ಮಣ್ಣನು ತಿನ್ನಲು ಬೇಡವೋ ಎಂದೆ
'ಬಾಯಲ್ಲಿ ಮಣ್ಣನು ನೋಡಿಲ್ಲಿ' ಅಂದೆ
ಕೋಪದಿ ಕಿವಿಯನ್ನು ಹಿಂಡಲು ನಾನು
ಜಗವನ್ನೇ ಕಂಡೆ ಜಗವನ್ನೇ ಕಂಡೆ...
ನದಿಯ ನೀರಾಟ ಬೇಡವೊ ಎಂದೆ
'ನೀರಲ್ಲಿ ಹಾರುವೆ ನೋಡಿಲ್ಲಿ' ಅಂದೆ
ಕೋಪದಿ ಬೆತ್ತವ ತರಲು ನಾನು
ಕಾಳಿಂಗನ ಆಟ ನಾನಂದು ಕಂಡೆ...

ಮಳೆಯಲ್ಲಿ ನೆನೆವುದು ಬೇಡವೋ ಎಂದೆ
'ಮಳೆಯಲ್ಲಿ ನೆಂದಿಹೆ ನೋಡಿಲ್ಲಿ' ಅಂದೆ
ಕೊಡೆಯನ್ನು ಹಿಡಿದು ನಾನೋಡಿ ಬರಲು
ಬೆರಳ ಮೇಲೆ ಅಂದು ಗಿರಿಯನ್ನು ಕಂಡೆ...

ಬಲುತುಂಟನಿವನೆಂದು ಸಿಡಿಮಿಡಿಗೊಂಡೆ
ಲೀಲೆಯ ನೋಡಿ, ನನ್ನ ತಪ್ಪ ಕಂಡೆ
ಮಗನಲ್ಲವೆಂದು ನಾ ಅರಿತುಕೊಂಡೆ
ಜಗದೀಶನ ನಾನು ಕಣ್ಮುಂದೆ ಕಂಡೆ
ಜಗವನ್ನು ತೋರಿದ ದೇವನ ಕಂಡೆ...
ಜಗವನ್ನು ತೋರಿದ ದೇವನ ಕಂಡೆ...
--ಶ್ರೀ
(೨೧ ಸೆಪ್ಟೆಂಬರ್ ೨೦೦೮)
No comments:
Post a Comment