Tuesday, September 9, 2008

ತಣ್ಣಗಾದ ಕುನ್ನಕ್ಕುಡಿ ವಯೊಲಿನ್...

ನಾನು ಚಿಕ್ಕವನಿದ್ದಾಗ, ಬೇಸಿಗೆ ರಜ ಬಂತೆಂದರೆ ಸಾಕು, ತಂದೆ-ತಾಯಿಯರು, ನಮ್ಮನ್ನು ರಾಮ ನವಮಿ ಪ್ರಯುಕ್ತ ನಡೆಯುತ್ತಿದ್ದ ಶೇಷಾದ್ರಿಪುರಂ ಸಂಗೀತೋತ್ಸವಕ್ಕೆ ಕರೆದೊಯ್ಯುತ್ತ್ತಿದ್ದರು.
ಸಂಗೀತೋತ್ಸವಕ್ಕೆ ಕರೆದೊಯ್ದಾಗ ಏನೋ ಒಂದು ರೀತಿ ಖುಷಿ...ಶೇಷಾದ್ರಿಪುರಂ ಶಾಲೆಯ ಪಕ್ಕದಲ್ಲಿನ ಪಾರ್ಕ್'ನಲ್ಲಿ ಕುಳಿತು ಕಡಲೇ ಕಾಯಿ ತಿನ್ನುತ್ತಾ,
ಅಕ್ಕನೊಡನೆ ಆಟವಾಡುತ್ತಾ ಸಂಗೀತ ಕೇಳುವುದು ಒಂದು ಮೋಜು ನಮಗೆ...
ಅಕ್ಕ-ಪಕ್ಕದ ಮನೆಯವರು, ಮಾವ,ಚಿಕ್ಕಪ್ಪಂದಿರ ಮಕ್ಕಳು ಎಲ್ಲರೂ ಸಂಗೀತ ಕೇಳಲು ಬರುತ್ತಿದ್ದರಿಂದ ಅದೊಂದು ಸುಗ್ಗಿ!
ಎಲ್ಲ ಸಂಗೀತ ಮಹೋತ್ಸವದಂತೆ ಇಲ್ಲೂ, ಒಂದೊಂದು ದಿನವೂ, ಬೇರೆ-ಬೇರೆ ವಿದ್ವಾಂಸರಿಂದ ಖಚೇರಿಗಳು...
ಇವೆಲ್ಲವುಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ನಮ್ಮಂತ ಚಿಕ್ಕವರಿಗೆ ಮನವನ್ನು ಮುಟ್ಟಿದವರಲ್ಲಿ ಕೆಲವರೆಂದರೆ - ಕುನ್ನಕ್ಕುಡಿ ವೈದ್ಯನಾಥನ್, ಯು ಶ್ರೀನಿವಾಸ್,
ರವಿ ಕಿರಣ್, ಟಿ.ವಿ. ಶಂಕರ ನಾರಾಯಣ (ಇಲ್ಲಿ ನಾನು ಹಲವಾರು ಹೆಸರುಗಳನ್ನು ಮರೆತಿರಬಹುದು)...
ಶಾಸ್ತ್ರೀಯ ಸಂಗೀತದ ಬಗ್ಗೆ ಹೆಚ್ಚು ತಿಳಿವಿಲ್ಲದ ನನಗೆ, ಆಗ ಇವರೆಲ್ಲರಲ್ಲೂ ಕಂಡದ್ದು ಅವರದೇ ಆದ ಶೈಲಿ ಅಥವಾ ಬೇರೆ ತೆರನಾದ ವಾದ್ಯ!

ಕುನ್ನಕ್ಕುಡಿಯವರ ವಯೊಲಿನ್ ವಾದನ - ಬೇರೆಯವರಿಗಿಂತ ಭಿನ್ನ ಮತ್ತು ವಾದನದ ವೇಗಕ್ಕೆ ಹೆಸರುವಾಸಿ (Fast paced)...
ತಮ್ಮ ವಿಶಿಷ್ಟ ರೀತಿಯ ವಯೊಲಿನ್ ವಾದನದಿಂದ ಕರ್ನಾಟಕ ಸಂಗೀತವನ್ನು ಹೆಚ್ಚು ಜನಕ್ಕೆ ಮುಟ್ಟುವಂತೆ ಮಾಡಿದವರು ...
ಕುನ್ನಕ್ಕುಡಿಯವರು ಇಡುತ್ತಿದ್ದ ದೊಡ್ಡದಾದ ವಿಭೂತಿ, ಕುಂಕುಮ ಕೂಡ ತಮ್ಮ ಭಿನ್ನತನವನ್ನು ತೋರುತ್ತಿತ್ತು...
ಅವರು ವಯೊಲಿನ್ ನುಡಿಸುವಾಗ ಮಾಡುತ್ತಿದ್ದ ವಿಚಿತ್ರ ಹಾವ-ಭಾವಗಳು, ಚಿಕ್ಕವರಾದ ನಮಗೆ ನಗುವನ್ನು ತಂದಿದ್ದೂ ಹೌದು.
ಸಾಮಾನ್ಯವಾಗಿ ಸಂಜೆಗೆ ಪ್ರಾರಂಭವಾಗುತ್ತಿದ್ದ ಶೇಷಾದ್ರಿಪುರಂ ಸಂಗೀತ ಮಹೋತ್ಸವದಲ್ಲಿ,
ಇವರ ಖಚೇರಿಗಳು ಹಲವಾರು ಬಾರಿ ವಿಳಂಬವಾಗೇ ಪ್ರಾರಂಭವಾದರೂ, ಮಧ್ಯರಾತ್ರಿ ೧-೨ ರವರೆಗೆ ನಿರಂತರವಾಗಿ ಹರಿದು ಬರುತ್ತಿತ್ತು...
ಜನರನ್ನು ಮಂತ್ರ-ಮುಗ್ಧಗೊಳಿಸಿ, ನಡುರಾತ್ರಿಯಾದರೂ ಮನೆಗೆ ಹೋಗದಂತೆ ಕಟ್ಟಿಹಾಕುತ್ತಿತ್ತು!
ಇದಲ್ಲದೆ, ತಮ್ಮ ಹಲವಾರು ಖಚೇರಿಗಳಲ್ಲಿ, ಆಯಾ ರಾಗಕ್ಕೆ ಅನುಗುಣವಾಗಿ, ರಾಗಕ್ಕೆ ಹೊಂದುವ ಚಲನ ಚಿತ್ರದ ಹಾಡುಗಳನ್ನು ಶಾಸ್ತ್ರೀಯ ಸಂಗೀತದ ಹಾಡುಗಳ
ನಡುವೆ ಸೇರಿಸಿ ವಯೊಲಿನ್ ವಾದನ ಮಾಡುತ್ತಿದ್ದರು. ಖಚೇರಿಯ ಮಧ್ಯೆ, ಮುಂಜಾನೆ ಆಕಾಶವಾಣಿಯಲ್ಲಿ ಬರುತ್ತಿದ್ದ ಇಂಪನ್ನು ಜನರಿಗೆ ಉಣಬಡಿಸಿದವರಿವರು...
ಹೀಗೆ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು, ಖಚೇರಿಗಳನ್ನು ಕೊಡುತ್ತಿದ್ದರಿಂದ, ಮಡಿವಂತರಿಗೆ ಇವರನ್ನು ಕಂಡರೆ ಅಷ್ಟಕ್ಕಷ್ಟೆ...
ನನಗನಿಸಿದಂತೆ, ಇವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ದೊರಕದೇ ಹೋದದ್ದು ಇದೇ ಕಾರಣಕ್ಕಿರಬಹುದು...
ಇವರು ವಾತಾವರಣಕ್ಕೆ ತಕ್ಕಂತೆ ವಯೊಲಿನ್ ನಾದವು ಬದಲಾಗುವುದರ ಬಗ್ಗೆ ಅಧ್ಯಯನವನ್ನು ನಡೆಸಿದ್ದರು ಮತ್ತು ಗೌರವ ಡಾಕ್ಟೊರೇಟ್ ಪಡೆದಿದ್ದರು.

ನೆನ್ನೆ (೮-ಸೆಪ್ಟೆಂಬರ್-೨೦೦೮), ಕುನ್ನಕ್ಕುಡಿ ವೈದ್ಯನಾಥನ್ ರವರು ಪಂಚಭೂತಗಳಲ್ಲಿ ಲೀನರಾದರು.
ಅದ್ಭುತ ವಯೊಲಿನ್ ರಸವನ್ನು ಉಣಿಸಿದ ಇವರಿಗೆ ಅನಂತ ನಮನಗಳು.
ಕರ್ನಾಟಕ ಸಂಗೀತ ಲೋಕ ಇಂಥಾ ಒಬ್ಬ ಮೇರು ಕಲಾವಿದರನ್ನು ಕಳೆದುಕೊಂಡಿರುವುದು ಬಹಳ ನೋವಿನ ಸಂಗತಿ ...

ಕುನ್ನಕ್ಕುಡಿ ವೈದ್ಯನಾಥನ್ ರವರ ವಯೊಲಿನ್ ವಾದನವನ್ನು ಕೇಳಲು ಇಲ್ಲಿ ಚಿಟಿಕಿಸಿ.




--ಶ್ರೀ

No comments: