
ಬೇಗನೆ ಎದ್ದು,
ಹಲ್ಲನು ಉಜ್ಜಿ,
ಜಳಕವ ಮಾಡಿದ
ನಮ್ಮಯ ಪುಟ್ಟ
ಬಟ್ಟೆಯ ತೊಟ್ಟು,
ತಲೆಯನು ಬಾಚಿ,
ಬೂಟನು ಹಾಕಿದ
ನಮ್ಮಯ ಪುಟ್ಟ
ಬಾಟಲು,ಪುಸ್ತಕ
ಚೀಲದಿ ತುಂಬಿ
ಹೊರಟನು ಶಾಲೆಗೆ
ನಮ್ಮಯ ಪುಟ್ಟ
ಶಾಲೆಲಿ ಕೇಳಿದ
ಹಾಡನು ಕಲಿತು
ಮನೆ-ಕಡೆ ಓಡಿದ
ನಮ್ಮಯ ಪುಟ್ಟ
ಬರುತಲೆ ಅಮ್ಮನ
ಮುದ್ದನು ಪಡೆದು
ಖುಶಿಯಲಿ ಹಾಡಿದ
ನಮ್ಮಯ ಪುಟ್ಟ
ಅಮ್ಮನ ಕೈಯಲಿ
ಊಟವ ಉಂಡು
ಮಡಿಲಲಿ ಮಲಗಿದ
ನಮ್ಮಯ ಪುಟ್ಟ
ಸಂಜೆಗೆ ಎದ್ದು
ಅಳುತಿರುವಾಗ
ಆಟಿಕೆ ನೋಡಿದ
ನಮ್ಮಯ ಪುಟ್ಟ
ಮಾಮನು ತಂದ
ಆಟಿಕೆ ಹಿಡಿದು
ಆಟವನಾಡಿದ
ನಮ್ಮಯ ಪುಟ್ಟ
ರಾತ್ರಿಗೆ ಚಪಾತಿ
ಬೇಕು ಎಂದು
ಹಟವನು ಹಿಡಿದ
ನಮ್ಮಯ ಪುಟ್ಟ
ಕೂಡಲೆ ಅಮ್ಮನು
ಚಪಾತಿ ಮಾಡಲು
ಚಪ್ಪರಿಸಿದನು
ನಮ್ಮಯ ಪುಟ್ಟ
ಹಾಲನು ಕುಡಿದು
ಹಾಸಿಗೆ ಮೇಲೆ
ಕುಣಿದಾಡಿದನು
ನಮ್ಮಯ ಪುಟ್ಟ
ಅಮ್ಮನ ಮಡಿಲಲಿ
ಲಾಲಿಯ ಕೇಳಿ
ನಿದ್ದೆಗೆ ಜಾರಿದ
ನಮ್ಮಯ ಪುಟ್ಟ
No comments:
Post a Comment