Tuesday, November 24, 2009

ಕೊರೆತ...



ಕಡಲ ಕೊರೆತಕೇನೋ
ಇಡಬಹುದು ಬಂಡೆಗಳ...
ನಿನ್ನ ಮೌನದಿಂದ
ಹೃದಯದಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಸಖೀ???

--ಶ್ರೀ

Saturday, November 14, 2009

ನುಡಿ ಸಿಡಿಲು

ಕಟಕಿಯಾಡಿದ
ಹುಡುಗನ
ನಡುಬೀದಿಯಲಿ
ಹಿಡಿಶಾಪ ಹಾಕಿದರೂ, ಅವ
ನುಡಿದ ಮಾತುಗಳು
ಗುಂಡಿಗೆಯಲಿ
ಗುಡುಗಿತ್ತು...

--ಶ್ರೀ
(೧೪ - ನವಂಬರ್ - ೨೦೦೯ )

Tuesday, October 13, 2009

ಒಡೆದ ಕನ್ನಡಿ


ತುಡಿಯುತಿಹುದು ಮನ, ಒಡೆದ ಕನ್ನಡಿಯ ಸುತ್ತ
ಪ್ರತಿ ಚೂರಿನೊಳಗೆ ಕಹಿ ನೆನಪ ಹುತ್ತ

ಖುಷಿಯಲೇ ಮುಳುಗಿದ್ದ ನಮ್ಮಿಬ್ಬರಾ ಮಧ್ಯೆ
ವಿಷವೆಂದು ಮೊಳೆಯಿತೋ ತಿಳಿಯದಾಗಿದೆ
ನಲಿಯುತಾ ಎರಚಿದಾ ಓಕುಳಿಯ ಜೊತೆಗೆ
ಕೊಳಕೆಂದು ಹಾರಿತೋ ನಾನಿಂದು ಅರಿಯೆ

ಮುತ್ತೆಂದು ಇಟ್ಟದ್ದು ಮುಳ್ಳಾಯ್ತೇ ನಿನಗೆ?
ಇತ್ತೆ ನಾ ಮುತ್ತುಗಳ ಕಹಿ ಮನವನರಿಯದೆ
ಇರಿದ ಮುತ್ತನು ಸಹಿಸಿ ಮೌನಿ ಏಕಾದೆ?
ನಲಿವಿನಲಿ ನಾ ನಿನಗೆ ಮುತ್ತಿಡುತ ಹೋದೆ

ನಮ್ಮಿಬ್ಬರಾ ಬಂಧ ಬಲು ಚೆಂದ ಎಂಬ ಭ್ರಮೆ
ಕನ್ನಡಿಯ ಹಿಡಿದು ಕುರುಡನಾಗಿದ್ದೆ
ಹುಡುಗಾಟದಿ ಅಂದು ದೂಡಿದುದು ತಪ್ಪೇನೋ
ಇಂದೆನ್ನ ಮುಂದಿದೆ ಒಡೆದ ಗಾಜಿನ ಮೂಟೆ

--ಶ್ರೀ

Thursday, September 24, 2009

ನಮ್ ಮನೇಲಿ ನವರಾತ್ರಿ ಬೊಂಬೆ ಕೂಡಿಸಿರೋದ್ ಹೀಗೆ!








ನಮ್‍ಹಳ್ಳಿ!





ಬಟ್ಟೆ ವ್ಯಾಪಾರಿ



ರೈಲಿನಲ್ಲಿ "ವಿಶ್ವ ಪರ್ಯಟನೆ"


ಪುಟಾಣಿ ರಾಷ್ಟ್ರೀಯ ಉದ್ಯಾನವನ




ಸಮುದ್ರ ಮಂಥನ

Friday, September 4, 2009

ಬೇಡತಿಯ ಮುತ್ತು

ಹಂಸಾನಂದಿಯವರು ಚಾಣಾಕ್ಯನ ನೀತಿಯನ್ನು ಅನುವಾದಿಸಿ, ’ಬೇಡತಿಗೆ ಬೇಡದ ಮುತ್ತು’ಎಂಬ ತಲೆ ಬರಹ ನೀಡಿದರು.
ಈ ತಲೆಬರಹದಿಂದ ಸ್ಫೂರ್ತಿಗೊಂಡ ನಾನು ಕೆಳಗಿನ ನಾಲ್ಕು ಸಾಲನ್ನು ಬರೆದಿರುವೆ...

ಬೇಡತಿಗೆ ಬೇಡ ಕೊರಳ ಹಾರದ ಮುತ್ತು
ಬೇಡುತಿಹಳು ಬೇಡನ ಮಾರನ ಮತ್ತು,
ಉಡಿಯನು ತುಂಬಲು ಒಲವಿನ ಮುತ್ತು,
ಮಡಿಲಲಿ ಆಡುವ ಬೆಲೆ ನಿಲುಕದ ಮುತ್ತು!

--ಶ್ರೀ

Thursday, August 27, 2009

ನಮ್ಮೂರ ಆಂಜನೇಯನಿಗೆ ಬೆಳ್ಳಿ ಕವಚ...

ಮೂಲ ವಿಗ್ರಹ ಹೀಗಿದೆ:


ಹೊಸ ಕವಚ ಹಾಕಿದ ಮೇಲೆ:


ಅರಿಶಿನ ಲೇಪಿತ ಹನುಮಂತ:

Friday, August 14, 2009

ತಂಪಿನ ಕಂಪು

ಹಂಸಾನಂದಿಯವರು ಮತ್ತೊಂದು ಉತ್ತಮ ಸುಭಾಷಿತವನ್ನು ಪರಿಚಯಿಸಿದರು.

ಸಂಸ್ಕೃತ ಮೂಲ:

ಚಂದನಂ ಶೀತಲಂ ಲೋಕೇ ಚಂದನಾದಪಿ ಚಂದ್ರಮಾಃ
ಚಂದ್ರ ಚಂದನಯೋರ್ಮಧ್ಯೇ ಶೀತಲಾ ಸಾಧು ಸಂಗತಿ:

ಅವರ ಅನುವಾದವನ್ನು ಬಳಸಿ ನನ್ನದೊಂದು ಭಾವನುವಾದ ಹೀಗಿದೆ:

ಚಂದನ ತೊಡುವುದು ಒಡಲಿಗೆ ತಂಪು
ಚಂದ್ರನ ಕಾಂತಿಯು ಅದಕೂ ಇಂಪು+
ಚಂದಿರ ಚಂದನ ಎರಡನು ಮೀರಿದೆ
ಸುಂದರ* ಜನಗಳ ಸಂಗದ ಪೆಂಪು!

--ಶ್ರೀ

+ಇಂಪು:
ಸೊಗಸು, ಅಂದ

*ಸುಂದರ:
೧೮. divine (ಗುಣವಾಚಕ) 1) ದೈವಿಕ, ಪವಿತ್ರವಾದ, ದೇವರಂಥ, ದಿವ್ಯ, ಅತಿಮಾನುಷ, ದೈವದತ್ತ 2) ಸರ್ವೋತ್ಕೃಷ್ಟ, ಅತಿ ಸುಂದರ, ಅತಿ ಶ್ರೇಷ್ಠ, ಅಲೌಕಿಕ ಸೌಂದರ್ಯವುಳ್ಳ
೧೭. comely (ಗುಣವಾಚಕ) 1) ಸೊಗಸಾದ, ಸುಂದರ, ಸ್ಫುರದ್ರೂಪಿಯಾದ 2) ಯೋಗ್ಯವಾದ, ಮನಸ್ಸಿಗೆ ಒಪ್ಪುವ, ರಮಣೀಯ, ಮನೋಹರ