Thursday, April 26, 2007

ಬಾಳ ಜೋಡಿ

ಬಾಳ ಜೋಡಿ ಯಾರು ಅಂಥ ಕೇಳಬೇಡಿ, ಇನ್ನು ಸಿಕ್ಕಿಲ್ಲ :)

********************************
ಬಾಳ ಜೋಡಿ

ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು
ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು

ನೀನೀಗ ಬಂದಿರುವೆ ನನ್ನ ಜೀವನದಲಿ
ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ

ದಾರಿಯಲಿ ಇಹುದು ಕಡಿದಾದ ಬೆಟ್ಟ
ನೀನಿರಲು ಹತ್ತುವುದು ಬಲು ಸುಲಭ! ಪುಟ್ಟ!

ನಾವ್ದಾಟಬಹುದು ನದಿಯು-ನದಿಯ ಸುಳಿಯು
ನೀನಿರಲು ಜೊತೆಯಲ್ಲಿ ಇರುವುದೇ ಸುಳಿಯ ಸುಳಿವು?

ಕ್ರಮಿಸಬಹುದೂ ಮುಂದೆ ಬಿಸಿ ಮರಳಗಾಡು
ನೀನಿರಲು ನನ್ನೊಡನೆ ಅದು ಕೋಗಿಲೆ ಹಾಡು

ಭೇದಿಸಬೇಕಾಗಬಹುದು ಕಾಡು-ಕೋಟೆ ದುರ್ಗಮ
ನಿನ್ನ ಕೈ ಹಿಡಿದಿರಲು, ನೀರ ಕುಡಿದಷ್ಟೇ ಸುಗಮ

ದಾರಿ ಬಹು ದೂರವಿದೆ ಬುತ್ತಿಯಾ ಕಟ್ಟು
ಬುತ್ತಿ ಎಂದೂ ಬತ್ತದು ನೀನಿರಲು ಒಟ್ಟು

ನಾನು ದಣಿಯಲು ಒರಸು ಸೆರಗಲಿ ನೀನು
ನೀನು ಬಳಲಲು ಕೊಡುವೆ ಹೆಗಲನ್ನು ನಾನು

ಬಾ ಇನ್ನು ಹೊರಡೋಣ ಓ ನನ್ನ ರನ್ನ
ಮುಳ್ಳಹಾದಿಯೂ ಹೂವಾಗುವುದು, ಚಿನ್ನ

ದೇವನಲಿ ನಾವು ಕೇಳೋಣ ಇಂದು,
ಬಾಳ ಮುಸ್ಸಂಜೆಯು ಬರದಿರಲಿ ಎಂದು

*
(೮-ನವಂಬರ್-೨೦೦೬)


ಮಾತು

ಮಾತು

ಆಗಿದೆ ವಯಸ್ಸು ಕತ್ತೆಯಷ್ಟು
ನೂರಾರು ಮಾತು - ಆದರೂ ಬರೀ ಮಣ್ಣು...
ನಡೆದರೆ ಎಡವುವುದು, ಮಾತು ತೊದಲು
ಆದರೂ ಹೇಳಿದೆ ಸಾವಿರ ಆ ಪುಟ್ಟ ಕಣ್ಣು...

(ಕನಸಲ್ಲಿ ಮೂಡಿದ್ದು, ಪ್ರದ್ಯುಮ್ನನ ಕಣ್ಣುಗಳಿಂದ ಪ್ರೇರಿತನಾಗಿ)
ಮೂವತ್ತು-ಅಕ್ಟೋಬರ್-ಎರಡು ಸಾವಿರದ ಆರು

Monday, April 23, 2007

ಮಂಜಾಟ - ಕೊಡೈಕೆನಾಲ್


Mist in Kodai
ಮಂಜಾಟ - ಕೊಡೈಕೆನಾಲ್, ಜನವರಿ ೧, ೨೦೦೬

Friday, April 20, 2007

ಜಂಬದ ಕಾಗೆ

ಜೀವನದಲ್ಲಿ ಯಾರು ಯಾರಿಂದ ಪಾಠ ಕಲಿ ಬೇಕೋ?? :)

ಜಂಬದ ಕಾಗೆ

ಕಿಟಕಿಯ ಆಚೆ ಇಣುಕಿದೆ ನಾನು
ಕರ್ರಗೆ ಕಾಗೆ ಕುಳಿತಿತ್ತಲ್ಲಿ

ತಕ್ಷಣವೇ ನಾ ಅಣಕಿಸ ಹೊರಟೆ
"ಅಪಸ್ವರದಾ ಪ್ರತಿಮೂರ್ತಿ ಇಲ್ಲಿ"

ಕಾ ಕಾ ಎಂದು ನಾ ಕರೆದಾಗ
ಹಾರಿತು ಕಾಗೆ ಖಾಲಿ ಆ ಜಾಗ

ಅಣಕು ಕೊಡದು ಖುಷಿಯು ಮನಕೆ
ದನಿ - ಕರ್ಣಕಠೋರವಾಗಿತ್ತದಕೆ

ಸುಶ್ರಾವ್ಯನೆಂದು ತಿಳಿದಿದ್ದೆನಗೆ
ಆಯಿತು ಮಂಗಳ ಆರುತಿ ಕೊನೆಗೆ

ನಾನಗಿದ್ದೆ ಜಂಬದ ಕಾಗೆ
ಮದವನು ಇಳಿಸಿತ್ತು ಆ ಕರಿ ಕಾಗೆ

(ಘಟನೆ ನಡೆದಿದ್ದು - ೮-ಅಕ್ಟೊಬರ-೨೦೦೬)

ಅತ್ಯದ್ಭುತ ಸೃಷ್ಟಿ ಯಾವುದು?

ಅತ್ಯದ್ಭುತ ಸೃಷ್ಟಿ?

ದೇವನಲಿ ಹುಟ್ಟಿಹುದು ಒಂದು ಪರಿಪ್ರಶ್ನೆ
ಬ್ರಹ್ಮಾಂಡದಿ ಭವ್ಯ ಯಾವುದು ನನ್ನ ಸೃಷ್ಣೆ?

ಉತ್ತರಕೆ ಸುತ್ತಿಹನು ಇಡೀ ನಭೋಮಂಡಲ
ಎಲ್ಲೂ ಸಿಗದು - ಕಡೆಗೆ ಕಂಡಿತು - ಸೌರ ಮಂಡಲ

ಸೂರ್ಯನ ನೋಡಿದರೆ ಸುಡುವಗ್ನಿ ಕುಂಡ
ಮಂಗಳನಿಲ್ಲಾಗಿಹನು ಕಡು ಕೆಂಪು ಕೆಂಡ

ಗುರುವಿಗೆ ಕ್ಷುದ್ರಗ್ರಹದ ಕಾಟವಿರುವುದಿಲ್ಲಿ
ನೆಪ್ಚೂನ್-ಯುರೇನಸ್ ಬಿಳಿಚಿಹರು ಅಲ್ಲಿ

ಇದರ ಮಧ್ಯೆ ಹೊಳೆದಿಹುದು ಫಳಫಳ ಈ ಗೋಳ
ಗೋಳವು ಪ್ರಜ್ವಲಿಸಿದೆ - ಇದರ ಬಣ್ಣ - ನೀಲ

ಭೂಗೋಳದ ಒಳಗೆ ಹೊಕ್ಕಿಹನು ದೇವ
ಅಚ್ಚರಿಯ ಆಘಾತವು - ಅದ್ಭುತದ ಅಭಾವ

ಮೂಲೆ ಮೂಲೆ ತಿರುಗಿದನು - ಅಮೇರಿಕ - ಚೀನ
ಎಲ್ಲರಲೂ ಕಂಡಿಹುದು - ಊನ-ಅಪೂರ್ಣ

ಸೃಷ್ಟಿ ಬಲವು ಇಷ್ಟೇ? ಎಂದು ದೇವನಲಿ ಲಜ್ಜೆ
ಅಷ್ಟರಲಿ ಕೇಳಿಸಿತು ಸುನಾದದ ಹೆಜ್ಜೆ

ಅಲೆ ಅಲೆಯಲಿ ಕೇಳಿದೆ ಸಂಗೀತದ ನಾದ
ಸಾಗರವು ಸ್ಪರ್ಶಿಸಿಹುದು ಈಕೆಯ ಪಾದ

ಉಟ್ಟಿಹಳು ಕೇಸರಿಯ ರೇಶಿಮೆ ಸೀರೆ
ದೇವರಿಗೂ ರೋಮಾಂಚನ - ರೂಪಸಿ - ಈ ನೀರೆ

ಮೆರಗನ್ನು ನೀಡಿಹುದು ಹಸಿರ-ಹೊನ್ನ ಅಂಚು
ಮೈಯಲ್ಲಿ ಹುಟ್ಟಿತು ಝಲ್ಲನೆ ಕೋಲ್ಮಿಂಚು

ಬಲದ ಕೈಯಲಿ ಇಹುದು ಕ್ಷೀರದಾ ಕಲಶ
ಎಡಗಡೆ ಹರಿದಿಹಳು ಪಾವನೀ ಗಂಗೆ

ಯಮುನೆ-ತುಂಗೆ-ನರ್ಮದೆಯರ ಜಲಲ ಜಲಲ ಧಾರೆ
ಇವುಗಳಿಂದ ಮೂಡಿದೆ ಜಲದ ನಿರಿಗೆ ಸೀರೆ

ಸಿಂಧು ನದಿಯ ಕೆಮ್ಮಣ್ಣೇ ಇವಳ ಸಿಂಧೂರ
ಮಂದಸ್ಮಿತೆ ಈಕೆ - ಇದೇ ದಿವ್ಯಾಕಾರ

ಝಗಮಗಿಸಿದೆ ಈ ಸುಂದರ ಮಕುಟ
ಕಣ್ಣ ಕೋರೈಸಿದೆ ಇದು ಹಿಮಕಿರೀಟ

ಇವಳ ಕಂಡ ದೇವನು ಆದ ಕೊನೆಗೆ ಧನ್ಯ
"ನಿನಗಿಂತಿನ್ಯಾರಿಹರು - ನೀನು ಅಸಾಮಾನ್ಯ"

ದೇವನು ಉದ್ಘೋಷಿಸಿದ - "ನೀನೆ ಉತ್ಕೃಷ್ಟೆ!"
"ಜಗದಲಿ ನಿನಗೆ ಅಸಮ -ನೀ ಸೃಷ್ಟಿ ಪರಾಕಾಷ್ಟೆ!"

----------*----------

ತಕ್ಷಣವೇ ಮೊಳಗಿತು -

ಜಯಹೇ ಜಯಹೇ ಮಾತೆ
ಜಯ ಭಾರತಿ ಮಾತೆ
ಜಯ ಗಂಗಾ ಜನನಿ
ನೀ ಪತಿತ ಪಾವನಿ
ಜಯ ಭಾರತಾಂ.....ಬೆ!

(ದಿನಾಂಕ: ೪-ಅಕ್ಟೋಬರ್-೨೦೦೬)

Monday, April 16, 2007

ಚಿಟ್ಟೆ ಕಂಡ್ರೆ ಯಾರಿಗೆ ಇಷ್ಟ ಆಗೋಲ್ಲಾ?


ಚಿಟ್ಟೆ

ಆಹಾ! ನೋಡು ಬಣ್ಣದ ಚಿಟ್ಟೆ!
ನಿನ್ನೀ ಮೆರುಗಿಗೆ ನಾ ಮರುಳಾಗಿಬಿಟ್ಟೆ!

ಹುಟ್ಟಿನಲಿ, ನೀನು ಕರ್ರಗಿನ ಕಂಬಳಿ - ಕುರೂಪಿ
ಬೆಳೆಯಲು, ಅಪ್ಸರೆಯರೂ ಹಿಮ್ಮೆಟ್ಟಿದರು, ನೀ ಸ್ಫುರದ್ರೂಪಿ!

ಬಣ್ಣವೋ ಬಣ್ಣ ಇದು ಅದ್ಭುತ ಚಿತ್ತಾರ
ಚೆಲ್ಲಿದೆ ರಂಗು - ಸೌಂದರ್ಯದ ಪರಮಾವಧಿ - ಸಾಕಾರ!

ಎಂಥಾ ಚೆಲುವು - ಓ ಪಾತರಗಿತ್ತಿ!
ನೋಡೀ ನೀರೆಯರೂ ನಾಚಿದರು - ನೀ ಬಿನ್ನಾಣಗಿತ್ತಿ!

ಅದೇನು ನಿನ್ನ ಈ ಅಂದ-ಚೆಂದ!
ಹೀರಿದೆಯಾ ನೀ ಹೂಗಳ ಮಕರಂದ!

ಒಂದೇ ಒಂದು ಸ್ಪರ್ಶಕ್ಕೆ ಕಾದಿವೆ ಕೋಟಿ ಶ್ಯಾಮಲೆ
ನಿಂತಲ್ಲೆ ನಿಲ್ಲಲಾರೆ - ನೀ ಮಹಾ ಚಂಚಲೆ!

ಪ್ರೀತಿಯಲಿ ಪುಷ್ಪಕ್ಕೆ ಕೊಟ್ಟಿಹೆ ಸಿಹಿ ಚುಂಬನ
ಮೃದು ಹೂವದು ನಸು ನಡುಗಿದೆ - ಎಂಥಾ ರೋಮಾಂಚನ!

ಕುಡಿದಿರುವೆ ನೀನು ಹೂವಿನ ಜೇನು...
ಹೇಳು! ನಿನ್ನ ಸೌಂದರ್ಯದ ಗುಟ್ಟು ಇದೇ ಏನು?

ನಿನ್ನ ಸೃಷ್ಟಿಸಿದ ಬ್ರಹ್ಮನ ಬಲವು ಅಷ್ಟಿಷ್ಟೇ?
ಇದನೆಲ್ಲ ಯೋಚಿಸಿ ಸ್ತಬ್ಧನಾಗಿ - ಮೂಗಿನ ಮೇಲೆ ಬೆರಳಿಟ್ಟೆ!

(ಹೊಳೆದಿದ್ದು - ೨೧-ಸೆಪ್ಟಂಬರ್-೨೦೦೬, ಚಕ್ರತೀರ್ಥದಲ್ಲಿ ಚಿಟ್ಟೆಯ ಚಿತ್ತಾರವನ್ನು ಸೆರೆಹಿಡಿದಿದ್ದು - ೧೦-ಮಾರ್ಚ್-೨೦೦೭)

ಪದಬಂಧ ನನ್ನ ಹವ್ಯಾಸ... :)

ಪದಬಂಧ ನನ್ನ ಹವ್ಯಾಸ... :)

ಪದಬಂಧ

ಪದಗಳ ಆಟವೇ
ಪದಬಂಧ
ಎನಿತೋ ವರುಷದ
ಸಂಬಂಧ

ಸುಳಿವಿನ ರಾಶಿಯು
ಗೋಜಲೋ ಗೊಜು
ಗಾಳಕೆ ಸಿಕ್ಕರೆ
ಮೋಜೋ ಮೊಜು

ಪದಗಳು ಸಿಗದಿರೆ
ಬಲು ತಿಕ್ಕಾಟ
ಸಿಕ್ಕರೆ ಇವುಗಳು
ಇದೆ ಗೆದ್ದಾಟ

ಮುಖವಾಡದ ಪದಗಳ
ಅಟ್ಟಹಾಸ!
ಕಳಚಿರೆ ಇವನು
ಅರೆ! ಸುಹಾಸ!

ತಿಣುಕಿದೆ ಏಕೋ?
ಅಯ್ಯೋ ಪೆದ್ದೆ!
ಎಲ್ಲವು ಸಿಕ್ಕರೆ
ನೀನೇ ಗೆದ್ದೆ

ಆಡಿವೆ ಏಕೆ,
ಕಣ್ಣು ಮುಚ್ಚಾಲೆ?
ಬರದಿಹೆ ಪ್ರೀತಿಯ
ಕರೆಯೋಲೆ!

ಇವಕೆ ವಿರಹವು
ಕಾಡಿವೆಯಂತೆ
ಇನ್ನೊಂದನು ಮುತ್ತಿಕ್ಕಲು
ಕಾದಿವೆಯಂತೆ

ಚಿತ್ರ ವಿಚಿತ್ರ ಇದೆ
ಈ ಜಾಡು
ಅದುವೇ ಜಾಣ್ಮೆಯು
ಜೋಡಣೆ ಮಾಡು

ತೆಗೆದರೂ ಪದಗಳ
ಮೆಲ್ಲಗೆ ಹೆಕ್ಕಿ,
ಪ್ರೀತಿಯು ಉಕ್ಕಿ,
ಗುದ್ದಿವೆ, ಢಿಕ್ಕಿ!

ಕಲಸು ಮೆಲೋಗರ
ಪದ ಚಿತ್ರಾನ್ನ
ಸರಿ ಪಡಿಸಲು ಇದನು
ಸಿಹಿ ಮೊಸರನ್ನ

ರಕುತವ ಹಂಚಿದ
ಜೋಡಿಗಳಂತೆ,
ಸಮ ಅಕ್ಷರದ
ಅವಳಿಗಳಂತೆ!

ಸುಲುಭದ ಆಟವೆ?
ಇದು ಕಗ್ಗಂಟು
ಗೆಲ್ಲಲು ಮೆದುಳೇ
ನಿನಗೆ ನಿಘಂಟು

ಎಲ್ಲವು ಸಿಕ್ಕರೆ
ಇದೆ ಹಾಡಂತೆ
ಹಾಡಿನ ಸ್ವರಗಳು
ಗಮ"ಪದ" ವಂತೆ

ಇದುವೇ ಒಂದು
ಜಾಣರ ಆಟ
ಚಿಣ್ಣರಿಗಾಗಲಿ
ಇದು ಪರಿಪಾಟ

ಬಲು ಮಧುರ
ಪದಬಂಧದ ಬಂಧ
ಇರಲಿ ಅಮರ
ಈ ಅನುಬಂಧ

(ಬರೆದದ್ದು...೧೯-ಸೆಪ್ಟಂಬರ್-೨೦೦೬)