Wednesday, August 6, 2008

ಮಳ್ಳಿ ಮಳ್ಳಿ ಮಿಂಚುಳ್ಳಿ ....!

ಅದು ಶನಿವಾರ ಸಂಜೆ...


"ಏನು ಕರ್ಮಾನೋ!!! ಸಾಫ್ಟ್ ವೇರ್ ಇಂಜಿನೀರ್ ಬಾಳೇ ಗೋಳು" ಅಂತ ಎಂದಿನಂತೆ ಬಯ್ದುಕೊಂಡು ಆಫೀಸ್ ನಲ್ಲಿ ಕೋಡ್ ಕುಟ್'ತಾ ಕೂತಿದ್ದೆ... 'ಲೇಯ್, ಕಿತ್ತು ಹಾಕಿದ್ದು ಸಾಕು...ಪ್ರಾಜೆಕ್ಟ್ ಮಾಡಿಲ್ಲ ಅಂದ್ರೆ ಪ್ರಾಣ ಏನು ಹೋಗಲ್ಲ, ಇಲ್ಲಿ ಬಾರೋ...' ಅಂತ ನನ್ ಕೊಲೀಗ್ ಕರೆದ...ಏನಪ್ಪಾ ಅಂಥ ನೋಡಿದ್ರೆ, ಆಫೀಸ್ ಕಿಟಕಿ ಪಕ್ಕ ನಿಂತುಕೊಂಡು ಕರೀತಾ ಇದ್ದ ..ಇವನಿಗೋ ಸ್ವಲ್ಪ ಬರ್ಡ್ ವಾಚಿಂಗ್ ಹುಚ್ಚು ...

ಓಹ್! ಬರ್ಡ್ ವಾಚಿಂಗ್ ಅಂದ್ರೆ ಹುಡುಗೀರ್ ನ ನೋಡೋದು ಅಂದ್ಕೊಂಡ್ರಾ??

ಅದು ಹಾಗಲ್ಲ...ಅದು ನಿಜವಾಗಲೂ ಬರ್ಡ್ ವಾಚಿಂಗೇ!! ಅಂದ್ರೆ ಹಕ್ಕಿಗಳನ್ನ ನೋಡೋ ಹುಚ್ಚು ಸ್ವಲ್ಪ...

ಇವನ ಜೊತೆ ಸೇರಿ ನಂಗೂ ಸ್ವಲ್ಪ ಗೀಳು ಹತ್ತಿದೆ...

ಅಂದ್ ಹಾಗೆ ನಂ ಆಫೀಸ್ ಪಕ್ಕದಲ್ಲೇ ಕೆರೆ ಇದೆ...ಬೇಕಾದಷ್ಟು ತರದ ಹಕ್ಕಿಗಳು ಬರತ್ತೆ ಇಲ್ಲಿಗೆ...

ಇವನು ತೋರಿಸಿದ್ಮೇಲೆ ನಂಗೆ ಗೊತ್ತಾಗಿದ್ದು ನಂ ಸುತ್ತ ಎಷ್ಟೊಂದ್ ತರಹದ ಹಕ್ಕಿಗಳು ಹಾರಾಡ್ತವೆ ಅಂಥ..!

ನಂ ಬೆಂಗಳೂರಿನಲ್ಲಿ ಏನಿದ್ರು ಬರೀ ಕಾಗೆ, ಗುಬ್ಬಿ, ಹದ್ದು, ಪಾರಿವಾಳ...ಅಪರೂಪಕ್ಕೆ ಗರುಡ, ಮೈನಾ ಇಸ್ಟೇ ಕಾಣೋದು ಅಂತ ತಿಳ್ಕೊಂಡಿದ್ದೆ! ಅದರಲ್ಲೂ ಗರುಡ ಹಕ್ಕೀನ ಅಮ್ಮ ನನಗೆ ಚಿಕ್ಕಂದಿನಲ್ಲಿ ತೋರಿಸಿ ಕೊಟ್ಟಿದ್ದರಿಂದ ಸುಲುಭವಾಗಿ ಕಂಡು ಹಿಡಿಯುತ್ತೇನೆ...ಹೆಚ್ಚು ಜನಗಳಿಗೆ ಅದು ನಂ ಸುತ್ತಾನೆ ಹಲವು ಬಾರಿ ಕಾಣತ್ತೆ ಅನ್ನೋದರ ಬಗ್ಗೆ ಅರಿವು ಇರಲ್ಲ...ನಾವುಗಳು ಹಾಗೆ ಆಲ್ವಾ? ನಮಗೆ ಇಷ್ಟ ಇದ್ರೆ ಮಾತ್ರನೇ ಯಾವುದೇ ವಿಷಯದ ಬಗ್ಗೆ ಗಮನ...ಇಲ್ಲ ಅಂದ್ರೆ ನಂ ಕಣ್ ಎದುರಗಡೆನೇ ಇದ್ದರೂ ನಮಗೆ ಬೇಕಾಗಿಲ್ಲ ಅದು...! ವಸ್ತುಗಳು ಇದ್ದೂ ಇಲ್ಲದ ಹಾಗೆ ಇರತ್ವೆ ! ಜೋತೆಗಿರೋ ಮನುಷ್ಯರೂ ಅಷ್ಟೆ....!

ಈಗೀಗ ನನಗೆ ಹಕ್ಕಿ ನೋಡೋ ಹುಚ್ಚು ಹಿಡಿದಿದ್ರಿಂದ, ಕಿಟಕಿ ಬಳಿ ಹೋದೆ...

ಗೆಳೆಯ ನನಗೆ ತೋರಿಸಿದ ..."ಅಲ್ಲಿ ನೋಡು...'White breasted KingFisher' ಕೂತಿದೆ"...


ಹಲವಾರು ಬಾರಿ ನೋಡಿದೀನಿ ಈ King Fisher'ನ ...ನಾನಂದೆ ..."ಏನಕ್ಕಾದ್ರು King Fisher ಅಂತಾರೋ ಇದನ್ನ!!! ಯಾವಾಗ್ಲೂ ತಂತಿ ಮೇಲೆ ಸೋಮಾರಿ ತರ ಕೂತಿರತ್ತೆ...! ಒಂದ್ ಸರ್ತಿನೂ ಮೀನು ಹಿಡಿದಿದ್ದು ನೋಡೇ ಇಲ್ಲ !"...ಹೌದು... ನಾನು ಮೀನು ಹಿಡಿಯೋದನ್ನ ನೋಡೋಕ್ಕೆ ಎಷ್ಟೋ ನಿಮಿಷಗಳು ಕಾದದ್ದುಂಟು...ಆದ್ರೆ ಎಂದೂ ಮೀನು ಹಿಡಿದ್ದಿದ್ದನ್ನ ನೋಡಿಲ್ಲ...ಇಂದು ಕೂಡ ಎಂದಿನಂತೆ ಸುಮ್ಮನೆ ತಂತಿ ಮೇಲೆ ಕೂತಿತ್ತು...ನಾನಂದೆ "ಇದನ್ನ ಮಿಂಚುಳ್ಳಿ ಅಂತಾರೆ ಕನ್ನಡದಲ್ಲಿ" ...

ಅವನಿಗೆ ಕನ್ನಡ ಹೆಚ್ಚು ಬರಲ್ಲ..." 'ಮಿಂಚುಳ್ಳಿ ' ನಾ??? ಇದೇನು noun'ಆ??? (ನಾಮಪದಾನ) ಆಥವಾ ಸಂಧಿ ಸಮಾಸ ಇದ್ಯಾ?"...ನಂಗೆ ಉತ್ತರ ಗೊತ್ತಿಲ್ಲ! ನನಗೆ ತಿಳಿದ ಮಟ್ಟಿಗೆ ಇದು ನಾಮ ಪದ ಅಷ್ಟೆ! ತಲೆಗೆ ಹೊಳೆದಿದ್ದು ಬರೀ 'ಈರುಳ್ಳಿ , ಬೆಳ್ಳುಳ್ಳಿ ' ಮಾತ್ರ! ಊಹೂಂ! ಅದಕ್ಕೂ ಮಿಂಚುಳ್ಳಿಗೂ ಯಾವ ಸಂಬಂಧನೂ ಸಿಗಲಿಲ್ಲ..."Nounಏ ಇರಬೇಕು"...

ಅಷ್ಟರಲ್ಲೇ ಮಿಂಚುಳ್ಳಿ ಹಾರಿತು...ಇಬ್ರೂ ನೋಡ್ತಾ ಇದ್ವಿ ಕಿಟಕಿಯಿಂದ....

ಮಿಂಚುಳ್ಳಿ ಕೆಳಕ್ಕೆ ಹಾರಿ ಸರಿ ಸುಮಾರು ನೀರಿನ ಮಟ್ಟದಲ್ಲೇ ಹಾರುತ್ತಾ ಮುಂದೆ ಹೋಯಿತು......

ಮನಸ್ಸು ಈ ಕಡೆ ವೇಗವಾಗಿ ಓಡ್ತಾ ಇತ್ತು ...ಇವತ್ತಾದ್ರೂ ಮೀನು ಹಿಡಿಯೋದು ನೋಡ್ತೀನಾ ಅಂಥ...ಅಷ್ಟರಲ್ಲೇ ನೀರಿನ ಒಳಗೆ ಒಂದು ನೀರು ಕಾಗೆ ಕಾಣಿಸ್ತು !!! (Little Cormorant ಅಂತಾರೆ ಇಂಗ್ಲಿಷ್ ನಲ್ಲಿ )

ಅರೆ! ನಂ ಮಿಂಚುಳ್ಳಿ ಯಾಕೆ ನೀರು ಕಾಗೆ ಹತ್ತಿರ ಹೋಗ್ತಾ ಇದೆ??? ಮಿಂಚುಳ್ಳಿ ನೀರು ಕಾಗೆ ತೀರಾ ಹತ್ತಿರ ಹೋಗಿ ಅದರ ಬಾಯಲ್ಲಿ ಇರೋ ಮೀನನ್ನ ಲಪಕ್ ಅಂಥ ಕಿತ್ಕೊಂಡು ಹಾಗೆ ಇನ್ನೊಂದು ದಡಕ್ಕೆ ಹಾರಿ ಹೋಯ್ತು! ನಾವಿಬ್ಬರೂ ಹಾಗೆ ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡ್ತಾ ಇದ್ವಿ....!

ಇಬ್ಬರೂ ಒಟ್ಟಿಗೆ ಕಿರುಚಿದ್ವೀ "ನೋಡಿದ್ಯಾ???!!!!"...ಅರೆ! ಮಿಂಚುಳ್ಳಿನಾ ನಾನು ಸೋಮಾರಿ ಅಂಥಾ ಬಯ್ಯುತ್ತ ಇದ್ದೆ, ಇಲ್ಲಿ ನೋಡಿದ್ರೆ ಇದರ ನಿಜ ಬಣ್ಣ ಬಯಲಾಗಿತ್ತು...


ಏನು ಕಿಲಾಡಿನಪ್ಪ ಈ ಹಕ್ಕಿ! ಪಾಪ ನೀರು ಕಾಗೆ! ಅದು ಪೆಚ್ಚಾಗಿ ಮತ್ತೆ ಮತ್ತೊಂದು ಮೀನು ಹಿಡಿಯಲು ಮತ್ತೊಮ್ಮೆ ಮುಳುಗು ಹಾಕಿತು...

ಮನದಲ್ಲಿ ತಕ್ಷಣವೇ ಹಾಡು ನಲಿಯಿತು....' ಮಳ್ಳಿ ಮಳ್ಳಿ ಮಿಂಚುಳ್ಳಿ ....! ಜಾಣ ಜಾಣ ಕಾಜಾಣ...!'

ಈ ಹಾಡನ್ನು ಬರೆದವರು ಯಾರೋ ಗೊತ್ತಿಲ್ಲ ನಂಗೆ ಯಾವ ಫಿಲಂ ಅಂತಾನು ಗೊತ್ತಿಲ್ಲ ...ಆದ್ರೆ ನಿಜವಾದ ಮಳ್ಳಿನೇ ಅದು!

'ಕೈಗೆ ಬಂದ ತುತ್ತು ಬಾಯಿಗಿಲ್ಲ' ಅಂತ ಗಾದೆ ಇದೆ...ಬಾಯಿಗೆ ಬಂದ್ರು ಹೊಟ್ಟೆಗಿಲ್ದೆ ಇರಬಹುದು ಅಂತ ಕಲಿಸಿತ್ತು ಈ ಅನುಭವ!


--ಶ್ರೀ

Monday, August 4, 2008

ನನ್ನ ಹೊಂಗೇ ಮರ...

ಪ್ರತಿ ದಿನವೂ ನಿಲ್ಲುವುದಲ್ಲೇ...ಅದರ ನೆರಳಲ್ಲೇ...!
ಸರಿ ಸುಮಾರು ಮೂರು ವರುಷವಾಯಿತು...
ಅದರ ಬುಡದಲ್ಲೇ ನಾನು ಬೀಡು ಬಿಡುವುದು!
ಅದು ನನ್ನ ಮರ...ನನ್ನ ಹೊಂಗೇ ಮರ...

ಹೆಚ್ಚು ಸಮಯವೂ ಕಳೆಯುವುದಿಲ್ಲ ನಾನು...
ಕೇವಲ ಹತ್ತೇ ನಿಮಿಷ ಇಡೀ ದಿನದಲ್ಲಿ!
ಹತ್ತು ಹಲವಾರೂ ಮರಗಳುಂಟು ಸುತ್ತ ಮುತ್ತ..
ಆದರೂ ಅದು ಮಾತ್ರವೇ ನನಗೆ ಅಚ್ಚು ಮೆಚ್ಚು!
ಅದು ನನ್ನ ಮರ...ನನ್ನ ಹೊಂಗೇ ಮರ...!

ನನ್ನ ಮರದಡಿ ಬೇರೆಯವರಿದ್ದಲ್ಲಿ ಏನೋ ಕಸಿವಿಸಿ!
ಹಲವು ಬಾರಿ ಅವರನ್ನು 'ತಳ್ಳಿದ್ದೂ' ಉಂಟು...
ಒಂದು ದಿನವೂ ನೀರುಣಿಸಿದ್ದಿಲ್ಲ ಅದಕೆ...
ಆದರೂ ಅದೇನೋ ನಂಟು....ಏಕೆಂದರೆ
ಅದು ನನ್ನ ಮರ...ನನ್ನ ಹೊಂಗೇ ಮರ...!

ಬಿಸಿಲಲ್ಲಿ ಬವಳಿದ್ದನ್ನು ಕಂಡಿದ್ದೇನೆ...
ಮಳೆಯಲ್ಲಿ ಮಿಂದಿದ್ದನ್ನೂ ನೋಡಿದ್ದೇನೆ...
ಮಿಂದ ಮರದ ಹಚ್ಚ ಹಸಿರೇ ಮೆಚ್ಚೆನಗೆ
ಗಾಳಿಗೆ ತೂಗುವುದ ನೋಡುವ ಹುಚ್ಚೆನಗೆ!
ಅದು ನನ್ನ ಮರ...ನನ್ನ ಹೊಂಗೇ ಮರ...!

ನನಗಾಗಿ ಅದು ಹೂವ ಹಾಸಿದ್ದುಂಟು...
ಹೊಂಗೆ ಹಾಸ ಮೇಲೆ ನಿಲ್ಲಲೆನಗೆ ಏನೋ ಅಳುಕು...
ಅಳುಕಿನ ಉಳುಕಿನೊಂದಿಗೆ ಅಲ್ಲಿ ನಿಂತು ನಲಿದದ್ದುಂಟು...
ಅದು ನನ್ನ ಮರ...ನನ್ನ ಹೊಂಗೇ ಮರ...!

ಹಲವು ಹಕ್ಕಿಗಳಿಗೆ ನೆಲೆ ನೀಡಿದ್ದನ್ನು ನೋಡಿರುವೆ
ನನ್ನ ಕಣ್ಣೆದುರೇ ರೆಕ್ಕೆ ಜೀವಿಗಳು ಗೂಡ ಕಟ್ಟಿವೆ!
ಕಾವು ಕೊಟ್ಟು ಮರಿ ಮಾಡುವುದ ನೋಡಿರುವೆ!
ಸಾವಿರಾರು ಇರುವೆಗಳ ಮನೆ ಕೂಡ ಇದುವೆ!
ಅದು ನನ್ನ ಮರ...ನನ್ನ ಹೊಂಗೇ ಮರ...!
ಅದು ನನ್ನ ಮರ...ನನ್ನ ಹೊಂಗೇ ಮರ...!

:
:
[ಗಂಭೀರ, ವಿಷಾದದ ಛಾಯೆಯಲ್ಲಿ]

ನನ್ನ ಮರ ಇಲ್ಲದಾಗುವ ಕಾಲ ಬರುತಿದೆ...
ಇನ್ನೆಷ್ಟು ದಿನವಿರುದೋ ಕಾಣೆ...
ಇರಬಹುದು ಹಲವು ದಿನ/ವಾರ...ಹೆಚ್ಚೆಂದರೆ ಮಾಸ!
ಅದಕ್ಕೆ ತಿಳಿಯದು ಕಾಲ ಬರಲಿಹನೆಂದು...
ಇದು ತಿಳಿದ ಎನಗೆ ವಿಚಿತ್ರ ಹಿಂಸೆ!
ದಿನವೂ ನೋಡುತ್ತೇನೆ....
ಎಂದಿನಂತೆ ಹಾಗೇ ತೂಗುತ್ತದೆ, ನಗುತ್ತದೆ!
ಅದು ನನ್ನ ಮರ...ನನ್ನ ಹೊಂಗೇ ಮರ...

ಇನ್ನೇನು ಬರಲಿರುವ ಮರಕಟುಕ...
ಹೌದು! ಮರ ಕಟುಕನೇ!
ಇನ್ನೇನು ಮರಕಟುಕ ಬರಲಿರುವ...
ನನ್ನ ಮರವ ನನ್ನಿಂದ ಕಸಿಯಲು...
ಇಲ್ಲದಾಗಿಸಲು...

ನನ್ನ ಮರವಾದರೂ ನನಗೆ ಯಾವ ಹಕ್ಕೂ ಇಲ್ಲ
ನನ್ನದಲ್ಲದ ನನ್ನ ಮರದ ಮೇಲೆ...
ನೆರಳಲ್ಲಿ ನಿಲ್ಲುವ ನಲಿವೂ ಅಳಿದಿದೆ ಈಗ....
ಕಾಲನಿಗೆ ಕಾಯುವ ಕಾಟ!
ಬರೀ ಎದೆಯೊಳಗಿನ ಅಳು!
ಅದು ನನ್ನದೇ...ಅದು ನನ್ನದೇ...
ಅದು ನನ್ನದೇ ಮರ...ನನ್ನ ಮೆಚ್ಚಿನ ಹೊಂಗೇ ಮರ...

--ಶ್ರೀ

(೩೧ ಜುಲೈ ೨೦೦೮)
-----------------------------

ನಾನು ನನ್ನ ಮರದ ಬಗ್ಗೆ ಬರೆದಿದ್ದೆ ತಪ್ಪಾಯಿತೇನೋ :(
ಬರೆದಾದ ಮೇಲೆ, ಒಂದು ವಾರ ಕೂಡ ಉಳಿಸಲಿಲ್ಲ ಪಾಪಿಗಳು...
ಗೆಳೆಯರ ದಿನದಂದೇ ನನ್ನ ಮತ್ತು ನನ್ನ ಮರದ ಸ್ನೇಹಕ್ಕೆ ಅಂತ್ಯ !!!
ಕೊಡಲಿಯಿಂದ ಮರಣ ಮೃದಂಗ ಬಾರಿಸುವಾಟ :( :(

ಗೂಡು...

ನಕಲಿ ಹಕ್ಕಿಗಳ
ಗೂಡು ಬದಲಾಗಲು
ಅಸಲಿ ಹಕ್ಕಿಗಳಿಗೆ
ಗೂಡೇ ಇಲ್ಲದಾಯಿತು...!

(೨೪ ಜುಲೈ ೨೦೦೮)

ನವಿಲಂತೆ...

ನಾ ನವಿಲಂತೆ
ಗರಿಗೆದರಿ ನಿಂತಿರಲು ...
ಎಗರಿ ಬಾರೆ
ಛಂಗನೆ, ಓ ಅಂಗನೆ...!

--ಶ್ರೀ
(೧೭ ಜುಲೈ ೨೦೦೮)

Sunday, December 23, 2007

ಹೇಳೇ ಗೆಳತಿ???

ನನ್ನ
ಹೃದಯವ
ನೀ ಕದ್ದೆ!
ನಿನ್ನ
ಹೃದಯವ
ಕದಿಯಲು
ಬಿಡಲೊಲ್ಲೆ!
ಹೃದಯವಿಲ್ಲದೆ
ಹೇಗೆ ಬದುಕಿರಲಿ
ಹೇಳೇ ಗೆಳತಿ...???

(೧೯-ಡಿಸೆಂಬರ್-೨೦೦೭)

Wednesday, December 5, 2007

ಓ ನಲ್ಲ...

ಎಲ್ಲಿ ಹೋದೆಯೋ, ಓ ನನ್ನ ನಲ್ಲ...!
ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ...

ಹೋಗಿರುವೆ ಎತ್ತ?
ಕದ್ದು ನನ್ನಯ ಚಿತ್ತ...

ಬೇಗ ಬಾರೋ ನನ್ನಿನಿಯ,
ನನ್ನ ಗುಂಡಿಗೆಯೊಡೆಯ...

ಸೊರಗಿ ಸಾಯುತ್ತಿದೆ ನನ್ನ ಗಲ್ಲ
ಬಾ...ಮತ್ತೆ ಉಣಿಸೆನಗೆ, ಬೆಲ್ಲ,
ಮುತ್ತ ಸವಿ ಬೆಲ್ಲ...

- ಗೀಚಿದ್ದು ಡಿಸೆಂಬರ್ ೫, ೨೦೦೦೭

Thursday, November 29, 2007

ಹತ್ತು ಹತ್ತು ಇಪ್ಪತ್ತು...

ನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು...
ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ.
ಮರೆತು ಹೋಗುವುದಕ್ಕೆ ಮುಂಚೆ ಇಲ್ಲಿ ಹಾಕೋಣ ಅಂತ....

--------~ *~ ---------

ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು

ಇಪ್ಪತ್ತು ಹತ್ತು ಮೂವತ್ತು
ತೋಟದಿ ಮಾವಿನ ಮರವಿತ್ತು

ಮೂವತ್ತು ಹತ್ತು ನಲವತ್ತು
ಮಾವಿನ ಮರದಲಿ ಕಾಯಿತ್ತು

ನಲವತ್ತು ಹತ್ತು ಐವತ್ತು
ಮಾವನು ಕಂಡನು ಸಂಪತ್ತು

ಐವತ್ತು ಹತ್ತು ಅರವತ್ತು
ಸಂಪತ್ತು ಕೈಲಿ ಕಲ್ಲಿತ್ತು

ಅರವತ್ತು ಹತ್ತು ಎಪ್ಪತ್ತು
ಕಲ್ಲನು ಬೀರಿದ ಸಂಪತ್ತು

ಎಪ್ಪತ್ತು ಹತ್ತು ಎಂಬತ್ತು
ಮಾವಿನ ಹಣ್ಣು ಉದುರಿತ್ತು

ಎಂಬತ್ತು ಹತ್ತು ತೊಂಬತ್ತು
ಮಾಲಿಯ ಕಂಡನು ಸಂಪತ್ತು

ತೊಂಬತ್ತು ಹತ್ತು ನೂರು
ಓಡಿ ಮನೆಯ ಸೇರು