Tuesday, January 27, 2009

ಅಮ್ಮನ ಕೋಪ...

ತುಂಟಾಟ ತಾಳದೆ ಮುನಿದು, ದುರುದುರನೆ ದೂರ ಸರಿದಳು ಅಮ್ಮ
ಒಲವೇ ಕಂಡ ಕಂದನಿಗೆ ಅವಳ ಕಂಗಳಲೂ ಕಂಡಿತು ಗುಮ್ಮ

ಅಮ್ಮನವತಾರವ ಕಂಡು ಬೆದರಿ ಥರಥರನೆ ನಡುಗಿದನು ಪುಟ್ಟ
ಚೆನ್ನಿಲ್ಲದಾ ಕೋಪ ಬೇಡವು ಎಂದು ನಿಂತ ನೆಲದೀ ತಾನು ನೆಟ್ಟ

ತಣಿಯದಮ್ಮನ ಕೋಪ, ಬರಳು ಅಮ್ಮನು ಬಳಿಗೆ, ಸರಿಯಿತು ವಿರಸದಾ ಗಳಿಗೆ
ಮುನಿದ ಅಮ್ಮನಾ ಒಲಿಸುವುದು ಹೇಗೆಂದು ಎಣಿಸುತಾ ನಿಂತನೊಂದುಗಳಿಗೆ

ಕಣ್ಕೆಂಪು ಬೇಕಿಲ್ಲ, ಓಲೈಸಬೇಕಲ್ಲ ರಮಿಸಲೋಡಿದನು ಪುಟ್ಟ
ತಪ್ಪಿನರಿತು ತಾನು ಅಮ್ಮನಾ ಬಿಗಿಹಿಡಿದು ಗಳಗಳನೆ ತುಂಟನತ್ತ

ಮುನಿದ ಅಮ್ಮನು ಕೂಡ ಕಂದನಾ ಕಂಗಳಲಿ ಅಳುವ ಸಹಿಸುವುದಿಲ್ಲ
ಇಳಿಯಿತು ಮುನಿಸೆಲ್ಲ, ಬರಸೆಳೆದು ಮಗನ ಇತ್ತಳು ಮುತ್ತ ಸಿಹಿ ಬೆಲ್ಲ

ತುಂಬಿದಾ ಕಂಗಳಲು ಮಗುವು ತುಸು ನಕ್ಕನು, ವಿರಸಕೆ ಜಾಗವಿನ್ನಿಲ್ಲ
ಸಿಹಿ ಒಲವು ಹರಿಯಿತಲ್ಲೆಲ್ಲಾ...ಸಿಹಿ ಒಲವು ಹರಿಯಿತಲ್ಲೆಲ್ಲಾ...

(೧೪-೧೫ ಜನವರಿ ೨೦೦೯)

-ಶ್ರೀ

1 comment:

my blog said...

idu tumba chennagi mooDi bandide Shreenivasa :-)