Thursday, April 26, 2007

ಬಾಳ ಜೋಡಿ

ಬಾಳ ಜೋಡಿ ಯಾರು ಅಂಥ ಕೇಳಬೇಡಿ, ಇನ್ನು ಸಿಕ್ಕಿಲ್ಲ :)

********************************
ಬಾಳ ಜೋಡಿ

ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು
ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು

ನೀನೀಗ ಬಂದಿರುವೆ ನನ್ನ ಜೀವನದಲಿ
ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ

ದಾರಿಯಲಿ ಇಹುದು ಕಡಿದಾದ ಬೆಟ್ಟ
ನೀನಿರಲು ಹತ್ತುವುದು ಬಲು ಸುಲಭ! ಪುಟ್ಟ!

ನಾವ್ದಾಟಬಹುದು ನದಿಯು-ನದಿಯ ಸುಳಿಯು
ನೀನಿರಲು ಜೊತೆಯಲ್ಲಿ ಇರುವುದೇ ಸುಳಿಯ ಸುಳಿವು?

ಕ್ರಮಿಸಬಹುದೂ ಮುಂದೆ ಬಿಸಿ ಮರಳಗಾಡು
ನೀನಿರಲು ನನ್ನೊಡನೆ ಅದು ಕೋಗಿಲೆ ಹಾಡು

ಭೇದಿಸಬೇಕಾಗಬಹುದು ಕಾಡು-ಕೋಟೆ ದುರ್ಗಮ
ನಿನ್ನ ಕೈ ಹಿಡಿದಿರಲು, ನೀರ ಕುಡಿದಷ್ಟೇ ಸುಗಮ

ದಾರಿ ಬಹು ದೂರವಿದೆ ಬುತ್ತಿಯಾ ಕಟ್ಟು
ಬುತ್ತಿ ಎಂದೂ ಬತ್ತದು ನೀನಿರಲು ಒಟ್ಟು

ನಾನು ದಣಿಯಲು ಒರಸು ಸೆರಗಲಿ ನೀನು
ನೀನು ಬಳಲಲು ಕೊಡುವೆ ಹೆಗಲನ್ನು ನಾನು

ಬಾ ಇನ್ನು ಹೊರಡೋಣ ಓ ನನ್ನ ರನ್ನ
ಮುಳ್ಳಹಾದಿಯೂ ಹೂವಾಗುವುದು, ಚಿನ್ನ

ದೇವನಲಿ ನಾವು ಕೇಳೋಣ ಇಂದು,
ಬಾಳ ಮುಸ್ಸಂಜೆಯು ಬರದಿರಲಿ ಎಂದು

*
(೮-ನವಂಬರ್-೨೦೦೬)


ಮಾತು

ಮಾತು

ಆಗಿದೆ ವಯಸ್ಸು ಕತ್ತೆಯಷ್ಟು
ನೂರಾರು ಮಾತು - ಆದರೂ ಬರೀ ಮಣ್ಣು...
ನಡೆದರೆ ಎಡವುವುದು, ಮಾತು ತೊದಲು
ಆದರೂ ಹೇಳಿದೆ ಸಾವಿರ ಆ ಪುಟ್ಟ ಕಣ್ಣು...

(ಕನಸಲ್ಲಿ ಮೂಡಿದ್ದು, ಪ್ರದ್ಯುಮ್ನನ ಕಣ್ಣುಗಳಿಂದ ಪ್ರೇರಿತನಾಗಿ)
ಮೂವತ್ತು-ಅಕ್ಟೋಬರ್-ಎರಡು ಸಾವಿರದ ಆರು

Monday, April 23, 2007

ಮಂಜಾಟ - ಕೊಡೈಕೆನಾಲ್


Mist in Kodai
ಮಂಜಾಟ - ಕೊಡೈಕೆನಾಲ್, ಜನವರಿ ೧, ೨೦೦೬

Friday, April 20, 2007

ಜಂಬದ ಕಾಗೆ

ಜೀವನದಲ್ಲಿ ಯಾರು ಯಾರಿಂದ ಪಾಠ ಕಲಿ ಬೇಕೋ?? :)

ಜಂಬದ ಕಾಗೆ

ಕಿಟಕಿಯ ಆಚೆ ಇಣುಕಿದೆ ನಾನು
ಕರ್ರಗೆ ಕಾಗೆ ಕುಳಿತಿತ್ತಲ್ಲಿ

ತಕ್ಷಣವೇ ನಾ ಅಣಕಿಸ ಹೊರಟೆ
"ಅಪಸ್ವರದಾ ಪ್ರತಿಮೂರ್ತಿ ಇಲ್ಲಿ"

ಕಾ ಕಾ ಎಂದು ನಾ ಕರೆದಾಗ
ಹಾರಿತು ಕಾಗೆ ಖಾಲಿ ಆ ಜಾಗ

ಅಣಕು ಕೊಡದು ಖುಷಿಯು ಮನಕೆ
ದನಿ - ಕರ್ಣಕಠೋರವಾಗಿತ್ತದಕೆ

ಸುಶ್ರಾವ್ಯನೆಂದು ತಿಳಿದಿದ್ದೆನಗೆ
ಆಯಿತು ಮಂಗಳ ಆರುತಿ ಕೊನೆಗೆ

ನಾನಗಿದ್ದೆ ಜಂಬದ ಕಾಗೆ
ಮದವನು ಇಳಿಸಿತ್ತು ಆ ಕರಿ ಕಾಗೆ

(ಘಟನೆ ನಡೆದಿದ್ದು - ೮-ಅಕ್ಟೊಬರ-೨೦೦೬)

ಅತ್ಯದ್ಭುತ ಸೃಷ್ಟಿ ಯಾವುದು?

ಅತ್ಯದ್ಭುತ ಸೃಷ್ಟಿ?

ದೇವನಲಿ ಹುಟ್ಟಿಹುದು ಒಂದು ಪರಿಪ್ರಶ್ನೆ
ಬ್ರಹ್ಮಾಂಡದಿ ಭವ್ಯ ಯಾವುದು ನನ್ನ ಸೃಷ್ಣೆ?

ಉತ್ತರಕೆ ಸುತ್ತಿಹನು ಇಡೀ ನಭೋಮಂಡಲ
ಎಲ್ಲೂ ಸಿಗದು - ಕಡೆಗೆ ಕಂಡಿತು - ಸೌರ ಮಂಡಲ

ಸೂರ್ಯನ ನೋಡಿದರೆ ಸುಡುವಗ್ನಿ ಕುಂಡ
ಮಂಗಳನಿಲ್ಲಾಗಿಹನು ಕಡು ಕೆಂಪು ಕೆಂಡ

ಗುರುವಿಗೆ ಕ್ಷುದ್ರಗ್ರಹದ ಕಾಟವಿರುವುದಿಲ್ಲಿ
ನೆಪ್ಚೂನ್-ಯುರೇನಸ್ ಬಿಳಿಚಿಹರು ಅಲ್ಲಿ

ಇದರ ಮಧ್ಯೆ ಹೊಳೆದಿಹುದು ಫಳಫಳ ಈ ಗೋಳ
ಗೋಳವು ಪ್ರಜ್ವಲಿಸಿದೆ - ಇದರ ಬಣ್ಣ - ನೀಲ

ಭೂಗೋಳದ ಒಳಗೆ ಹೊಕ್ಕಿಹನು ದೇವ
ಅಚ್ಚರಿಯ ಆಘಾತವು - ಅದ್ಭುತದ ಅಭಾವ

ಮೂಲೆ ಮೂಲೆ ತಿರುಗಿದನು - ಅಮೇರಿಕ - ಚೀನ
ಎಲ್ಲರಲೂ ಕಂಡಿಹುದು - ಊನ-ಅಪೂರ್ಣ

ಸೃಷ್ಟಿ ಬಲವು ಇಷ್ಟೇ? ಎಂದು ದೇವನಲಿ ಲಜ್ಜೆ
ಅಷ್ಟರಲಿ ಕೇಳಿಸಿತು ಸುನಾದದ ಹೆಜ್ಜೆ

ಅಲೆ ಅಲೆಯಲಿ ಕೇಳಿದೆ ಸಂಗೀತದ ನಾದ
ಸಾಗರವು ಸ್ಪರ್ಶಿಸಿಹುದು ಈಕೆಯ ಪಾದ

ಉಟ್ಟಿಹಳು ಕೇಸರಿಯ ರೇಶಿಮೆ ಸೀರೆ
ದೇವರಿಗೂ ರೋಮಾಂಚನ - ರೂಪಸಿ - ಈ ನೀರೆ

ಮೆರಗನ್ನು ನೀಡಿಹುದು ಹಸಿರ-ಹೊನ್ನ ಅಂಚು
ಮೈಯಲ್ಲಿ ಹುಟ್ಟಿತು ಝಲ್ಲನೆ ಕೋಲ್ಮಿಂಚು

ಬಲದ ಕೈಯಲಿ ಇಹುದು ಕ್ಷೀರದಾ ಕಲಶ
ಎಡಗಡೆ ಹರಿದಿಹಳು ಪಾವನೀ ಗಂಗೆ

ಯಮುನೆ-ತುಂಗೆ-ನರ್ಮದೆಯರ ಜಲಲ ಜಲಲ ಧಾರೆ
ಇವುಗಳಿಂದ ಮೂಡಿದೆ ಜಲದ ನಿರಿಗೆ ಸೀರೆ

ಸಿಂಧು ನದಿಯ ಕೆಮ್ಮಣ್ಣೇ ಇವಳ ಸಿಂಧೂರ
ಮಂದಸ್ಮಿತೆ ಈಕೆ - ಇದೇ ದಿವ್ಯಾಕಾರ

ಝಗಮಗಿಸಿದೆ ಈ ಸುಂದರ ಮಕುಟ
ಕಣ್ಣ ಕೋರೈಸಿದೆ ಇದು ಹಿಮಕಿರೀಟ

ಇವಳ ಕಂಡ ದೇವನು ಆದ ಕೊನೆಗೆ ಧನ್ಯ
"ನಿನಗಿಂತಿನ್ಯಾರಿಹರು - ನೀನು ಅಸಾಮಾನ್ಯ"

ದೇವನು ಉದ್ಘೋಷಿಸಿದ - "ನೀನೆ ಉತ್ಕೃಷ್ಟೆ!"
"ಜಗದಲಿ ನಿನಗೆ ಅಸಮ -ನೀ ಸೃಷ್ಟಿ ಪರಾಕಾಷ್ಟೆ!"

----------*----------

ತಕ್ಷಣವೇ ಮೊಳಗಿತು -

ಜಯಹೇ ಜಯಹೇ ಮಾತೆ
ಜಯ ಭಾರತಿ ಮಾತೆ
ಜಯ ಗಂಗಾ ಜನನಿ
ನೀ ಪತಿತ ಪಾವನಿ
ಜಯ ಭಾರತಾಂ.....ಬೆ!

(ದಿನಾಂಕ: ೪-ಅಕ್ಟೋಬರ್-೨೦೦೬)

Monday, April 16, 2007

ಚಿಟ್ಟೆ ಕಂಡ್ರೆ ಯಾರಿಗೆ ಇಷ್ಟ ಆಗೋಲ್ಲಾ?


ಚಿಟ್ಟೆ

ಆಹಾ! ನೋಡು ಬಣ್ಣದ ಚಿಟ್ಟೆ!
ನಿನ್ನೀ ಮೆರುಗಿಗೆ ನಾ ಮರುಳಾಗಿಬಿಟ್ಟೆ!

ಹುಟ್ಟಿನಲಿ, ನೀನು ಕರ್ರಗಿನ ಕಂಬಳಿ - ಕುರೂಪಿ
ಬೆಳೆಯಲು, ಅಪ್ಸರೆಯರೂ ಹಿಮ್ಮೆಟ್ಟಿದರು, ನೀ ಸ್ಫುರದ್ರೂಪಿ!

ಬಣ್ಣವೋ ಬಣ್ಣ ಇದು ಅದ್ಭುತ ಚಿತ್ತಾರ
ಚೆಲ್ಲಿದೆ ರಂಗು - ಸೌಂದರ್ಯದ ಪರಮಾವಧಿ - ಸಾಕಾರ!

ಎಂಥಾ ಚೆಲುವು - ಓ ಪಾತರಗಿತ್ತಿ!
ನೋಡೀ ನೀರೆಯರೂ ನಾಚಿದರು - ನೀ ಬಿನ್ನಾಣಗಿತ್ತಿ!

ಅದೇನು ನಿನ್ನ ಈ ಅಂದ-ಚೆಂದ!
ಹೀರಿದೆಯಾ ನೀ ಹೂಗಳ ಮಕರಂದ!

ಒಂದೇ ಒಂದು ಸ್ಪರ್ಶಕ್ಕೆ ಕಾದಿವೆ ಕೋಟಿ ಶ್ಯಾಮಲೆ
ನಿಂತಲ್ಲೆ ನಿಲ್ಲಲಾರೆ - ನೀ ಮಹಾ ಚಂಚಲೆ!

ಪ್ರೀತಿಯಲಿ ಪುಷ್ಪಕ್ಕೆ ಕೊಟ್ಟಿಹೆ ಸಿಹಿ ಚುಂಬನ
ಮೃದು ಹೂವದು ನಸು ನಡುಗಿದೆ - ಎಂಥಾ ರೋಮಾಂಚನ!

ಕುಡಿದಿರುವೆ ನೀನು ಹೂವಿನ ಜೇನು...
ಹೇಳು! ನಿನ್ನ ಸೌಂದರ್ಯದ ಗುಟ್ಟು ಇದೇ ಏನು?

ನಿನ್ನ ಸೃಷ್ಟಿಸಿದ ಬ್ರಹ್ಮನ ಬಲವು ಅಷ್ಟಿಷ್ಟೇ?
ಇದನೆಲ್ಲ ಯೋಚಿಸಿ ಸ್ತಬ್ಧನಾಗಿ - ಮೂಗಿನ ಮೇಲೆ ಬೆರಳಿಟ್ಟೆ!

(ಹೊಳೆದಿದ್ದು - ೨೧-ಸೆಪ್ಟಂಬರ್-೨೦೦೬, ಚಕ್ರತೀರ್ಥದಲ್ಲಿ ಚಿಟ್ಟೆಯ ಚಿತ್ತಾರವನ್ನು ಸೆರೆಹಿಡಿದಿದ್ದು - ೧೦-ಮಾರ್ಚ್-೨೦೦೭)

ಪದಬಂಧ ನನ್ನ ಹವ್ಯಾಸ... :)

ಪದಬಂಧ ನನ್ನ ಹವ್ಯಾಸ... :)

ಪದಬಂಧ

ಪದಗಳ ಆಟವೇ
ಪದಬಂಧ
ಎನಿತೋ ವರುಷದ
ಸಂಬಂಧ

ಸುಳಿವಿನ ರಾಶಿಯು
ಗೋಜಲೋ ಗೊಜು
ಗಾಳಕೆ ಸಿಕ್ಕರೆ
ಮೋಜೋ ಮೊಜು

ಪದಗಳು ಸಿಗದಿರೆ
ಬಲು ತಿಕ್ಕಾಟ
ಸಿಕ್ಕರೆ ಇವುಗಳು
ಇದೆ ಗೆದ್ದಾಟ

ಮುಖವಾಡದ ಪದಗಳ
ಅಟ್ಟಹಾಸ!
ಕಳಚಿರೆ ಇವನು
ಅರೆ! ಸುಹಾಸ!

ತಿಣುಕಿದೆ ಏಕೋ?
ಅಯ್ಯೋ ಪೆದ್ದೆ!
ಎಲ್ಲವು ಸಿಕ್ಕರೆ
ನೀನೇ ಗೆದ್ದೆ

ಆಡಿವೆ ಏಕೆ,
ಕಣ್ಣು ಮುಚ್ಚಾಲೆ?
ಬರದಿಹೆ ಪ್ರೀತಿಯ
ಕರೆಯೋಲೆ!

ಇವಕೆ ವಿರಹವು
ಕಾಡಿವೆಯಂತೆ
ಇನ್ನೊಂದನು ಮುತ್ತಿಕ್ಕಲು
ಕಾದಿವೆಯಂತೆ

ಚಿತ್ರ ವಿಚಿತ್ರ ಇದೆ
ಈ ಜಾಡು
ಅದುವೇ ಜಾಣ್ಮೆಯು
ಜೋಡಣೆ ಮಾಡು

ತೆಗೆದರೂ ಪದಗಳ
ಮೆಲ್ಲಗೆ ಹೆಕ್ಕಿ,
ಪ್ರೀತಿಯು ಉಕ್ಕಿ,
ಗುದ್ದಿವೆ, ಢಿಕ್ಕಿ!

ಕಲಸು ಮೆಲೋಗರ
ಪದ ಚಿತ್ರಾನ್ನ
ಸರಿ ಪಡಿಸಲು ಇದನು
ಸಿಹಿ ಮೊಸರನ್ನ

ರಕುತವ ಹಂಚಿದ
ಜೋಡಿಗಳಂತೆ,
ಸಮ ಅಕ್ಷರದ
ಅವಳಿಗಳಂತೆ!

ಸುಲುಭದ ಆಟವೆ?
ಇದು ಕಗ್ಗಂಟು
ಗೆಲ್ಲಲು ಮೆದುಳೇ
ನಿನಗೆ ನಿಘಂಟು

ಎಲ್ಲವು ಸಿಕ್ಕರೆ
ಇದೆ ಹಾಡಂತೆ
ಹಾಡಿನ ಸ್ವರಗಳು
ಗಮ"ಪದ" ವಂತೆ

ಇದುವೇ ಒಂದು
ಜಾಣರ ಆಟ
ಚಿಣ್ಣರಿಗಾಗಲಿ
ಇದು ಪರಿಪಾಟ

ಬಲು ಮಧುರ
ಪದಬಂಧದ ಬಂಧ
ಇರಲಿ ಅಮರ
ಈ ಅನುಬಂಧ

(ಬರೆದದ್ದು...೧೯-ಸೆಪ್ಟಂಬರ್-೨೦೦೬)

Saturday, April 14, 2007

ನೋಡು ಬಾ ನೋಡು ಬಾ ಮೈಸೂರಾ...


ಮೈಸೂರು ಅರಮನೆ ನನ್ನ ಮೂರನೆ ಕಣ್ಣಲ್ಲಿ...

ವಡೆ ಮಾಡೋದು ಗೊತ್ತಾ?

ಒಂದಿಷ್ಟು ಹುಡುಗೀರು ನಿಂಗೆ ವಡೆ ಮಾಡಕ್ಕೆ ಗೊತ್ತಾ ಅಂಥ challenge ಹಾಕಿದ್ರೂ...
ಅದೇನ್ ದೊಡ್ಡ ಮಹಾ ಅಂಥ ಒಂದು ಆಶು ಕವಿತೆ ಬರೆದೆ...

ವಡೆ


ಬೇಳೆಯ ನೆನೆಸಿ
ಮಾಡಿರಿ ಹಿಟ್ಟು

ಒಂದಿಷ್ಟು ತೆಗೆದು
ಎಲೆ ಮೇಲೆ ತಟ್ಟು

ಕಾದ ಎಣ್ಣೆಯಲಿ
ನೀ ಅದ putಉ (ಪುಟ್ಟು)

ಕರಿದ ವಡೆಯ
ತಟ್ಟೆಗೆ getಉ (ಗೆಟ್ಟು)

ಗರಿ ಗರಿ ವಡೆಯು
ಹೊಟ್ಟೆಗೆ fitಉ (ಫ಼ಿಟ್ಟು)!

ವಡೆಯ ಮಾಡುವ
ವಿಧಾನವಿಷ್ಟು!!

(ಹತ್ತು-ಸೆಪ್ಟಂಬರ್-೨೦೦೬)

Friday, April 13, 2007

ಹತ್ರೀ ಬನ್ರೀ Route-3


ನಮ್
Juniper Shuttle, Route-3ಲಿ ಇರೋಷ್ಟ್ ಮಜ ಬೇರೆ ಎಲ್ಲಿ ಇದೆಯೋ ನಾ ಕಾಣೆ

Route-3


ಹತ್ರೀ ಬನ್ರೀ Route-3
ಖುಷಿಯು ನಿಮಗೆ ಖಾತ್ರೀ !!
ಮೀನ ಮೇಷ ಯಾಕ್ರೀ??
ನಗಲೂ ಹಿಂದೇಟ್ ಎನ್ರೀ?

ಹಾಡುಗಳನ್ನು ಹಾಡುತ್ತೇವೆ
ಆಡಿರಿ ಬನ್ನಿ ಅಂತಾಕ್ಷರಿ!
ಮೂಕ ಸನ್ನೆಯ ಮಾಡುತ್ತೇವೆ
ಪದಗಳ ನೀವು ಪತ್ತೆ ಹಚ್ರೀ!

ಹತ್ರೀ ಬನ್ರೀ Route-3
ತಲೆ ಕೆರೀತೀರ್ ಯಾಕ್ರೀ??

ಮೆದುಳಿಗೆ ಬೇಕೆ ಚುರಿಮುರಿ?
Lateral Thinking ಆಡ್ ಬನ್ರೀ
ಪ್ರಶ್ನಾವಳಿಯ ಸುರಿಮಳೆ ಹಾಕಿ
ವ್ಯಕ್ತಿಯ ನೀವು ಕಂಡು ಹಿಡೀರಿ!

ಹತ್ರೀ ಬನ್ರೀ Route-3
ದಂಗಾಗಿದ್ದೀರ್ ಎನ್ರೀ??

Dumb Dumb Cನ ನೋಡಿ
ಮೂಕನೆ ಮೂಕನಾಗ್ಯಾರಿ!
ತುಂಟಾಟವನು ಆಡುತ್ತೇವೆ
ಕಾಲನು ನೀವು ಎಳೀ ಬನ್ರೀ


ಹತ್ರೀ ಬನ್ರೀ Route-3
ನಮ್ಮೊಳಗ್ ನೀವೊಬ್ರಾಗ್ರೀ
ನಗುವಲಿ ಭಾಗಿ ಆಗ್ರೀ
ಖುಷಿಯು ನಿಮಗೆ ಖಾತ್ರೀ!

ಹತ್ರೀ ಬನ್ರೀ Route-3
ಖುಷಿಯು ನಿಮಗೆ ಖಾತ್ರೀ!

(ಗೀಚಿದ್ದು ೪-ಸೆಪ್ಟಂಬರ್-೨೦೦೬)

ಪ್ರದ್ಯುಮ್ನನ ಬಗ್ಗೆ ಹೇಳ್ದೆ ಇರಕ್ಕೆ ಆಗತ್ತಾ???


ನನ್ನಕ್ಕನ ಮಗ - ನನ್ನ ಬಂಗಾರಿ, ಚಿನ್ನಿ ಮರಿ - ಪ್ರದ್ಯುಮ್ನ!
ತುಂಟ ಪುಟ್ಟ ಪೋರನ ಬಗ್ಗೆ...

ಪುಟ್ಟ ಪ್ರದ್ಯುಮ್ನ

ವರುಷದಿ ಹಿಂದೆ
ನಮ್ಮೀ ಮನೆಗೆ
ಬಂದಿಹನೊಬ್ಬನು ಪುಟ್ಟಣ್ಣ

ಪ್ರೀತಿಯ ಪುಟ್ಟಗೆ
ನಾಮವನಿಟ್ಟರು
ಹೆಸರಾಯಿತು ಅದು "ಪ್ರದ್ಯುಮ್ನ"

ಅಪ್ಪನು ಆಡಿಸೆ
ಕುಣಿದರು ಮುಂದೆ
ಖುಷಿಯಲಿ ಚೀರಿದ ರಾಜಣ್ಣ

ತಿಂಗಳೈದಾಗಲೆ
ಮಗುಚಿದ ಇವನು
ಬೋರಲು ಬಿದ್ದನು ಚಿನ್ನಣ್ಣ

ನಗುವೇ ಮೊಗದಲಿ
ಆಕರ್ಷಣೆಯು
ಎಲ್ಲರ ಸೆಳೆದನು ಇವನಣ್ಣ

"ಬೌ ಬೌ" ಪ್ರಿಯನು
ಆಜ್ಞೆಯನಿತ್ತನು
"ನಾಯಿಯ ಹಿಂದೆ ಓಡಣ್ಣ"

ತುಂಬಿತು ಎಂಟು
ದೇಕಿತು ತುಂಟು
ಕಣ್ಗದೆ ಹಬ್ಬವು ನೋಡಣ್ಣ

ಮಾಸವು ಹತ್ತು
ಅಂಬೆಗಾಲಿತ್ತು
ಮುನ್ನುಗಿತ್ತು ಚಿಕ್ಕಣ್ಣ

ಹೆಚ್ಚಿನ ಸಮಯವು
ಬೇಕೆ ಇವಗೆ
ಹೆಜ್ಜೆಯನಿಟ್ಟನು ಗುಂಡಣ್ಣ

ಘಲು ಘಲು ಗೆಜ್ಜೆಯ
ನಾದವ ಮಾಡಲು
ಕೇಳಲು ನಮಗೆ ಮಜವಣ್ಣ

ಅಮ್ಮನು ಮಾಮನು
ಪ್ರೀತಿಲಿ ಕರೆದರು
"ಚಿನ್ನಿಮರಿ-ಗುಂಡು-ವಡ್ಡಣ್ಣ"

ನೆಚ್ಚಿನ ಆಟಿಕೆ
ಸಿಗದಿರೆ ಇವಗೆ
ಆಗುವನಿವನು ಮೊಂಡಣ್ಣ

ಹಾಡು ಕುಣಿತವು
ಇಷ್ಟವು ರಾಜಗೆ
ಕೇಳಲೆ ತೂಗಿದ ಗುಂಡಣ್ಣ

ನಡೆಯಲು ಕಲಿತಾ
ಮುದ್ದಿನ ಪೋರನು
ಪುಂಡನು ಆಗಿಹ ನೋಡಣ್ಣ

ಅಜ್ಜಿಯ ಕೂಡ
ಕರೆದಿಹನಿವನು
"ಅಮ್ಮಾ" ಎಂದೇ ಕೇಳಣ್ಣ

ಪಕ್ಕದ ಮನೆಯ
ಅಜ್ಜಿಯು ಕರೆದರು
ಅಕ್ಕರೆಯಲಿ - "ನಮ್ಮಣ್ಣ"

ಜಾಣನು ಇವನು
ಎಲ್ಲರ ಪ್ರಿಯನು
ನಮ್ಮಯ ಪುಟ್ಟ ಪ್ರದ್ಯುಮ್ನ
ನಮ್ಮಯ ಪುಟ್ಟ ಪ್ರದ್ಯುಮ್ನ


(ಬರೆದದ್ದು ೨೨-ಆಗಸ್ಟ್-೨೦೦೬)

ಕಾಮನಬಿಲ್ಲು

ಆ ಒಂದು ಸಂಜೆ ನಮ್ Juniper terraceನಲ್ಲಿ ನಿಂತಿದ್ದಾಗ ಹನಿ ಹನಿ ಮಳೆ ಬಂದು, ಕಾಮನ ಬಿಲ್ಲು ಮೂಡಿತು...
ಮೂಡಿದ್ದೇ ಮೂಡಿದ್ದು ಎನು ಮೋಡಿ ಹಾಕ್ತೋ, ನನ್ನ ದಡ್ಡ ತಲೇಗೂ ಒಂದು ಕವನ ಹೊಳೀತು, ಇಲ್ಲಿದೆ ಓದಿ

ಕಾಮನಬಿಲ್ಲು

ಆಗಸದಿ ಮೂಡಿತು ಕಾಮನಬಿಲ್ಲು
ರಂಗಿನ ಓಕುಳಿ ಎಲ್ಲೆಲ್ಲೂ

ಸಿಂಚನವೇ ಈ ತುಂತುರು ಮಳೆಯು
ನಲಿ ನಲಿಯುತ್ತಿವೆ ಮಿಂದಾ ಸಸಿಯು

ಹಾರುವ ಹಕ್ಕಿಗಳಿಂಪಿನ ದನಿಯು
ಇದ ನೋಡಲು ಇಣುಕಿದ ರವಿಯು

ಬಿರಿದಿವೆ ನಗುತಿವೆ ಹೂವು-ಹುಲ್ಲು
ಕುಣಿಯುವ ಚಿಣ್ಣರ ಗುಲ್ಲೋ ಗುಲ್ಲು

ಪ್ರಕೃತಿಯ ರಸವೇ ಬಹು ರುಚಿಯು
ಇದ ಮರೆಯದೆ ಮನುಜ ನೀ ಮೆಲ್ಲು... ನೀ ಮೆಲ್ಲು...

(ಬರೆದ ದಿನಾಂಕ - ೭-ಆಗಸ್ಟ್-೨೦೦೬)

ಬ್ಲಾಗಿನ ಬಾಗಿಲಿಗೆ...

ಬ್ಲಾಗೋದೋ ಬೇಡ್ವೋ?
ಬ್ಲಾಗಿಗೆ ಬಾಗೋದೋ ಬೇಡ್ವೋ???
ಕೊನೇಗೂ ಬ್ಲಾಗಿನ ಬಾಗಿಲಿಗ್ ಬಂದಿದ್ದೂ ಆಯ್ತು, ಬಿದ್ದಿದ್ದೂ ಆಯ್ತು.
ನಾನು ಬಾಗಿಲಿಗೆ ಬಂದೆ ಅಂಥ ಹೇಳೋಕಿಂತಾ, ನೂಕಿದಾರೆ ಅಂಥ ಹೇಳ್ಬಹುದು...
ಆವಾಗ್ ಆವಾಗ ಸ್ವಲ್ಪ ಗೀಚ್-ತೀನ? ಅದನ್ನ ಬ್ಲಾಗ್-ಬೇಕಂಥೆ!
ಹೇಳ್ಕೊಳ್ಳೋಂಥಾದ್ದೇನು ಬರದಿಲ್ಲ ಬಿಡಿ...ಆದ್ರೂ ಅವರಿಗೆ ಚಪಲ...
ಪಾಪ ಅವರ್ ಮಾತೂ ಸ್ವಲ್ಪ ಕೇಳೋಣಾ ಅಂಥ...
ಹಾಗೇ ಕ್ಯಾಮರ ಕಣ್ಣಲ್ಲಿ ನೋಡಿದ್ದೂ ಹಾಕೋಕೆ ಆಸೆ...
ನೋಡೋಣ ಎಷ್ಟು ದಿನ ಬ್ಲಾಗ್ತೀನೋ...
ತುಂಬ ದಿನ ನಡೆಯೋದು Doubtಉ...
ನನ್ಗೆ ನನ್ನ ಸೋಮಾರಿತನದ ಮೇಲೆ ಅಷ್ಟು confidence!!!
ಇರ್‍ಲಿ ಒಂದ್ ಕೈ ನೋಡೆ ಬಿಡಾವ ಅಂಥ... :)