Monday, June 27, 2011

ಇಪ್ಪತ್ತು-ಸಾವಿರ ಕಣ್ಣುಗಳು - ನಿಮಗೊಂದು ಪುಟ್ಟ ನಮನ!

ನನ್ನ ಈ ಬ್ಲಾಗ್ ಪುಟ ಇತ್ತೀಚಿಗೆ ೧೦,೦೦೦ ಚಿಟುಕುಗಳನ್ನು(hits) ದಾಟಿತು.
ಇದರಿಂದಾಗಿ ನನ್ನ ಮನದಲ್ಲಿ ತೇಲಿಹೋದ ನೆನಪುಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ..

ಅಕ್ಟೋಬರ್ ೨೦೦೫, ನಮ್ಮ ಆಫೀಸನ್ನು ಹೊಸದೊಂದು ಜಾಗಕ್ಕೆ ಬದಲಾಯಿಸಿದರು...
ಮೊದಲಿನ ಜಾಗಕ್ಕಿಂತ ಊರಿನ ಹೊರಭಾಗದಲ್ಲಿದ್ದರಿಂದ ಕ್ಯಾಬ್/ಶಟಲ್ ವ್ಯವಸ್ಥೆಯನ್ನು ಶುರುಮಾಡಿದರು...
ನಾನು ನನ್ನ ಎರಡು ಚಕ್ರದ ಸಂಗಾತಿಯನ್ನು ಬಿಟ್ಟು, ಕ್ಯಾಬ್ ಹಿಡಿಯಲು ಆರಂಭಿಸಿದೆ...ಇದರಿಂದಾಗಿ ಆಫೀಸಿನಲ್ಲಿರುವ ಹೊಸ ಗೆಳೆಯರ ಪರಿಚಯವಾಯ್ತು...
ಹೆಚ್ಚು ಕಡಿಮೆ ಇವರೆಲ್ಲರೂ ಬೇರೆ ಬೇರೆ ವಿಭಾಗ/ಟೀಮ್‍ಗಳಲ್ಲಿದ್ದವರು...ಇವರಲ್ಲಿ ಕೆಲವರು(೪ ಜನ) ನನಗೆ ಹೆಚ್ಚೇ ಆಪ್ತರಾಗತೊಡಗಿದರು...
ಹೆಚ್ಚು ಹೆಚ್ಚು ಪರಿಚಯಗೊಳ್ಳುತ್ತಿದ್ದಂತೆ, ಈ ನಾಲ್ವರಲ್ಲಿ ಮೂವರು ಕವಿತೆ ಬರೆಯುವವರೆಂದು ತಿಳಿಯಿತು!
ಇವರುಗಳು ಕನ್ನಡಿಗರಲ್ಲವಾದ್ದರಿಂದ, ಅವರು ಹಿಂದಿ/ಇಂಗ್ಲಿಷ್/ತೆಲುಗು ಹೀಗೆ ಬೇರೆ ಭಾಷೆಗಳಲ್ಲಿ ಬರೆಯುತ್ತಿದ್ದರು...
ಕ್ಯಾಬ್‍ನಲ್ಲಿ/ಆಫೀಸಿನಲ್ಲಿ ಸಿಕ್ಕಾಗ ಈ ಕವಿತೆಗಳ ಬಗ್ಗೆ ವಿಚಾರವಿನಿಮಯಗಳೂ/ಚರ್ಚೆಗಳೂ ನಡೆಯುತ್ತಿತ್ತು...
ಇದೇ ಸಮಯದಲ್ಲಿ ನಾನು ಇಂಟರ‍್ನೆಟ್ಟಿನಲ್ಲಿ ತೇಲಾಡಿದ ಒಂದೆರಡು ಕನ್ನಡದ ಕವಿತೆಗಳನ್ನೂ ಓದಲಾರಂಭಿಸಿದ ನೆನಪು...
ನನ್ನ ತಂದೆಯವರು ಮನೆಯಲ್ಲಿ ತಮಾಷೆಗೆ ಹಾಡುತ್ತಿದ್ದ ಚುಟುಕಗಳೂ ನೆನಪಿಗೆ ಬಂದಿರಬಹುದು...
ನಾನೂ ಒಮ್ಮೆ ಕನ್ನಡದಲ್ಲಿ ಒಂದೆರಡು ಕವನಗಳನ್ನು ಬರೆಯಲು ಪ್ರಯತ್ನಿಸೋಣವೆನಿಸಿತು...
ಹೀಗೆ ಒಮ್ಮೆ ಈ ನಾಲ್ವರು ಗೆಳೆಯರೊಂದಿಗೆ ಆಫೀಸಿನಲ್ಲಿ ಕಾಫಿ ಕುಡಿಯುತ್ತಾ ನೋಡಿದ ಕಾಮನಬಿಲ್ಲು ಸ್ಫೂರ್ತಿಯಾಗಿ, ನನ್ನ ಮೊದಲ ಕವನ(?) ಮೂಡಿಬಂತು...
ಹೀಗೆ ಕವಿ/ಕವಯಿತ್ರಿಯರ ನಡುವಿನಲ್ಲಿ ನನ್ನದೊಂದು ಕೊಸರಿರಲಿ ಎಂದು ಮನಸ್ಸಿಗೆ ಬಂದದ್ದನ್ನು ಗೀಚಲಾರಂಭಿಸಿದೆ...
ಬರೆದದ್ದನ್ನು ಇವರುಗಳೊಡನೆ ಹಂಚಿಕೊಳ್ಳುವುದು, ಇವರುಗಳಿಗೆ ತಿಳಿಯುವಂತೆ ಇಂಗ್ಲಿಷ್‍ನಲ್ಲಿ ವಿವರಿಸುವುದು ಹೀಗೆ...
ಇವರುಗಳು ನನ್ನ ಬರಹಗಳನ್ನು ಬ್ಲಾಗ್‍ ನಲ್ಲಿ ಬರೆಯಬೇಕೆಂದೂ, ಕನ್ನಡದ ಬಳಗದಲ್ಲಿ ಹಂಚಿಕೊಳ್ಳಬೇಕೆಂದು ಒತ್ತಾಯಿಸಲಾರಂಭಿಸಿದರು...
ಸರಿ ಇವರ ಒತ್ತಾಯಕ್ಕೆ ಮಣಿದು ನಾನು ಬರೆದ ಕೆಲವು ಕವನ(?)ಗಳನ್ನು ಈ ಟೈಮ್‍ಪಾಸ್ ಕಡ್ಲೇಕಾಯಿಯಲ್ಲಿ ಸೇರಿಸಲು ಅರಂಭಿಸಿದ್ದು...
ಹೀಗೆ ಶುರುವಾದದ್ದು ಟೈಂಪಾಸ್ ಕಡ್ಲೇಕಾಯಿ!

ನನ್ನ ಬ್ಲಾಗಿಗೆ ’ಟೈಂಪಾಸ್ ಕಡ್ಲೇಕಾಯಿ’ಹೆಸರು ಬಂದದ್ದು ಹೇಗೆ ಎಂದು ಹಲವಾರು ಜನ ನನ್ನನ್ನು ಕೇಳಿದ್ದಾರೆ...
ಇದೇನು ದೊಡ್ಡ ಗುಟ್ಟಲ್ಲ ಬಿಡಿ...
ಹೆಸರೇನಿಡಬೇಕೆಂದು ತಲೆ ಹೆಚ್ಚಾಗಿ ಕೆಡಿಸಿಕೊಳ್ಳದೇ, ಬ್ಲಾಗ್ ಶುರು ಮಾಡುವ ಹಿಂದಿನ ದಿನ ತಿಂದಿದ್ದ ನನ್ನ ನೆಚ್ಚಿನ ’ಕಾಂಗ್ರೆಸ್ ಕಡ್ಲೇಕಾಯಿ’ ನೆನೆಯುತ್ತಾ ಕೊಟ್ಟ ಹೆಸರಿದು... :)

ಇದೇ ಸಮಯದಲ್ಲೇ ಸಂಪದ.ನೆಟ್ ಪರಿಚಯವಾದದ್ದು...
ಇದರಿಂದಲೇ ಅದೆಷ್ಟೋ ಹೊಸ ವಿಚಾರಗಳನ್ನು ತಿಳಿಯುತ್ತಾ, ಹೊಸ ಗೆಳೆಯರನ್ನು ಪಡೆಯುತ್ತಾ, ಹಲವಾರು ವಿಧದ ವಿಷಯಗಳ ಮೇಲೆ ನಾನು ಬರೆದದ್ದು!
ಹಲವಾರು ತರಹದ ವ್ಯಕ್ತಿತ್ವಗಳ-ಚಿಂತನೆಗಳ ಪರಿಚಯ...ಅಲ್ಲದೇ, ನಾನು ಬರೆದದಕ್ಕೆ ಮತ್ತೆ ಬರೆಯುವಂತೆ ಉತ್ತೇಜಿಸುವ, ಪ್ರೋತ್ಸಾಹಿಸುವ ವಾತಾವರಣವನ್ನು ಒದಗಿಸಿದ್ದು ಸಂಪದ!
ನಾನಿಂದು ಸಂಪದಕ್ಕೆಷ್ಟು ನಮನ ಸಲ್ಲಿಸಿದರೂ ಸಾಲದು...

ಇದಲ್ಲದೇ, ನನ್ನನ್ನು ಬರೆಯಲು ಪ್ರೋತ್ಸಾಹಿಸಿದ ಬಂಧುಗಳು-ಗೆಳೆಯರು, ಆಪ್ತರೂ ಹಲವಾರು...

ಈ ಬ್ಲಾಗ್ ಪುಟ ತೆರೆದಾಗ ನನಗೆ ’ನಾಲ್ಕು ತಿಂಗಳು ನಡೆಸಬಲ್ಲೆನೇ?’ ಎಂಬ ಅನುಮಾನವಿತ್ತು,
ಆದರೆ, ಹಾಗೂ-ಹೀಗೂ ಮನಕ್ಕೆ ಬಂದದ್ದನ್ನು ಗೀಚುತ್ತ ೪ ವರ್ಷಕ್ಕೂ ಹೆಚ್ಚು ದಿನ ಇದನ್ನು ಕಾಯ್ದುಕೊಂಡಿದ್ದೇನೆ ಎಂದರೆ ನನಗೇ ಅಚ್ಚರಿಯಾಗುತ್ತದೆ!
ಈ ತಾಣವನ್ನು ಒಂದೇ ಆಯಾಮಕ್ಕೆ ಸೀಮಿತಗೊಳಿಸದೆ, ನಾನು ತೆಗೆದ ಚಿತ್ರಗಳನ್ನು, ಪ್ರವಾಸ ಕಥನಗಳನ್ನು, ವ್ಯಂಗ್ಯ ಚಿತ್ರಗಳನ್ನು, ಒಂದೆರಡು ಸಣ್ಣಕಥೆಯನ್ನು ಸೇರಿಸಿದ್ದೀನಿ...
ಇದನ್ನೆಲ್ಲ ಇಷ್ಟು ದಿನ ಓದಿ-ಮೆಚ್ಚಿ-ಹರಸಿ-ಪ್ರೋತ್ಸಾಹಿಸಿದ ನಿಮಗೆಲ್ಲ ಒಂದು ಪುಟ್ಟ ಧನ್ಯವಾದ, ನಮನ, ಥ್ಯಾಂಕ್ಸ್!

--ಶ್ರೀ
(೨೮-ಜೂನ್-೨೦೧೧)

No comments: