Friday, May 4, 2007

ಸುಂದರ ನೆನಪು


ಸುಂದರ ನೆನಪು

ಇದಾಗಿ ಹದಿನೈದು ವರುಷಕ್ಕೂ ಹೆಚ್ಚು
ಮಾಸದು ಈ ಸುಂದರ ನೆನಪು - ಮನದಲ್ಲಿ ಪಡಿಯಚ್ಚು

ಹೊರಟಿದ್ದೆವು ನಾವು ಛುಕ್ಕು-ಭುಕ್ಕು ರೈಲಿನಲಿ
ನಾನು-ನನ್ನಕ್ಕ ಕುಳಿತಿದ್ದೆವು - ಇಣುಕುತಾ ಕಿಟಕಿಯಲಿ

ಕೀಟಲೇ ಮಾಡುತಾ ತುಂಟಾಟವಾಡುತಾ
ದಂಡೆತ್ತಿ ಹೊರೆಟೆವು ಉತ್ತರ ಭಾರತ!

ಸಾಗಿತ್ತು ರೈಲದು - ಬೆಟ್ಟ ಗುಡ್ಡ ಛೇದಿಸುತ
ನಡೆದಿತ್ತು ವಯ್ಯಾರಿಯಂತೆ - ತನ್ನ ಮೈ ಬಳಕಿಸುತ

ಗಿಡ ಮರಗಳು ಕಾದಿದ್ದವು ಶಬರಿಯಂತೆ ಮಾಡುತ ವ್ರತವಾ
ಬರುತಲೆ ಇಟ್ಟವು ಮುತ್ತು, ಕೇಳಿತು - ಕುಶಲೋಪರಿ ಸಾಂಪ್ರತವ!

ಹೂ-ಬಳ್ಳಿ ಕೋರಿತ್ತು ಸ್ವಾಗತವ ಅಲ್ಲಿ
ನಸು ನಕ್ಕು ನಾಚಿತ್ತು ಪರಿಮಳವ ಚೆಲ್ಲಿ

ಅಲ್ಲೇ ಅನತಿ ದೂರದಲೇ ಕಂಡಿತ್ತು ತಿಳಿನೀರ ಕೊಳ
ಗುಲಾಬಿ ಬಣ್ಣವೇ ತುಂಬಿತ್ತು - ಕಣ್ಣಿಗೆ ರಸಗವಳ!

ನಮಗೆಂದೇ ಏನೋ ರೈಲಲ್ಲಿ ನಿಂತಿತು
ನನಗೆ ನನ್ನಕ್ಕನಿಗೆ ಮನವು ಹಿರಿಹಿಗ್ಗಿತು

ಇಳಿದು ಹೊರಟೆವು ನಾವು ಆ ಕೊಳದ ಬಳಿಗೆ
ಹೆಜ್ಜೆಗಳು ಮೂಡಿತ್ತು ಹಸಿ ಮಣ್ಣಿನೊಳಗೆ

ಮಂಧರನು ಕುಳಿತಿದ್ದ ಧರೆಯ ದಿಗಂತದಲಿ
ರಾಜಹಂಸಗಳು ಬೀಡು ಬಿಟ್ಟಿಹವು ಅಲ್ಲಿ

ತರು-ಲತೆಯು ಒಂದನೊಂದು ತಬ್ಬಿತ್ತು - ಎರಡು ದೇಹ ಒಂದೇ ಜೀವ
ಎಷ್ಟು ಜನ್ಮದಿಂದ ಕಾದಿತ್ತೋ ಇವು - ಎಂಥಾ ಅನ್ಯೋನ್ಯ ಭಾವ

ಜಿಂಕೆಯೊಂದು ಛಂಗನೆ ಎಗರಿ ಮರೆಯಾಗಿತ್ತು ಮರಗಳಲಿ
ಸೀತೆಗೂ ಸಿಗದ ಮಾಯಮೃಗ ಬೇಕಾಗಿತ್ತು ನಮಗೆ ಅಂದಲ್ಲಿ

ಕೋಗಿಲೆಯ "ಕೂ" ಕರೆಗೆ, ಹೂಂಗುಟ್ಟಿತ್ತು ನಮ್ಮ ಮನ
ಮಂತ್ರಮುಗ್ಧವಾಗಿತ್ತು ಇಂಪಿನಾ ಗಾನ

ಪುಟ್ಟ ಅಳಿಲೆರಡು ತುಂಟಾಟದಲ್ಲಿ
ತೊಡಗಿತ್ತು ಕಾಯಿಗಳ ಉರುಳಾಟದಲ್ಲಿ

ಬಂದಿತ್ತು ಹನಿ ಹನಿಯ ಮಳೆಯು ಅಷ್ಟರಲ್ಲಿ
ಮೂಡಿತ್ತು ಸಪ್ತ ವರ್ಣದಾ ಬಿಲ್ಲು ತಕ್ಷಣವೇ ಅಲ್ಲಿ

ಅಕ್ಕ ಪಟ್ಟು ಹಿಡಿದಳು ಕೆಂದಾವರೆ ಬೇಕೆಂದು
ಬೆಪ್ಪಾದೆ ತರ ಹೋಗಿ ಕೊಚ್ಚೆಯಲಿ ಬಿದ್ದು

ಕುಣಿದು ಕುಪ್ಪಳಿಸಿದೆವು ನಾವು ಪನ್ನೀರ ಎರಚುತಾ
ಹಸಿರ ಹಾಸಲಿ ಉರುಳಿ ನಲಿದೆವು - ಗುದ್ದಾಟವಾಡುತಾ

ಮನ ತಣಿವ ಕಲೆಯಂತೆ ಬಾನ ಬಣ್ಣ ಬದಲಾಗಿತ್ತು
ರಾಧಾಕೃಷ್ಣರ ಸಮಾಗಮ ಕಣ್ಣೆದುರೇ ಮೂಡಿತ್ತು

ಸಮಯದ ಪರಿವೆಯೇ ಇಲ್ಲ - ಸಂಜೆಯಾಗಿತ್ತು
ದೂರದಲಿ ನಿಂತಿದ್ದ ರೈಲ ಸಿಳ್ಳೆ ಕೇಳಿತ್ತು

ಒಲ್ಲದಾ ಮನದಲ್ಲಿ ಬಿಟ್ಟೆವು ಸ್ವರ್ಗಲೋಕವ
ಅದಾಗಿತ್ತು ಜೀವನ ಪರ್ಯಂತ ಮರೆಯದಾ ಅನುಭವ!

ಸ್ಯಾರೀ!!

ಮನೆ ಹತ್ರ ಒನ್ದ್ ಮಾರುತಿ ವಾನ್-ನಲ್ಲಿ ಸೀರೆ ಮಾರಕ್ಕೆ ಅಂಥ ತಂದ್ರಪ್ಪ...
ಹೆಣ್ಮಕ್ಕಳು ಏನು ನೂಕು ನುಗ್ಗಲು ಅಂತೀರ...
ಅದನ್ನ ನೋಡ್ದಾಗ ನನ್ೆ ಯೋಚನೆ ಬಂದಿದ್ದು ಗಂಡಂದಿರ್ ಪಾಡು...

***
ಸ್ಯಾರೀ!! (Saree)

ಬೇಕೆಂದು Saree,
ದುಂಬಾಲು ಬಿದ್ದಳು ಎನ್ನ ನಾರಿ.
ನಾನೆಂದೆ - "ಈಗ ಬೇಡ, Sorry"
ಅಡಿಗೆಮನೆಯಿಂದಲೇ
ಗುಡುಗಿದಳು - ನನಗೆ ಗಾಬರಿ!
"ನೀವೇ ಆರಿಸಿರಿ!"
"ನನಗೆ Saree,
ಇಲ್ಲ - ನಿಮಗೆ ಗೋರಿ!!!"
ಆ ಶಬ್ದಕ್ಕೆ ನಾ ಬೆದರಿ
ಆದೆ ಒಂದು ಕುರಿಮರಿ
"ಇವಳೊಂದು ಹೆಮ್ಮಾರಿ"
ಎಂದು ನಾ ಒದರಿ
ದುಡ್ಡನಿತ್ತು, ಆದೆ ಪರಾರಿ...

*
(೧೧-೧೧-೨೦೦೬)