ್ಮನೆ. Show all posts

Friday, December 26, 2008

ಅಟ್ಟವೆಂಬ ಭಂಡಾರ!

ನೆನ್ನೆ ನಮ್ಮ ಮನೆಯ ಅಟ್ಟವನ್ನು ಸ್ವಚ್ಛಗೊಳಿಸೋಣವೆಂದು ನಾವು ಅಲ್ಲಿರುವ ವಸ್ತುಗಳನ್ನೆಲ್ಲ ಇಳಿಸಿದೆವು...
ನಮ್ಮ ಅಟ್ಟದಲ್ಲಿರುವ ವಸ್ತುಗಳು, ನನ್ನ ಚಿಕ್ಕಂದಿನ ದಿನಗಳ ನೆನಪುಗಳನ್ನು ತಂದುಕೊಟ್ಟಿತು...

ಸಿಕ್ಕ ವಸ್ತುಗಳ ಪಟ್ಟಿ:

- ಕೂಡಿಸಿಟ್ಟ ಸುಮಾರು ೫೦೦ ರೀತಿಯ ನಾಣ್ಯಗಳು ಹಾಗೂ ನೋಟುಗಳು
- ವಿವಿಧ ತರಹದ ಬೆಂಕಿ ಪೊಟ್ಟಣಗಳು...
- ವಿವಿಧ ದೇಶದ ಅಂಚೆ ಚೀಟಿಗಳು
- ನಾನು ಚಿಕ್ಕಂದಿನಲ್ಲಿ ಬಿಡಿಸಿದ ಚಿತ್ರಗಳು, ಪೈಂಟಿಂಗ್‍ಗಳು
- ನಾನು ಆರನೇ ಕ್ಲಾಸಿನಲ್ಲಿ ಬರೆದ ಉತ್ತರ ಭಾರತದ ಪ್ರವಾಸ ಕಥನ
- ನಾನು-ನನ್ನ ಅಕ್ಕ, ಪಕ್ಕದ ಮನೆಯ ಮಕ್ಕಳು ಒಟ್ಟಿಗೆ ಆಡಿದಾಗ ಬರೆದ ಆಟದ ಬರಹಗಳು
- ಹಾವು-ಏಣಿ ಆಟದ ಬೊರ್ಡ್
- ಪಗಡೆ ಕಾಯಿಗಳು
- ಕವಡೆಗಳು, ಕಪ್ಪೆ ಚಿಪ್ಪುಗಳು
- ನನ್ನ ಅಕ್ಕನು ಅಂಟಿಸಿ ತಯಾರಿಸಿದ 'A for apple' ನಿಂದ 'z for zebra' ಎಂಬ ಪುಸ್ತಕ
- ಹುಟ್ಟು ಹಬ್ಬಕ್ಕೆ ಗೆಳೆಯರು ಕೊಟ್ಟ ಶುಭಾಶಯ ಪತ್ರಗಳು (ಗ್ರೀಟಿಂಗ್ ಕಾರ್ಡ್)
- ಲಿಟಲ್ ಜೈಂಟ್ಸ್ ಎಂಬ ಮ್ಯಾಗಝೀನ್ ನವರು ನಡೆಸಿದ್ದ ಬಣ್ಣ ಹಾಕುವ ಸ್ಪರ್ಧೆಯಲ್ಲಿ ಗೆದ್ದದ್ದಕ್ಕೆ ಕೊಟ್ಟ ಪ್ರಮಾಣ ಪತ್ರ
- ನಾನು ಬಟ್ಟೆಯ ಮೇಲೆ ಮಾಡಿದ ಚಿತ್ತಾರಗಳು, ಕೈ-ಕೆಲಸಗಳು
- ನ್ಯೂಸ್ ಪೇಪರ್ ನಲ್ಲಿ ಬರುತ್ತಿದ್ದ ಕ್ರಿಕೆಟ್ ಆಟಗಾರರ ಚಿತ್ರಗಳನ್ನು ಕತ್ತರಿಸಿ ಶೇಖರಿಸಿದ್ದ ಒಂದು ಫೈಲ್
- 'ಬಿಗ್ ಫನ್' ಬಬ್ಬಲ್ ಗಮ್ಮಿನ ಒಳಗೆ ಸಿಗುತ್ತಿದ್ದ ಕ್ರಿಕೆಟ್ ಪಟುಗಳ ಚಿತ್ರಗಳು
(ನನಗೆ ಬಬ್ಬಲ್ ಗಮ್ ಕೊಡಿಸುತ್ತಿಲ್ಲವಾದರೂ, ಆಗ ಗೆಳೆಯರನ್ನು ಕಾಡಿ ಬೇಡಿ ಶೇಖರಿಸುತ್ತಿದ್ದೆ!)
- ನನ್ನ, ಅಕ್ಕನ ಸ್ಕೂಲಿನ ಮಾರ್ಕ್ಸ್ ಕಾರ್ಡ್-ಗಳು
- ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಹಾಲ್‍ಟಿಕೆಟ್‍ಗಳು
- ನಾನು ಸಣ್ಣವನಿದ್ದಾಗ ಶಾಲೆಯಲ್ಲಿ ಬರೆದಿದ್ದ 'ಉಕ್ತಲೇಖನ'ದ ಪದಗಳ ಪಟ್ಟಿ
- ನನಗೆ ಬಹುಮಾನವಾಗಿ ಸಿಕ್ಕ ಹಲವು ಪುಸ್ತಕಗಳು
- ನನ್ನ ಚಿಕ್ಕಪ್ಪ ತಂದು ಕೊಟ್ಟ ರಷ್ಯನ್ ಜಾನಪದ ಕಥೆ ಪುಸ್ತಕಗಳು
- ಬೊಂಬೆ ಮನೆ, ಚಂದಮಾಮ ಪುಸ್ತಕಗಳು
- ನಾನು ಮತ್ತು ಅಕ್ಕ ಕೂಡಿ ಹಾಕುತ್ತಿದ್ದ 'ಸ್ಟಿಕರ್' ಗಳು...
- ಹಳೆಯ ಪುಸ್ತಕದಲ್ಲಿ ಇಟ್ಟ ಗಿಣಿಯ ಪುಕ್ಕ
- ನವಿಲುಗರಿ
- ಸ್ಕೂಲಿಗೆ ಕೊಂಡೊಯ್ಯುತ್ತಿದ್ದ ಅಲ್ಯೂಮಿನಿಯಂ ಸೂಟ್ ಕೇಸ್
- ಸಂಗೀತದ ಪುಸ್ತಕ
- ಇಂಜಿನೀರಿಂಗ್‍ನಲ್ಲಿ ಕ್ಲಾಸ್‍ಮೇಟ್‍ಗಳು ಅಂಗಿಯ ಮೇಲೆ ಬರೆದ ಹಸ್ತಾಕ್ಷರಗಳು
- ಇಂಟರ್‍ನೆಟ್ ಮಿತ್ರರು ಬರೆದ ಪತ್ರಗಳು
ಹೀಗೆ ಎನೇನೋ...

ಇವೆಲ್ಲ ಕೂತು ನೆನ್ನೆ ನೋಡುತ್ತಿದ್ದಾಗ ಮನದಲ್ಲಿ ಹಾದು ಹೋದ ಸುಂದರ ನೆನಪುಗಳ ಎಣಿಕೆ ಎಷ್ಟೋ!
ಈಗ ಮತ್ತೆ ಅಟ್ಟಕ್ಕೆ ಇವೆಲ್ಲವನ್ನೂ ಇಡಬೇಕು...ಮತ್ತೆ ಎಷ್ಟು ವರ್ಷಗಳಾದ ಮೇಲೆ ಇದನ್ನೆಲ್ಲ ತೆಗೆಯುವೆನೋ ತಿಳಿಯದು...
ಎಷ್ಟು ಕಸ ಕೂಡಿ ಹಾಕುವೆನೆಂದು ಅಮ್ಮ ಮತ್ತು ಅಕ್ಕನ ಹತ್ತಿರ ಬಯ್ಸಿಕೊಂಡರೂ ಸರಿಯೇ ನನಗೆ ಇವೆಲ್ಲ ಬೇಕು...ಮತ್ತೆ ಇಂದು ಅಟ್ಟ ಸೇರಲಿವೆ...
ಕೆಲವು ಬೊಂಬೆಮನೆ , ಚಂದಮಾಮ ಪುಸ್ತಕಗಳನ್ನು ಕೆಳಗೆ ಇಟ್ಟುಕೊಂಡಿರುವೆ ಓದಲಿಕ್ಕೆ ಅಂತಾ... Smiling
ನೀವು ಹೀಗೆ 'ಕಸ' ಕೂಡಿ ಹಾಕ್ತೀರಾ?

--ಶ್ರೀ