Thursday, October 9, 2008

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ ಮೈಸೂರು ಮತ್ತು ಹಿಮವದ್ ಗೋಪಾಲನನ್ನು ನೋಡಲು ಸರಿ ಸಮಯ ಎಂದು ಲೆಕ್ಕ ಹಾಕಿದ ನಾವು, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿದೆವು.

ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಹಿಂದಿನ ದಿನವೇ ಮೈಸೂರಿನಲ್ಲಿ ಬಿಡಾರ ಹೂಡಿ, ಬೆಳಗ್ಗೆ ಬೇಗ ಏಳುತ್ತಲೆ, ನಾವು ಬಾಡಿಗೆಗೆ ಪಡೆದ ಸುಮೋದಲ್ಲಿ ಸುಮಾರು ೬.೨೦ಕ್ಕೆ ಹೊರಟೆವು. ಈ ಹಿಮವದ್-ಗೋಪಾಲಸ್ವಾಮಿ ಬೆಟ್ಟ, ಮೈಸೂರಿನಿಂದ ಗುಂಡ್ಲುಪೇಟೆಯ ಬಳಿ ಬಂಡೀಪುರ(ಊಟಿ) ಮಾರ್ಗದಲ್ಲಿ ಇದೆ. ಗೋಪಾಲಸ್ವಾಮಿ ಬೆಟ್ಟವನ್ನು ತಲುಪಲು, ಗುಂಡ್ಲುಪೇಟೆಯಿಂದ ಸುಮಾರು ೮ ಕಿ.ಮೀ. ದೂರದಲ್ಲಿರುವ ಹಂಗಳ ಎಂಬ ಸಣ್ಣ ಊರಿನ ಬಳಿ ಬಲಕ್ಕೆ ತಿರುಗಿ, ಸುಮಾರು ೧೧ ಕಿ.ಮೀ ದೂರ ಕ್ರಮಿಸಬೇಕು. ಗುಂಡ್ಲುಪೇಟೆಯ ನಂತರದ ರಸ್ತೆ ಸುಮಾರಾಗಿದ್ದು ನಮ್ಮ ಪ್ರಯಾಣದ ವೇಗ ಕಡಿಮೆಯಾಗಿತ್ತು. ಹಂಗಳದಿಂದ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ದಾರಿ ಅತ್ಯಂತ ರಮ್ಯವಾಗಿದ್ದು, ಪ್ರಕೃತಿಯ ಮಾತೆಯ ಸೌಂದರ್ಯಕ್ಕೆ ನಮ್ಮ ಮನ ಸೋತಿತು. ಗೋಪಾಲಸ್ವಾಮಿ ಬೆಟ್ಟ ಪ್ರದೇಶ ಬಂಡೀಪುರ ಅಭಯಾರಣ್ಯಕ್ಕೆ ಸೇರಿರುವುದರಿಂದ, ಬೆಳಗ್ಗೆ ೭.೩೦ಕ್ಕೆ ಮುಂಚೆ, ಈ ಪ್ರದೇಶವನ್ನು ಪ್ರವೇಶಿಸುವ ಅನುಮತಿ ಇಲ್ಲ ಎಂದು ನಮಗೆ ಮೊದಲೇ ತಿಳಿಸಲಾಗಿತ್ತು. ಮುಂಜಾನೆ ಹಾಗೂ ರಾತ್ರಿಯ ಹೊತ್ತಲ್ಲಿ ಆನೆ, ಜಿಂಕೆ, ಹುಲಿ ಮುಂತಾದ ಕಾಡು ಪ್ರಾಣಿಗಳು ಈ ಜಾಗದಲ್ಲಿ ಓಡಾಡುವುದರಿಂದ ಜನರನ್ನು ಬಿಡುವುದಿಲ್ಲ ಎಂದು ನಮಗೆ ಬಲ್ಲವರು ಮುಂಚೆಯೇ ತಿಳಿಸಿದ್ದರು. ಹಂಗಳದಿಂದ ಮುಂದಕ್ಕೆ, ಈ ಸುರಕ್ಷಿತ ವನ್ಯ ಪ್ರದೇಶವನ್ನು ಪ್ರವೇಶಿಸಲು ಅರಣ್ಯ ಇಲಾಖೆಯ ಚೆಕ್-ಪೋಸ್ಟ್ ನಲ್ಲಿ ಪ್ರವೇಶ ಶುಲ್ಕವನ್ನು ಕೊಟ್ಟು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು.ದಾರಿಯಲ್ಲಿ ಹೋಗುವಾಗ ಮಂಜು ಕವಿದ ವಾತಾವರಣ, ತಂಪಾದ ಗಾಳಿ, ಸುತ್ತಲೂ ಹಸಿರ ಹೊದ್ದ, ಮೋಡ ಹೊದ್ದ, ಮಂಜ ಹೊದ್ದ ಬೆಟ್ಟಗಳು ತುಂಬಾ ಸುಂದರವಾಗಿ ಕಾಣುತ್ತಿದ್ದವು. ಸಣ್ಣನೆ ಸುರಿಯುತ್ತಿದ್ದ ಜಿಟಿ-ಜಿಟಿ ಮಳೆ, ವಾತಾವರಣವನ್ನು ಇನ್ನಷ್ಟು ಮೋಹಕಗೊಳಿಸಿತ್ತು.


ನಾವು ಗೋಪಾಲಸ್ವಾಮಿ ದೇಗುಲದ ಬಳಿ ತಲುಪಿದಾಗ ಸುಮಾರು ೮.೨೦. ಮಳೆಯನ್ನು ನಿರೀಕ್ಷಿಸದ ನಾವು, ಮಳೆಯಿಂದ ರಕ್ಷಣೆಗಾಗಿ ಏನನ್ನು ಕೊಂಡೊಯ್ದಿರಲಿಲ್ಲ, ದಾಪುಗಾಲು ಹಾಕಿ ದೇಗುಲದ ಮಂಟಪದಲ್ಲಿ ಮಳೆಯಿಂದ ರಕ್ಷಣೆ ಪಡೆದೆವು. ಸದ್ಯ, ನಮಗೆ ಹೆಚ್ಚು ತೊಂದರೆ ನೀಡದೆ ಮಳೆ ಸ್ವಲ್ಪ ಸಮಯದ ನಂತರ ತಗ್ಗಿತು.ಸುತ್ತಲೂ ಮಂಜು, ಮೋಡ ಮುಸುಕಿದ ಹವೆ. ದೇವಸ್ಥಾನದ ಸುತ್ತಲೂ ಬೆಟ್ಟಗಳು...ಪಕ್ಕದಲ್ಲೇ ಒಂದು ಪುಟ್ಟ ಕೊಳ...ಆಹ್! ಆ ನೀಲಿ-ಬಿಳಿ-ಹಸಿರು ಮಿಶ್ರಿತ ನಿಸರ್ಗದ ರಂಗಿನಾಟ ನಿಜಕ್ಕೂ ಅದ್ಭುತವೇ! ಮಂಜಿನ ಭರಾಟೆ ಎಷ್ಟಿತ್ತೆಂದರೆ, ನಮಗೆ ೩೦ ಅಡಿ ದೂರದಲ್ಲಿರುವುದೂ ಕಾಣುತ್ತಿರಲಿಲ್ಲ! ಹೀಗೆ ನೋಡು-ನೋಡುತ್ತಲೇ ಮಂಜು ಮಾಯ! ಇದೇ ರೀತಿ ಮಂಜಿನ ಕಣ್ಣ-ಮುಚ್ಚಾಲೆ ಆಟ ನಡೆದಿತ್ತು ನಮ್ಮ ಮುಂದೆ. ನಾವು ತಲುಪಿದಾಗ ದೇವಸ್ಥಾನದ ಬಾಗಿಲನ್ನು ಇನ್ನೂ ತೆರೆದಿರಲಿಲ್ಲ. ಹಾಗೇ ಸುಮ್ಮನೆ, ಪ್ರಕೃತಿಯನ್ನು ಸವಿದು ಬರೋಣವೆಂದು ನಾವು ಹೊರೆಟೆವು.




ದೇವಸ್ಥಾನದ ಹಿಂದೆ, ಚಾರಣಿಗರಿಗಾಗಿ ಹಲವಾರು ಕಾಲುದಾರಿಗಳಿವೆ. ಅವುಗಳಲ್ಲಿ ಒಂದು ಜಾಡನ್ನು ಹಿಡಿದು ಹೊರೆಟೆವು. ಸ್ವಲ್ಪ ಸಮಯದ ನಂತರ, ಮಂಜು, ಮೋಡ ಸರಿದಾಗಲೇ ನಮಗೆ ತಿಳಿದಿದ್ದು, ಅಲ್ಲಿ ಬೆಟ್ಟಗಳ ಸಾಲಿನ ಹಲವಾರು ನೆರಿಗೆಗಳಿವೆ ಎಂದು! ಹೀಗೆ, ಮೆಲ್ಲನೆ ಹುಲ್ಲ ಹಾಸಿನ ಮೇಲೆ ನೋಡುತ್ತ ಪ್ರಕೃತಿಯನ್ನು ಸವಿಯುತ್ತಾ ನಡೆಯುತ್ತಿರುವಾಗ ನಮಗೆ ಕಂಡದ್ದು ನಂಬಲಾಗಲಿಲ್ಲ! ಪಕ್ಕದ ಬೆಟ್ಟದಲ್ಲಿ, ಕಪ್ಪನೆ ಕರಿ ಗುಡ್ಡೆಗಳು ಚಲಿಸಿದಂತಿತ್ತು...ನಾವು ಸರಿಯಾಗಿ ಗಮನಿಸಿದಾಗ ತಿಳಿದಿದ್ದು, ಅದು ಒಂದು ಆನೆಯ ಹಿಂಡೆಂದು! ಇದನ್ನು ನೋಡಿದ ನಾವು, ಆನೆಯನ್ನು ಹಿಂದೆಂದೂ ಕಾಣದ ಪುಟ್ಟ ಮಕ್ಕಳಂತೆ ಕುಣಿದಾಡಿದೆವು! ಹೀಗೆ ಬೆಟ್ಟಗಳ ನಡುವೆ ನಡೆಯುತ್ತಾ, ದಾರಿಯಲ್ಲಿ ಪಾಳು ಬಿದ್ದ ಕೋಟೆಯಂತಿರುವ ಸಣ್ಣ ಗೋಡೆಗಳನ್ನೂ ಕಂಡೆವು. ನಾವು ಮೈಸೂರಿಗೆ ಬೇಗನೆ ವಾಪಸ್ ಹೋಗಬೇಕಾದ್ದರಿಂದ, ಹೆಚ್ಚು ದೂರ ಕ್ರಮಿಸದೇ ದೇಗುಲದ ಕಡೆಗೆ ನಡೆದೆವು. ನಮಗಿಂತ ತುಸು ಹೆಚ್ಚು ದೂರ ಬೆಟ್ಟಗಳ ಹಾದಿಯಲ್ಲಿ ಹೋಗಿದ್ದ ನನ್ನ ಅತ್ತೆಯ ಮಗ, ತಾನು ಎರಡು ಜಿಂಕೆಗಳನ್ನೂ ಕಂಡನೆಂದು ನಮಗೆ ತಿಳಿಸಿದನು. ಈ ಭಾಗ್ಯ ನಮಗೆ ದೊರಕದಾಯಿತಲ್ಲ ಎಂಬ ಪೇಚು ಮಿಕ್ಕವರಿಗೆ.







ವಾಪಸ್ ಬಂದಾಗ ವೇಣುಗೋಪಾಲನ ದರ್ಶನಕ್ಕಾಗಿ ದೇವಸ್ಥಾನದ ಬಾಗಿಲು ತೆರೆದಿತ್ತು. ಈ ದೇವಸ್ಥಾನದ ಆವರಣವು ಹೆಚ್ಚು ದೊಡ್ಡದೇನಿಲ್ಲ.
ಇಲ್ಲಿ ವೇಣುಗೋಪಾಲನ ಏಕ ಶಿಲಾಶಿಲ್ಪವಿದೆ. ಈ ಏಕ ಶಿಲಾಶಿಲ್ಪದಲ್ಲಿ, ಕೃಷ್ಣ ತ್ರಿಭಂಗಿಯಲ್ಲಿ ನಿಂತಿದ್ದು, ಸುರಹೊನ್ನೆ ವೃಕ್ಷದ ಕೆಳಗೆ ವೇಣು ವಾದವನ್ನು ಮಾಡುತ್ತಿರುವನು.ಕೃಷ್ಣನ ಸುತ್ತ ಗೋವುಗಳು, ರುಕ್ಮಿಣಿ, ಸತ್ಯಭಾಮ, ಗೋಪಿಕೆಯರು ಹಾಗೂ ಕೃಷ್ಣನ ಗೆಳೆಯ ಮಕರಂದನ್ನು ಕೆತ್ತಲಾಗಿದೆ. ಈ ವೇಣುಗೋಪಾಲ ಮೂರ್ತಿಯ ವಿಗ್ರಹವು ಮನಮೋಹಕವಾಗಿದೆ.ವೇಣುಗೋಪಾಲ ಮೂರ್ತಿಯ ಶಿರದ ಮೇಲೆ ಹಾಗೂ ದೇವಸ್ಥಾನದ ಗರ್ಭಗುಡಿಯ ದ್ವಾರದ ಮೇಲೆ ಸದಾ ಹಿಮವಿರುವುದರಿಂದ, ಈ ಗೋಪಾಲನನ್ನು, ’ಹಿಮವದ್-ಗೋಪಾಲಸ್ವಾಮಿ’ ಎಂದು ಕರೆಯುವರು.
ಇಲ್ಲಿ ಭೇಟಿ ಮಾಡುವವರು, ಗರ್ಭಗುಡಿಯ ದ್ವಾರದ ಮೇಲಿನ ಹಿಮವನ್ನು ಮುಟ್ಟಿ ಅನುಭವಿಸಬಹುದು.

ದೇವಸ್ಥಾನದ ಅರ್ಚಕರು ಈ ದೇಗುಲದ ಐತಿಹ್ಯವನ್ನು ಹೀಗೆ ತಿಳಿಸಿದರು:
"ಸುಮಾರು ಕ್ರಿ.ಶ.೧೨೫೦-೧೩೦೦ ಆಸುಪಾಸಿನಲ್ಲಿ, ಈ ಪ್ರದೇಶವನ್ನು ಮಾಧವ ಢಣನಾಯಕ (ದಂಡನಾಯಕ) ಎಂಬ ಹೊಯ್ಸಳರ ಪಾಳೆಗಾರನೊಬ್ಬ ಆಳುತ್ತಿದ್ದನು. ಈ ಕೃಷ್ಣ ಭಕ್ತನಿಗೆ ಮಕ್ಕಳಿರಲಿಲ್ಲವಾಗಿ ದುಃಖತಪ್ತನಾಗಿದ್ದನು. ಒಮ್ಮೆ ಶ್ರೀಕೃಷ್ಣ ಪರಮಾತ್ಮನು ಕನಸಲ್ಲಿ ಬಂದು, ನೀನು ದುಷ್ಟತನವನ್ನು ತ್ಯಜಿಸಿ, ನನ್ನನ್ನು ಭಜಿಸಿದರೆ, ನಿನಗೆ ಸಂತಾನ ಪ್ರಾಪ್ತಿಯಾಗುವುದೆಂದು ತಿಳಿಸಿದನು. ಕೃಷ್ಣನನ್ನು ಭಕ್ತಿಯಿಂದ ಪೂಜಿಸಿದ ಇವನಿಗೆ ಗಂಡು ಸಂತಾನ ಪ್ರಾಪ್ತಿಯಾಗಲು, ಇಲ್ಲಿ ದೇವಸ್ಥಾನವನ್ನು ಕಟ್ಟಿದನು. ಈ ಪಾಳೆಗಾರನ ಮಗ, ಪೆರುಮಾಳ್ ಢಣನಾಯಕ(ದಂಡನಾಯಕ)ನು, ತಂದೆಯ ಹರಕೆಯಂತೆ ೪-ಸುತ್ತಿನ ಕೋಟೆಯನ್ನು ದೇಗುಲದ ಸುತ್ತ ಕಟ್ಟಿದನು. ಈ ದೇಗುಲದ ಸುತ್ತ ೮ ಕೊಳಗಳಿದ್ದು ಇವಕ್ಕೆ ಹಂಸತೀರ್ಥ, ಶಂಖತೀರ್ಥ, ಚಕ್ರತೀರ್ಥ, ಗಧಾತೀರ್ಥ, ಪದ್ಮತೀರ್ಥ, ಶಾಙ್ಗತೀರ್ಥ, ವನಮೂಲಕ ತೀರ್ಥ ಎಂಬ ಹೆಸರುಗಳಿವೆ. ಇಲ್ಲಿನ ಹಂಸತೀರ್ಥದಲ್ಲಿ ಮುಳುಗಿದ ಕಾಗೆಗಳು, ಹಂಸಗಳಾಗಿ ಹೊರಬಂದುದರಿಂದ ಈ ಜಾಗದಲ್ಲಿ ಕಾಗೆಗಳು ಕಾಣುವುದಿಲ್ಲ."



ಈ ವೇಣುಗೋಪಾಲ ದೇವಸ್ಥಾನದಲ್ಲಿ ಸಂತಾನ ಭಾಗ್ಯವಿಲ್ಲದವರು, ಹರಕೆ ಮಾಡಿಕೊಳ್ಳುವುದು ವಾಡಿಕೆ. ಆದ್ದರಿಂದ ಈ ದೇವರಿಗೆ, ಸಂತಾನ ಗೋಪಾಲ ಕೃಷ್ಣ ಎಂದೂ ಕರೆಯುವರು. ದೇವರ ಪೂಜೆಯಾದ ಮೇಲೆ, ನಮ್ಮಗಳ ಹೊಟ್ಟೆ-ಪೂಜೆಯನ್ನು ನಡೆಸಿ, ಮುಂದೆ, ’ಹುಲುಗಿನ ಮುರುಡಿ’ ಎಂಬ ಸ್ಥಳಕ್ಕೆ ಭೇಟಿ ನೀಡಲು ಹೊರಟೆವು.
ಈ ಸ್ಥಳವನ್ನು ತಲುಪಲು, ಗುಂಡ್ಲುಪೇಟೆಯಿಂದ ತೆರಕಣಾಂಬಿಗೆ ಹೋಗಬೇಕು; ಇದು ಸುಮಾರು ೮ ಕಿ.ಮೀ ದೂರದಲ್ಲಿದೆ. ತೆರಕಣಾಂಬಿಯಿಂದ ಬಲಕ್ಕೆ ತಿರುಗಿ, ಸುಮಾರು ೧೨ ಕಿ.ಮೀ, ದೂರ ಕ್ರಮಿಸಿದರೆ ’ಹುಲುಗಿನ ಮುರುಡಿ’ ಎಂಬ ಸ್ಥಳವಿದೆ. ಇಲ್ಲಿ ಬೆಟ್ಟದ ಮೇಲೆ, ವೆಂಕಟರಮಣ ಸ್ವಾಮಿಯ ದೇವಸ್ಥಾನವಿದ್ದು, ಇಲ್ಲಿ ರಾಮ-ಲಕ್ಷ್ಮಣರು ಬಂದಿದ್ದರೆಂದು ಪ್ರತೀತಿ. ರಾಮ-ಲಕ್ಷ್ಮಣರು ಇಲ್ಲಿಗೆ ಬಂದಾಗ ಬಾಣದಿಂದ ನೀರನ್ನು ತರಿಸಿದ್ದಾಗಿ ಹೇಳುವರು. ಈ ಸ್ಠಳದಿಂದ ರಾಮ-ಲಕ್ಷ್ಮಣರು ಹೊರಡುವಾಗ, ಬಿಲ್ಲನ್ನು ಇಲ್ಲೇ ಮರೆತು ಹೋದರೆಂದು ಅರ್ಚಕರು ಒಂದು ಬಿಲ್ಲನ್ನು ತೋರಿದರು. ಇಲ್ಲಿನ ಬಿಲ್ಲು ರಾಮ-ಲಕ್ಷ್ಮಣರ ಕಾಲದ್ದೇ, ಎಂಬುದನ್ನು ಇತಿಹಾಸಕಾರರೇ ಹೇಳಬೇಕು. ಈ ದೇಗುಲದ ವೆಂಕಟರಮಣನ ದರ್ಶನವನ್ನು ಪಡೆದು ನಾವು ಮೈಸೂರಿಗೆ ಹಿಂತಿರುಗಿದೆವು.

--ಶ್ರೀ

ಕೊ.ಕೊ: ಹಿಮವದ್-ಗೋಪಾಲಸ್ವಾಮಿ ಬೆಟ್ಟದಲ್ಲಿ ಹಾಗೂ ಹುಲುಗಿನ ಮುರುಡಿಯಲ್ಲಿ, ಯಾವುದೇ ರೀತಿಯ ಊಟ/ತಿಂಡಿಯ ವ್ಯವಸ್ಥೆ ಇಲ್ಲ. ನಾವುಗಳು ಬುತ್ತಿಯನ್ನು ಕಟ್ಟಿಕೊಂಡು ಹೋದದ್ದರಿಂದ ತೊಂದರೆಯಾಗಲಿಲ್ಲ. ಹತ್ತಿರದ ಗುಂಡ್ಲುಪೇಟೆಯಲ್ಲಿ ಸುಮಾರಾದ ಹೋಟೆಲ್’ಗಳು ಇವೆ.

No comments: