Thursday, August 7, 2008

ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)

"ಬೇಡಾ ಅಂದ್ರೆ ಬೇಡ!!! ನಾಳೆ ಬೆಳಗ್ಗೆ ಎದ್ದು ಬಾ ಪರವಾಗಿಲ್ಲ..."
"ಹೋಗಮ್ಮ...ನಿಂದು ಒಂದು ಯಾವಾಗ್ಲೂ ಗೋಳು..."
"ನಾನು ಎಷ್ಟು ಸರತಿ ಹೇಳಿದ್ರೂ ಕೇಳಲ್ಲ...ಅಮ್ಮನ ಮಾತು ನಿಮಗೆಲ್ಲಿ ಪಥ್ಯ? ಏನಾದ್ರೂ ಮಾಡ್ಕೊ ಹೋಗು"
ಫೊನ್ ಕುಕ್ಕಿದರು ಅಮ್ಮ...

"ಯಾಕಮ್ಮ ಯೋಚನೆ ಮಾಡ್ತೀಯ???...ಎಷ್ಟೋ ಸರತಿ ಪುಟ್ಟಿ ಹೀಗೆ ಬರಲ್ವಾ?"
ಎಂದು ಹತ್ತೊಂಬತ್ತು ವರ್ಷದ ರಾಜ ಹೇಳಿದ ಮಾತು ಅಮ್ಮನ ಕಿವಿಗೆ ಬೀಳಲಿಲ್ಲ...

ಅಮ್ಮನ ಮೂಡ್ ಯಾಕೊ ಸರಿ ಇರಲಿಲ್ಲ...ಎಷ್ಟೊ ಸರತಿ ಪುಟ್ಟಿ ಮಧ್ಯ ರಾತ್ರಿ ಬಂದದ್ದುಂಟು...
ಆದರೂ ಅಮ್ಮನಿಗೆ ಯಾಕೋ ಆತಂಕವಾಗಿತ್ತು ಇಂದು...

ಮನಸ್ಸಲ್ಲೇ ಕೊರಗಿದರು ಅಮ್ಮ
"ಇವರಿಗೇನು ಗೊತ್ತಾಗತ್ತೆ...ಹುಡುಗ್ ಬುದ್ದಿ! ಕಾಲ ಸರಿ ಇಲ್ಲ...ದೇವರು ಇವರಿಗೆ ಯಾವಾಗ ಬುದ್ಧಿ ಕೊಡ್ತಾನೋ???"

***

"ಛೆ! ಅಮ್ಮನ ಮಾತು ಕೇಳಬೇಕಿತ್ತು! ಇವತ್ತು ಯಾಕೋ ಅಮ್ಮ ಸ್ವಲ್ಪ ಜಾಸ್ತಿನೇ ಗಲಾಟೆ ಮಾಡಿದ್ರು...
ಆಫೀಸ್ನಿಂದ ಸ್ವಲ್ಪ ಬೇಗ ಹೊರಡಬೇಕಿತ್ತು...ಇಲ್ಲ ಅಮ್ಮ ಹೇಳಿದ್ ಹಾಗೆ ಬೆಳಗ್ಗೆ ಎದ್ದು ಮನೆಗೆ ಹೋಗಬೇಕಿತ್ತು!
ಎಲ್ಲಿ ಬಂದು ಸಿಕ್ಕಿ ಹಾಕಿ ಕೊಂಡಿದ್ದೀನಿ ನಾನು!"...ಸುತ್ತ ಕಣ್ಣು ಹಾಯಿಸಿದಳು ಪುಟ್ಟಿ...
ಹತ್ತಿರ ಯಾರು ಕಣ್ಣಿಗೆ ಬೀಳಲಿಲ್ಲ...

ನಡು ರಾತ್ರಿ ಆಫೀಸಿಂದ ಹೊರಟಿದ್ದಳು ಪುಟ್ಟಿ...
ಸಮಯ ೨.೩೦ ಆಗಿತ್ತು...ಎಂದೂ ಇಲ್ಲದ್ದು ಇಂದು ಕೆಂಪೇಗೌಡ ರಸ್ತೆಯಲ್ಲೂ ಇಂದು ಯಾರೂ ಕಾಣುತ್ತಿಲ್ಲ..!

"ಛೇ! ಗಾಡಿ ಇಲ್ಲೇ ಕೆಡಬೇಕಾ?" ಮನಸಲ್ಲೇ ಶಪಿಸಿದಳು ಪುಟ್ಟಿ...
ಪುಟ್ಟಿ ಆ ರೀತಿ ಶಪಿಸಲು ಕಾರಣವಿತ್ತು...
ಹೇಳಿ ಕೇಳಿ ಅದು ಕಾರ್ಪೊರೇಶನ್ ಜಾಗ! ನಿರ್ಜನ ಪ್ರದೇಶ ಅನ್ನುವದಕ್ಕೆ ಆಗುವುದೇ ಇಲ್ಲ...
ಆದ್ರೆ ಕ್ಯಾಬ್ ಕೆಟ್ಟ ಜಾಗದಲ್ಲಿ ಯಾರೂ ಕಾಣುತ್ತಿರಲಿಲ್ಲ!

ಇನ್ನು ಒಂದು ಫ಼ರ್ಲಾಂಗ್ ಮುಂಚೆಯಾಗಿದ್ದರೆ ಅಲಸೂರು ಗೇಟ್ ಪೋಲೀಸ್ ಸ್ಟೇಶನ್ ಇದೆ!
ಇನ್ನೆರಡು ಫ಼ರ್ಲಾಂಗ್ ಆ ಕಡೆ ಮೈಸೂರು ಬ್ಯಾಂಕ್! ಅಲ್ಲಿ ಹತ್ತಿರ ಹೆಚ್ಚು ಜನರಿರುತ್ತಾರೆ...
ಎರಡರ ಮಧ್ಯೆ ವಿಶಾಲ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿತ್ತು!

ಪುಟ್ಟಿ ಅಂದಿನ ದಿನದ ಬಗ್ಗೆ ಮೆಲಕು ಹಾಕಿದಳು...

ಪುಟ್ಟಿಗೆ ಅಂದಿನ ದಿನವೇ ಕೆಟ್ಟದಾಗಿತ್ತು...
ಬೆಳಗ್ಗೆಯಿಂದ ಮಾಡಿದ ಕೆಲಸವೆಲ್ಲ ತಪ್ಪಾಗಿತ್ತು...ಇದನ್ನು ತಿಳಿದ ಮಾನೇಜರ್ ಹರಿಹಾಯ್ದಿದ್ದ...
ಮಾರನೇಯ ದಿನವೇ ಮಾನೇಜರ್ ಕ್ಲೈಂಟ್'ಗೆ ಡೆಮೋ ತೋರಿಸಬೇಕು ಅಂತ ಪುಟ್ಟಿಯ ತಲೆ ಮೇಲೆ ಕೂತಿದ್ದ!
ಪಾಪ ಪುಟ್ಟಿ! ತಪ್ಪನ್ನೆಲ್ಲ ಸರಿ ಪಡಿಸಲು ಆಫೀಸಿನಲ್ಲೆ ರಾತ್ರಿಯೇ ಕೂತಿದ್ದಳು!
ಮನೆಗೆ ಹೊರಡಲು ಕ್ಯಾಬ್ ಬಾಗಿಲು ತೆರೆದಾಗ
"ಬನ್ನಿ ಮೇಡಮ್!" ಅಂತ ಎಂದಿಗಿಂತ ಹೆಚ್ಚಿಗೆ ಅಕ್ಕರೆಯಿಂದ ಕರೆದಿದ್ದ ಆ ಕ್ಯಾಬ್ ಡ್ರೈವರ್!
ಆ ಕ್ಯಾಬ್ ಡ್ರೈವರ್ ಕರಿಯನನ್ನು ಕಂಡರೆ ಪುಟ್ಟಿಗೆ ಆಗದು ...
ಅವನ ಗಡಸು ಧ್ವನಿ, ದಪ್ಪ ಮೀಸೆ, ಓಮ್ ಪುರಿ ಕೆನ್ನೆ ಯಾವುದೂ ಹಿಡಿಸುವುದಿಲ್ಲ...
"ಥಥ್! ಇಂದು ಇವನೇ ಬರಬೇಕೆ!" ಎನ್ನುತ್ತಾ ಕಾರಿನಲ್ಲಿ ಕುಳಿತಿದ್ದಳು ಪುಟ್ಟಿ...
ದಾರಿಯಲ್ಲಿ ಬರುವಾಗ ಕಾರ್ಪೊರ್‍ಏಶನ್ ಬಳಿ ಕಾರಿನ ಗ್ಯಾಸ್ ಖಾಲಿ ಆಗಿದೆ...

"ಮೇಡಮ್! ನನ್ ಕಂಪನೀದೇ ಇನ್ನೊಂದ್ ಕ್ಯಾಬಿದೇ ಈ ಕಡೇನೇ ಹೋಗ್ತಾ ಇದ್ಯಂತೆ...
ಒಂದ್ ಐದು ನಿಮಿಷ ಅಷ್ಟೇ ಸಿಲಿಂಡರ್ ಬರತ್ತೆ! ಪ್ಲೀಸ್ ವೈಟ್ ಮಾಡಿ"

ಹಾಗೆ ಆ ಕರಿಯ ಹೇಳಿ ಸುಮಾರು ಹದಿನೈದು ನಿಮಿಷಕ್ಕೂ ಮೇಲಾಗಿತ್ತು...
ಅಮ್ಮನ ಬೈಗುಳ ಮತ್ತೆ ಜ್ಞಾಪಕಕ್ಕೆ ಬಂತು...

ಕರಿಯ ಫೋನ್ ಮಾಡುವಾಗ ಗಮನಿಸಿದ್ದಳು ಪುಟ್ಟಿ...
ಅವನು ಮಾತಾಡುವುದು ಏನೂ ಅರ್ಥ ಆಗಲಿಲ್ಲ...ತುಳುವೋ ಕೊಂಕಣಿಯೋ ಇರಬೇಕು...
ನಗ್ತಾ ನಗ್ತಾ ಮಾತಾಡುತ್ತಿದ್ದ ಆ ಕಡೆಯವನ ಜೊತೆ...

"ಸಿಲಿಂಡರ್ ಖಾಲಿ ಆದ್ರೆ ನಗೋದು ಏನಿದೆ???"
ಮನಸ್ಸಲ್ಲೇ ರೇಗಿದಳು ಪುಟ್ಟಿ...

ಎರಡು ದಿನದ ಹಿಂದೆಯಷ್ಟೇ ಪ್ರತಿಭಾ ಎಂಬ ಕಾಲ್ ಸೆಂಟರ್ ಹುಡುಗಿಯ ಪ್ರಕರಣ ನಡೆದಿತ್ತು...!
ಎಂದೂ ಭಯಪಡದ ಪುಟ್ಟಿಯ ಮನಸಲ್ಲೂ ಈ ಯೋಚನೆ ಹಾಯದಿರಲಿಲ್ಲ...
ಮತ್ತೊಮ್ಮೆ ನೋಡಿದಳು ಡ್ರೈವರ್ ಕಡೆಗೆ...ಅವನು ನಸು ನಕ್ಕ "ಇನ್ನೇನ್ ಬರತ್ತೆ ಮೇಡಮ್!"...
ಅವನ ಆ ನಗೆ ಪುಟ್ಟಿಗೆ ಹಿಡಿಸದು...
"ಕಾರಿನಲ್ಲಿ ಇನ್ನೋಂದು ಸಿಲಿಂಡರ್ ಇದ್ದಂತಿತ್ತು...ಈ ಕರಿಯ ಸುಳ್ಳು ಹೇಳುತ್ತಿದ್ದಾನಾ?"
"ಯಾರಿಗೋ ಫೋನ್ ಮಾಡಿ ನಗ್ ನಗ್ತಾ ಮಾತಾಡ್'ದ! ಈಡಿಯಟ್!"

ಪ್ರತಿಭಾ ಬಗ್ಗೆ ಯೋಚಿಸುತ್ತ ಪುಟ್ಟಿಗೆ ಸ್ವಲ್ಪ ದಿಗಿಲೇ ಆಯಿತು...
ತಮ್ಮ ಆ ಪ್ರಕರಣವಾದ ಮಾರನೇ ದಿನವೇ ಹೇಳಿದ್ದ...ಖಾರದ ಪುಡಿ ಪರ್ಸ್'ನಲ್ಲಿ ಇಟ್ಟುಕೋ ಎಂದು...
ಇಟ್ಟುಕೊಂಡಿಲ್ಲ!.."ಇವತ್ತು ಪಾರಾದರೆ ನಾಳೆಯಿಂದ ತಪ್ಪದೇ ಇಡಬೇಕು..."
ಕರ್ಮಕ್ಕೆ ಮೊಬೈಲ್ ಬ್ಯಾಟರೀ ಬೇರೆ ಮುಗಿದಿತ್ತು, ತಮ್ಮನನ್ನು ಗಾಡಿಯಲ್ಲಿ ಬರಹೇಳಲೂ ಆಗುವುದಿಲ್ಲ!
ಪುಟ್ಟಿ ಸಮಯಕ್ಕೆ ಚಾರ್ಜ್ ಮಾಡುವುದಿಲ್ಲವೆಂದು ಯಾವಾಗಲೂ ಬಯ್ಸಿಕೊಳ್ಳುವವಳೇ!
ಇಂದು ಈ ರೀತಿ ಕೈ ಕೊಟ್ಟಿತ್ತು...!
ಸುತ್ತಲೂ ಒಂದು ಕಾಯಿನ್ ಬೂತ್ ಕೂಡ ಕಾಣಲಿಲ್ಲ...!

ಮತ್ತೊಮ್ಮೆ ಸುತ್ತ ನೋಡಿದಳು ಪುಟ್ಟಿ...ಸುಮಾರು ದೂರದಲ್ಲಿ ಯಾರೋ ಮುಸುಕು ಹೊದ್ದಂತೆ ಕಂಡಿತು...
ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಅವನನ್ನ ಸಹಾಯಕ್ಕೆ ಕರೆಯಬಹುದೇ ಎಂಬ ಯೋಚನೆ ಪುಟ್ಟಿಯ ಮನಸಲ್ಲಿ ಹರಿಯಿತು...
ಅಷ್ಟರಲ್ಲೆ ಪಕ್ಕದ ಮೈದಾನದ ಕಾಂಪೌಂಡ್ ಮೇಲಿಂದ ಒಂದು ನಾಯಿ ಎಗರಿತು...
ಇದನ್ನು ನಿರೀಕ್ಷಿಸದ ಪುಟ್ಟಿ ಥರಗುಟ್ಟಿದಳು!

ಕೊನೆಗೂ ಇನ್ನೊಂದು ಕ್ಯಾಬ್ ಬಂತು...ಮತ್ತೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದರೆ!
ಇಬ್ಬರೂ ನಗುತ್ತಿದ್ದಾರೆ...! ಸಿಲಿಂಡರ್ ಅಳವಡಿಸಿದ್ದಾಯಿತು...
"ಬನ್ನಿ ಮೇಡಮ್ ಆಗ್ಲೆ ತುಂಬಾ ಲೇಟ್ ಆಗಿದೆ" ಅಂತ ಕರೆದ...
ನಮ್ಮ ಕ್ಯಾಬ್ ಹೊರಟಿತು...ಇನ್ನು ಹೊರಟು ಸ್ವಲ್ಪ ದೂರವೂ ಹೊಗಿರಲಿಲ್ಲ!
ಮತ್ತೆ ಕಾರನ್ನು ಪಕ್ಕಕ್ಕೆ ನಿಲ್ಲಿಸಿದ ಕರಿಯ!
"ಮತ್ತೆ ಏನಾಯ್ತು???" "ಥೂ! ಕ್ಲಚ್ ವೈರ್ ಕಟ್ ಆಯ್ತು ಅಂತ ಕಾಣತ್ತೆ - ಯಾಕೊ ಟೈಮ್ ಸರಿ ಇಲ್ಲ"
ಮತ್ತೆ ಕರೆ ಮಾಡಿದ, ಮತ್ತದೇ ಭಾಷೆ!
ಹೆಚ್ಚು ದೂರ ಹೋಗಿರಲಿಲ್ಲವಾದ್ದರಿಂದ, ಇನ್ನೊಬ್ಬ ಡ್ರೈವರ್ ಎರಡು ನಿಮಿಷದಲ್ಲೇ ಬಂದ...
"ಮೇಡಮ್! ಒಂದು ಕೆಲಸ ಮಾಡೋಣ...ನಾವು ನನ್ ಫ್ರೆಂಡ್ ಕಾರಲ್ಲೇ ನಿಮ್ಮನ್ನ ಡ್ರಾಪ್ ಮಾಡಿ ಮತ್ತೆ ಬಂದು ರಿಪೇರಿ ಮಾಡ್ತೀವಿ"
ಇದನ್ನು ಕೇಳುತ್ತಿದ್ದಂತೆ ಪುಟ್ಟಿಯ ಮೈ ತುಸು ಕಂಪಿಸಿತು!

ಏನು ಮಾಡುವುದು ಎಂದು ತಿಳಿಯಲಿಲ್ಲ...ಬೇರೆ ದಾರಿ ತೋಚಲಿಲ್ಲ...
ಒಂದು ಕಡೆ ಭಯ...ಇನ್ನೊಂದು ಕಡೆ ಮೊಂಡು ಧೈರ್ಯ ಏನು ಆಗುವುದಿಲ್ಲ ಎಂದು...
"ಆಗಲಿ ಏನಾಗುವುದೋ ನೋಡೇ ಬಿಡೋಣ! ಕೃಷ್ಣ ಎಂದೂ ಕೈ ಬಿಡುವಿದಿಲ್ಲ ನನ್ನನ್ನು ಕಾಯುತ್ತಾನೆ" ಎಂದು ಹೊರಟಳು...

ಮತ್ತೊಂದು ಕ್ಯಾಬ್'ನಲ್ಲಿ ಅವರಿಬ್ಬರು ಮತ್ತು ಪುಟ್ಟಿ...ಏನಾಗುವುದೋ ಎಂಬ ಹಿಂಜರಿಕೆಯಲ್ಲೆ ಹಿಂದೆ ಕುಳಿತಳು ಪುಟ್ಟಿ!
ಅವರಿಬ್ಬರೂ ಮುಂದಿನ ಸೀಟಿನಲ್ಲಿ ಕುಳಿತಿದ್ದಾರೆ...
ಹಿಂದೆ ಕುಳಿತು ಕಾರು ಹೊರಟ ಮೇಲೆ ಪುಟ್ಟಿಯ ಗಮನಕ್ಕೆ ಬಂದದ್ದು...
ಈ ಕಾರಿನಲ್ಲಿ ಸೆಂಟ್ರಲ್ ಲಾಕ್ ಇದೆ! ನನ್ನನ್ನು ಹೆಚ್ಚು ಕಡಿಮೆ ಇವರು ತಮ್ಮ ಬಲೆಗೆ ಹಾಕಿಕೊಂಡಿದ್ದಾರೆ...

"ಹೀಗೆ ಇವರ ಜೊತೆ ಬರಲು ಒಪ್ಪಲೇ ಬಾರದಿತ್ತು...ಛೇ! ಆ ಕರಿಯನದೂ ಬರೀ ನಾಟಕ...ಸಿಲಿಂಡರ್ ಇದ್ದಂತಿತ್ತು...ಆಮೇಲೆ ಅವನು ಬಂದಮೇಲೆ ಕ್ಲಚ್ ನಾಟಕ!" ಎದೆ ಢವಗುಟ್ಟಿತು!

"ಮೆಲ್ಲನೆ ಕಾರಿನಿಂದ ಜಿಗಿಯಲೇ?" ನಡು ರಾತ್ರಿಯಲ್ಲಿ ಕಾರು ತುಂಬಾ ವೇಗದಿಂದ ಹೋಗುತ್ತಿದ್ದರಿಂದ ಆ ಯೋಚನೆ ಥಟ್ಟನೇ ಬಿಟ್ಟಳು ಪುಟ್ಟಿ...
ಆದರು ಮೆಲ್ಲನೆ ಲಾಕ್ ತೆಗೆಯುವ ಪ್ರಯತ್ನ ಮಾಡೋಣ ಎಂದೆನಿಸಿ ಪ್ರಯತ್ನಿಸಿದಾಗ ತಿಳಿಯಿತು ಇದಕ್ಕೆ ಚೈಲ್ಡ್ ಲಾಕ್ ಮಾಡಿದ್ದಾರೆ ಎಂದು!
ತನ್ನ ಸ್ಥಿತಿ-ಅಸಹಾಯಕತೆ ತಿಳಿದ ಪುಟ್ಟಿಯ ಕಣ್ಣುಗಳು ನೀರೂರಿದವು...

ಕಾರ್ ರೊಯ್ಯನೆ ಹೋಗುತ್ತಿತ್ತು...ಅವರಿಬ್ಬರು ಅವರ ಪಾಟಿಗೆ ಮಾತನಾಡುತ್ತಿದ್ದರು...
ಜೋರಾಗಿ ನಗುತ್ತಿದ್ದರು...
ಪುಟ್ಟಿ ಊರಗಲ ಕಣ್ಣ ಬಿಟ್ಟು ಗಮನಿಸುತ್ತಿದ್ದಳು ಎಲ್ಲಿ ಬೇರೆ ಕಡೆಗೆ ಕರೆದೊಯ್ಯುವರೋ!
ಮನಸಿನಲ್ಲಿ ನೂರಾರು ಯೋಚನೆಗಳು...
"ಇವರಿಬ್ಬರೂ ಎನಾದರೂ ಮಾಡಿದರೆ ಏನು ಮಾಡುವುದು?ಕಿರುಚಬೇಕೆ? ನನ್ನ ಬಳಿ ಚಾಕು ಅಥವಾ ಯಾವುದೇ ಆಯುಧ ಇಲ್ಲ? ಎನು ಮಾಡುವುದು?
ಪರ್ಸ್ ಬಿಟ್ಟರೆ ಏನು ಇಲ್ಲ...ಇವರಿಬ್ಬರೂ ಧಾಂಡಿಗರಂತಿದ್ದಾರೆ!"

ಅಷ್ಟರಲ್ಲೆ ಕಾರು ಗಕ್ಕನೆ ನಿಂತಿತು...
ಯೋಚನೆಗಳಲ್ಲಿ ಮುಳುಗಿದ್ದ ಪುಟ್ಟಿಯನ್ನು ಎಚ್ಚರಿಸಿತು ಅದೇ ಗಡಸು ಧ್ವನಿ
"ಇಲ್ಲಿ ಸೈನ್ ಮಾಡಿ ಮೇಡಮ್! ತುಂಬಾ ಸಾರಿ! ನಿಮಗೆ ತುಂಬಾ ಕಷ್ಟ ಆಯ್ತು"
ಪುಟ್ಟಿ ಕಿಟಕಿ ಆಚೆ ನೋಡಿದಳು...ಅರೆ! ಮನೆ ಬಂದಿದೆ!
ಅಷ್ಟರಲ್ಲೆ ಕಾರ್ ಶಬ್ದ ಕೇಳಿ ಅಮ್ಮ, ತಮ್ಮ ಹೊರಬಂದರು!
ಡ್ರೈವರ್ ಹೇಳುತ್ತಿದ್ದ..."ಇಷ್ಟು ಕಷ್ಟ ಆದ್ರು ಈ ಅವಾಂತರದಿಂದ ಒಂದ್ ಉಪಯೋಗ ಆಯ್ತು ಮೇಡಮ್!
ನೋಡಿ...ಇವನು ನನ್ ಚಡ್ಡಿ ದೋಸ್ತ್! ಇದೇ ಊರಲ್ಲಿದ್ರೂ ಇಬ್ರೂ ಡ್ರೈವಿಂಗ್ ಕೆಲಸದಲ್ಲಿದ್ರೂ ೫ ವರ್ಷದಿಂದ ಸಿಕ್ಕಿರಲಿಲ್ಲ!
ನಿಮ್ಮಿಂದ ಭೇಟಿ ಮಾಡಿದ ಹಾಗಾಯ್ತು - ಥ್ಯಾಂಕ್ಸ್ ಮೇಡಮ್! ಗೂಡ್ ನೈಟ್!"

ಇಳಿದ ಪುಟ್ಟಿ ಮನೆ ಒಳಗೆ ಓಡಿದಳು...
"ನಿನ್ ಫೋನ್ ಬ್ಯಾಟರಿ ಕೆಟ್ಟು ಹೋದರೆ ಏನಾಯ್ತು, ಡ್ರೈವರ್ ಫೋನ್ ತೊಗೊಂಡ್ ಒಂದ್ ಫೋನ್ ಮಾಡಕ್ಕೆ ಆಗ್ತ ಇರಲಿಲ್ವ? ಅಮ್ಮ ಪಾಪ ಎಷ್ಟು ಒದ್ದಾಡಿಬಿಟ್ಟರು ಗೊತ್ತಾ??? ಈಗ ಸರಿಯಾಗಿ ಬೈಸ್ಕೊಳಕ್ಕೆ ರೆಡಿ ಆಗಿರು" ಅಂತ ತಮ್ಮ ಹೇಳಿದಾಗಲೆ ಪುಟ್ಟಿಗೆ ಹೊಳೆದಿದ್ದು ಹಾಗೆ ಕರೆ ಮಾಡಬಹುದಿತ್ತೆಂದು...!!
"ಅಮ್ಮ ಎಷ್ಟೆ ಬಯ್ಯಲಿ ಪರವಾಗಿಲ್ಲ! ಬದುಕಿದೆಯಾ ಬಡ ಜೀವ!" ಎಂದು ನೆಮ್ಮದಿಯಿಂದ ಮುಖ ತೊಳೆದಲು ಪುಟ್ಟಿ...

--ಶ್ರೀನಿವಾಸ ಪ. ಶೇ.
(ಬರೆದದ್ದು ೬-೭ ಆಗಸ್ಟ್ ೨೦೦೮ ನಡು ರಾತ್ರಿ...)

No comments: