Tuesday, November 16, 2010

ಸ್ವರ್ಗ-ನರಕ

ಆಹಾ...
ತಂಪಾದ ಗಾಳಿ
ತಿಳಿ ತುಂತುರು
ಸ್ವರ್ಗಕ್ಕೆ ಮೂರೇ ಗೇಣು
ಎಂದಿತು ನನ್ನುಸಿರು

ಸದ್ದಿಲ್ಲದೇ
ತಿಳಿಗಾಳಿಯಂತೆ
ಪಕ್ಕದಲ್ಲೇ
ವೇಗವಾಗಿ ಸಾಗಿದ
ಕಾರೊಂದು
ಹಾರಿಸಿತು
ಕೊಚ್ಚೆ-ಕಲೆ-ಕೆಸರು!

--ಶ್ರೀ

Thursday, October 28, 2010

ಗೋರಂಟಿ ಚೆಲುವೆ!






















ಗೋರಂಟಿ ಹಾಕಿದ ಚೆಲುವೆ
ಸಂಭ್ರಮದಿ ಕುಣಿಯುವ ನವಿಲೇ
ನೀ ನನ್ನ ಒಲವೇ...ಚೆಲುವೇ...
ನೀ ನನ್ನ ನಲಿವೇ...ಚೆಲುವೇ... || ಪ ||

ಬಣ್ಣಗಳ ತುಂಬಿದ ಚಿಟ್ಟೆ
ನನಗೆಂದೇ ನಿನ್ನಯ ಹುಟ್ಟೆ
ಖುಷಿಯನ್ನೇ ತುಂಬಿ ಬಿಟ್ಟೆ
ಸಂತಸಕೆ ನೀನೇ ಗುಟ್ಟೆ... || ೧ ||

ತಂಗಾಳಿಯ ತುಂಬಿದ ನೀರೆ
ನಲಿವನ್ನೇ ಸೂಸುವ ಮೋರೆ
ನೀನಾದೆ ಜೀವದಾ ಹೊಂಗೆರೆ
ನೀನಿರಲು ಜೀವನ ಹಾಲ್ನೊರೆ || ೨ ||

--ಶ್ರೀ
(೨೮-ಅಕ್ಟೋಬರ್-೨೦೧೦)

Image courtesy: http://www.makeupartist.ae/

Sunday, September 26, 2010

ಕರ್ಪೂರದ ಗೊಂಬೆ

ಪ್ರತಿಯೊಬ್ಬನೂ
ಕರ್ಪೂರದ ಗೊಂಬೆಯೇ...
ಕೆಲವರು
ಜ್ಯೋತಿಯಂತೆ
ಹೊತ್ತಿ ಉರಿದರೆ,
ಹಲವರು
ಹೇಳಹೆಸರಿಲ್ಲದೆ
ಮಾಯವಾಗುವರು
ತಿಳಿಗಾಳಿಯಲಿ...

--ಶ್ರೀ
(೨೫-ಸೆಪ್ಟೆಂಬರ್-೨೦೧೦)

Sunday, September 19, 2010

ಬಸವ ಪುರಾಣ...

ಸುಮಾರು ಮೂರು ವಾರದ ಹಿಂದೆ ಗೋಕುಲಾಷ್ಟಮಿ ಆಯ್ತಲ್ಲ? ಆ ದಿನ ನಮ್ ಮನೇಗೆ ತಂದ ಬಾಳೆ ಕಂದಿನ ಜೊತೆ ಬಸವನ ಹುಳು ಕೂಡ ಬಂತಪ್ಪ!
ನನ್ ಹೆಂಡತಿ, ಅಮ್ಮ ಎಲ್ಲ..."ಎಸೀ ಆಚೆಗೆ" ಅಂತ ನೋಡಿದ ತಕ್ಷ್ಣ ಕೂಗಿದ್ರು...
ನಾನು "ಪಾಪ! ನಾನು ಮನೆಯಿಂದ ಎಸಿಯಲ್ಲ" ಅಂತ ಹೇಳಿ, ಮನೇಲಿರೋ ಒಂದು ಹೂಕುಂಡಕ್ಕೆ ಹಾಕಿ ಬಂದೆ...
ನಮ್ ಮನೇಲಿ ಗೋಕುಲಾಷ್ಟಮಿ ಹಬ್ಬದ ಭರಾಟೇಲಿ ಈ ಬಸವನ ಹುಳು ಬಗ್ಗೆ ಮರ್ತೇ ಹೋಯ್ತು...

ಅದಾದ ಮೇಲೆ ಎಂದಿನಂತೆ ಮಾಮೂಲು ಆಫೀಸ್ ಕೆಲ್ಸ- ಮನೆ ಕೆಲ್ಸ... ಈ ಪುಟಾಣಿ ಬಗ್ಗೆ ನೆನಪೇ ಬರಲಿಲ್ಲ...



ಮೊನ್ನೆ "ಏನಪ್ಪ? ಮಾರಾಯಾ, ನನ್ನ ಮರತೇ ಬಿಡೋದಾ?" ಅಂತ ನಮ್ ಮನೆ ಮೆಟ್ಟಿಲ ಮೇಲೆ ಕಾಣಿಸಿಕೊಂಡು ಬಿಟ್ಟ!
ನಾನು ಆಫೀಸಿಗೆ ಹೊರಟವನು ತಕ್ಷಣ ಕ್ಯಾಮರ ತೆಗೆದು ಒಂದಿಷ್ಟು ಚಿತ್ರ ತೆಗೆಯೋಷ್ಟು ಹೊತ್ತಿಗೆ...ಒಂದು ಮೆಟ್ಟಿಲು ಪೂರ್ತಿ ಇಳಿದೇ ಬಿಟ್ಟ...



ಚಿಕ್ ಮಕ್ಕಳಾಗಿದ್ದಾಗ, ಬಸವನ ಹುಳು ತುಂಬಾ ನಿಧಾನ ಅಂತೆಲ್ಲಾ ಓದ್ಕೊಂಡು, 'ಸಿಕ್ಕಾ...............ಪಟ್ಟೆ ನಿಧಾನ' ಅಂದ್ಕೊಂಡಿದ್ದೆ!
ಆದ್ರೆ ಮೊನ್ನೆ ಗೊತ್ತಾಯ್ತು ಈ ಬಸವ ನಾನು ಅಂದ್ಕೊಂಡಿದ್ದಿಕ್ಕಿಂತ ಭಾರಿ ಫಾಸ್ಟ್ ಅಂತ!
ಮೆಟ್ಟಿಲ ಮೇಲಿದ್ದ ಒಂದು ಹೂಕುಂಡದ ಮೇಲೆ ಏರಿದಾಗ...'ಇಲ್ಲೇ ಇರ್ತಾನೆ ಬಿಡು' ಅಂತ ಆಫೀಸಿಗೆ ಹೊರಟು ಹೋದೆ...

ಸರಿ ಆ ದಿನ ಕಳೀತು...ಮುಂದಿನ ದಿನ, ಮನೆ ಬಾಗಿಲು ಎದಿರೇ ಪ್ರತ್ಯಕ್ಷ....ಅಮ್ಮ ಕೂಗಿದ್ರು.."ಲೇಯ್...ಮನೇ ಒಳಗೇ ಬರ್ತಾ ಇದೆ...ಬಿಸಾಕೋ" ಅಂತ...
ನಾನು ಬಿಡ್ತೀನಾ? ಅದನ್ನ ಎತ್ತಿ ಹೂಕುಂಡಕ್ಕೆ ಬಿಡೋಣ ಅಂತ ಒಂದು ಪೇಪರ್ ತೊಗೊಂಡೆ...


ಅದು ನೋಡಿದ್ರೆ ಎಂತಾದ್ದು ನೋಡಿ!



ಸರಿ.. ಆ ಚೀಟಿಲಿದ್ದ ಎಲ್ಲಾ.ಸಾಮಾನ್ಯ ಜ್ಞಾನದ ಮಾಹಿತಿನೂ ತಲೆ ಒಳಗಡೆ ತುಂಬಿಸ್ಕೊಳ್ತು...
"ಸರಿ ಆಯ್ತೇನಪ್ಪ ಓದಿದ್ದು???" ಅಂತ ಈ ಚೀಟಿಯಿಂದ ಮತ್ತೊಂದು ಹೂಕುಂಡಕ್ಕೆ "ಇದೇ ನಿನ್ನ ಹೊಸ ಮನೆ" ಅಂತ ಮೆಲ್ಲಗೆ ಬಿಟ್ಟೆ...
ಅದು ನಿಧಾನವಾಗಿ ಕಾರ್ಪೊರೇಷನ್ ಆಫೀಸರ್ ಥರ ಇನ್ಸ್ಪೆಕ್ಷನ್ ನಡೆಸಿ ಒಳಕ್ಕೆ ಹೋಯಿತು...






ಸರಿ ಅಲ್ಲಿ ಒಂದ್ ದಿನ ಇತ್ತೇನೋ...ಮತ್ತೆ ಈಗ ತೆವಳಿಕೊಂಡು ಬಂದು ಕಿಟಕಿ ಹತ್ರ ನಿದ್ದೇ ಮಾಡ್ತಾ ಇದೆ ಈಗ...ನೋಡಿ ಹೇಗೆ ತಾಚಿ ಮಾಡಿದೆ!




ಅಮ್ಮ ಹೇಳಿದಾರೆ "ಮನೇ ಒಳಗೆ ಬಂದ್ರೆ ನಿನ್ನ ಸುಮ್ನೆ ಬಿಡಲ್ಲ" ಅಂತ...
ನಾನು ಮೆತ್ಗೆ "ಒಳ್ಗಡೆ ಬಂದ್ರೆ ಪಾಟಲ್ಲಿ ಬಿಡಮ್ಮ" ಅಂತ ಹೇಳಿದೀನಿ...ನೋಡ್ಬೇಕು ಏನಾಗತ್ತೋ...ಇವತ್ತಿಗೆ ಅದು ನಮ್ ಮನೇಗೆ ಬಂದು ೧೭ ದಿನ ಆಯ್ತು...

ಇಂಟರ್ನೆಟ್ಟಲ್ಲಿ ಬಸವನ್ ಹುಳ ಒಂದ್ ವಾರದಿಂದ ೩ ವರ್ಷದ ವರ್ಗೂ ನಿದ್ದೆ ಮಾಡತ್ತೆ ಅಂತ ಕೊಟ್ಟಿದಾರೆ...ನೋಡ್ಬೇಕು ಕೋಳಿ ನಿದ್ದೇ ಮಾಡತ್ತೋ ಕುಂಭಕರ್ಣ ನಿದ್ದೆ ಮಾಡತ್ತೋ ಅಂತ...
ಒಟ್ನಲ್ಲಿ ನಮ್ ಮನೇಲಿ ಬಸವನ್ ಹುಳ ಇದೇ ಅನ್ನೋ ವಿಷ್ಯ ಏನೋ ಒಂಥರಾ...ಥರಾ... ;)

ಇವನ ಮಿಕ್ಕ ಪೋಸ್‍ಗಳು ನೋಡ್ಬೇಕಂದ್ರೆ ಇಲ್ಲಿ ಚಿಟಕಿಸಿ...

--ಶ್ರೀ

Friday, July 16, 2010

ತುಡಿತ

ಎದುರಿನವ
ನೂರಾರು
ವಿಷಯಗಳನ್ನು
ಅದೆಷ್ಟು ಕುತೂಹಲಕಾರಿಯಾಗಿ ಹೇಳುತ್ತಿದ್ದರೂ
ಮನದಲ್ಲಿ ಅವಿತ
ಮತ್ತೊಂದು ವಿಷಯವನ್ನು
ಅರುಹದೇ
ಅವನಿಂದ ಕೇಳಬಯಸುವುದು!

--ಶ್ರೀ

Wednesday, June 30, 2010

ಅಳು - ನಗು

ಸತ್ತವನ ನೆನೆಯುತ್ತಾ
ಗಳಗಳನೆ ಅಳುತ್ತಿದ್ದೆ...
ಈ ನನ್ನ ಅಳು
ಇನ್ನೊಬ್ಬನನ್ನು
ಮೆಲ್ಲನೆ ಕೊಲ್ಲುತ್ತಿದೆ
ಎಂದು ತಿಳಿದ ಕ್ಷಣವೇ
ನಗುಮೊಗದ ಮುಖವಾಡ ಧರಿಸಬೇಕಾಯ್ತು...

--ಶ್ರೀ

Friday, June 25, 2010

ನಾ ನಿನ್ನನ್ನು ಪ್ರೀತಿಸುತ್ತೇನೆ...

ಮನದಲೇನೋ ತೊಳಲಾಟ
ಅಂದಿಲ್ಲದ ಆಕರ್ಷಣೆ ಇಂದೇಕೆ??!
ತಡೆಹಿಡಿಯಲಾಗದ ಜ್ವಾಲಾಮುಖಿಯಂತೆ
ನನ್ನೊಳಗಿನ ಭಾವನೆಗಳು
ಒತ್ತರಿಸಿಕೊಂಡು ಬರಲೆತ್ನಿಸುತಿದೆ...
ಆದರೆ....ಈಗ ತಡವಾಗಿದೆ...

ಅಂದು ನೀನು ನನ್ನಲ್ಲಿ ಪ್ರೀತಿಯ ಪ್ರಸ್ತಾಪವನ್ನು
ಅದೆಷ್ಟು ಖುಷಿಯಲಿ ಮೊಗವರಳಿಸಿ ಮಾಡಿದ್ದೆ!
ಅಂದು ಕಂಡಿದ್ದ ನಿನ್ನ ಕಣ್ಣುಗಳ ಹೊಳಪು
ಇಂದಿಗೂ ಮರೆತಿಲ್ಲ...
ನೀನು... ನಾ ಕಂಡ
ಅತ್ಯಂತ ಸೊಗಾಸಾದ ವ್ಯಕ್ತಿಗಳಲ್ಲಿ ಒಬ್ಬ...
ನನ್ನ ನೆಚ್ಚಿನ ಗೆಳೆಯ!
ಆದರೂ...ನಿನ್ನ ಪ್ರೀತಿಯ ಪ್ರಸ್ತಾಪವನ್ನು ಅದೇಕೋ ಒಪ್ಪಲಿಲ್ಲ...
ಏಕೆಂಬುದು ನನಗೂ ಗೊತ್ತಿಲ್ಲ...
ಅಂದು ನಿನ್ನ ಬಗ್ಗೆ ಆ ರೀತಿ ಯೋಚನೆಗಳಿರಲಿಲ್ಲ...ಅಷ್ಟೆ!!
ಅಂದು ನಾ ಒಪ್ಪದಾಗ ನಿನ್ನಲ್ಲಾದ ಬೇಸರ-ನೋವಿನ ಬಗ್ಗೆ ಅರಿವಿತ್ತು...
ಆದರೂ ನನ್ನ ಮನದಲ್ಲಿ ಪ್ರೀತಿ ಹುಟ್ಟಲಿಲ್ಲ...

ಕಾಲ ಕಳೆದಂತೆ ನೀ ನಡೆದೆ...ಹೊಸ ಹಾದಿ ತುಳಿದೆ...
ಹೊಸ ಪ್ರೀತಿಯನ್ನೂ ಕಂಡುಕಂಡೆ...
ಈಗ ....ವರ್ಷಗಳು ಕಳೆದ ಮೇಲೆ
ನಿನ್ನ ಬಗ್ಗೆ ಹೊಸ ಭಾವ...
ಹೊಸ ಹುರುಪು-ಹೊಸ ಒಲವು...ಅದೇಕೋ ಕಾಣೆ...
ನೆಚ್ಚಿನ ಗೆಳೆಯನಂತೆ ನೀ ಇಂದಿಗೂ ನನ್ನೊಡನಿರುವೆ...
ನೀನೀಗ ನಿನ್ನ ಸಂಗಾತಿಯೊಂದಿಗೆ ಸಂತೋಷದಿಂದಿರುವೆಯಂಬುದು ತಿಳಿದಿದೆ...
ಆದರೂ ನನಗದೇನೋ ಉತ್ಕಟ ಪ್ರೀತಿ!
ಈ ಹೊಸ ಭಾವನೆಗಳನ್ನು ನನ್ನೊಳಗೆ ಅದುಮಿಡಬೇಕಾದ ಪರಿಸ್ಥಿತಿ...
ಅಂದು ನಿನ್ನ ತಿರಸ್ಕರಿಸಿದ್ದು ತಪ್ಪೇನೋ...
ಈಗ! ಇಂದು...ನಾ ನಿನ್ನನ್ನು ಪ್ರೀತಿಸುತ್ತೇನೆ ಗೆಳೆಯ...
ನಿನಗರಿವಿಲ್ಲದಿರಬಹುದು...ನಿನ್ನರಿವಿಗೆ ಮುಂದೆಂದೂ ಬಾರದಿರಬಹುದು....
ನಾನು ನಿನ್ನನ್ನು ಮನಸಾರೆ ಪ್ರೀತಿಸುತ್ತಿರುವೆ...
ನನ್ನ ಮನದೊಳಗಿನ ಪ್ರತಿ ಲಾವಾ ಹನಿಯ ಮೇಲಾಣೆ!

--ಶ್ರೀ
(ಜೂನ್ ೨೫ ೨೦೧೦)

Thursday, June 24, 2010

ಏಕೆ ಬದಲಾದೆ ಗೆಳತಿ?

ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿ
ಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?
ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ
ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ್ದು?
ನಿನ್ನೊಳಗಿನ ಜಗವನ್ನು ಬಿಟ್ಟು ಹೊರಗೆ ಬಾರದೆ ಇದ್ದ ಅಂತರ್ಮುಖಿಯನ್ನಲ್ಲವೇ ನಾ ಮೆಚ್ಚಿದ್ದು?
ನನ್ನ ಮನದ ಮಾತು ನಿನಗೆ ತಲಪುವ ಮುನ್ನ ನಿನ್ನೊಳಗಿನ ಭಾವ ಹೇಗಿತ್ತೋ ಅರಿಯೆ...
ನನ್ನ ಪ್ರೇಮದ ಒಕ್ಕಣೆಗೂ ಮೌನವಾಗೆ ಸಮ್ಮತಿಸಿದ್ದೆಯಲ್ಲವೇ?
ಅಂದಿನಿಂದಲೇ ಶುರುವಾಯ್ತು ಹೊಸ ಅಧ್ಯಾಯ...
ನೀ ಬದಲಾದೆ ಗೆಳತಿ...
ಸಮ್ಮೋಹನಗಳಿಸಿದ ಆ ಮೌನ ಮಾಯವಾಯ್ತಲ್ಲ...
ಈಗ, ನನ್ನೊಡನಿದ್ದಾಗ ನಿನ್ನಧರಕೆ ಬಿಡುವಿಲ್ಲ!
ನಾನಿಲ್ಲದಾಗಲೂ ನಿನ್ನ ಈ ತುಂಟ ತುಟಿಗಳಿಗೆ ಅದೇನೋ ಚಡಪಡಿಕೆ!
ಏಕೆ ಬದಲಾದೆ ಗೆಳತಿ?
ನಿನ್ನೀ ನಿರಂತರ ಮಾತುಗಳಿಂದ ನನಗೆ ಅಮೃತವನೇ ಉಣಿಸಿದರೂ
ಅಂದು ನನ್ನ ಸೆಳೆದ ಮೌನ ನನಗೆ ಗುಲಗಂಜಿಯಷ್ಟು ಹೆಚ್ಚು ಮೆಚ್ಚು...!

--ಶ್ರೀ

(ಜೂನ್ ೨೫, ೨೦೧೦)

Wednesday, June 16, 2010

ಹುಡುಗಾಟ!

ಮನೆಯೊಳಗೇ ಇರುವ
ಸೋಫಾದಲ್ಲಿ ಕುಳಿತು
ಟಿವಿ ಪರದೆಯಲ್ಲಿ ಬರುವ
ಆಟಗಾರನ ಕಾಯ ಪ್ರವೇಶಿಸಿ,
ಅವ ಗೆದ್ದಾಗ,
ಪ್ರಪಂಚವೇ ತಾ ಗೆದ್ದು ಬಂದಂತೆ
ಭ್ರಮಿಸಿ-ಸಂಭ್ರಮಿಸುವುದೇ ಹುಡುಗಾಟ!

--ಶ್ರೀ
(೧೬-ಜೂನ್-೨೦೧೦)

Sunday, April 25, 2010

ಮರೆಯಲಾದೀತೆ ನಿನ್ನ...ಬೆರೆತೆವಂದೇ ನಾವು...


ಮರೆಯಲಾದೀತೆ ನಿನ್ನ...
ಬೆರೆತೆವಂದೇ ನಾವು...ಮರೆಯಲಾದೀತೆ....??? || ಪ ||

ಮುಂಗಾರಿನಂತೆ ಬಂದೆ
ತಂಗಾಳಿ-ಒಲವಧಾರೆ
ಸತತ ನೀ ಉಣಿಸಿದೆ... || ೧ ||

ನಿನ್ನ ತಂಪು-ಕಂಪು ಸೋಕಿ
ನನ್ನ ನಾ ಮರೆತೆನೋ...
ಉನ್ಮಾದದ ಮೋಕ್ಷ ಫಲಿಸಿತೆನಗೆ...|| ೨ ||

ಒಲವೆಲ್ಲೆಡೆ ಸೂಸಿ
ನಮ್ಮ ಬಂಧದಾ ಕಂಪು
ಭುವಿಯ ದಾಟಿತ್ತು || ೩ ||

ಒಲವೆಂಬ ಕಂಪದೇಕೋ
ಹೊಗೆಯಂತೆ ಒಗ್ಗೂಡಿ
ನೇಸರನ(ವಿಧಿಯ) ಕಾಡಿತ್ತು... || ೪ ||

ಉರಿಯಲೇ ಬರೆದ ವಿಧಿ
ವಿರಹದಾ ದೀರ್ಘಪುಟ,
ಕೊನೆಯಿಲ್ಲದಂತೆ ಬರೆದವನವನು... || ೫ ||

ವಿಧಿಯಾಜ್ಞೆಯಂತೆ ಹೊರಟೆ
ನೀ ನನ್ನನು ಬಿಟ್ಟು
ಎಂದಿನಂತೆ ಅಂದು ಕೂಡ ಮಂದಹಾಸ || ೬ ||

ಮುಖವಾಡದ ಹಿಂದೆ
ಕುಣಿದಿದ್ದ ವಿರಹಾಗ್ನಿ
ನನಗೆ ಕಂಡಿತ್ತು-ನನ್ನ ಸುಡುತಿತ್ತು || ೭ ||

ಅಂದು ಹೋದವ ನೀನು
ಇಂದಿಗೂ ಬರಲಿಲ್ಲ
ನಿನ್ನ ಕಾಣುವ ತವಕ ತಣಿದಿಲ್ಲವೋ || ೮ ||

ಎಂದು ಬರುವೆಯೋ ನೀನು
ಒಂದುಗೂಡುವ ಆಸೆ
ಇಂದಿಗೂ ನನ್ನಲಿ ಉರಿಯುತಿಹುದು || ೯ ||

ನಿನ್ನ ಕಂಡದೆಷ್ಟು ವರುಷ
ಉರುಳಿತೋ ನೆನಪಿಲ್ಲ
ನನ್ನಲಿರುವ ಒಲವು ಕುಂದಲಿಲ್ಲ... || ೧೦ ||

ನನ್ನ ಪ್ರತಿ ನಾಡಿಯಲ್ಲಿ
ನಿನ್ನದೇ ಮಿಡಿತವೋ...
ಬದುಕಿರುವೆ ಇಂದು ನಾನು ನಿನ್ನ ನೆನಪಲಿ.... || ೧೧ ||

ಮರೆಯಲಾದೀತೆ ನಿನ್ನ
ಬೆರೆತವಂದೇ ನಾವು...
ನನ್ನಿರುವು ಇಂದಿಗೂ ನಿನ್ನಿರುವಲಿ... || ೧೨ ||

ಚಿತ್ರಕೃಪೆ: http://www.iskconkharghar.com/

Monday, April 5, 2010

ಮರಮೇಧ



ಹೊಸ ಏರ್‍ಪೋರ್ಟ್ಗೆಂದು
ಹೊಸದಾಗಿ ಹಾಸಿದ
ಅಗಲವಾದ ರಸ್ತೆಯಲ್ಲಿ
ಜುಮ್ಮನೆ
ಹೊಸ ಕಾರಿನಲ್ಲಿ
ತೊಂಭತ್ತರ ಸ್ಪೀಡಿನಲ್ಲಿ
ಹೋಗುವುದು
ಅನಂತ ಮರಗಳ
ಶವಗಳ ಮೇಲಲ್ಲವೇ?

--ಶ್ರೀ

Tuesday, March 9, 2010

ಮರುಕತೆ


ಮಹಿಳಾ ದಿನಕ್ಕೊಂದು...ಕೊಂಚ ತಡವಾಗಿ...
-------------
ಗಿಜಿಗುಡುವ
ರಸ್ತೆಯ ಬದಿಯಲ್ಲಿ
ಕಗ್ಗತ್ತಲಿನ ಜಾಗದಲಿ ನಿಂತು
ಹಾದಿಯಲಿ ಹೋಗುವವರತ್ತ
ತುಟಿ ಕಚ್ಚಿ
ಮಾದಕತೆಯಿಂದ
ಸೆಳೆಯುವುದು
ಮಾರ-ಕತೆಗಲ್ಲವೇ?
ಈ ಮಾದಕತೆ ಮತ್ತು ಮಾರಕತೆಯ ಹಿಂದೆ
ಮರುಕತೆ+ಯೊಂದಿದೆ, ಅಲ್ಲವೇ?

--ಶ್ರೀ
ಮರುಕತೆ -- ಮರುಕದಿಂದ ಕೂಡಿದ ಕತೆ/ಅಳಲಿನ ಕತೆ...

Friday, March 5, 2010

ಮನೋಬಲ

ಜಟ್ಟಿಯಾದರೇನು
ಗಟ್ಟಿ ಮನವಿಲ್ಲದಿರೆ
ಪುಟ್ಟನೂ ಕೂಡ
ಕುಟ್ಟಿ-ಮೆಟ್ಟಿ ನಿಲಬಹುದು!

--ಶ್ರೀ

Saturday, February 20, 2010

ಗುಳಿಯೆಂಬ ಸುಳಿ...



ನಲ್ಲೆ,

ನಿನ್ನ ಕೆನ್ನೆಯ ಮೇಲೆ ಮೂಡುವ ಗುಳಿ, ನೀರಿನಲಿ ಮೂಡುವ ಗುಳ್ಳೆಗಳಂತೆ ಥಟ್ಟನೆ ಮಾಯವಾಗುವುದೇಕೆ?
ನೀರಿನ ಸುಳಿಯಲಿ ಈಜುವುದೆಷ್ಟು ತೊಡಕೋ, ನಿನ್ನ ಕೆನ್ನೆಯ ಗುಳಿಯಲಿ ಈಜುವುದಷ್ಟೇ ಸೊಗಸು...
ನಿನ್ನ ಕೆನ್ನೆಯ ಮೇಲೆ ಮೂಡುವ ಗುಳಿ, ಇಣುಕಿ-ಕೆಣಕಿ ಮಾಯಾಜಿಂಕೆಯಂತೆ ಮಾಯವಾಗುವುದೇಕೆ?
ಗುಳಿಯ ಸದಾ ಹಿಡಿದಿಡುವುದರಲ್ಲಿ ನಾ ವಿಫಲನಾಗಿರಬಹುದು; ನನ್ನೊಲವೇ ಗುಳಿಗೆ ಕಾರಣವೆಂದು ತಿಳಿದಿದೆ...
ನಿನ್ನ ಗುಳಿ-ನನ್ನೊಲವಿನ ಬುಗ್ಗೆ, ಚಿಮ್ಮಿ ಮಾಯವಾಗುವುದೂ ಕಣ್ಣಿಗೆ ಹಬ್ಬ...
ಇರಲಿ...ಗುಳಿಗೆ ನಾ ಗಾಳ ಹಾಕುವುದಿರಲಿ...ಗುಳಿಯ ಗಾಳದಲಿ ನಾ ಸಿಲುಕಿದ್ದಕ್ಕಲ್ಲವೇ ನೀ ನನಗೆ ಸಿಕ್ಕಿದ್ದು :)

--ಶ್ರೀ
೧೯ ಫೆಬ್ರವರಿ ೨೦೧೦

Sunday, February 7, 2010

’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ನುಡಿ...

೧೯೮೮ರಲ್ಲಿ ’ಮಿಲೇ ಸುರ್ ಮೇರಾ ತುಮ್ಹಾರ’ ಎಂಬ ಹಾಡು ಟಿ.ವಿಯಲ್ಲಿ ಬರುತ್ತಿದ್ದಂತೆ ನಾವುಗಳೆಲ್ಲಾ ಗೋಡೆಗೆ ಅಂಟುವ ಹಲ್ಲಿಗಳಂತೆ ಟಿ.ವಿಗೆ ಅಂಟಿಕೊಂಡು ಬಿಡುತ್ತಿದ್ದೆವು.
ಹಾಡಿನಲ್ಲಿ ಕನ್ನಡವನ್ನು ಕೇಳಿದಾಗಲಂತೂ ಮೈ-ಪುಳುಕ. ಚಿಕ್ಕ ಮಕ್ಕಳಾಗಿದ್ದ ನಮಗೆ, ಭಾರತದ ಸಂಸ್ಕೃತಿಯ ಕನ್ನಡಿಯಂತಿದ್ದ ಈ ಹಾಡು ಕಣ್ಣಿಗೆ ಹಬ್ಬವೇ ಸರಿ.

ನೀವೆಲ್ಲ ಕೇಳಿರಬಹುದಾದ, ಈ ಹಾಡನ್ನು ಮತ್ತೊಮ್ಮೆ ಕೇಳಿಬಿಡಿ


ಇತ್ತೀಚಿಗೆ ಝೂಮ್ ಚಾನಲ್‍ನವರು, ಈ ಪ್ರಸಿದ್ಧ ಹಾಡನ್ನು ಹೊಸ ರೀತಿಯಲ್ಲಿ, ಹೊಸ ಧಾಟಿಯಲ್ಲಿ ಮಾಡಿದ್ದಾರೆ. ಕೆಳಗಿನ ಎರಡು ಕಂತುಗಳಲ್ಲಿ ಕೇಳಿಬಿಡಿ:
ಫಿರ್ ಮಿಲೇ ಸುರ್‍ನ ಮೊದಲ ಕಂತು ಇಲ್ಲಿದೆ:


ಎರಡನೇ ಕಂತು ಇಲ್ಲಿದೆ:


ಮಿಲೇ ಸುರ್ ಮೇರಾ ತುಮ್ಹಾರ ಹೊತ್ತಿಸಿದ ಕಿಡಿ-ದೇಶ ಭಕ್ತಿ, ಈ ಹಾಡಿನಲ್ಲಿ ನನಗೆ ಕಾಣಲಿಲ್ಲ. ಭಾರತದ ಸಂಸ್ಕೃತಿಯನ್ನು ಬಿಂಬಿಸುವುದಕ್ಕಿಂತ, ಚಲನಚಿತ್ರ ತಾರೆಯರಿಂದಲೇ ತುಂಬಿಸಿರುವ ಈ ಹಾಡನ್ನು ನೋಡಿದಾಗ, ಮಿಲೇ ಸುರ್ ಮೇರಾ ತುಮ್ಹಾರ ಹಾಡಿನ ಅಪಮಾನದಂತೇ ಕಾಣುತ್ತದೆ. ಭಾರತ ಸಂಸ್ಕೃತಿಯನ್ನು ಬಿಂಬಿಸಲು ಹೊರಟಿಲ್ಲವಾದಲ್ಲಿ, ನಿರ್ದೇಶಕರು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿಯಲಿಲ್ಲ. ಇಡೀ ಹಾಡಿನಲ್ಲಿ ಗ್ಲಾಮರ್ ತುಂಬಿಸಿ, ಹಿಂದೆ ಪಡೆದ ಯಶಸ್ಸು ಮರುಕಳಿಸಬಹುದು ಎಂಬ ಎಣಿಕೆ ನಿರ್ದೇಶಕರಿಗೆ ಹೇಗಿತ್ತೋ ಕಾಣೆ. ಮುಂಚಿನ ಹಾಡಲ್ಲೂ ಚಿತ್ರತಾರೆಯರಿದ್ದರೂ, ಅದು ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು ಎಂದು ನನ್ನ ಅನಿಸಿಕೆ. ಈ ಹಾಡಿನ ಹೊಸ ಪ್ರಯತ್ನವೇಕೋ ನನಗೆ ದೊಡ್ಡ ವೈಫಲ್ಯದಂತೆ ತೋರುತ್ತದೆ...

ಕನ್ನಡದ ಭಾಗದ ಬಗ್ಗೆ ಒಂದಿಷ್ಟು:
ಪ್ರಕಾಶ್ ಪಡುಕೋಣೆ ಹಾಡುವಾಗ ನನಗೆ ನಲಿವು ತಂದರೆ, ಕನ್ನಡ ನಾಡಲ್ಲಿ ಹುಟ್ಟದ ಕವಿತಾ ಕೃಷ್ಣಮೂರ್ತಿ ಹಾಡಿದ್ದು ಪೆಚ್ಚನ್ನು ತಂದಿತು. ಚೆನ್ನೈನಲ್ಲಿ ಹುಟ್ಟಿದ ಎಲ್. ಸುಬ್ರಮಣಿಯಂ, ಬೆಂಗಳೂರಿನಲ್ಲಿ ನೆಲಸಿರುವವರು ಎಂಬ ವಿಷಯಕ್ಕೆ ಸಮಾಧಾನ ಪಟ್ಟಿಕೊಳ್ಳಬೇಕೇನೋ. ಹಾಡಿನಲ್ಲಿ ಬರುವ ಮಿಕ್ಕವರೆಲ್ಲ ಯಾರು ಎಂಬುದೇ ತಿಳಿಯಲಿಲ್ಲ. ಕರ್ನಾಟಕದಲ್ಲಿ ಹುಟ್ಟಿದ ಮೂವರು ಬಾಲಿವುಡ್‍ನ ಪ್ರಸಿದ್ಧ ನಟಿಯರು ಯಾರೂ ಕನ್ನಡದ ಭಾಗವನ್ನು ಹಾಡದಿದ್ದುದು ನನಗೆ ಅಚ್ಚರಿಯೇನು ತರಲಿಲ್ಲ. ಏಕೆಂದರೆ ಇವರೆಲ್ಲ ತಾವು ಕನ್ನಡಿಗರೂ ಎಂದು ಇದುವರೆಗೂ ಹೆಮ್ಮೆಯಿಂದ ಹೇಳಿಕೊಂಡಿದ್ದನ್ನೂ ಕಂಡೇ ಇಲ್ಲ. ದೀಪಿಕಾ ಪಡುಕೋಣೆಯಂತೂ, ಮಾಧ್ಯಮದವರೆಲ್ಲ ತನ್ನ ಊರಿನ ಹೆಸರನ್ನು ’ಪಡುಕೋಣ್’ ಎಂಬ ತಪ್ಪಾಗಿ ನುಡಿದರೂ ಇಂದಿನವರೆಗೂ ಸರಿಪಡಿಸದವಳು. ಇಂಥವರಿಂದ ಹೆಚ್ಚೇನು ಆಶಿಸಲಾಗುತ್ತದೆ, ಅಲ್ಲವೇ?

ಇನ್ನು ಸಾಹಿತ್ಯದ ಬಗ್ಗೆ ನೋಡುವ...ನಾನು ಮತ್ತೊಮ್ಮೆ ಈ ಹಾಡುಗಳನ್ನು ಕೇಳಿದರೆ, ಮೊದಲ ಬಾರಿಯ ಹಾಡಿನಲ್ಲಿರುವ, "ನನ್ನ ದನಿಗೆ ನಿನ್ನ ದನಿಯ, ಸೇರಿದಂತೆ ನಮ್ಮ ಧ್ವನಿಯ" ಎಂಬ ಸಾಹಿತ್ಯವೇನು ಹಿಡಿಸುವುದಿಲ್ಲ. ಅದೇಕೋ ಅರ್ಧಕ್ಕೆ ನಿಂತಂತೆ ಅನಿಸುತ್ತದೆ. ಎರಡನೆಯ ಪ್ರಯತ್ನದಲ್ಲಿ ಕವಿತಾ ಕೃಷ್ಣಮೂರ್ತಿ ಮತ್ತು ಸಂಗಡಿಗರು ಹಾಡುವ, "ಸ್ವರ ಸೇರಿದೆ ನಮ್ಮ ನಿಮ್ಮದೂ...ಆ ಸ್ವರವಾಗಲಿ ನಮ್ಮೆಲ್ಲರದೂ", ಮೊದಲಿಗಿಂತ ಪರವಾಗಿಲ್ಲ ಎನಿಸಿದರೂ, ಹೆಚ್ಚಾಗಿ ಮೆಚ್ಚೆನಿಸಲಿಲ್ಲ. ಹಾಡಿನ ಮೂಲ ಭಾವವನ್ನು ಹಿಡಿಯದೇ, ಪ್ರತಿ ಪದವನ್ನು ಅನುವಾದ ಮಾಡಿದಲ್ಲಿ ಈ ರೀತಿ ಆಗಬಹುದು ಎಂಬುದು ನನ್ನ ಅನಿಸಿಕೆ.

ಪ್ರತಿ-ಪದ ಅನುವಾದಿಸದೆ ಐಕ್ಯರಾಗವನ್ನು ಹೊಮ್ಮಿಸುವಾಸೆಯಿಂದ ಯೋಚಿಸುತ್ತಿದ್ದಾಗ ಹೊಳೆದ ಕನ್ನಡದ ಸಾಲುಗಳಿವು:
------
ಕೂಡಲಿ ಸ್ವರವು ಸ್ವರವು ಇಂದು, ಮೂಡಲಿ ಹೊಸ-ರಾಗವೊಂದು

ಸ್ವರದ ನದಿಗಳು ಎಲ್ಲೆಡೆಯಿಂದ ಹರಿದು ಕಡಲನು ಸೇರಲಿ..
ಮೇಘದ(ಮೋಡದ) ಸ್ವರೂಪ ಪಡೆದು, ಸ್ವರಗಂಗೆ ಭುವಿಗಿಳಿಯಲಿ...

ಓ...ಕೂಡಲಿ ಸ್ವರವು ಸ್ವರವು ಇಂದು, ಮೂಡಲಿ ಹೊಸ-ರಾಗವೊಂದು...
------

ಹೇಗಿದೆ? ನಿಮ್ಮ ಅನಿಸಿಕೆ ಹೇಳಿ...

--ಶ್ರೀ