Thursday, October 30, 2008

ರಚ್ಚೆ ಏತಕೊ ನಿನದು ???



ರಚ್ಚೆ ಏತಕೊ ನಿನದು
ಬೆಚ್ಚನೆ ಹಾಲ ಕುಡಿದು
ಮಲಗೋ ನೀನು ನನ ಕಂದ
ಮಲಗೋ ನೀನು ನನ ಕಂದ...

ಅಳುವ ನಿಲಿಸಿ ನೀನು
ಬಳಸಿ ನಡುವ, ಜೇನು
ನಿದ್ದೆಗೆ ಜಾರೋ ನನ ಕಂದ
ನಿದ್ದೆಗೆ ಜಾರೋ ನನ ಕಂದ...

ಮೆಲ್ಲನೆ ಬೆನ್ನನು ತಟ್ಟಿ
ಗಲ್ಲಕೆ ಮುದ್ದನು ಇಟ್ಟು
ಜೋಗುಳ ಹಾಡುವೆ ನನ ಕಂದ
ಜೋಗುಳ ಹಾಡುವೆ ನನ ಕಂದ...

ಓಡೋಡಿ ಬಳಿ ಬಂದು
ಉಡಿಯ ನುಸುಳಿ ಇಂದು
ಹಾಯಾಗಿ ಮಲಗೋ ನನ ಕಂದ
ಹಾಯಾಗಿ ಮಲಗೋ ನನ ಕಂದ...

ರಂಪಾಟ ಸಾಕಿನ್ನು
ಜೊಂಪಾಟವ ಆಡಿನ್ನು
ಸೊಂಪಾಗಿ ಮಲಗೋ ನನ ಕಂದ
ಸೊಂಪಾಗಿ ಮಲಗೋ ನನ ಕಂದ...

ಹಾಯಾಗಿ ಮಲಗೋ ನನ ಕಂದ...
ನಿದ್ದೆಗೆ ಜಾರೋ ನನ ಕಂದ...
ಬೆಚ್ಚನೆ ಮಲಗೋ ನನ ಕಂದ...
ಹಚ್ಚಗೆ ಮಲಗೋ ನನ ಕಂದ...

~~~*~~~

ಇದನ್ನು ಜನಪದ ಶೈಲಿಯಲ್ಲಿ ಹಾಡುವ ಪ್ರಯತ್ನ ಮಾಡಿದ್ದೀನಿ.
ಕೇಳಲು ಕೆಳಗಿನ ಕೊಂಡಿ ಚಿಟಕಿಸಿ...
Boomp3.com


--ಶ್ರೀ

(೨೬-೨೭, ಅಕ್ಟೋಬರ್-೨೦೦೮)

ಕಿಲಾಡಿ ಜರಡಿ...!

ಬರಡೇ ಬುರುಡೆ,
ಬುರುಡೆಯ ಹರಡುವರ
ಕುರುಡಾಗಿ ನಂಬಲು?

ಬರಡಿಲ್ಲ-ಕುರುಡಿಲ್ಲ,
ಬೇಕಿದ್ದನ್ನು ಉಳಿಸಿ,
ಮಿಕ್ಕವನ್ನು ಅಳಿಸುವ
ಕಿಲಾಡಿ ಜರಡಿ!

--ಶ್ರೀ
(೩೦-ಅಕ್ಟೋಬರ್-೨೦೦೮)

Tuesday, October 28, 2008

ದಿಟಕೆ ದಿಟವೇ ಶತ್ರು!

ಕಣ್ಣ ಮುಂದೆ
ರಾಚಿದೆ ದಿಟವು...
ಪುರಾವೆಯಿಲ್ಲ
ಪ್ರಮಾಣಿಸಲು...

ಹಳಸಿದ್ದನ್ನು
ಎತ್ತಿ ಹಿಡಿದರು,
ರಾಚುವ ದಿಟವ
ಹುಸಿಯೆಂದು ತೋರಲು...

-- ಶ್ರೀ

ಪುಟಾಣಿಗೆ ಭೂಮಿ ಕಷ್ಟವಂತೆ...!

(ಈ ಘಟನೆ ನಡೆದು ಸುಮಾರು ೬ ತಿಂಗಳ ಮೇಲಾಯ್ತು...)

ಆಗ ನಮ್ ಪುಟಾಣಿ ಮಾತಾಡೋಕೆ ಕಲಿತು ಒಂದು ೩-೪ ತಿಂಗಳಿರಬಹುದು...
ಸಾಮಾನ್ಯವಾಗಿ ಏನೇನೋ ಹೇಳ್ತಾ ಇರ್ತಾನೆ ಬಾಯಿಗೆ ಬಂದದ್ದು...
ಹೀಗೆ ಒಂದು ದಿನ, ಈ ಪುಟ್ಟ, " ಭೂಮಿ ಕಷ್ಟ ಆಗಿದೆ..." ಅಂದಂಗಾಯ್ತು...
ನಾನು ಇದನ್ನ ಕೇಳಿ ಶಾಕ್ ಆದೆ...ಸರಿಯಾಗಿ ಕೇಳಿಸಿತಾ ಅನ್ನೋ ಅನುಮಾನ..."ಏನೋ ಅದು?" ಅಂದೆ...
ಮತ್ತೆ ಮೆಲ್ಲಗೆ "...ಭೂಮಿ ಕಷ್ಟ ಆಗಿದೆ..." ಅಂದ..
’ಏನಪ್ಪ ಈ ಪಾಪು ಈ ವಯಸ್ಸಿಗೇ ಹಿಂಗೆಲ್ಲಾ ಮಾತಾಡ್ತಾನೆ’ ಅಂತ ಅಂದುಕೊಂಡೆ...
ತಕ್ಷಣ ಅಕ್ಕನ್ನ ಕರೆದೆ..."ಲೇ...ಏನೇ ನಿನ್ ಮಗ ಹೀಗೆಲ್ಲಾ ಮಾತಾಡ್ತಾನೇ???" ಅಂದೆ...
ಅವಳು "ಏನಂದಾ?" ಅಂದ್ಲು...ನಾನು "ಏನೇನೋ ಹೇಳ್ತಾ ಇದಾನೆ, ನೀನೇ ಕೇಳು" ಅಂದೆ...
ಅವನು ಅಕ್ಕನ ಮುಂದೆ ಕೂಡ ಮೆಲ್ಲಗೆ "ಭೂಮಿ ಕಷ್ಟ ಆಗಿದೆಯೋ..." ಅಂದ...
ಅದಕ್ಕೆ ಅಕ್ಕ, "ಅಯ್ಯೋ, ಇದು ’ಗಾಳಿಪಟ’ ಚಿತ್ರದ ಹಾಡು...ಚಿತ್ರದ ಹಾಡು ಹೀಗಿದೆ...’ಆಕಾಶ ಇಷ್ಟೇ ಯಾಕಿದೆಯೋ...ಈ ಭೂಮಿ ಕಷ್ಟ ಆಗಿದೆಯೋ...’...ಅದಕ್ಕೆ ನೀನು ಎಫ್.ಎಂ. ರೇಡಿಯೋ ಕೇಳಬೇಕು ಅಂತ ಯಾವಾಗ್ಲೂ ಹೇಳೋದು...ನೋಡು, ಈ ಪುಟಾಣಿನೇ ನಿನ್ನ ಮೀರಿಸ್ತಿದಾನೆ!" ಅಂದಾಗ ನಾನು ಸುಸ್ತು...ನನಗೆ ಎಫ್.ಎಂ. ರೇಡಿಯೋ ಕೇಳಬೇಕು ಅನಿಸಿದ್ದು ಆಗಲೇ!

--ಶ್ರೀ

Sunday, October 26, 2008

ಟೈಂಪಾಸ್ ಕಡ್ಲೇಕಾಯಿ ತಿನ್ನಕ್ಕೆ ಯಾರು ಬಂದಿದ್ರೂ ಗೊತ್ತಾ???

ನನ್ ಬರವಣಿಗೆನಾ ನಾನು ಎಂದೂ ಸೀರಿಯಸ್ ಆಗಿ ತೊಗೊಂಡಿದ್ದಿಲ್ಲ...ಗೆಳೆಯರ ಬಲವಂತಕ್ಕೆ ನಾನು ಬ್ಲಾಗ್ ಲೋಕಕ್ಕೆ ಬಂದಿದ್ದು...
ಬ್ಲಾಗ್ ಶುರು ಮಾಡುವ ಹಿಂದಿನ ದಿನ, ಒಂದಿಷ್ಟು ಖಾರದ ಕಡ್ಲೇಕಾಯಿ (ಕಾಂಗ್ರೆಸ್ ಕಡ್ಲೇಕಾಯಿ) ತಿಂದಿದ್ದೇ, ನನ್ನ ಬ್ಲಾಗಿನ ಹೆಸರಿಗೆ ಸ್ಫೂರ್ತಿ!
ಈಗ ಇದನ್ನು ಮತ್ತೆ ನೋಡಿದಾಗ ನಾನು ನನ್ನ ಬರವಣಿಗೆಗೆ ಎಷ್ಟು ಬೆಲೆ ಕೊಟ್ಟಿದ್ದೇ ಅಂತಾ ಗೊತ್ತಾಗತ್ತೆ! ಬ್ಲಾಗ್ ಶುರುವಾದಾಗ ನನಗೆ ಸೀರಿಯಸ್‍ನೆಸ್ ಸ್ವಲ್ಪ ಕೂಡ ಇರಲಿಲ್ಲ...

ನನ್ನ ಬ್ಲಾಗ್ ಶುರು ಮಾಡಿ ಈಗ ಸುಮಾರು ಒಂದೂವರೆ ವರ್ಷ...! ಇಷ್ಟು ದಿನ ಈ ಬ್ಲಾಗ್ ನಡೆಯುತ್ತೆ ಅಂತ ಅಂದುಕೊಂಡೇ ಇರಲಿಲ್ಲ...ಈ ಸಮಯದಲ್ಲಿ, ನನಗೆ ತಿಳಿಯದೇ ಸುಮಾರು ಜನ ಈ ಬ್ಲಾಗ್ ಓದಿಕೊಂಡು ಬಂದಿದ್ದಾರಂತೆ...ಈ ಬ್ಲಾಗಿಗೆ ಹಲವಾರು ಬೀಸಣಿಗೆಗಳು ಇವೆ ಅಂತ ಸಮಯ ಕಳೀತಿದ್ದಂತೆ ತಿಳೀತಾ ಬಂತು...ಆದ್ರೆ ಇತ್ತೀಚಿಗೆ ಟೈಮ್ ಪಾಸ್ ಕಡ್ಲೇ ಕಾಯಿ ತಿನ್ನಕ್ಕೇ ಯಾರು ಬಂದಿದ್ರೂ ಅಂತ ನನ್ ಗೆಳೆಯರೊಬ್ಬರು ತೋರಿದಾಗಂತೂ ಆದ ಖುಶಿ ಅಷ್ಟಿಷ್ಟಲ್ಲ...ಕೆಳಗೆ ನೋಡಿ ಯಾರು ಬಂದಿದ್ರೂಂತ!





ಕನ್ನಡ ಪ್ರಭ ’ಬ್ಲಾಗಾಯಣ’ ಎಂಬ ಕಾಲಂ ನಲ್ಲಿ, ಈ ಲೇಖನ ಪ್ರಕಟಿಸಿದೆ!!!
ಇದರ ಮೂಲ ಬರಹ ಇಲ್ಲಿದೆ, ಕನ್ನಡ ಪ್ರಭದ ಕೊಂಡಿ ಇಲ್ಲಿದೆ.

--ಶ್ರೀ

Saturday, October 18, 2008

ಅಂಗೈಯಲ್ಲಿ ಅರಮನೆ

ಒಮ್ಮೆ ನಮ್ಮ ಮನೆಗೆ ನೆಂಟರು ಒಬ್ಬರು ಬಂದಿದ್ದರು.
ನಮ್ಮ ಮನೆಯಲ್ಲಿ ಪುಟಾಣಿ ಇರುವುದರಿಂದ, ಅವನಿಗಾಗಿ ಓಂದು ಪುಟ್ಟ ಪ್ಯಾಕೆಟ್ ತಂದಿದ್ದರು. ’ಇದರಲ್ಲಿ ಸ್ವೀಟ್ ಇದೆ ತೊಗೋ ಪುಟ್ಟಾ’ ಅಂದರು. ಅವರು ಸ್ವೀಟ್ ಕೊಟ್ಟ ಹೊತ್ತಿನಲ್ಲಿ ಪುಟಾಣಿಗೆ ಹೊಟ್ಟೆ ತುಂಬಿದ್ದರಿಂದ, ನಾವು ಪ್ಯಾಕೆಟ್ ತೆರೆಯದೇ ಹಾಗೆ ಎತ್ತಿಟ್ಟೆವು.

ಅವರು ಹೊರಟು ಸ್ವಲ್ಪ ಹೊತ್ತಾದ ನಂತರ, ಪುಟಾಣಿ ಸ್ವೀಟ್ ಬೇಕೆಂದು ಕೇಳಿದ. ನಾವು ಪ್ಯಾಕೆಟ್ ತೆಗೆದು ನೋಡಿದಾಗ, ಅವರು ಇವನಿಗಾಗಿ ಕೇಕ್ ತಂದು ಕೊಟ್ಟಿದ್ದರು. ಆದರೆ ನಮ್ಮ ಪುಟಾಣಿ ಕೇಕ್ ತಿನ್ನುವುದಿಲ್ಲ. ಇದನ್ನು ನೋಡಿದ ನಾವು, ’ಅಯ್ಯೋ, ಇವರು ಮಗುವಿಗೆ ಕೇಕ್ ತಂದು ಕೊಟ್ಟಿದ್ದಾರಲ್ಲ, ಇವನು ತಿನ್ನಲ್ಲಾ’ ಎಂದು ಉದ್ಗರಿಸಿದೆವು ಹಾಗೂ ಎಂದಿನಂತೆ ಪುಟಾಣಿ ಕೇಕ್ ತಿನ್ನಲಿಲ್ಲ ಬಿಡಿ.

ಇದಾಗಿ ಕೆಲವು ದಿನಗಳಾಯಿತು. ಆ ನೆಂಟರು ಮತ್ತೆ ನಮ್ಮ ಮನೆಗೆ ಬಂದರು.
ಬಂದ ತಕ್ಷಣ, ನಮ್ಮ ಪುಟಾಣಿ, "ನೀವು ಅವತ್ತು ಕೇಕ್ ತಂದಿದ್ದಿರಿ, ಅದು ಸ್ವೀಟ್ ಅಲ್ಲ, ಕೇಕ್ ನಾನು ತಿನ್ನಲ್ಲ. ಮುಂದಿನ ಸರತಿ ಬಂದಾಗ ಸ್ವೀಟ್ ತನ್ನಿ" ಎಂದು ಆದೇಶ ನೀಡಬೇಕೆ!
ಇದನ್ನು ಕೇಳಿದ ನಮಗೆ ನೆಂಟರ ಮುಂದೆ ಆದ ಸಂಕೋಚ ಅಷ್ಟಿಷ್ಟಲ್ಲ...

--ಶ್ರೀ

Thursday, October 16, 2008

ಹರಿಯ ಭಜನೆ ಮಾಡೋ...


ಪವಡಿಸಹನೂ ಹರಿಯು
ಪಾಲ್ಕಡಲ ಕೆನೆ ಮೇಲೆ,
ಪನ್ನಗಶಾಯಿಗೆ ನಮಿಸಬನ್ನಿ...

ಪವಡಿಸಹನೂ ಹರಿಯು
ಆದಿಶೇಷನ ಮೇಲೆ,
ಆದಿನಾರಾಯಣಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ಶಂಕು-ಚಕ್ರವ ಹಿಡಿದು,
ಸಂಕಟಹರನಿಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ಅಗಣಿತಗುಣನೂ
ಜಗವ ಸಲಹುವ ಇವಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ತ್ರಿವಿಕ್ರಮನೂ
ತ್ರಿಜಗವಂದಿತಗೇ ನಮಿಸಬನ್ನಿ...

--------------*--------------

ಈ ಹಾಡು ಕಲ್ಯಾಣಿ ಧಾಟಿಯಲ್ಲಿದೆ. ಕೇಳಲು ಕೆಳಗಿನ ಕೊಂಡಿ ಚಿಟಕಿಸಿರಿ.
Boomp3.com

--ಶ್ರೀ

Tuesday, October 14, 2008

ಮರಗಳು ಧರೆಗೆ ಉರುಳುವುದೋ? ಹಸಿರು ಕಂಗಳಿಸುವುದೋ??


ಕಳೆದ ಕೆಲವು ದಿನಗಳಿಂದ, ಮೇಖ್ರಿ ವೃತ್ತದಿಂದ ಟಿ.ವಿ.ಗೋಪುರಕ್ಕೆ ಮುಟ್ಟುವ ದಾರಿಯನ್ನು ಅಗಲಿಸುವ ಕೆಲಸ ಶುರು ಮಾಡಿದ್ದಾರೆ ಎಂದು ಕಾಣುತ್ತದೆ.
ಇಲ್ಲಿಯವರೆಗೂ, ರಸ್ತೆಯ ಪಕ್ಕದ ಜಾಗದಲ್ಲಿ ಪಾದಚಾರಿಗಳಿಗೆಂದು ಸುಮಾರು ಅಗಲವಾದ ಜಾಗವನ್ನೇ ಬಿಟ್ಟಿದ್ದರು.
ಅಷ್ಟು ಅಗಲದ ಜಾಗದಲ್ಲಿ ನಡೆಯುತ್ತಿದ್ದವರು ತೀರ ಕಡಿಮೆ ಎನ್ನಬಹುದು.
ಹಾಗಾಗಿ, ಈ ಜಾಗವನ್ನು ಉಪಯೋಗಿಸಿಕೊಳ್ಳುತ್ತಿರುವುದು, ಇಲ್ಲಿ ರಸ್ತೆ ಅಗಲಿಸುವ ಕೆಲಸವನ್ನು ಕೈಗೊಂಡಿರುವುದು ಒಳ್ಳೆಯದೇ ಎನಿಸುತ್ತದೆ.
ಈ ರಸ್ತೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಳ್ಳಾರಿ ರಸ್ತೆಯ ಕೂಡು ರಸ್ತೆ ಆಗಿರುವುದರಿಂದ, ವಾಹನ ದಟ್ಟಣೆ ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚೇ ಆಗಿದೆ ಅನ್ನಬಹುದು.
ಹೆಚ್ಚು ಕಡಿಮೆ, ದಿನ-ನಿತ್ಯ ಇಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಿಂದ, ಈ ರಸ್ತೆಯನ್ನು ಅಗಲಿಸುವ ಕೆಲಸದಿಂದ, ಜನರಿಗೆ ಅನುಕೂಲವಾಗಲಿದೆ.

ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣುವಂತೆ, ಈ ರಸ್ತೆಯಲ್ಲೂ ಹಲವಾರು ದೊಡ್ಡ ಮರಗಳಿವೆ.
ಈ ರಸ್ತೆಯಲ್ಲಿ, ದೊಡ್ಡ ಮರಗಳ ಪಕ್ಕ ಸಾಕಷ್ಟು ಜಾಗವಿರುವುದರಿಂದ, ದೊಡ್ಡ ಮರಗಳನ್ನು ಕಡಿಯದೇ ಹಾಗೇ ಉಳಿಸಿ, ಅದನ್ನು ಸಣ್ಣ ವಾಹನಗಳಿಗೆ,ದ್ವಿಚಕ್ರದವರಿಗೆ ಮಾತ್ರ ಉಪಯೋಗಿಸುವಂತೆ ಮಾಡಬಹುದು. ಈ ಜಾಗದಲ್ಲಿ ಒಂದು ಕಾರು ಸುಲಭವಾಗಿ ಹೋಗುವಷ್ಟು ಜಾಗವಿದೆ. ದೊಡ್ಡದಾದ ವಾಹನಗಳ ಬಳಕೆಗೆ, ಈಗ ಇರುವ ರಸ್ತೆಯನ್ನು ಹಾಗೆ ಬಳಸಬಹುದು ಎಂಬುದು ನನ್ನ ಅನಿಸಿಕೆ.

ಸಮೂಹ ಮಾಧ್ಯಮದವರು, ಎಂದಿನಂತೆ ಈ ಕೆಲಸಕ್ಕೂ, ಸಕಾರಾತ್ಮಕವಾದ ಸಲಹೆಗಳನ್ನು ಈವರೆಗೆ ನೀಡಿರುವುದಿಲ್ಲ.
ಟಿ.ವಿ.ಯಲ್ಲಾಗಲೀ, ಪತ್ರಿಕೆಗಳಲ್ಲಾಗಲಿ, ಇದರ ಬಗ್ಗೆ ಸುದ್ದಿ ಪ್ರಕಟಗೊಂಡದ್ದು ನನಗೆ ತಿಳಿದು ಬಂದಿಲ್ಲ.
ಇತ್ತೀಚಿಗೆ ಡೆಕ್ಕನ್ ಹೆರಾಳ್ಡ್ ನಲ್ಲಿ, ಬೆಂಗಳೂರ ವಾತಾವರಣ ಎಷ್ಟು ಬದಲಾವಣೆ ಆಗಿದೆ, ಬೆಂಗಳೂರಲ್ಲಿ ಮರಗಳನ್ನು ಎಷ್ಟು ಹೆಚ್ಚು ಕಡಿದಿದ್ದಾರೆ ಎಂಬ ಒಂದು ಸಣ್ಣ ಲೇಖನ ಬಂದಿತ್ತು.
ಉದ್ಯಾನ ನಗರಿ ಹೋಗಿ, ಧೂಳಿನ ನಗರಿಯಾಗಿದೆ ಎಂಬುದು ಆ ಬರಹದ ಸಾರಾಂಶ.
ಈ ರೀತಿಯ ಬರಹಗಳ ಬದಲಾಗಿ, ಹೇಗೆ ನಮ್ಮಲ್ಲಿರುವ ಹಸಿರನ್ನು ಉಳಿಸಬಹುದು, ಹಾಗೂ ಇಂತಹ ರಸ್ತೆ ಅಗಲಿಸುವ, ಮೇಲ್ಸೇತುವೆಗಳ, ಅಂಡರ್ ಪಾಸ್ ಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ, ಸರ್ಕಾರ ಯಾವ ಯಾವ ರೀತಿಯಲ್ಲಿ ಉತ್ತಮ ಕೆಲಸವನ್ನು ಮಾಡಬಹುದು ಎಂಬುದಾಗಿ ಬರೆದರೆ, ನಮ್ಮ ಊರನ್ನು-ನಾಡನ್ನು ಇನ್ನಷ್ಟು ಉತ್ತಮಗೊಳಿಸಬಹುದು.
ನಾನು ಇಲ್ಲಿ ಕೊಡುತ್ತಿರುವುದು ಡೆಕ್ಕನ್ ಹೆರಾಳ್ಡ್ ಬರಹ ಉದಾಹರಣೆಯಷ್ಟೆ.
ಹೆಚ್ಚು ಕಡಿಮೆ ಎಲ್ಲ ಮಾಧ್ಯಮದವರೂ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ.
ಮರಗಳು ಕಡಿದ ಮೇಲೆ, ನಾಡು ಬರಡಾದ ಮೇಲೆ, ಎಷ್ಟು ಬೊಬ್ಬೆ ಹೊಡೆದರೆ ಏನು ಪ್ರಯೋಜನ?

ಈ ಮೇಖ್ರಿ ವೃತ್ತದ ಬಳಿಯ ರಸ್ತೆಯನ್ನು ಅಗಲಿಸುವಾಗಾದರೂ, ನಮ್ಮ ಪಾಲಿಕೆ, ಮಾಧ್ಯಮ, ಜನ ಪರಿಸರದ ಬಗ್ಗೆ ಗಮನ ಕೊಡುವರೇನೋ ಎಂಬ ದೂರದ ಆಸೆ ನನಗೆ.
ಮರಗಳು ಧರೆಗೆ ಉರುಳುವುದೋ, ಹಸಿರು ಕಂಗಳಿಸುವುದೋ, ಇದನ್ನು ಸಮಯವೇ ಹೇಳಬೇಕು...

--ಶ್ರೀ

Monday, October 13, 2008

ಕಲೆಗುಂಟೇ ನೆಲೆಯ ಬಲೆ?

ಇಲ್ಲ ಕಲೆಗೆ ನೆಲೆಯ ಬಲೆ.
ಕಲ್ಲ ಕುಸುರಿ ಕನ್ನಡಿಗನಿಗೇ ಎನ್ನಲು,
ಬಲ್ಲಿದ ಬೇಲೂರ ಚೆನ್ನಿಗ ಮೆಚ್ಚುವನೇ?

--ಶ್ರೀ

Thursday, October 9, 2008

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ ಮೈಸೂರು ಮತ್ತು ಹಿಮವದ್ ಗೋಪಾಲನನ್ನು ನೋಡಲು ಸರಿ ಸಮಯ ಎಂದು ಲೆಕ್ಕ ಹಾಕಿದ ನಾವು, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿದೆವು.

ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಹಿಂದಿನ ದಿನವೇ ಮೈಸೂರಿನಲ್ಲಿ ಬಿಡಾರ ಹೂಡಿ, ಬೆಳಗ್ಗೆ ಬೇಗ ಏಳುತ್ತಲೆ, ನಾವು ಬಾಡಿಗೆಗೆ ಪಡೆದ ಸುಮೋದಲ್ಲಿ ಸುಮಾರು ೬.೨೦ಕ್ಕೆ ಹೊರಟೆವು. ಈ ಹಿಮವದ್-ಗೋಪಾಲಸ್ವಾಮಿ ಬೆಟ್ಟ, ಮೈಸೂರಿನಿಂದ ಗುಂಡ್ಲುಪೇಟೆಯ ಬಳಿ ಬಂಡೀಪುರ(ಊಟಿ) ಮಾರ್ಗದಲ್ಲಿ ಇದೆ. ಗೋಪಾಲಸ್ವಾಮಿ ಬೆಟ್ಟವನ್ನು ತಲುಪಲು, ಗುಂಡ್ಲುಪೇಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಹಂಗಳ ಎಂಬ ಸಣ್ಣ ಊರಿನ ಬಳಿ ಬಲಕ್ಕೆ ತಿರುಗಿ, ಸುಮಾರು ೧೧ ಕಿ.ಮೀ ದೂರ ಕ್ರಮಿಸಬೇಕು. ಗುಂಡ್ಲುಪೇಟೆಯ ನಂತರದ ರಸ್ತೆ ಸುಮಾರಾಗಿದ್ದು ನಮ್ಮ ಪ್ರಯಾಣದ ವೇಗ ಕಡಿಮೆಯಾಗಿತ್ತು. ಹಂಗಳದಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ದಾರಿ ಅತ್ಯಂತ ರಮ್ಯವಾಗಿದ್ದು, ಪ್ರಕೃತಿಯ ಮಾತೆಯ ಸೌಂದರ್ಯಕ್ಕೆ ನಮ್ಮ ಮನ ಸೋತಿತು. ಗೋಪಾಲಸ್ವಾಮಿ ಬೆಟ್ಟ ಪ್ರದೇಶ ಬಂಡೀಪುರ ಅಭಯಾರಣ್ಯಕ್ಕೆ ಸೇರಿರುವುದರಿಂದ, ಬೆಳಗ್ಗೆ ೭.೩೦ಕ್ಕೆ ಮುಂಚೆ, ಈ ಪ್ರದೇಶವನ್ನು ಪ್ರವೇಶಿಸುವ ಅನುಮತಿ ಇಲ್ಲ ಎಂದು ನಮಗೆ ಮೊದಲೇ ತಿಳಿಸಲಾಗಿತ್ತು. ಮುಂಜಾನೆ ಹಾಗೂ ರಾತ್ರಿಯ ಹೊತ್ತಲ್ಲಿ ಆನೆ, ಜಿಂಕೆ, ಹುಲಿ ಮುಂತಾದ ಕಾಡು ಪ್ರಾಣಿಗಳು ಈ ಜಾಗದಲ್ಲಿ ಓಡಾಡುವುದರಿಂದ ಜನರನ್ನು ಬಿಡುವುದಿಲ್ಲ ಎಂದು ನಮಗೆ ಬಲ್ಲವರು ಮುಂಚೆಯೇ ತಿಳಿಸಿದ್ದರು. ಹಂಗಳದಿಂದ ಮುಂದಕ್ಕೆ, ಈ ಸುರಕ್ಷಿತ ವನ್ಯ ಪ್ರದೇಶವನ್ನು ಪ್ರವೇಶಿಸಲು ಅರಣ್ಯ ಇಲಾಖೆಯ ಚೆಕ್-ಪೋಸ್ಟ್ ನಲ್ಲಿ ಪ್ರವೇಶ ಶುಲ್ಕವನ್ನು ಕೊಟ್ಟು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.ದಾರಿಯಲ್ಲಿ ಹೋಗುವಾಗ ಮಂಜು ಕವಿದ ವಾತಾವರಣ, ತಂಪಾದ ಗಾಳಿ, ಸುತ್ತಲೂ ಹಸಿರ ಹೊದ್ದ, ಮೋಡ ಹೊದ್ದ, ಮಂಜ ಹೊದ್ದ ಬೆಟ್ಟಗಳು ತುಂಬಾ ಸುಂದರವಾಗಿ ಕಾಣುತ್ತಿದ್ದವು. ಸಣ್ಣನೆ ಸುರಿಯುತ್ತಿದ್ದ ಜಿಟಿ-ಜಿಟಿ ಮಳೆ, ವಾತಾವರಣವನ್ನು ಇನ್ನಷ್ಟು ಮೋಹಕಗೊಳಿಸಿತ್ತು.


ನಾವು ಗೋಪಾಲಸ್ವಾಮಿ ದೇಗುಲದ ಬಳಿ ತಲುಪಿದಾಗ ಸುಮಾರು ೮.೨೦. ಮಳೆಯನ್ನು ನಿರೀಕ್ಷಿಸದ ನಾವು, ಮಳೆಯಿಂದ ರಕ್ಷಣೆಗಾಗಿ ಏನನ್ನು ಕೊಂಡೊಯ್ದಿರಲಿಲ್ಲ, ದಾಪುಗಾಲು ಹಾಕಿ ದೇಗುಲದ ಮಂಟಪದಲ್ಲಿ ಮಳೆಯಿಂದ ರಕ್ಷಣೆ ಪಡೆದೆವು. ಸದ್ಯ, ನಮಗೆ ಹೆಚ್ಚು ತೊಂದರೆ ನೀಡದೆ ಮಳೆ ಸ್ವಲ್ಪ ಸಮಯದ ನಂತರ ತಗ್ಗಿತು.ಸುತ್ತಲೂ ಮಂಜು, ಮೋಡ ಮುಸುಕಿದ ಹವೆ. ದೇವಸ್ಥಾನದ ಸುತ್ತಲೂ ಬೆಟ್ಟಗಳು...ಪಕ್ಕದಲ್ಲೇ ಒಂದು ಪುಟ್ಟ ಕೊಳ...ಆಹ್! ಆ ನೀಲಿ-ಬಿಳಿ-ಹಸಿರು ಮಿಶ್ರಿತ ನಿಸರ್ಗದ ರಂಗಿನಾಟ ನಿಜಕ್ಕೂ ಅದ್ಭುತವೇ! ಮಂಜಿನ ಭರಾಟೆ ಎಷ್ಟಿತ್ತೆಂದರೆ, ನಮಗೆ ೩೦ ಅಡಿ ದೂರದಲ್ಲಿರುವುದೂ ಕಾಣುತ್ತಿರಲಿಲ್ಲ! ಹೀಗೆ ನೋಡು-ನೋಡುತ್ತಲೇ ಮಂಜು ಮಾಯ! ಇದೇ ರೀತಿ ಮಂಜಿನ ಕಣ್ಣ-ಮುಚ್ಚಾಲೆ ಆಟ ನಡೆದಿತ್ತು ನಮ್ಮ ಮುಂದೆ. ನಾವು ತಲುಪಿದಾಗ ದೇವಸ್ಥಾನದ ಬಾಗಿಲನ್ನು ಇನ್ನೂ ತೆರೆದಿರಲಿಲ್ಲ. ಹಾಗೇ ಸುಮ್ಮನೆ, ಪ್ರಕೃತಿಯನ್ನು ಸವಿದು ಬರೋಣವೆಂದು ನಾವು ಹೊರೆಟೆವು.




ದೇವಸ್ಥಾನದ ಹಿಂದೆ, ಚಾರಣಿಗರಿಗಾಗಿ ಹಲವಾರು ಕಾಲುದಾರಿಗಳಿವೆ. ಅವುಗಳಲ್ಲಿ ಒಂದು ಜಾಡನ್ನು ಹಿಡಿದು ಹೊರೆಟೆವು. ಸ್ವಲ್ಪ ಸಮಯದ ನಂತರ, ಮಂಜು, ಮೋಡ ಸರಿದಾಗಲೇ ನಮಗೆ ತಿಳಿದಿದ್ದು, ಅಲ್ಲಿ ಬೆಟ್ಟಗಳ ಸಾಲಿನ ಹಲವಾರು ನೆರಿಗೆಗಳಿವೆ ಎಂದು! ಹೀಗೆ, ಮೆಲ್ಲನೆ ಹುಲ್ಲ ಹಾಸಿನ ಮೇಲೆ ನೋಡುತ್ತ ಪ್ರಕೃತಿಯನ್ನು ಸವಿಯುತ್ತಾ ನಡೆಯುತ್ತಿರುವಾಗ ನಮಗೆ ಕಂಡದ್ದು ನಂಬಲಾಗಲಿಲ್ಲ! ಪಕ್ಕದ ಬೆಟ್ಟದಲ್ಲಿ, ಕಪ್ಪನೆ ಕರಿ ಗುಡ್ಡೆಗಳು ಚಲಿಸಿದಂತಿತ್ತು...ನಾವು ಸರಿಯಾಗಿ ಗಮನಿಸಿದಾಗ ತಿಳಿದಿದ್ದು, ಅದು ಒಂದು ಆನೆಯ ಹಿಂಡೆಂದು! ಇದನ್ನು ನೋಡಿದ ನಾವು, ಆನೆಯನ್ನು ಹಿಂದೆಂದೂ ಕಾಣದ ಪುಟ್ಟ ಮಕ್ಕಳಂತೆ ಕುಣಿದಾಡಿದೆವು! ಹೀಗೆ ಬೆಟ್ಟಗಳ ನಡುವೆ ನಡೆಯುತ್ತಾ, ದಾರಿಯಲ್ಲಿ ಪಾಳು ಬಿದ್ದ ಕೋಟೆಯಂತಿರುವ ಸಣ್ಣ ಗೋಡೆಗಳನ್ನೂ ಕಂಡೆವು. ನಾವು ಮೈಸೂರಿಗೆ ಬೇಗನೆ ವಾಪಸ್ ಹೋಗಬೇಕಾದ್ದರಿಂದ, ಹೆಚ್ಚು ದೂರ ಕ್ರಮಿಸದೇ ದೇಗುಲದ ಕಡೆಗೆ ನಡೆದೆವು. ನಮಗಿಂತ ತುಸು ಹೆಚ್ಚು ದೂರ ಬೆಟ್ಟಗಳ ಹಾದಿಯಲ್ಲಿ ಹೋಗಿದ್ದ ನನ್ನ ಅತ್ತೆಯ ಮಗ, ತಾನು ಎರಡು ಜಿಂಕೆಗಳನ್ನೂ ಕಂಡನೆಂದು ನಮಗೆ ತಿಳಿಸಿದನು. ಈ ಭಾಗ್ಯ ನಮಗೆ ದೊರಕದಾಯಿತಲ್ಲ ಎಂಬ ಪೇಚು ಮಿಕ್ಕವರಿಗೆ.







ವಾಪಸ್ ಬಂದಾಗ ವೇಣುಗೋಪಾಲನ ದರ್ಶನಕ್ಕಾಗಿ ದೇವಸ್ಥಾನದ ಬಾಗಿಲು ತೆರೆದಿತ್ತು. ಈ ದೇವಸ್ಥಾನದ ಆವರಣವು ಹೆಚ್ಚು ದೊಡ್ಡದೇನಿಲ್ಲ.
ಇಲ್ಲಿ ವೇಣುಗೋಪಾಲನ ಏಕ ಶಿಲಾಶಿಲ್ಪವಿದೆ. ಈ ಏಕ ಶಿಲಾಶಿಲ್ಪದಲ್ಲಿ, ಕೃಷ್ಣ ತ್ರಿಭಂಗಿಯಲ್ಲಿ ನಿಂತಿದ್ದು, ಸುರಹೊನ್ನೆ ವೃಕ್ಷದ ಕೆಳಗೆ ವೇಣು ವಾದವನ್ನು ಮಾಡುತ್ತಿರುವನು.ಕೃಷ್ಣನ ಸುತ್ತ ಗೋವುಗಳು, ರುಕ್ಮಿಣಿ, ಸತ್ಯಭಾಮ, ಗೋಪಿಕೆಯರು ಹಾಗೂ ಕೃಷ್ಣನ ಗೆಳೆಯ ಮಕರಂದನ್ನು ಕೆತ್ತಲಾಗಿದೆ. ಈ ವೇಣುಗೋಪಾಲ ಮೂರ್ತಿಯ ವಿಗ್ರಹವು ಮನಮೋಹಕವಾಗಿದೆ.ವೇಣುಗೋಪಾಲ ಮೂರ್ತಿಯ ಶಿರದ ಮೇಲೆ ಹಾಗೂ ದೇವಸ್ಥಾನದ ಗರ್ಭಗುಡಿಯ ದ್ವಾರದ ಮೇಲೆ ಸದಾ ಹಿಮವಿರುವುದರಿಂದ, ಈ ಗೋಪಾಲನನ್ನು, ’ಹಿಮವದ್-ಗೋಪಾಲಸ್ವಾಮಿ’ ಎಂದು ಕರೆಯುವರು.
ಇಲ್ಲಿ ಭೇಟಿ ಮಾಡುವವರು, ಗರ್ಭಗುಡಿಯ ದ್ವಾರದ ಮೇಲಿನ ಹಿಮವನ್ನು ಮುಟ್ಟಿ ಅನುಭವಿಸಬಹುದು.

ದೇವಸ್ಥಾನದ ಅರ್ಚಕರು ಈ ದೇಗುಲದ ಐತಿಹ್ಯವನ್ನು ಹೀಗೆ ತಿಳಿಸಿದರು:
"ಸುಮಾರು ಕ್ರಿ.ಶ.೧೨೫೦-೧೩೦೦ ಆಸುಪಾಸಿನಲ್ಲಿ, ಈ ಪ್ರದೇಶವನ್ನು ಮಾಧವ ಢಣನಾಯಕ (ದಂಡನಾಯಕ) ಎಂಬ ಹೊಯ್ಸಳರ ಪಾಳೆಗಾರನೊಬ್ಬ ಆಳುತ್ತಿದ್ದನು. ಈ ಕೃಷ್ಣ ಭಕ್ತನಿಗೆ ಮಕ್ಕಳಿರಲಿಲ್ಲವಾಗಿ ದುಃಖತಪ್ತನಾಗಿದ್ದನು. ಒಮ್ಮೆ ಶ್ರೀಕೃಷ್ಣ ಪರಮಾತ್ಮನು ಕನಸಲ್ಲಿ ಬಂದು, ನೀನು ದುಷ್ಟತನವನ್ನು ತ್ಯಜಿಸಿ, ನನ್ನನ್ನು ಭಜಿಸಿದರೆ, ನಿನಗೆ ಸಂತಾನ ಪ್ರಾಪ್ತಿಯಾಗುವುದೆಂದು ತಿಳಿಸಿದನು. ಕೃಷ್ಣನನ್ನು ಭಕ್ತಿಯಿಂದ ಪೂಜಿಸಿದ ಇವನಿಗೆ ಗಂಡು ಸಂತಾನ ಪ್ರಾಪ್ತಿಯಾಗಲು, ಇಲ್ಲಿ ದೇವಸ್ಥಾನವನ್ನು ಕಟ್ಟಿದನು. ಈ ಪಾಳೆಗಾರನ ಮಗ, ಪೆರುಮಾಳ್ ಢಣನಾಯಕ(ದಂಡನಾಯಕ)ನು, ತಂದೆಯ ಹರಕೆಯಂತೆ ೪-ಸುತ್ತಿನ ಕೋಟೆಯನ್ನು ದೇಗುಲದ ಸುತ್ತ ಕಟ್ಟಿದನು. ಈ ದೇಗುಲದ ಸುತ್ತ ೮ ಕೊಳಗಳಿದ್ದು ಇವಕ್ಕೆ ಹಂಸತೀರ್ಥ, ಶಂಖತೀರ್ಥ, ಚಕ್ರತೀರ್ಥ, ಗಧಾತೀರ್ಥ, ಪದ್ಮತೀರ್ಥ, ಶಾಙ್ಗತೀರ್ಥ, ವನಮೂಲಕ ತೀರ್ಥ ಎಂಬ ಹೆಸರುಗಳಿವೆ. ಇಲ್ಲಿನ ಹಂಸತೀರ್ಥದಲ್ಲಿ ಮುಳುಗಿದ ಕಾಗೆಗಳು, ಹಂಸಗಳಾಗಿ ಹೊರಬಂದುದರಿಂದ ಈ ಜಾಗದಲ್ಲಿ ಕಾಗೆಗಳು ಕಾಣುವುದಿಲ್ಲ."



ಈ ವೇಣುಗೋಪಾಲ ದೇವಸ್ಥಾನದಲ್ಲಿ ಸಂತಾನ ಭಾಗ್ಯವಿಲ್ಲದವರು, ಹರಕೆ ಮಾಡಿಕೊಳ್ಳುವುದು ವಾಡಿಕೆ. ಆದ್ದರಿಂದ ಈ ದೇವರಿಗೆ, ಸಂತಾನ ಗೋಪಾಲ ಕೃಷ್ಣ ಎಂದೂ ಕರೆಯುವರು. ದೇವರ ಪೂಜೆಯಾದ ಮೇಲೆ, ನಮ್ಮಗಳ ಹೊಟ್ಟೆ-ಪೂಜೆಯನ್ನು ನಡೆಸಿ, ಮುಂದೆ, ’ಹುಲುಗಿನ ಮುರುಡಿ’ ಎಂಬ ಸ್ಥಳಕ್ಕೆ ಭೇಟಿ ನೀಡಲು ಹೊರಟೆವು.
ಈ ಸ್ಥಳವನ್ನು ತಲುಪಲು, ಗುಂಡ್ಲುಪೇಟೆಯಿಂದ ತೆರಕಣಾಂಬಿಗೆ ಹೋಗಬೇಕು; ಇದು ಸುಮಾರು ೮ ಕಿ.ಮೀ ದೂರದಲ್ಲಿದೆ. ತೆರಕಣಾಂಬಿಯಿಂದ ಬಲಕ್ಕೆ ತಿರುಗಿ, ಸುಮಾರು ೧೨ ಕಿ.ಮೀ, ದೂರ ಕ್ರಮಿಸಿದರೆ ’ಹುಲುಗಿನ ಮುರುಡಿ’ ಎಂಬ ಸ್ಥಳವಿದೆ. ಇಲ್ಲಿ ಬೆಟ್ಟದ ಮೇಲೆ, ವೆಂಕಟರಮಣ ಸ್ವಾಮಿಯ ದೇವಸ್ಥಾನವಿದ್ದು, ಇಲ್ಲಿ ರಾಮ-ಲಕ್ಷ್ಮಣರು ಬಂದಿದ್ದರೆಂದು ಪ್ರತೀತಿ. ರಾಮ-ಲಕ್ಷ್ಮಣರು ಇಲ್ಲಿಗೆ ಬಂದಾಗ ಬಾಣದಿಂದ ನೀರನ್ನು ತರಿಸಿದ್ದಾಗಿ ಹೇಳುವರು. ಈ ಸ್ಠಳದಿಂದ ರಾಮ-ಲಕ್ಷ್ಮಣರು ಹೊರಡುವಾಗ, ಬಿಲ್ಲನ್ನು ಇಲ್ಲೇ ಮರೆತು ಹೋದರೆಂದು ಅರ್ಚಕರು ಒಂದು ಬಿಲ್ಲನ್ನು ತೋರಿದರು. ಇಲ್ಲಿನ ಬಿಲ್ಲು ರಾಮ-ಲಕ್ಷ್ಮಣರ ಕಾಲದ್ದೇ, ಎಂಬುದನ್ನು ಇತಿಹಾಸಕಾರರೇ ಹೇಳಬೇಕು. ಈ ದೇಗುಲದ ವೆಂಕಟರಮಣನ ದರ್ಶನವನ್ನು ಪಡೆದು ನಾವು ಮೈಸೂರಿಗೆ ಹಿಂತಿರುಗಿದೆವು.

--ಶ್ರೀ

ಕೊ.ಕೊ: ಹಿಮವದ್-ಗೋಪಾಲಸ್ವಾಮಿ ಬೆಟ್ಟದಲ್ಲಿ ಹಾಗೂ ಹುಲುಗಿನ ಮುರುಡಿಯಲ್ಲಿ, ಯಾವುದೇ ರೀತಿಯ ಊಟ/ತಿಂಡಿಯ ವ್ಯವಸ್ಥೆ ಇಲ್ಲ. ನಾವುಗಳು ಬುತ್ತಿಯನ್ನು ಕಟ್ಟಿಕೊಂಡು ಹೋದದ್ದರಿಂದ ತೊಂದರೆಯಾಗಲಿಲ್ಲ. ಹತ್ತಿರದ ಗುಂಡ್ಲುಪೇಟೆಯಲ್ಲಿ ಸುಮಾರಾದ ಹೋಟೆಲ್’ಗಳು ಇವೆ.

Thursday, October 2, 2008

ಮೆಟ್ಟಿಲ ಮಾಡಿ, ಪುಟ್ಟ ಬೊಂಬೆಗಳಿಟ್ಟು - ಆರತಿ ಹಾಡು

ಈ ಬಾರಿಯ ನವರಾತ್ರಿ ಹಬ್ಬಕ್ಕೊಂದು ಆರತಿಯ ಹಾಡಿನ ಪ್ರಯತ್ನ...


ಮೆಟ್ಟಿಲ ಮಾಡಿ
ಪುಟ್ಟ-ಬೊಂಬೆಗಳಿಟ್ಟು
ಬೆಳಗಿರರಾರತಿಯ ನಾರಿಯರೇ...

ಕಲಶವನು ಮಾಡಿ
ತಿಲಕವನು ಇಟ್ಟು
ಬೆಳಗಿರರಾರತಿಯ ನಾರಿಯರೇ...

ಹೊತ್ತಿಗೆಯನಿಟ್ಟು
ಬತ್ತಿ-ದೀಪವನಿಟ್ಟು
ಬೆಳಗಿರಾರತಿಯ ನಾರಿಯರೇ...

ಆಯುಧವನಿಟ್ಟು
ಪಾಯಸವ ಕೊಟ್ಟು
ಬೆಳಗಿರಾರತಿಯ ನಾರಿಯರೇ...

ಅಕ್ಕ-ಪಕ್ಕದ ಮನೆಯ
ಚಿಕ್ಕ ಮಕ್ಕಳ ಕರೆದು
ಬೆಳಗಿರಾರತಿಯ ನಾರಿಯರೇ...

ಮಕ್ಕಳಾ ಬಾಯಿಗೆ
ಚಿಕ್ಕ-ಚಕ್ಕುಲಿಯಿಟ್ಟು
ಬೆಳಗಿರಾರತಿಯ ನಾರಿಯರೇ...

ಕಹಿ ನೆನಪುಗಳ ಸರಿಸಿ
ಸಿಹಿ ಹೂರಣವಿಟ್ಟು
ಬೆಳಗಿರಾರತಿಯ ನಾರಿಯರೇ...

ಶಕ್ತಿ ದೇವತೆಯರನು
ಭಕ್ತಿಯಿಂದಲಿ ಭಜಿಸಿ
ಬೆಳಗಿರಾರತಿಯ ನಾರಿಯರೇ...

ನವ ರಾತ್ರಿ ಹಬ್ಬಕ್ಕೆ
ನವ ದೇವಿಯರ ನೆನೆದು
ಬೆಳಗಿರಾರತಿಯ ನಾರಿಯರೇ...