Sunday, February 1, 2009

ಇಲ್ಲಿ ಕುಳಿತರೆ ಸ್ವರ್ಗವಂತೆ...


ಇಲ್ಲಿ ಕೂರೆಂದು ಅದೆಷ್ಟು ಮಂದಿ ಹೇಳಿದರೋ ಎನಗೆ!
’ಇಲ್ಲಿ ಕೂರಯ್ಯ, ನಿನಗೆ ಸ್ವರ್ಗವೇ ಧರೆಗಿಳಿದಂತೆ ಕಾಣುವುದು’ ಎಂಬ ಮಾತನ್ನು ಕೇಳಿ ಕೇಳಿ ಕೊನೆಗೆ ತಲೆ ಚಿಟ್ಟೇ ಹಿಡಿದು ಬಂದು ಕುಳಿತಿಹೆನು ನಾನಿಲ್ಲಿ...
ಅದೇನೋ ’ಕವಿ ಕಂಡ ರವಿ’ ಇಲ್ಲೇ ಹುಟ್ಟುವುದಂತೆ! ಕುವೆಂಪು ಕುಳಿತ ’ಕವಿ ಶೈಲ’ವೂ ಈ ಸ್ಥಳದ ಮುಂದೆ ನಾಚಿ ನೀರಾಗುವುದಂತೆ...
ತಿಳಿ ನೀರ ಜಲಲ ಜಲಲ ಧಾರೆ ಹರಿಯುವುದುಂಟಂತೆ...ಇಲ್ಲಿನ ಚೈತ್ರದ ಚಿಗುರೆಲೆಗೆ ಹೊಸ ರಂಗುಂಟಂತೆ...
ಇಲ್ಲಿನ ಹಕ್ಕಿಗಳ ಕಂಠದಲ್ಲಿ ಅದೇನೋ ಹೊಸ ನಾದ, ಹೊಸ ರಾಗವಂತೆ!
ಎಲ್ಲೂ ಇಲ್ಲದ್ದೂ ಇಲ್ಲಿದೆಯಂತೆ...ಇಲ್ಲಿರುವ ಬೆಟ್ಟಗಳ ಮೈಮಾಟವನ್ನು ಬಣ್ಣಿಸಲಾರರಂತೆ, ಒಂದಕಿಂತ ಒಂದ ನೋಡುವುದೇ ಸೊಬಗಂತೆ...
ಒಂದು ನಂದಿಯಂತೆ ಕಂಡರೆ, ಮತ್ತೊಂದು ಕುದುರೆಮುಖವಂತೆ...ಹೀಗೆ ಒಬ್ಬೊಬ್ಬರೂ ಹೇಳಿದ್ದೋ ಹೇಳಿದ್ದು...

ನಾನು ಇಲ್ಲಿಗೆ ಬಂದು ಅದೆಷ್ಟು ಸಮಯ ಕಳಿಯಿತೋ ಕಾಣೆ...ನನಗೆ ಇದಾವುದೂ ಕಾಣುತ್ತಲೇ ಇಲ್ಲ...
ಏನಿದೇ ಇಲ್ಲಿ ಅಂಥದ್ದು! ಅದೇಕೆ ಜನರಿಗೆ ಈ ಜಾಗದ ಬಗ್ಗೆ ಅಷ್ಟೊಂದು ಒಲವು?

ಈ ಜಾಗದಲ್ಲಿ ಹೊಸತನವನ್ನು ಹುಡುಕುತ್ತಾ ತಲ್ಲೀನನಾಗಿದ್ದ ಎನಗೆ, ಮಗುವೊಂದು ಜೋರಾಗಿ ಅತ್ತಾಗಲೇ ಎಚ್ಚರವಾದದ್ದು...
ಪಕ್ಕದಲ್ಲೇ ರಚ್ಚೆ ಹಿಡಿದ ಮಗುವಿಗೆ ತಾಯಿ ಹೇಳಿದ ಮಾತಷ್ಟೆ ಕೇಳುತ್ತಿದೆ,
’ಅಗೋ, ನೋಡು, ಸೂರ್ಯ-ಮಾಮಾ, ಕೆಂಪಗೆ, ಕಿತ್ತಲೆ ಹಣ್ಣಂತೆ ಕಾಣುತ್ತಿದ್ದಾನೆ, ಅದೇನು ಚೆಂದ! ಬೇಕೇನೋ ನಿನಗೆ, ಗುಂಡನೆಯ ಕಿತ್ತಲೆಯ ಹಣ್ಣು?’...
ನನಗೇಕೆ ಕಾಣದಾ ಕಿತ್ತಲೆ ಹಣ್ಣು...ನನಗೂ ಬೇಕದು...ಆದರೆ ಕಾಣದಲ್ಲ...!

ಕಿತ್ತಲೆಯನ್ನೇ ನೆನೆಯುತ್ತಾ ದಿಗಂತವನು ದಿಟ್ಟಿಸಿದೆ ನಾನು ಮತ್ತೆ........ಕಿತ್ತಲೆಯ ಹುಡುಕುತ್ತಾ ಅದೆಷ್ಟು ಹೊತ್ತು ಕಳೆಯಿತೋ ಕಾಣೆ...
ಗದ್ದಲ ಮಾಡುತ್ತ ಹುಡುಗರ ಗುಂಪೊಂದು ಹಾದು ಹೋದಾಗಲೇ ಮತ್ತೆ ಎಚ್ಚರ...
ಗುಂಪಿನಲ್ಲೇ ಇದ್ದವನೊಬ್ಬ ಕೂಗಿದ, ’ಶಬ್ದ ಮಾಡದಿರಿ, ಇಲ್ಲಿ ’ಮಕವಾಕು*’ ಎಂಬ ಹಕ್ಕಿಯ ಇಂಪು ಕೇಳುವುದು’...
ನಾನು ಎಂದೂ ಒಬ್ಬನೇ ಒದರಿಕೊಳ್ಳುವುದೇ ಇಲ್ಲ, ಆದರೂ ಎನ್ನ ಮನಕೇ ಗದರಿದೆ - ’ಸದ್ದು! ಹೊಸ ಹಕ್ಕಿಯ ದನಿಯಂತೆ! ಗಮನವಿಟ್ಟು ಕೇಳು’...
ಊಹೂಂ...ಯಾವ ಹಕ್ಕಿಯ ಶಬ್ದವೂ ಕೇಳದೆನಗೆ...ನನಗೇನಾಗಿದೆ???
ಮತ್ತೆ ಮತ್ತೆ ದಿಟ್ಟಿಸಿ ನೋಡುತ್ತಿದ್ದೇನೆ ಕಿತ್ತಲೆ ಹಣ್ಣು ಬೇಕೆಂದು... ಮೈಯೆಲ್ಲಾ ಕಿವಿಯಾಗಿಸಿ ಹೊಸ ಹಕ್ಕಿಯ ಸವಿ ಕೂಗ ಕೇಳಲು...
ಇಲ್ಲ ಕಿತ್ತಲೆಯೂ ಇಲ್ಲ, ಕೂದನಿಯೂ ಇಲ್ಲ...

ಬಹುಷಃ ಯಾರಿಗೂ ನೋಡಿ ಸುಸ್ತಾಗದಿರಬಹುದು, ನನಗಂತೂ ಇಂದು ನನ್ನ ಸುತ್ತಲಿನ ಪರಿಸರವನ್ನು ನೋಡಿ ನೋಡಿ ದಣಿವಾಗಿದೆಯೆನಗೆ...
ಒಂದೇ ಕಡೆ ಕುಳಿತಿದ್ದರೂ ತಣಿದಿರುವೆ ನಾನು...
ಆದರೂ ನೆನ್ನೆಯಿಂದ ಅದೇನೋ ಆಹ್ಲಾದ...ಈ ದಣಿವಲ್ಲೂ ಹೊಸ ಚೈತನ್ಯವೆನಗೆ...
ಗೆಳೆಯರು ವಿವರಿಸಿದ ’ಸ್ವರ್ಗ’ ನನಗೆ ಈ ಸ್ಥಳದಲ್ಲಿ ಇಂದು ಕಾಣದಿರಬಹುದು, ಆದರೆ ನಾನು ನೆನ್ನೆಯೇ ಸ್ವರ್ಗಕ್ಕೆ ಕಾಲಿಟ್ಟಾಯ್ತಲ್ಲ...!
ನೆನ್ನೆಯೇ ನನ್ನ ಒಲವಿನ ಪ್ರಸ್ತಾಪಕ್ಕೆ ಅವಳ ಒಪ್ಪಿಗೆಯಾಯ್ತಲ್ಲ...ಆದಾದ ಕ್ಷಣದಿಂದ ನನ್ನ ಪ್ರಪಂಚವೇ ಬದಲಾದದ್ದು ಹೇಗೆ?
ಇವಳ ಮಾತೇ ನನಗೆ ಹೊಸ ಹಕ್ಕಿಯ ಹಾಡಾದಾಗ, ಇಲ್ಲೇಕೆ ಕುಳಿತಿದ್ದೀನಿಂದು ನಾನು ಮಕವಾಕುವಿನ ದನಿ ಕೇಳಲು?
ಯಾವ ಕಡೆ ನೋಡಿದರು ಮನದ ಚೆಲುವೆಯ ಮುಖವೇ ಕಂಡಿರುವಾಗ, ಇಲ್ಲಿ ಕಾಣುವ ಕಿತ್ತಲೆ ಹಣ್ಣೇಕೆನಗೆ...
ನನ್ನೊಲುಮೆಯ ಚೆಲುವೆಯೊಂದಿಗೆ ಇನ್ನೊಮ್ಮೆ ಎಂದಾದರೂ ಈ ಸ್ಥಳಕ್ಕೆ ಬರುವ...ಈಗಂತೂ ಜನರು ಹೇಳಿದ್ದೊಂದೂ ಕಾಣದೆನಗೆ...ಒಲವಿನ ಅಮಲೆಂದರೆ ಇದೇ ಏನೋ...

--ಶ್ರೀ

*ಮಕವಾಕು - ನನ್ನ ಕಲ್ಪನೆಯ ಹಕ್ಕಿ

(ಚಿತ್ರ ಕೃಪೆ: ಹರಿ ಪ್ರಸಾದ್ ನಾಡಿಗ್)

No comments: