ಅದು ಶನಿವಾರ ಸಂಜೆ...
"ಏನು ಕರ್ಮಾನೋ!!! ಸಾಫ್ಟ್ ವೇರ್ ಇಂಜಿನೀರ್ ಬಾಳೇ ಗೋಳು" ಅಂತ ಎಂದಿನಂತೆ ಬಯ್ದುಕೊಂಡು ಆಫೀಸ್ ನಲ್ಲಿ ಕೋಡ್ ಕುಟ್'ತಾ ಕೂತಿದ್ದೆ... 'ಲೇಯ್, ಕಿತ್ತು ಹಾಕಿದ್ದು ಸಾಕು...ಪ್ರಾಜೆಕ್ಟ್ ಮಾಡಿಲ್ಲ ಅಂದ್ರೆ ಪ್ರಾಣ ಏನು ಹೋಗಲ್ಲ, ಇಲ್ಲಿ ಬಾರೋ...' ಅಂತ ನನ್ ಕೊಲೀಗ್ ಕರೆದ...ಏನಪ್ಪಾ ಅಂಥ ನೋಡಿದ್ರೆ, ಆಫೀಸ್ ಕಿಟಕಿ ಪಕ್ಕ ನಿಂತುಕೊಂಡು ಕರೀತಾ ಇದ್ದ ..ಇವನಿಗೋ ಸ್ವಲ್ಪ ಬರ್ಡ್ ವಾಚಿಂಗ್ ಹುಚ್ಚು ...
ಓಹ್! ಬರ್ಡ್ ವಾಚಿಂಗ್ ಅಂದ್ರೆ ಹುಡುಗೀರ್ ನ ನೋಡೋದು ಅಂದ್ಕೊಂಡ್ರಾ??
ಅದು ಹಾಗಲ್ಲ...ಅದು ನಿಜವಾಗಲೂ ಬರ್ಡ್ ವಾಚಿಂಗೇ!! ಅಂದ್ರೆ ಹಕ್ಕಿಗಳನ್ನ ನೋಡೋ ಹುಚ್ಚು ಸ್ವಲ್ಪ...
ಇವನ ಜೊತೆ ಸೇರಿ ನಂಗೂ ಸ್ವಲ್ಪ ಗೀಳು ಹತ್ತಿದೆ...
ಅಂದ್ ಹಾಗೆ ನಂ ಆಫೀಸ್ ಪಕ್ಕದಲ್ಲೇ ಕೆರೆ ಇದೆ...ಬೇಕಾದಷ್ಟು ತರದ ಹಕ್ಕಿಗಳು ಬರತ್ತೆ ಇಲ್ಲಿಗೆ...
ಇವನು ತೋರಿಸಿದ್ಮೇಲೆ ನಂಗೆ ಗೊತ್ತಾಗಿದ್ದು ನಂ ಸುತ್ತ ಎಷ್ಟೊಂದ್ ತರಹದ ಹಕ್ಕಿಗಳು ಹಾರಾಡ್ತವೆ ಅಂಥ..!
ನಂ ಬೆಂಗಳೂರಿನಲ್ಲಿ ಏನಿದ್ರು ಬರೀ ಕಾಗೆ, ಗುಬ್ಬಿ, ಹದ್ದು, ಪಾರಿವಾಳ...ಅಪರೂಪಕ್ಕೆ ಗರುಡ, ಮೈನಾ ಇಸ್ಟೇ ಕಾಣೋದು ಅಂತ ತಿಳ್ಕೊಂಡಿದ್ದೆ! ಅದರಲ್ಲೂ ಗರುಡ ಹಕ್ಕೀನ ಅಮ್ಮ ನನಗೆ ಚಿಕ್ಕಂದಿನಲ್ಲಿ ತೋರಿಸಿ ಕೊಟ್ಟಿದ್ದರಿಂದ ಸುಲುಭವಾಗಿ ಕಂಡು ಹಿಡಿಯುತ್ತೇನೆ...ಹೆಚ್ಚು ಜನಗಳಿಗೆ ಅದು ನಂ ಸುತ್ತಾನೆ ಹಲವು ಬಾರಿ ಕಾಣತ್ತೆ ಅನ್ನೋದರ ಬಗ್ಗೆ ಅರಿವು ಇರಲ್ಲ...ನಾವುಗಳು ಹಾಗೆ ಆಲ್ವಾ? ನಮಗೆ ಇಷ್ಟ ಇದ್ರೆ ಮಾತ್ರನೇ ಯಾವುದೇ ವಿಷಯದ ಬಗ್ಗೆ ಗಮನ...ಇಲ್ಲ ಅಂದ್ರೆ ನಂ ಕಣ್ ಎದುರಗಡೆನೇ ಇದ್ದರೂ ನಮಗೆ ಬೇಕಾಗಿಲ್ಲ ಅದು...! ವಸ್ತುಗಳು ಇದ್ದೂ ಇಲ್ಲದ ಹಾಗೆ ಇರತ್ವೆ ! ಜೋತೆಗಿರೋ ಮನುಷ್ಯರೂ ಅಷ್ಟೆ....!
ಈಗೀಗ ನನಗೆ ಹಕ್ಕಿ ನೋಡೋ ಹುಚ್ಚು ಹಿಡಿದಿದ್ರಿಂದ, ಕಿಟಕಿ ಬಳಿ ಹೋದೆ...
ಗೆಳೆಯ ನನಗೆ ತೋರಿಸಿದ ..."ಅಲ್ಲಿ ನೋಡು...'White breasted KingFisher' ಕೂತಿದೆ"...
ಹಲವಾರು ಬಾರಿ ನೋಡಿದೀನಿ ಈ King Fisher'ನ ...ನಾನಂದೆ ..."ಏನಕ್ಕಾದ್ರು King Fisher ಅಂತಾರೋ ಇದನ್ನ!!! ಯಾವಾಗ್ಲೂ ತಂತಿ ಮೇಲೆ ಸೋಮಾರಿ ತರ ಕೂತಿರತ್ತೆ...! ಒಂದ್ ಸರ್ತಿನೂ ಮೀನು ಹಿಡಿದಿದ್ದು ನೋಡೇ ಇಲ್ಲ !"...ಹೌದು... ನಾನು ಮೀನು ಹಿಡಿಯೋದನ್ನ ನೋಡೋಕ್ಕೆ ಎಷ್ಟೋ ನಿಮಿಷಗಳು ಕಾದದ್ದುಂಟು...ಆದ್ರೆ ಎಂದೂ ಮೀನು ಹಿಡಿದ್ದಿದ್ದನ್ನ ನೋಡಿಲ್ಲ...ಇಂದು ಕೂಡ ಎಂದಿನಂತೆ ಸುಮ್ಮನೆ ತಂತಿ ಮೇಲೆ ಕೂತಿತ್ತು...ನಾನಂದೆ "ಇದನ್ನ ಮಿಂಚುಳ್ಳಿ ಅಂತಾರೆ ಕನ್ನಡದಲ್ಲಿ" ...
ಅವನಿಗೆ ಕನ್ನಡ ಹೆಚ್ಚು ಬರಲ್ಲ..." 'ಮಿಂಚುಳ್ಳಿ ' ನಾ??? ಇದೇನು noun'ಆ??? (ನಾಮಪದಾನ) ಆಥವಾ ಸಂಧಿ ಸಮಾಸ ಇದ್ಯಾ?"...ನಂಗೆ ಉತ್ತರ ಗೊತ್ತಿಲ್ಲ! ನನಗೆ ತಿಳಿದ ಮಟ್ಟಿಗೆ ಇದು ನಾಮ ಪದ ಅಷ್ಟೆ! ತಲೆಗೆ ಹೊಳೆದಿದ್ದು ಬರೀ 'ಈರುಳ್ಳಿ , ಬೆಳ್ಳುಳ್ಳಿ ' ಮಾತ್ರ! ಊಹೂಂ! ಅದಕ್ಕೂ ಮಿಂಚುಳ್ಳಿಗೂ ಯಾವ ಸಂಬಂಧನೂ ಸಿಗಲಿಲ್ಲ..."Nounಏ ಇರಬೇಕು"...
ಅಷ್ಟರಲ್ಲೇ ಮಿಂಚುಳ್ಳಿ ಹಾರಿತು...ಇಬ್ರೂ ನೋಡ್ತಾ ಇದ್ವಿ ಕಿಟಕಿಯಿಂದ....
ಮಿಂಚುಳ್ಳಿ ಕೆಳಕ್ಕೆ ಹಾರಿ ಸರಿ ಸುಮಾರು ನೀರಿನ ಮಟ್ಟದಲ್ಲೇ ಹಾರುತ್ತಾ ಮುಂದೆ ಹೋಯಿತು......
ಮನಸ್ಸು ಈ ಕಡೆ ವೇಗವಾಗಿ ಓಡ್ತಾ ಇತ್ತು ...ಇವತ್ತಾದ್ರೂ ಮೀನು ಹಿಡಿಯೋದು ನೋಡ್ತೀನಾ ಅಂಥ...ಅಷ್ಟರಲ್ಲೇ ನೀರಿನ ಒಳಗೆ ಒಂದು ನೀರು ಕಾಗೆ ಕಾಣಿಸ್ತು !!! (Little Cormorant ಅಂತಾರೆ ಇಂಗ್ಲಿಷ್ ನಲ್ಲಿ )
ಅರೆ! ನಂ ಮಿಂಚುಳ್ಳಿ ಯಾಕೆ ನೀರು ಕಾಗೆ ಹತ್ತಿರ ಹೋಗ್ತಾ ಇದೆ??? ಮಿಂಚುಳ್ಳಿ ನೀರು ಕಾಗೆ ತೀರಾ ಹತ್ತಿರ ಹೋಗಿ ಅದರ ಬಾಯಲ್ಲಿ ಇರೋ ಮೀನನ್ನ ಲಪಕ್ ಅಂಥ ಕಿತ್ಕೊಂಡು ಹಾಗೆ ಇನ್ನೊಂದು ದಡಕ್ಕೆ ಹಾರಿ ಹೋಯ್ತು! ನಾವಿಬ್ಬರೂ ಹಾಗೆ ಬಿಟ್ಟ ಬಾಯಿ ಬಿಟ್ಟ ಹಾಗೆ ನೋಡ್ತಾ ಇದ್ವಿ....!
ಇಬ್ಬರೂ ಒಟ್ಟಿಗೆ ಕಿರುಚಿದ್ವೀ "ನೋಡಿದ್ಯಾ???!!!!"...ಅರೆ! ಮಿಂಚುಳ್ಳಿನಾ ನಾನು ಸೋಮಾರಿ ಅಂಥಾ ಬಯ್ಯುತ್ತ ಇದ್ದೆ, ಇಲ್ಲಿ ನೋಡಿದ್ರೆ ಇದರ ನಿಜ ಬಣ್ಣ ಬಯಲಾಗಿತ್ತು...
ಏನು ಕಿಲಾಡಿನಪ್ಪ ಈ ಹಕ್ಕಿ! ಪಾಪ ನೀರು ಕಾಗೆ! ಅದು ಪೆಚ್ಚಾಗಿ ಮತ್ತೆ ಮತ್ತೊಂದು ಮೀನು ಹಿಡಿಯಲು ಮತ್ತೊಮ್ಮೆ ಮುಳುಗು ಹಾಕಿತು...
ಮನದಲ್ಲಿ ತಕ್ಷಣವೇ ಹಾಡು ನಲಿಯಿತು....' ಮಳ್ಳಿ ಮಳ್ಳಿ ಮಿಂಚುಳ್ಳಿ ....! ಜಾಣ ಜಾಣ ಕಾಜಾಣ...!'
ಈ ಹಾಡನ್ನು ಬರೆದವರು ಯಾರೋ ಗೊತ್ತಿಲ್ಲ ನಂಗೆ ಯಾವ ಫಿಲಂ ಅಂತಾನು ಗೊತ್ತಿಲ್ಲ ...ಆದ್ರೆ ನಿಜವಾದ ಮಳ್ಳಿನೇ ಅದು!
'ಕೈಗೆ ಬಂದ ತುತ್ತು ಬಾಯಿಗಿಲ್ಲ' ಅಂತ ಗಾದೆ ಇದೆ...ಬಾಯಿಗೆ ಬಂದ್ರು ಹೊಟ್ಟೆಗಿಲ್ದೆ ಇರಬಹುದು ಅಂತ ಕಲಿಸಿತ್ತು ಈ ಅನುಭವ!
--ಶ್ರೀ
3 comments:
ವಾಹ್... ಇಂಥವನ್ನ ಡಿಸ್ಕವರಿ ಚಾನೆಲ್ ನಲ್ಲಿ ನೋಡಿದ್ದೆ. ನೀವು ತುಂಬಾ ಅದೃಷ್ಟವಂತರು. ತುಂಬಾ ಅಪರೂಪದ ದೃಶ್ಯ ನೋಡಿದೀರಿ.
ಯಾವ ಕೆರೇಲಿ ನೋಡಿದ್ದು?
Thanks! ಕೆರೆ ಹೆಸರು ಗೊತ್ತಿಲ್ಲ ಆಫೀಸ್ ಪಕ್ಕ ಇದೆ...ಸಿ ವಿ ರಾಮನ್ ನಗರ
Post a Comment