Sunday, August 31, 2008

ಕಳವು

"ಅರೆ! ಇದು ಮತ್ತೆ ಹೇಗಾಗಲು ಸಾಧ್ಯ!?" ಎಂದು ತಲೆ ಕೆಡಿಸಿಕೊಂಡ ರಾಜ...
ತನ್ನ ಕಣ್ಣನ್ನು ನಂಬಲಾಗುತ್ತಿಲ್ಲ...
ಮತ್ತೆ ತನ್ನ ಪರ್ಸ್ ನೋಡಿಕೊಂಡ...ಹೌದು! ದುಡ್ಡಿಲ್ಲ!

ಈ ರೀತಿ ಕೆಲವು ದಿನಗಳಿಂದ ರಾಜನ ಪರ್ಸ್’ನಲ್ಲಿ ದುಡ್ಡು ಕಾಣೆಯಾಗಿತ್ತು...
ಮೊದ ಮೊದಲು ರಾಜ ಇದರ ಬಗ್ಗೆ ಹೆಚ್ಚು ಗಮನಿಸಿರಲಿಲ್ಲ...
ಒಮ್ಮೆ ಕಳೆದಿದ್ದೆ ಎಂದುಕೊಂಡ ದುಡ್ಡು, ಕಳೆದಿದ್ದಲ್ಲ, ಗೆಳೆಯ ನಾಣಿಗೆ ಕೊಟ್ಟಿದ್ದು ಎಂದು ತಿಳಿದಾಗ ಸುಮ್ಮನಾಗಿದ್ದ...
ಮತ್ತೊಮ್ಮೆ ಕಳೆದೆ ಎಂದುಕೊಂಡ ದುಡ್ಡು ತಾನಗಾಗಿಯೇ ಖರ್ಚು ಮಾಡಿದ್ದು ಎಂದು ಗೊತ್ತಾಗಿ ನಿಟ್ಟುಸಿರು ಬಿಟ್ಟಿದ್ದ...
ಆದರೂ ಕಳವು ನಡೆಯುತ್ತಿದೆ ಎಂಬ ಗುಮಾನಿ ...
ಸಮಯ ಕಳೆದಂತೆ, ರಾಜ ತನ್ನ ವೆಚ್ಚವನ್ನೆಲ್ಲ ಗಮನಿಸತೊಡಗಿದ್ದ...
ಇತ್ತೀಚಿಗಷ್ಟೆ ತಿಳಿದಿದೆ, ತನ್ನ ಸಂಶಯ ಸರಿ ಎಂದು...!
ಹಲವು ಬಾರಿ ಮುಂಚೆಯೂ ಕಳುವಾಗಿದೆ ಎಂದು! ಇತ್ತೀಚಿಗೆ ಕಳವು ಹೆಚ್ಚಾಗಿದೆ...!

ರಾಜ ಅವಲೋಕಿಸ ತೊಡಗಿದ...’ಯಾರು ಕಳ್ಳತನ ಮಾಡುತ್ತಿರಬಹುದು???’...
ರಾಜನ ಮನೆಗೆ ಬರುವವರೇ ಕೆಲವೇ ಕೆಲವರು...
ದೂರದೂರಿನಲ್ಲಿ ಕೆಲಸ ಮಾಡುತ್ತಿದ್ದ ರಾಜನ ಮನೆಗೆ ಬರುತ್ತಿದ್ದ ಗೆಳೆಯರಿಬ್ಬರೇ - ಸೀನ, ನಾಣಿ...
ಇಬ್ಬರೂ ನೆಚ್ಚಿನವರ್‍ಏ! ತಾನು ಕಷ್ಟದಲ್ಲಿದ್ದಾಗ ಸಹಾಯಕ್ಕೆ ನಿಂತವರು...
ಇದು ಬಿಟ್ಟರೆ, ಮನೆ ಮಾಲೀಕರ ಮನೆ ಕೆಲಸದ ಹುಡುಗಿ...
ಅವಳು ಬರುವುದೂ ವಾರಕ್ಕೆ ಒಮ್ಮೆ!
ರಾಜ ಟೈಫಾಯಿಡ್ ಜ್ವರದಿಂದ ನರಳಿದಾಗ ಅವಳೇ ಅಡುಗೆ ಮಾಡಿದ್ದು...
ಬಹಳ ಮೃದು ಸ್ವಭಾವ ಮತ್ತು ಒಳ್ಳೆಯ ನಡತೆ...
ಇವರುಗಳು ಯಾರನ್ನೂ ಶಂಕಿಸಲೂ ಮನಸ್ಸು ಒಪ್ಪಲಿಲ್ಲ...

ಎರಡು ದಿನಗಳ ಬಳಿಕ ಪರ್ಸ್’ನಿಂದ ಮತ್ತೆ ಕಳುವಾಯಿತು!
ರಾಜನಿಗೆ ತಲೆ ಚಿಟ್ಟು ಹಿಡಿದಂತಾಯಿತು...
ಒಲ್ಲದ ಮನದಲ್ಲಿ, ಇವರೆಲ್ಲರ ಮೇಲೆ ಕಣ್ಣಿಡಲಾರಂಭಿಸಿದ...
ಇವರೆಲ್ಲ ಬಂದಾಗ ಅವರ ಪ್ರತಿ ಚಲನ-ವಲನಗಳನ್ನು ಗಮನಿಸಿದ...
ಆದರೆ, ಆ ರೀತಿ ಗಮನಿಸುತ್ತಿದ್ದಾಗಲೆಲ್ಲ ಕಳುವಾಗಲೇ ಇಲ್ಲ...

ಸೀನ-ನಾಣಿ ಈ ಕಳವು ಮಾಡಿಲ್ಲವೆಂದು ಧೃಡ ಪಟ್ಟಾಗ,
ತನ್ನ ಕಳುವಿನ ಕಥೆಯನ್ನು ಅವರ ಬಳಿ ಹೇಳಿದ...
"ರಾಜ, ನಮ್ ಮನೆ ಹತ್ರ ಒಬ್ಬ ಕವಡೆ ಹಾಕಿ ಶಾಸ್ತ್ರ ಹೇಳ್ತಾನೆ...
ಅವನನ್ನ ಕೇಳೋಣ ಬಾ, ಅವನು ನನ್ನ ಪ್ರಶ್ನೆಗಳಿಗೆ ಸಾಮಾನ್ಯವಾಗಿ ಸರಿಯಾಗಿ ಹೇಳಿದಾನೆ..."
ಸೀನನಿಗೆ ಸ್ವಲ್ಪ ದೈವ/ದೆವ್ವಗಳ ಬಗ್ಗೆ ಕೊಂಚ ನಂಬಿಕೆ ಹೆಚ್ಚು...
ಇದನ್ನೆಲ್ಲ ನಂಬದ ನಾಣಿ ಹೇಳಿದ..."ಲೋ ರಾಜ, ಕಳ್ಳತನ ಆದ್ರೆ, ಪೋಲೀಸ್ ಹತ್ರ ಹೋಗ್ತಾರೋ?
ಬುರುಡೆ ದಾಸಯ್ಯನ ಹತ್ತಿರ ಹೋಗ್ತಾರೋ? ಬಾ ನಾವು ಪೋಲೀಸ್ ಕಂಪ್ಲೈಂಟ್ ಕೊಡೋಣ..."

ರಾಜನಿಗೆ ಎರಡಕ್ಕೂ ಮನಸಿಲ್ಲ...
ಪೋಲೀಸ್ ಬಳಿ ಹೋದರೆ ಕಳ್ಳನ್ನ ಹಿಡಿಯೋದು ಬಿಟ್ಟು ಸುಮ್ಮನೆ ಸ್ಟೇಷನ್ ಗೆ ಅಲೆದಾಡಿಸ್ತಾರೆ,
ಲಂಚದ ಗೋಳು ಬೇರೆ...
ಸೀನ ಹೇಳಿದ ಕವಡೆ ಶಾಸ್ತ್ರದ ಬಗ್ಗೆನೂ ನಂಬಿಕೆ ಇಲ್ಲ...
ಆದರೆ ರಾಜ ಸಾಮಾನ್ಯವಾಗಿ ಸೀನನ ಮಾತು ತಳ್ಳಿ ಹಾಕಲಾರ...
ಹಾಗಾಗಿ, ಸೀನನೊಡನೆ ಶಾಸ್ತ್ರ ಕೇಳೋಕ್ಕೆ ಹೋದ...
ಶಾಸ್ತ್ರಿಗಳು ಎರಡು ಮೂರು ಬಾರಿ ಕವಡೆ ಹಾಕಿ, ಒಂದೆರಡು ಪ್ರಶ್ನೆ ಹಾಕಿ...
"ಕಳುವೇ ಆಗಿಲ್ಲ ಹೋಗಿ, ನಿಮ್ ಹಣ ಭದ್ರವಾಗಿದೆ" ಅಂದ್ಬಿಟ್ಟ್ರು!

ರಾಜನಿಗೋ ಮೊದಲೇ ಇದರ ಬಗ್ಗೆ ಹೆಚ್ಚು ನಂಬಿಕೆ ಇರಲಿಲ್ಲ...
"ಥೂ ನಿನ್ನ! ನಾನು ಅಲ್ಲಿ ದುಡ್ಡು ಕಳ್ಕೊಂಡಿದ್ರೆ, ನಿಮ್ ಶಾಸ್ತ್ರಿ ಎಂಥಾ ಬುರುಡೇ ಬಿಡ್ತಾನೋ?!!!
ಇಂಥಾವರೆಲ್ಲ ನಮ್ ಥರದವರಿಂದ ಜೀವನ ಮಾಡ್ತಾರೆ ಅಷ್ಟೆ!"
"ಹೋಗಲೀ, ನಾನು ಊರಿಗೆ ಇಪ್ಪತೈದು ಸಾವಿರ ಕಳಿಸ್ಬೇಕು, ಉಳಿಸಿದ ದುಡ್ಡೆಲ್ಲ ಕಳುವಾಗಿದೆ, ಈವತ್ತು ಅಮ್ಮ ಬರುತ್ತಾರೆ ಊರಿಂದ.
ಅವರಿಗೆ ಇದೆಲ್ಲ ಗೊತ್ತಾಗೋದು ಬೇಡ, ನೀನು ಸಂಜೆ ದುಡ್ಡು ಅಡ್ಜಸ್ಟ್ ಮಾಡಿಕೊಂಡು ಬಂದು ಕೊಡು,
ನಾನು ಅಮ್ಮ ಬಂದ ತಕ್ಷಣ ಅವರಿಗೆ ಕೊಟ್ಟು ಬಿಡ್ತೀನಿ, ಕಳ್ಳನ್ನ ಆಮೇಲೆ ಹಿಡಿಯೋಣ...
ನಿನ್ನ ದುಡ್ಡು ಪ್ರತಿ ತಿಂಗಳು ಕೊಂಚ ಕೊಂಚ ವಾಪಸ್ ಕೊಡ್ತೀನಿ"

ಸೀನ ಮಾತು ಕೊಟ್ಟಂತೆ, ಸಂಜೆ ಬಂದು ದುಡ್ಡನ್ನು ಕೊಟ್ಟು ಹೋದ...
ರಾಜ ದುಡ್ಡು ಭದ್ರವಾಗಿಟ್ಟು, ಅಮ್ಮನ ಹಾದಿಗೆ ಕಾದ...
ಸಂಜೆಯೇ ಬರಬೇಕಾಗಿದ್ದ ಅಮ್ಮ, ಊರಿಂದ ಬರುವ ಹೊತ್ತಿಗೆ ರಾತ್ರಿಯಾಗಿತ್ತು...
ಊಟ ಮಾಡುತ್ತ ಅಣ್ಣನ ಆರೋಗ್ಯ, ಸೋರುತ್ತಿರುವ ಅಡಿಗೆ ಮನೆ ಸೂರು, ಊರಿನ ಕಥೆ ಎಲ್ಲ ಮಗನಿಗೆ ಹೇಳಿದ್ದಾದ ಮೇಲೆ...
"ರಾಜೂ...ಕೊಂಚ ಹಾಸಿಗೆ ಹಾಸಪ್ಪ, ತುಂಬಾ ಸುಸ್ತಾಗಿದೆ...ಬೆಳಗ್ಗೆ ಬೇಗ ಎದ್ದೇಳು, ಗುಂಡು ಮಾಮ ಮನೆಗೆ ಹೋಗಿಬರೋಣ, ಅವಳ ಮಗಳು ಸುಮಾ ಇದೇ ಊರಲ್ಲಿ ಕೆಲಸ ಮಾಡ್ತಿದ್ದಾಳಂತೆ, ಸುಮ್ಮನೆ ಹಾಗೆ ಗಮನಿಸು, ಮನಸ್ಸಿಗೆ ಹಿಡುಸಿದರೆ ಮದುವೆ ಬಗ್ಗೆ ಮಾತಾಡೋಣ..."
"ಅಮ್ಮ...ದುಡ್ಡು ಬೇಕೂ ಅಂದಿದ್ಯಲ್ಲ..."...
"ನಾಳೆ ಸಂಜೆ ಊರಿಗೆ ಹೋಗಬೇಕಾದ್ರೆ ಕೊಡೋ...ಈ ಸರಿ ಹೊತ್ತಲ್ಲಿ ಯಾಕೆ?"
ರಾಜನಿಗೆ ಕಳುವಿನ ಬಗ್ಗೆ ಅಮ್ಮನಿಗೆ ಹೇಳಬೇಕೂ ಎಂದು ನಾಲಿಗೆ ತುದಿಗೆ ಬಂದರೂ,
ಅಮ್ಮ ಸುಮ್ಮನೆ ಆತಂಕ ಪಡುತ್ತಾರೆ, ಊರಿನಿಂದ ಬಂದು ಸುಸ್ತಾಗಿದೆ, ಇದರ ಬಗ್ಗೆ ತಿಳಿಸಿದರೆ ರಾತ್ರಿಯೆಲ್ಲ ನಿದ್ದೆ ಮಾಡುವುದಿಲ್ಲವೆಂದು ಸುಮ್ಮನಾದ...
ಸೀನ ಕೊಟ್ಟ ಹಣ ಭದ್ರವಾಗಿದೆಯೆಂದು ಮತ್ತೊಮ್ಮೆ ಕಪಾಟು ನೋಡಿ, ಅಮ್ಮನ ಪಕ್ಕದಲ್ಲಿ ಮಲಗಿದ ರಾಜ...

***

ಅಮ್ಮ ರಾಜನನ್ನು ಎಬ್ಬಿಸಿದರು...
"ರಾಜೂ...ಎದ್ದು ಬೇಗ ರೆಡಿ ಆಗು, ಗುಂಡು ಮಾಮ ಮನೆಗೆ ಹೋಗೋಣ...ಬೇಗನೆ ಬರುತ್ತೀವಿ ಎಂದು ನಾನು ಮುಂಚೆಯೇ ತಿಳಿಸಿದ್ದೀನಿ.."...
ಏಳುತ್ತಿದ್ದಂತೆ ಮುಖ ತೊಳೆದ ರಾಜ ಹಣ ಭದ್ರವಾಗಿದೆಯೋ ನೋಡೋಣ ಎಂದು ಪರೀಕ್ಷಿಸಿದ...
ಇಟ್ಟಿದ್ದ ಜಾಗ ಖಾಲಿ ಇರುವುದನ್ನು ನೋಡುತ್ತಿದ್ದಂತೆ ಎದೆ ಧಸಕ್ ಎಂದಿತು...!
ತಕ್ಷಣವೇ ಕೂಗಿದ..."ಅಮ್ಮಾ! ಅಮ್ಮಾ! ನಾನು ನೆನ್ನೆ ಇಟ್ಟ ಹಣ ಕಳುವಾಗಿದೆ ಅಮ್ಮಾ...ಈ ಮನೆಯಲ್ಲಿ ಯಾಕೋ ಕಳವು ತೀರ ಹೆಚ್ಚಿದೆ!
ನೆನ್ನೆ ನೀನು ದಣಿದಿದ್ದರಿಂದ ಹೇಳಲಿಲ್ಲ...ಈಗ ಅಣ್ಣನ ಆಪೊರೇಷನ್’ಗೆ ಬೇಕಾದ ದುಡ್ಡು ಎಲ್ಲಿ ಹೊಂದಿಸಲಿ!?"
ಎಂದು ದುಃಖದಿಂದ ಹಾಸಿಗೆ ಮೇಲೆ ರಾಜ ಕುಸಿದ...
"ಕಳುವೆಲ್ಲಾಯ್ತೋ??? ಅಲ್ಲೇ ಅಟ್ಟದ ಮೇಲೆ ಪೆಟ್ಟಿಗೆನಲ್ಲಿ ನಡುರಾತ್ರಿ ಇಟ್ಟೆಯಲ್ಲ, ಆಗಲೇ ಮರೆತು ಹೋಯ್ತಾ?"
"ಇಲ್ಲಮ್ಮ...ನಾನು ಅಟ್ಟದ ಮೇಲಲ್ಲ ಇಟ್ಟಿದ್ದು, ಕಪಾಟಿನಲ್ಲಿ! ಚೆನ್ನಾಗಿ ಜ್ಞಾಪಕವಿದೆ!"
"ಒಮ್ಮೆ ತೆಗೀ ನೋಡೋಣ ಅಟ್ಟದ ಮೇಲಿನ ಪೆಟ್ಟಿಗೆ..."
ರಾಜ ಅಟ್ಟದ ಮೇಲಿನ ಪೆಟ್ಟಿಗೆ ತೆಗೆದ...
"ಎಲ್ಲಿಂದಾ ಬಂತೋ ಇಷ್ಟೊಂದು ದುಡ್ಡೂ???"
"ನಂಗೇನೂ ಗೊತ್ತಿಲ್ಲಮ್ಮ, ಪೆಟ್ಟಿಗೆ ತೆಗೆದೇ ತಿಂಗಳುಗಳಾಯಿತು"
"ಅಯ್ಯೋ ಶಿವನೇ...ಚಿಕ್ಕವನಾದಾಗ ಬರೀ ನಿದ್ದೇಲಿ ಮಾತಾಡ್ತಿದ್ದಿ...ಈಗ ನಿದ್ದೇಲಿ ಓಡಾಡಕ್ಕೆ ಶುರು ಮಾಡಿದೀಯೇನೋ??!!!
ನಡೀ ಗುಂಡು ಮಾಮ ಮನೆಗೆ ಹೋಗೋ ಹೊತ್ತಾಯ್ತು...ಮದುವೆ ಆದ ಮೇಲೆ ಮಂಚಕ್ಕೆ ಕಟ್ಟಿ ಹಾಕ್ತಾಳೆ ನಿನ್ನ ಹೆಂಡತಿ"
ಎಂದು ನಕ್ಕು, ರಾಜನ ತಲೆ ಮಟುಕಿದ ಅಮ್ಮ ಎದ್ದು ಹೋದರು...
ಪೆಟ್ಟಿಗೆಯಲ್ಲಿದ್ದ ರಾಶಿ ಹಣವನ್ನು ನೋಡುತ್ತಾ ಪೆಚ್ಚಾಗಿ ಕುಳಿತ ರಾಜ!


--ಶ್ರೀ
(೩೦-ಆಗಸ್ಟ್-೨೦೦೮)

No comments: