Tuesday, September 30, 2008

ಮರಳಿ ಬಾ ಶಾಲೆಗೆ...ಬೀದಿ ನಾಟಕ ಪ್ರಯೋಗ

ನಮ್ಮೂರಲ್ಲಿ (ಅಡವಿ ನಾಗೇನಹಳ್ಳಿ, ಮಧುಗಿರಿ ತಾಲ್ಲೂಕು) ನಾವು ಜನ ಜಾಗೃತಿಗಾಗಿ ೭-ಸೆಪ್ಟೆಂಬರ್-೦೮ ರಂದು ಒಂದು ಸಣ್ಣ ಬೀದಿ ನಾಟಕವನ್ನು ಮಾಡಿದೆವು.
ಈ ನಾಟಕದಲ್ಲಿ, ಹಳ್ಳಿಯ ಜನರಿಗೆ ವಿದ್ಯಾಭ್ಯಾಸದ ಮಹತ್ವ, ಸರ್ಕಾರ ಮಕ್ಕಳಿಗೆ ಕೊಡುತ್ತಿರುವ ಸವಲತ್ತು,
ನೀರಿನ ಬಳಕೆ, ಕೆರೆಗಳ ಉಳಿಕೆ ಮುಂತಾದ ವಿಷಯಗಳನ್ನು ತಿಳಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದೆವು.





ಇಡೀ ನಾಟಕವನ್ನು ನಮ್ಮ ಕುಟುಂಬದವರೇ ಬರೆದು, ನಡೆಸಿಕೊಟ್ಟದ್ದು ವಿಶೇಷವಾಗಿತ್ತು.
ಪಾತ್ರಧಾರಿಗಳಾಗಿ - ನಾನು, ನನ್ನ ಅಕ್ಕ - ರೋಹಿಣಿ, ನನ್ನ ಮಾವನ ಮಗ ಆನಂದ್, ನಮ್ಮ ಮಾವ ಕುಮಾರ್, ಕು.ಇಂದು ಮತ್ತು ಕು.ಸೌಮ್ಯ ಭಾಗವಹಿಸಿದ್ದೆವು.
(ಸೂ:
ನಾಟಕದಲ್ಲಿ ಎರಡು ಹಾಡುಗಳೂ ಒಳಗೊಂಡಿದ್ದು, ಇದರ ಚಿತ್ರಣ ಇಲ್ಲಿಲ್ಲ.
ನಾಟಕವನ್ನು ಬರೆದವರು ನನ್ನ ಮಾವಂದಿರ ಮನೆಯವರಾದ ಪುಷ್ಪಾ ಹಾಗೂ ಕುಮಾರ್.
ಈ ಹಾಡುಗಳಿಗೆ ರಾಗ ಸಂಯೋಜನೆಯನ್ನು ಹಾಕಿ ಕೊಟ್ಟವರು ವೆಂಕಟೇಶ್(ಮನು).
ವಿಡಿಯೋ ರೆಕಾರ್ಡಿಂಗ್ ಗುಣಮಟ್ಟ ಅಷ್ಟು ಚೆನ್ನಿಲ್ಲದಕ್ಕೆ ಕ್ಷಮೆಯಿರಲಿ.)

ಇದೇ ರೀತಿಯ ಬೀದಿನಾಟಕವನ್ನು ನಮ್ಮೂರ ಪಕ್ಕದ ಹಳ್ಳಿಯಾದ ತಿಪ್ಪಾಪುರದಲ್ಲೂ ನಡೆಸಿದೆವು.

ಈ ನಾಟಕವಲ್ಲದೆ, ಎರಡೂ ಹಳ್ಳಿಯ ಶಾಲೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿದೆವು.
ಹಾಗೂ ಪುಸ್ತಕಗಳು, ಆಟದ ಸಾಮಾನುಗಳು, ಬಿಸಿಯೂಟ ಕಾರ್ಯಕ್ರಮಕ್ಕೆ ಅನುವಾಗಲು ಒಂದು ಕುಕ್ಕರ್ ವಿತರಿಸಿದೆವು.

ಇದಲ್ಲದೆ, ತಿಪ್ಪಾಪುರ ಮತ್ತು ಅಡವಿ ನಾಗೇನಹಳ್ಳಿ ಮಕ್ಕಳ ನಡುವೆ ರಸಪ್ರಶ್ನೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದೆವು.
ಈ ರಸಪ್ರಶ್ನೆ ಕಾರ್ಯಕ್ರಮವು ಎರಡು ವಿಭಾಗಗಳಲ್ಲಿ ನಡೆಯಿತು.
ಮೊದಲ ವಿಭಾಗದಲ್ಲಿ ೪ ಮತ್ತು ೫ ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು
ಎರಡನೇ ವಿಭಾಗದಲ್ಲಿ ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದೆವು.
ಎರಡೂ ವಿಭಾಗಗಳಲ್ಲಿ ಅಡವಿ ನಾಗೇನಹಳ್ಳಿಯ ಮಕ್ಕಳು ಗೆಲುವನ್ನು ಸಾಧಿಸಿ ಬಹುಮಾನಗಳನ್ನು ಪಡೆದರು.

ಈ ಕಾರ್ಯಕ್ರಮ ಎಲ್.ಐ.ಸಿ ಮತ್ತು ಸಿ.ಒ.ಸಿ.ಬಿ. ಬ್ಯಾಂಕ್ ಸಹಕಾರದೊಂದಿಗೆ ನಡೆಯಿತು.

--ಶ್ರೀ

ಮತದ ಪಥ

ಮತದ
ಪಥ ಹಿಡಿಯಿರೆಂಬುದು
ಸಂತರ ತುಡಿತ
ಮತದ ಪಥ
ತಮದ ಪಥವೆಂಬುದು
ಬರೀ ಕುಹಕ...
ಮತದ ಪಥದಿ
ಇರಲು ಸತತ
ಗೆಲವು ಎಂದೂ ಖಚಿತ...

--ಶ್ರೀ

ನಿಂದಕರೆಂದಿಗೂ ಸಂತರೇ ಅಲ್ಲ

ನಿಂದಕರೆಂದಿಗೂ
ಸಂತರೇ ಅಲ್ಲ
ನಿಂದಕರಿಂದ
ಸಂತಸವಿಲ್ಲ
ನಿಂದಕರಾದ
"ಸಂತ"ರು ಇರಲು,
ಸಂತೆಯಲಿದ್ದವಗೆ*
ಚಂದವು† ಇಲ್ಲ...

--ಶ್ರೀ

*ಸಂತೆಯಲಿದ್ದವ = ಜನ ಸಾಮಾನ್ಯ
†ಚಂದ = ಏಳಿಗೆ

ಕುಲ ಕುಲ ಕುಲವೆಂದು ಹೊಡೆದಾಡದಿರಿ...

'ಕುಲ ಕುಲ ಕುಲವೆಂದು ಹೊಡೆದಾಡದಿರಿ' ಅಂತ ಕನಕದಾಸರು ಹೇಳಿದ್ದು
ಆಗಾಗ ಮಹತ್ವಕ್ಕೆ ಬರುವುದು ಶೋಚನೀಯ...
ಮತ್ತೊಮ್ಮೆ ನಮ್ಮ ದಾಸರುಗಳು ಏನು ಹೇಳಿರುವರೆಂದು ನೋಡೋಣ...





ಇದೇ ರೀತಿ ನಮ್ಮ ಪುರಂದರ ದಾಸರು ಈ ರೀತಿ ಅರಿಕೆ ಮಾಡಿಕೊಂಡಿದ್ದಾರೆ...

ಆವ ಕುಲವಾದರೇನು ಆವನಾದರೇನು ಆತ್ಮ
ಭಾವವರಿತ ಮೇಲೆ || ಪಲ್ಲವಿ ||

ಹಸಿ ಕಬ್ಬು ಡೊಂಕಿರಲು ಅದರ
ರಸ ತಾನು ಡೊಂಕೇನೊ
ವಿಷಯಾಸೆಗಳ ಬಿಟ್ಟು
ಹಸನಾದ ಗುರುಭಕ್ತಿ ಮಾಡೋ || ೧ ||

ನಾನಾ ವರ್ಣದ ಆಕಳು ಅದು
ನಾನಾ ವರ್ಣದ ಕ್ಷೀರವೇನೋ
ಹೀನ ಕರ್ಮಗಳನ್ನು ಬಿಟ್ಟು ಹಿಗ್ಗಿ
ಜ್ಞಾನ ಒಲಿಸಿರೋ || ೨ ||

ಕುಲದ ಮೇಲೆ ಹೋಗಬೇಡ ಮನುಜಾ
ಕುಲವಿಲ್ಲ ಜ್ಞಾನಿಗಳಿಗೆ
ವರದ ಪುರಂದರವಿಠಲನ ಪಾದವ
ಸೇರಿ ಮುಕ್ತನಾಗೋ || ೩ ||

ಇದೇ ರೀತಿ, ಎಲ್ಲರೂ ಒಗ್ಗೂಡಿ ಬೆಳೆಯೋಣ, ನಲಿಯೋಣ , ಏನಂತೀರಿ? :)


--ಶ್ರೀ

ಮತಾಂತರವನ್ನು ಏಕೆ ತಡೆಯಬೇಕು?

ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು?

ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...

:)

Tuesday, September 23, 2008

ಮತಾಂತರ ಏಕೆ ಬೇಕು?

ಪತ್ರಕರ್ತ: ಈ ಮತಾಂತರ ಏಕೆ ಬೇಕು?

ರಾಜಕಾರಣಿ: ನಮಗೂ ಮತಕ್ಕೂ ಇರುವ ಅಂತರವನ್ನು ಕಡಿಮೆ ಮಾಡಲು, ಮತಾಂತರ ಬೇಕು...

Monday, September 22, 2008

ಮಣ್ಣನು ತಿನ್ನಲು ಬೇಡವೋ



ಮಣ್ಣನು ತಿನ್ನಲು ಬೇಡವೋ ಎಂದೆ
'ಬಾಯಲ್ಲಿ ಮಣ್ಣನು ನೋಡಿಲ್ಲಿ' ಅಂದೆ
ಕೋಪದಿ ಕಿವಿಯನ್ನು ಹಿಂಡಲು ನಾನು
ಜಗವನ್ನೇ ಕಂಡೆ ಜಗವನ್ನೇ ಕಂಡೆ...



ನದಿಯ ನೀರಾಟ ಬೇಡವೊ ಎಂದೆ
'ನೀರಲ್ಲಿ ಹಾರುವೆ ನೋಡಿಲ್ಲಿ' ಅಂದೆ
ಕೋಪದಿ ಬೆತ್ತವ ತರಲು ನಾನು
ಕಾಳಿಂಗನ ಆಟ ನಾನಂದು ಕಂಡೆ...




ಮಳೆಯಲ್ಲಿ ನೆನೆವುದು ಬೇಡವೋ ಎಂದೆ
'ಮಳೆಯಲ್ಲಿ ನೆಂದಿಹೆ ನೋಡಿಲ್ಲಿ' ಅಂದೆ
ಕೊಡೆಯನ್ನು ಹಿಡಿದು ನಾನೋಡಿ ಬರಲು
ಬೆರಳ ಮೇಲೆ ಅಂದು ಗಿರಿಯನ್ನು ಕಂಡೆ...



ಬಲುತುಂಟನಿವನೆಂದು ಸಿಡಿಮಿಡಿಗೊಂಡೆ
ಲೀಲೆಯ ನೋಡಿ, ನನ್ನ ತಪ್ಪ ಕಂಡೆ
ಮಗನಲ್ಲವೆಂದು ನಾ ಅರಿತುಕೊಂಡೆ
ಜಗದೀಶನ ನಾನು ಕಣ್ಮುಂದೆ ಕಂಡೆ
ಜಗವನ್ನು ತೋರಿದ ದೇವನ ಕಂಡೆ...
ಜಗವನ್ನು ತೋರಿದ ದೇವನ ಕಂಡೆ...

--ಶ್ರೀ

(೨೧ ಸೆಪ್ಟೆಂಬರ್ ೨೦೦೮)

Sunday, September 21, 2008

ಪುಟ್ಟನ ದಿನಚರಿ


ಬೇಗನೆ ಎದ್ದು,
ಹಲ್ಲನು ಉಜ್ಜಿ,
ಜಳಕವ ಮಾಡಿದ
ನಮ್ಮಯ ಪುಟ್ಟ

ಬಟ್ಟೆಯ ತೊಟ್ಟು,
ತಲೆಯನು ಬಾಚಿ,
ಬೂಟನು ಹಾಕಿದ
ನಮ್ಮಯ ಪುಟ್ಟ

ಬಾಟಲು,ಪುಸ್ತಕ
ಚೀಲದಿ ತುಂಬಿ
ಹೊರಟನು ಶಾಲೆಗೆ
ನಮ್ಮಯ ಪುಟ್ಟ

ಶಾಲೆಲಿ ಕೇಳಿದ
ಹಾಡನು ಕಲಿತು
ಮನೆ-ಕಡೆ ಓಡಿದ
ನಮ್ಮಯ ಪುಟ್ಟ

ಬರುತಲೆ ಅಮ್ಮನ
ಮುದ್ದನು ಪಡೆದು
ಖುಶಿಯಲಿ ಹಾಡಿದ
ನಮ್ಮಯ ಪುಟ್ಟ

ಅಮ್ಮನ ಕೈಯಲಿ
ಊಟವ ಉಂಡು
ಮಡಿಲಲಿ ಮಲಗಿದ
ನಮ್ಮಯ ಪುಟ್ಟ

ಸಂಜೆಗೆ ಎದ್ದು
ಅಳುತಿರುವಾಗ
ಆಟಿಕೆ ನೋಡಿದ
ನಮ್ಮಯ ಪುಟ್ಟ

ಮಾಮನು ತಂದ
ಆಟಿಕೆ ಹಿಡಿದು
ಆಟವನಾಡಿದ
ನಮ್ಮಯ ಪುಟ್ಟ

ರಾತ್ರಿಗೆ ಚಪಾತಿ
ಬೇಕು ಎಂದು
ಹಟವನು ಹಿಡಿದ
ನಮ್ಮಯ ಪುಟ್ಟ

ಕೂಡಲೆ ಅಮ್ಮನು
ಚಪಾತಿ ಮಾಡಲು
ಚಪ್ಪರಿಸಿದನು
ನಮ್ಮಯ ಪುಟ್ಟ

ಹಾಲನು ಕುಡಿದು
ಹಾಸಿಗೆ ಮೇಲೆ
ಕುಣಿದಾಡಿದನು
ನಮ್ಮಯ ಪುಟ್ಟ

ಅಮ್ಮನ ಮಡಿಲಲಿ
ಲಾಲಿಯ ಕೇಳಿ
ನಿದ್ದೆಗೆ ಜಾರಿದ
ನಮ್ಮಯ ಪುಟ್ಟ

Friday, September 19, 2008

'ಟಾಟಾ' ಹೋದ 'ಟಾಟಾ'!

ಇದೀಗ ಬಂದ ಸುದ್ದಿಯಂತೆ, ಜನಜನಿತವಾಗಿದ್ದ 'ಟಾಟಾ' ಎಂಬ ಪದವು ನಿಗೂಢ ರೀತಿಯಲ್ಲಿ ಜನತೆಯ ಬಾಯಿಂದ ನಾಪತ್ತೆಯಾಗಿದೆ.
ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ ಮಾಯವಾಗಿರುವುದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ತನಿಖಾ ತಂಡಗಳು 'ಟಾಟಾ' ಪದದ ಈ ಅವಸ್ಠೆಗೆ ಬಯೋತ್ಪಾದಕರೇ ('ಬೈ'ಉತ್ಪಾದಕರೇ) ಕಾರಣ ಎಂಬುದಾಗಿ ಗುರುತಿಸಿದ್ದಾರೆ.
ಈ ಬಯೋತ್ಪಾದಕರು ನುಸುಳುವ ಬಗ್ಗೆ ಸರ್ಕಾರಕ್ಕೆ ಗುಪ್ತ ದಳವು ಮಾಹಿತಿಯನ್ನು ಮುಂಚೆಯೇ ತಿಳಿಸಲಾಗಿತ್ತಾದರೂ, ಸರ್ಕಾರ ಇದರತ್ತ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.
ಈ 'ಬಯೋತ್ಪಾದಕ'ರೂ ನಮ್ಮ ನಾಡಿನಲ್ಲಿ ನುಸುಳಲು, ಈ ರೀತಿ ಎಲ್ಲರ ಬಾಯಲ್ಲೂ ನೆಲೆಸಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದೆ.
ಇಡೀ ರಾಜ್ಯದಲ್ಲಿ 'ಬಯ'ದ (ಬೈ'ದ) ವಾತಾವರಣ ಉಂಟಾಗಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಒತ್ತಡದಲ್ಲಿರುವ ಸರ್ಕಾರ, ಎಲ್ಲರ ಬಾಯಲ್ಲಿ ನಲಿದ ಈ 'ಟಾಟಾ', ಈ ರೀತಿ ಬಾಯ್ಮರೆಯಾದದ್ದಕ್ಕೆ ಕಾರಣವೇನೆಂದು ತಿಳಿಯಲು ತಜ್ಞರ ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸಿದೆ.

ಇತ್ತ ರಾಜಕೀಯ ತಜ್ಞರು, ಹಿಂದಿನ ಸರ್ಕಾರ, 'ಟಾಟಾ' ಕಾಟ ಹೆಚ್ಚಾಗಿ 'ಪೋಟಾ' ಕಾಯ್ದೆಯೇನಾದರೂ ಬಳಸಿದ್ದರೆ? ಎಂಬುದನ್ನು ತನಿಖೆ ಮಾಡಬೇಕೆಂದು ಕರೆ ನೀಡಿದ್ದಾರೆ. ಹಲವು ಬಲ ಪಕ್ಷ್ದದ ರಾಜಕೀಯ ಮುಖಂಡರು, 'ಟಾಟಾ' ಮಂದಿ ಈಗ 'ಬೈಯಾಂತರ'ಗೊಂಡಿರುವುದಾಗಿ ಶಂಕಿಸುತ್ತಿದ್ದಾರೆ. ಇದರ ಮಧ್ಯೆ, ಈ ಪದವು ಈ ರೀತಿ ಬಾಯ್ಮರೆಯಾಗಲು, ಕೋಮುವಾದಿ ಸಂಘಟನೆಗಳೇ ಕಾರಣ ಎಂದು 'ಎಡ' ಪಕ್ಷ ತನ್ನ ಮೈ ಕೊಡವಿಕೊಂಡಿದೆ.

ಈ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ, ಭಾಷಾ ತಜ್ಞರು, ಈ ಪದದ ಹಿನ್ನಲೆಯನ್ನು ಹುಡುಕಲಾರಂಭಿಸಿದ್ದು, ಸಾಹಿತ್ಯ ವಲಯದಲ್ಲಿ ವಿವಿಧ ಅಭಿಪ್ರಾಯಗಳು ಹೊರಹೊಮ್ಮಿದೆ. ಈ ಪದವು ಸಂಸ್ಕೃತದ್ದು, ಅಚ್ಚ ಕನ್ನಡ ಒರೆಯು, ಮರಾಠಿ, ಪ್ರಾಕೃತವು ಎಂದು ತಮ್ಮದೇ ಆದ ವಾದಗಳನ್ನು ಸಾಕಷ್ಟು ಪುರಾವೆಗಳೊಂದಿಗೆ ಪ್ರಮಾಣ ಮಾಡುವುದಾಗಿ ಹಲವಾರು ಸಾಹಿತಿಗಳು ಪಂಥ ಕಟ್ಟಿದ್ದಾರೆ.

ಈ ವರದಿ ಪ್ರಕಟಿಸುವ ಮುನ್ನ ನಾವು ಜನಸಾಮಾನ್ಯರ ಅಭಿಪ್ರಾಯವನ್ನು ಶೇಖರಿಸಿದ್ದು, ಹಲವಾರು ಮಂದಿ, 'ಟಾಟಾ' ಕಂಪನಿಯು ''ನ್ಯಾನೋ'ದೊಂದಿಗೆ ಕಾಲಿಡುವಾಗ, 'ಟಾಟಾ' ಪದವು ನಮ್ಮ ನಾಡಿನಲ್ಲಿ ಮರುನೆಲೆಸುವುದಾಗಿ ಆಶಯ ಹೊಂದಿರುವುದು ಅಚ್ಚರಿ ಮೂಡಿಸಿದೆ.

'ಟಾಟಾ', 'ಟಾಟಾ'ನೊಂದಿಗೆ ಮರುಕಾಲಿಡುವುದೇ, ಇದನ್ನು ಸಮಯವೇ ಹೇಳಬೇಕಿದೆ.

--ಶ್ರೀ

ವಿ.ಸೂ: ನೀವು 'ಟಾಟಾ' ಮಂದಿಯಾಗಿದ್ದಲ್ಲಿ, ತಕ್ಷಣವೇ, ನಮ್ಮನ್ನು ಸಂಪರ್ಕಿಸಬೇಕಾಗಿಯೂ, ನಿಮ್ಮ ಸಂದರ್ಶನ ಮಾಡಿ, 'ಟಾಟಾ' ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಸಂಪಾದಕರು ಇಚ್ಚಿಸುತ್ತಾರೆ ಎಂದು ತಿಳಿಸಲು ಬಯಸುತ್ತೇವೆ.

Wednesday, September 10, 2008

Quote hanger

"Expectation is the root cause for disappointment"

- Srinivas
(2nd July 2008)

Tuesday, September 9, 2008

ತಣ್ಣಗಾದ ಕುನ್ನಕ್ಕುಡಿ ವಯೊಲಿನ್...

ನಾನು ಚಿಕ್ಕವನಿದ್ದಾಗ, ಬೇಸಿಗೆ ರಜ ಬಂತೆಂದರೆ ಸಾಕು, ತಂದೆ-ತಾಯಿಯರು, ನಮ್ಮನ್ನು ರಾಮ ನವಮಿ ಪ್ರಯುಕ್ತ ನಡೆಯುತ್ತಿದ್ದ ಶೇಷಾದ್ರಿಪುರಂ ಸಂಗೀತೋತ್ಸವಕ್ಕೆ ಕರೆದೊಯ್ಯುತ್ತ್ತಿದ್ದರು.
ಸಂಗೀತೋತ್ಸವಕ್ಕೆ ಕರೆದೊಯ್ದಾಗ ಏನೋ ಒಂದು ರೀತಿ ಖುಷಿ...ಶೇಷಾದ್ರಿಪುರಂ ಶಾಲೆಯ ಪಕ್ಕದಲ್ಲಿನ ಪಾರ್ಕ್'ನಲ್ಲಿ ಕುಳಿತು ಕಡಲೇ ಕಾಯಿ ತಿನ್ನುತ್ತಾ,
ಅಕ್ಕನೊಡನೆ ಆಟವಾಡುತ್ತಾ ಸಂಗೀತ ಕೇಳುವುದು ಒಂದು ಮೋಜು ನಮಗೆ...
ಅಕ್ಕ-ಪಕ್ಕದ ಮನೆಯವರು, ಮಾವ,ಚಿಕ್ಕಪ್ಪಂದಿರ ಮಕ್ಕಳು ಎಲ್ಲರೂ ಸಂಗೀತ ಕೇಳಲು ಬರುತ್ತಿದ್ದರಿಂದ ಅದೊಂದು ಸುಗ್ಗಿ!
ಎಲ್ಲ ಸಂಗೀತ ಮಹೋತ್ಸವದಂತೆ ಇಲ್ಲೂ, ಒಂದೊಂದು ದಿನವೂ, ಬೇರೆ-ಬೇರೆ ವಿದ್ವಾಂಸರಿಂದ ಖಚೇರಿಗಳು...
ಇವೆಲ್ಲವುಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ನಮ್ಮಂತ ಚಿಕ್ಕವರಿಗೆ ಮನವನ್ನು ಮುಟ್ಟಿದವರಲ್ಲಿ ಕೆಲವರೆಂದರೆ - ಕುನ್ನಕ್ಕುಡಿ ವೈದ್ಯನಾಥನ್, ಯು ಶ್ರೀನಿವಾಸ್,
ರವಿ ಕಿರಣ್, ಟಿ.ವಿ. ಶಂಕರ ನಾರಾಯಣ (ಇಲ್ಲಿ ನಾನು ಹಲವಾರು ಹೆಸರುಗಳನ್ನು ಮರೆತಿರಬಹುದು)...
ಶಾಸ್ತ್ರೀಯ ಸಂಗೀತದ ಬಗ್ಗೆ ಹೆಚ್ಚು ತಿಳಿವಿಲ್ಲದ ನನಗೆ, ಆಗ ಇವರೆಲ್ಲರಲ್ಲೂ ಕಂಡದ್ದು ಅವರದೇ ಆದ ಶೈಲಿ ಅಥವಾ ಬೇರೆ ತೆರನಾದ ವಾದ್ಯ!

ಕುನ್ನಕ್ಕುಡಿಯವರ ವಯೊಲಿನ್ ವಾದನ - ಬೇರೆಯವರಿಗಿಂತ ಭಿನ್ನ ಮತ್ತು ವಾದನದ ವೇಗಕ್ಕೆ ಹೆಸರುವಾಸಿ (Fast paced)...
ತಮ್ಮ ವಿಶಿಷ್ಟ ರೀತಿಯ ವಯೊಲಿನ್ ವಾದನದಿಂದ ಕರ್ನಾಟಕ ಸಂಗೀತವನ್ನು ಹೆಚ್ಚು ಜನಕ್ಕೆ ಮುಟ್ಟುವಂತೆ ಮಾಡಿದವರು ...
ಕುನ್ನಕ್ಕುಡಿಯವರು ಇಡುತ್ತಿದ್ದ ದೊಡ್ಡದಾದ ವಿಭೂತಿ, ಕುಂಕುಮ ಕೂಡ ತಮ್ಮ ಭಿನ್ನತನವನ್ನು ತೋರುತ್ತಿತ್ತು...
ಅವರು ವಯೊಲಿನ್ ನುಡಿಸುವಾಗ ಮಾಡುತ್ತಿದ್ದ ವಿಚಿತ್ರ ಹಾವ-ಭಾವಗಳು, ಚಿಕ್ಕವರಾದ ನಮಗೆ ನಗುವನ್ನು ತಂದಿದ್ದೂ ಹೌದು.
ಸಾಮಾನ್ಯವಾಗಿ ಸಂಜೆಗೆ ಪ್ರಾರಂಭವಾಗುತ್ತಿದ್ದ ಶೇಷಾದ್ರಿಪುರಂ ಸಂಗೀತ ಮಹೋತ್ಸವದಲ್ಲಿ,
ಇವರ ಖಚೇರಿಗಳು ಹಲವಾರು ಬಾರಿ ವಿಳಂಬವಾಗೇ ಪ್ರಾರಂಭವಾದರೂ, ಮಧ್ಯರಾತ್ರಿ ೧-೨ ರವರೆಗೆ ನಿರಂತರವಾಗಿ ಹರಿದು ಬರುತ್ತಿತ್ತು...
ಜನರನ್ನು ಮಂತ್ರ-ಮುಗ್ಧಗೊಳಿಸಿ, ನಡುರಾತ್ರಿಯಾದರೂ ಮನೆಗೆ ಹೋಗದಂತೆ ಕಟ್ಟಿಹಾಕುತ್ತಿತ್ತು!
ಇದಲ್ಲದೆ, ತಮ್ಮ ಹಲವಾರು ಖಚೇರಿಗಳಲ್ಲಿ, ಆಯಾ ರಾಗಕ್ಕೆ ಅನುಗುಣವಾಗಿ, ರಾಗಕ್ಕೆ ಹೊಂದುವ ಚಲನ ಚಿತ್ರದ ಹಾಡುಗಳನ್ನು ಶಾಸ್ತ್ರೀಯ ಸಂಗೀತದ ಹಾಡುಗಳ
ನಡುವೆ ಸೇರಿಸಿ ವಯೊಲಿನ್ ವಾದನ ಮಾಡುತ್ತಿದ್ದರು. ಖಚೇರಿಯ ಮಧ್ಯೆ, ಮುಂಜಾನೆ ಆಕಾಶವಾಣಿಯಲ್ಲಿ ಬರುತ್ತಿದ್ದ ಇಂಪನ್ನು ಜನರಿಗೆ ಉಣಬಡಿಸಿದವರಿವರು...
ಹೀಗೆ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು, ಖಚೇರಿಗಳನ್ನು ಕೊಡುತ್ತಿದ್ದರಿಂದ, ಮಡಿವಂತರಿಗೆ ಇವರನ್ನು ಕಂಡರೆ ಅಷ್ಟಕ್ಕಷ್ಟೆ...
ನನಗನಿಸಿದಂತೆ, ಇವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ದೊರಕದೇ ಹೋದದ್ದು ಇದೇ ಕಾರಣಕ್ಕಿರಬಹುದು...
ಇವರು ವಾತಾವರಣಕ್ಕೆ ತಕ್ಕಂತೆ ವಯೊಲಿನ್ ನಾದವು ಬದಲಾಗುವುದರ ಬಗ್ಗೆ ಅಧ್ಯಯನವನ್ನು ನಡೆಸಿದ್ದರು ಮತ್ತು ಗೌರವ ಡಾಕ್ಟೊರೇಟ್ ಪಡೆದಿದ್ದರು.

ನೆನ್ನೆ (೮-ಸೆಪ್ಟೆಂಬರ್-೨೦೦೮), ಕುನ್ನಕ್ಕುಡಿ ವೈದ್ಯನಾಥನ್ ರವರು ಪಂಚಭೂತಗಳಲ್ಲಿ ಲೀನರಾದರು.
ಅದ್ಭುತ ವಯೊಲಿನ್ ರಸವನ್ನು ಉಣಿಸಿದ ಇವರಿಗೆ ಅನಂತ ನಮನಗಳು.
ಕರ್ನಾಟಕ ಸಂಗೀತ ಲೋಕ ಇಂಥಾ ಒಬ್ಬ ಮೇರು ಕಲಾವಿದರನ್ನು ಕಳೆದುಕೊಂಡಿರುವುದು ಬಹಳ ನೋವಿನ ಸಂಗತಿ ...

ಕುನ್ನಕ್ಕುಡಿ ವೈದ್ಯನಾಥನ್ ರವರ ವಯೊಲಿನ್ ವಾದನವನ್ನು ಕೇಳಲು ಇಲ್ಲಿ ಚಿಟಿಕಿಸಿ.




--ಶ್ರೀ