Wednesday, June 30, 2010

ಅಳು - ನಗು

ಸತ್ತವನ ನೆನೆಯುತ್ತಾ
ಗಳಗಳನೆ ಅಳುತ್ತಿದ್ದೆ...
ಈ ನನ್ನ ಅಳು
ಇನ್ನೊಬ್ಬನನ್ನು
ಮೆಲ್ಲನೆ ಕೊಲ್ಲುತ್ತಿದೆ
ಎಂದು ತಿಳಿದ ಕ್ಷಣವೇ
ನಗುಮೊಗದ ಮುಖವಾಡ ಧರಿಸಬೇಕಾಯ್ತು...

--ಶ್ರೀ

Friday, June 25, 2010

ನಾ ನಿನ್ನನ್ನು ಪ್ರೀತಿಸುತ್ತೇನೆ...

ಮನದಲೇನೋ ತೊಳಲಾಟ
ಅಂದಿಲ್ಲದ ಆಕರ್ಷಣೆ ಇಂದೇಕೆ??!
ತಡೆಹಿಡಿಯಲಾಗದ ಜ್ವಾಲಾಮುಖಿಯಂತೆ
ನನ್ನೊಳಗಿನ ಭಾವನೆಗಳು
ಒತ್ತರಿಸಿಕೊಂಡು ಬರಲೆತ್ನಿಸುತಿದೆ...
ಆದರೆ....ಈಗ ತಡವಾಗಿದೆ...

ಅಂದು ನೀನು ನನ್ನಲ್ಲಿ ಪ್ರೀತಿಯ ಪ್ರಸ್ತಾಪವನ್ನು
ಅದೆಷ್ಟು ಖುಷಿಯಲಿ ಮೊಗವರಳಿಸಿ ಮಾಡಿದ್ದೆ!
ಅಂದು ಕಂಡಿದ್ದ ನಿನ್ನ ಕಣ್ಣುಗಳ ಹೊಳಪು
ಇಂದಿಗೂ ಮರೆತಿಲ್ಲ...
ನೀನು... ನಾ ಕಂಡ
ಅತ್ಯಂತ ಸೊಗಾಸಾದ ವ್ಯಕ್ತಿಗಳಲ್ಲಿ ಒಬ್ಬ...
ನನ್ನ ನೆಚ್ಚಿನ ಗೆಳೆಯ!
ಆದರೂ...ನಿನ್ನ ಪ್ರೀತಿಯ ಪ್ರಸ್ತಾಪವನ್ನು ಅದೇಕೋ ಒಪ್ಪಲಿಲ್ಲ...
ಏಕೆಂಬುದು ನನಗೂ ಗೊತ್ತಿಲ್ಲ...
ಅಂದು ನಿನ್ನ ಬಗ್ಗೆ ಆ ರೀತಿ ಯೋಚನೆಗಳಿರಲಿಲ್ಲ...ಅಷ್ಟೆ!!
ಅಂದು ನಾ ಒಪ್ಪದಾಗ ನಿನ್ನಲ್ಲಾದ ಬೇಸರ-ನೋವಿನ ಬಗ್ಗೆ ಅರಿವಿತ್ತು...
ಆದರೂ ನನ್ನ ಮನದಲ್ಲಿ ಪ್ರೀತಿ ಹುಟ್ಟಲಿಲ್ಲ...

ಕಾಲ ಕಳೆದಂತೆ ನೀ ನಡೆದೆ...ಹೊಸ ಹಾದಿ ತುಳಿದೆ...
ಹೊಸ ಪ್ರೀತಿಯನ್ನೂ ಕಂಡುಕಂಡೆ...
ಈಗ ....ವರ್ಷಗಳು ಕಳೆದ ಮೇಲೆ
ನಿನ್ನ ಬಗ್ಗೆ ಹೊಸ ಭಾವ...
ಹೊಸ ಹುರುಪು-ಹೊಸ ಒಲವು...ಅದೇಕೋ ಕಾಣೆ...
ನೆಚ್ಚಿನ ಗೆಳೆಯನಂತೆ ನೀ ಇಂದಿಗೂ ನನ್ನೊಡನಿರುವೆ...
ನೀನೀಗ ನಿನ್ನ ಸಂಗಾತಿಯೊಂದಿಗೆ ಸಂತೋಷದಿಂದಿರುವೆಯಂಬುದು ತಿಳಿದಿದೆ...
ಆದರೂ ನನಗದೇನೋ ಉತ್ಕಟ ಪ್ರೀತಿ!
ಈ ಹೊಸ ಭಾವನೆಗಳನ್ನು ನನ್ನೊಳಗೆ ಅದುಮಿಡಬೇಕಾದ ಪರಿಸ್ಥಿತಿ...
ಅಂದು ನಿನ್ನ ತಿರಸ್ಕರಿಸಿದ್ದು ತಪ್ಪೇನೋ...
ಈಗ! ಇಂದು...ನಾ ನಿನ್ನನ್ನು ಪ್ರೀತಿಸುತ್ತೇನೆ ಗೆಳೆಯ...
ನಿನಗರಿವಿಲ್ಲದಿರಬಹುದು...ನಿನ್ನರಿವಿಗೆ ಮುಂದೆಂದೂ ಬಾರದಿರಬಹುದು....
ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿರುವೆ...
ನನ್ನ ಮನದೊಳಗಿನ ಪ್ರತಿ ಲಾವಾ ಹನಿಯ ಮೇಲಾಣೆ!

--ಶ್ರೀ
(ಜೂನ್ ೨೫ ೨೦೧೦)

Thursday, June 24, 2010

ಏಕೆ ಬದಲಾದೆ ಗೆಳತಿ?

ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿ
ಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?
ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ
ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ್ದು?
ನಿನ್ನೊಳಗಿನ ಜಗವನ್ನು ಬಿಟ್ಟು ಹೊರಗೆ ಬಾರದೆ ಇದ್ದ ಅಂತರ್ಮುಖಿಯನ್ನಲ್ಲವೇ ನಾ ಮೆಚ್ಚಿದ್ದು?
ನನ್ನ ಮನದ ಮಾತು ನಿನಗೆ ತಲಪುವ ಮುನ್ನ ನಿನ್ನೊಳಗಿನ ಭಾವ ಹೇಗಿತ್ತೋ ಅರಿಯೆ...
ನನ್ನ ಪ್ರೇಮದ ಒಕ್ಕಣೆಗೂ ಮೌನವಾಗೆ ಸಮ್ಮತಿಸಿದ್ದೆಯಲ್ಲವೇ?
ಅಂದಿನಿಂದಲೇ ಶುರುವಾಯ್ತು ಹೊಸ ಅಧ್ಯಾಯ...
ನೀ ಬದಲಾದೆ ಗೆಳತಿ...
ಸಮ್ಮೋಹನಗಳಿಸಿದ ಆ ಮೌನ ಮಾಯವಾಯ್ತಲ್ಲ...
ಈಗ, ನನ್ನೊಡನಿದ್ದಾಗ ನಿನ್ನಧರಕೆ ಬಿಡುವಿಲ್ಲ!
ನಾನಿಲ್ಲದಾಗಲೂ ನಿನ್ನ ಈ ತುಂಟ ತುಟಿಗಳಿಗೆ ಅದೇನೋ ಚಡಪಡಿಕೆ!
ಏಕೆ ಬದಲಾದೆ ಗೆಳತಿ?
ನಿನ್ನೀ ನಿರಂತರ ಮಾತುಗಳಿಂದ ನನಗೆ ಅಮೃತವನೇ ಉಣಿಸಿದರೂ
ಅಂದು ನನ್ನ ಸೆಳೆದ ಮೌನ ನನಗೆ ಗುಲಗಂಜಿಯಷ್ಟು ಹೆಚ್ಚು ಮೆಚ್ಚು...!

--ಶ್ರೀ

(ಜೂನ್ ೨೫, ೨೦೧೦)

Wednesday, June 16, 2010

ಹುಡುಗಾಟ!

ಮನೆಯೊಳಗೇ ಇರುವ
ಸೋಫಾದಲ್ಲಿ ಕುಳಿತು
ಟಿವಿ ಪರದೆಯಲ್ಲಿ ಬರುವ
ಆಟಗಾರನ ಕಾಯ ಪ್ರವೇಶಿಸಿ,
ಅವ ಗೆದ್ದಾಗ,
ಪ್ರಪಂಚವೇ ತಾ ಗೆದ್ದು ಬಂದಂತೆ
ಭ್ರಮಿಸಿ-ಸಂಭ್ರಮಿಸುವುದೇ ಹುಡುಗಾಟ!

--ಶ್ರೀ
(೧೬-ಜೂನ್-೨೦೧೦)