ಇದೀಗ ಬಂದ ಸುದ್ದಿಯಂತೆ, ಜನಜನಿತವಾಗಿದ್ದ 'ಟಾಟಾ' ಎಂಬ ಪದವು ನಿಗೂಢ ರೀತಿಯಲ್ಲಿ ಜನತೆಯ ಬಾಯಿಂದ ನಾಪತ್ತೆಯಾಗಿದೆ.
ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ ಮಾಯವಾಗಿರುವುದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ತನಿಖಾ ತಂಡಗಳು 'ಟಾಟಾ' ಪದದ ಈ ಅವಸ್ಠೆಗೆ ಬಯೋತ್ಪಾದಕರೇ ('ಬೈ'ಉತ್ಪಾದಕರೇ) ಕಾರಣ ಎಂಬುದಾಗಿ ಗುರುತಿಸಿದ್ದಾರೆ.
ಈ ಬಯೋತ್ಪಾದಕರು ನುಸುಳುವ ಬಗ್ಗೆ ಸರ್ಕಾರಕ್ಕೆ ಗುಪ್ತ ದಳವು ಮಾಹಿತಿಯನ್ನು ಮುಂಚೆಯೇ ತಿಳಿಸಲಾಗಿತ್ತಾದರೂ, ಸರ್ಕಾರ ಇದರತ್ತ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.
ಈ 'ಬಯೋತ್ಪಾದಕ'ರೂ ನಮ್ಮ ನಾಡಿನಲ್ಲಿ ನುಸುಳಲು, ಈ ರೀತಿ ಎಲ್ಲರ ಬಾಯಲ್ಲೂ ನೆಲೆಸಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದೆ.
ಇಡೀ ರಾಜ್ಯದಲ್ಲಿ 'ಬಯ'ದ (ಬೈ'ದ) ವಾತಾವರಣ ಉಂಟಾಗಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಒತ್ತಡದಲ್ಲಿರುವ ಸರ್ಕಾರ, ಎಲ್ಲರ ಬಾಯಲ್ಲಿ ನಲಿದ ಈ 'ಟಾಟಾ', ಈ ರೀತಿ ಬಾಯ್ಮರೆಯಾದದ್ದಕ್ಕೆ ಕಾರಣವೇನೆಂದು ತಿಳಿಯಲು ತಜ್ಞರ ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸಿದೆ.
ಇತ್ತ ರಾಜಕೀಯ ತಜ್ಞರು, ಹಿಂದಿನ ಸರ್ಕಾರ, 'ಟಾಟಾ' ಕಾಟ ಹೆಚ್ಚಾಗಿ 'ಪೋಟಾ' ಕಾಯ್ದೆಯೇನಾದರೂ ಬಳಸಿದ್ದರೆ? ಎಂಬುದನ್ನು ತನಿಖೆ ಮಾಡಬೇಕೆಂದು ಕರೆ ನೀಡಿದ್ದಾರೆ. ಹಲವು ಬಲ ಪಕ್ಷ್ದದ ರಾಜಕೀಯ ಮುಖಂಡರು, 'ಟಾಟಾ' ಮಂದಿ ಈಗ 'ಬೈಯಾಂತರ'ಗೊಂಡಿರುವುದಾಗಿ ಶಂಕಿಸುತ್ತಿದ್ದಾರೆ. ಇದರ ಮಧ್ಯೆ, ಈ ಪದವು ಈ ರೀತಿ ಬಾಯ್ಮರೆಯಾಗಲು, ಕೋಮುವಾದಿ ಸಂಘಟನೆಗಳೇ ಕಾರಣ ಎಂದು 'ಎಡ' ಪಕ್ಷ ತನ್ನ ಮೈ ಕೊಡವಿಕೊಂಡಿದೆ.
ಈ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ, ಭಾಷಾ ತಜ್ಞರು, ಈ ಪದದ ಹಿನ್ನಲೆಯನ್ನು ಹುಡುಕಲಾರಂಭಿಸಿದ್ದು, ಸಾಹಿತ್ಯ ವಲಯದಲ್ಲಿ ವಿವಿಧ ಅಭಿಪ್ರಾಯಗಳು ಹೊರಹೊಮ್ಮಿದೆ. ಈ ಪದವು ಸಂಸ್ಕೃತದ್ದು, ಅಚ್ಚ ಕನ್ನಡ ಒರೆಯು, ಮರಾಠಿ, ಪ್ರಾಕೃತವು ಎಂದು ತಮ್ಮದೇ ಆದ ವಾದಗಳನ್ನು ಸಾಕಷ್ಟು ಪುರಾವೆಗಳೊಂದಿಗೆ ಪ್ರಮಾಣ ಮಾಡುವುದಾಗಿ ಹಲವಾರು ಸಾಹಿತಿಗಳು ಪಂಥ ಕಟ್ಟಿದ್ದಾರೆ.
ಈ ವರದಿ ಪ್ರಕಟಿಸುವ ಮುನ್ನ ನಾವು ಜನಸಾಮಾನ್ಯರ ಅಭಿಪ್ರಾಯವನ್ನು ಶೇಖರಿಸಿದ್ದು, ಹಲವಾರು ಮಂದಿ, 'ಟಾಟಾ' ಕಂಪನಿಯು ''ನ್ಯಾನೋ'ದೊಂದಿಗೆ ಕಾಲಿಡುವಾಗ, 'ಟಾಟಾ' ಪದವು ನಮ್ಮ ನಾಡಿನಲ್ಲಿ ಮರುನೆಲೆಸುವುದಾಗಿ ಆಶಯ ಹೊಂದಿರುವುದು ಅಚ್ಚರಿ ಮೂಡಿಸಿದೆ.
'ಟಾಟಾ', 'ಟಾಟಾ'ನೊಂದಿಗೆ ಮರುಕಾಲಿಡುವುದೇ, ಇದನ್ನು ಸಮಯವೇ ಹೇಳಬೇಕಿದೆ.
--ಶ್ರೀ
ವಿ.ಸೂ: ನೀವು 'ಟಾಟಾ' ಮಂದಿಯಾಗಿದ್ದಲ್ಲಿ, ತಕ್ಷಣವೇ, ನಮ್ಮನ್ನು ಸಂಪರ್ಕಿಸಬೇಕಾಗಿಯೂ, ನಿಮ್ಮ ಸಂದರ್ಶನ ಮಾಡಿ, 'ಟಾಟಾ' ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಸಂಪಾದಕರು ಇಚ್ಚಿಸುತ್ತಾರೆ ಎಂದು ತಿಳಿಸಲು ಬಯಸುತ್ತೇವೆ.
No comments:
Post a Comment