Wednesday, June 27, 2007

ಲಾಲಿ

ಪ್ರತಿ ದಿನ, ನನ್ನಕ್ಕನ ಮಗ ಪ್ರದ್ಯುಮ್ನ, ಅಕ್ಕನನ್ನು ಗೋಳು ಹೊಯ್ದುಕೊಳ್ಳುವುದೇ ಈ ಲಾಲಿಗೆ ಸ್ಫೂರ್ತಿ!
ಮಧ್ಯಮಾವತಿ ರಾಗವನ್ನು ಬಳಸಿದ್ದೇನೆ...


ಲಾಲಿ

ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ?
ಬೇಡವೆ ಆಟಕೆ ಪುರುಸೊತ್ತು?
ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ?
ನಿದ್ದೆ ಮಾಡುವ ಹೊತ್ತು ಈಗಾಯ್ತು...||

ಬೆಳಗಿಂದ ನೀನು ಎಷ್ಟೊಂದು ಆಡಿದೆ,
ದಣಿವಿಲ್ಲವೇನೋ ನನ್ನ ರಾಜ
ದಣಿದಿಲ್ಲವೇನೋ ನನ್ನ ಮುದ್ದು ರಾಜಣ್ಣ
ನಿದ್ದೆ ಮಾಡುವ ಹೊತ್ತು ಈಗಾಯ್ತು...||

ನಾಳೆ ಆಡುವೆಯಂತೆ, ತೀಟೆ ಮಾಡುವೆಯಂತೆ,
ನಿದ್ದೆಯ ಮಾಡೋ ಬಂಗಾರ
ನಿದ್ದೆಯ ಮಾಡೋ ಬಂಗಾರ - ದಮ್ಮಯ್ಯ
ಮಲಗುವ ಹೊತ್ತು ಈಗಾಯ್ತು...||

ಹಾಲು ಕೆನ್ನೆಯ ರಾಜ, ಕಪ್ಪು ಕಂಗಳ ತೇಜ
ತೂಗುವೆ ಬಾರೋ ನನ್ನ ಪುಟ್ಟ
ತೂಗುವೆ ಬಾರೋ ನನ್ನ ಮುದ್ದು ಪುಟ್ಟಣ್ಣ
ಮಲಗುವ ಹೊತ್ತು ಈಗಾಯ್ತು...||

ಜೋಗುಳವಾ ಹಾಡುವೆನೋ, ನಿನ್ನ ಮುದ್ದಾಡುವೆನೋ
ಬಿಗಿದಪ್ಪಿ ಹಾಡುವೆನೋ, ನಿನ್ನ ಮುದ್ದಾಡುವೆನೋ
ಮಡಿಲಿಗೆ ಬಾರೋ ತುಂಟಣ್ಣ
ಮಡಿಲಿಗೆ ಬಾರೋ ತುಂಟಣ್ಣ - ನನ್ನೊಡೆಯ
ಮಲಗುವ ಹೊತ್ತು ಈಗಾಯ್ತು...
ನಿದ್ದೆ ಮಾಡುವ ಹೊತ್ತು ಈಗಾಯ್ತು...
ಮಲಗಲು ಬಾರೋ ತುಸು ಹೊತ್ತು...
ಮಲಗುವ ಹೊತ್ತು ಈಗಾಯ್ತು...||

(೨೫-ಜೂನ್-೨೦೦೭)

Tuesday, June 26, 2007

ಪುಟಾಣಿಯ ಹುಟ್ಟು...

ಪುಟಾಣಿಯ ಹುಟ್ಟು...

ನನ್ನ ಸ್ನೇಹಿತ ವಾಸು, ಅಂದು (೨೪-ಏಪ್ರಿಲ್-೨೦೦೭) ರಾತ್ರಿ ಹದಿನೊಂದಕ್ಕೆ ರಿಂಗಿಸಿದ...
"ನನಗೆ ಒಂದು ಹಾಡನ್ನು ಬರೆದು ಕೊಡು. ನಾನು ಸಂಗೀತವನ್ನು ನೀಡಿದ್ದೇನೆ, ನೀನು ಅದಕ್ಕೆ ತಕ್ಕಂತೆ ಸಾಹಿತ್ಯ ಬರೆಯಬೇಕು, ಇದು ಮೈಸೂರಿನಲ್ಲಿ ಮಕ್ಕಳಿಗೋಸ್ಕರ ನಡೆಯುತ್ತಿರುವ ಕಚೇರಿಗಾಗಿ" ಎಂದು!
ನನಗೆ ಕಾಲವಕಾಶ ಇದ್ದದ್ದು ತೀರ ಕಡಿಮೆ, ಕಚೇರಿ ಇದ್ದದ್ದು ೨೯-ಏಪ್ರಿಲ್-೨೦೦೭ ಅಂದರೆ, ನನಗೆ ಸಮಯ ಇದ್ದದ್ದು ಹೆಚ್ಚೆಂದರೆ, ಎರಡು ದಿನ!
ವಾಸು, ಹೊಸದಾದ ಹಾಡನ್ನು ಪ್ರಾಕ್ಟೀಸ್ ಮಾಡಬೇಕಲ್ಲ!
ಆ ವಾರವೋ, ನನಗೆ ಆಫ಼ೀಸಿನ ಕೆಲಸದ ಒತ್ತಡವು ತುಂಬಾ ಹೆಚ್ಚಿತ್ತು...
ನಾನು ವಾಸುವಿಗೆ, "ಪ್ರಯತ್ನ ಮಾಡುತ್ತೇನೆ, ನನ್ನನ್ನು ನಂಬಬೇಡ, ಬೇರೆ ಹಾಡುಗಳ ತಯಾರಿ ನಡೆಸು" ಎಂದೆ.
ಆದರೂ ವಾಸು ಬಿಡದೆ, "ನಾನು ಫೋನ್ ನಲ್ಲಿ ಸಂಗೀತ ಹೇಳುತ್ತೇನೆ, ರೆಕೋರ್ಡ್ ಮಾಡಿಕೋ" ಎಂದ.
ನನ್ನ ಮೊಬೈಲ್ನಲ್ಲೇ ರೆಕೋರ್ಡಿಂಗ್ ಮಾಡಿಕೊಂಡೆ, ಸಂಗೀತ ಬಹಳ ಸೊಗಸಾಗಿತ್ತು.
ಹಾಡು ಮಕ್ಕಳಿಗಾಗಿ ಮತ್ತು ದೇಶಭಕ್ತಿಯ ಬಗ್ಗೆ ಇರಬೇಕೆಂಬ ಕಟ್ಟಪಣೆ ಮಾಡಿ, ನನ್ನನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸಿದ್ದ!!
ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ...ಅಂಡರ್-ಪ್ರಿವಿಲೇಜ್ ಮಕ್ಕಳಿಗಾಗಿ ಎಂಬ ಸೆಂಟಿಮೆಂಟಲ್ ಬ್ಲಾಕ್ ಮೈಲ್ ಬೇರೆ! :)
ಅಂದೇ ರಾತ್ರಿ ಕುಳಿತು, ಈ ಪ್ರಯತ್ನ ಮಾಡಿದೆ.

ವಾಸು ಅದ್ಭುತವಾಗಿ ಹಂಸನಾದ ರಾಗದಲ್ಲಿ ಸಂಯೋಜಿಸಿದ್ದಾನೆೆ...ಸಾಧ್ಯವಾದರೆ, ಆಡಿಯೋ ಕ್ಲಿಪ್ ಸೇರಿಸುತ್ತೇನೆ.
ಈ ಪ್ರಯತ್ನ, ವಾಸುವಿಗೆ ಸಂತೋಷ ತಂದಿದೆ, ಎಂಬುದು ಸಮಾಧಾನಕರ ಸಂಗತಿ.
ನೀವು ನಿಮ್ಮ ಅಭಿಪ್ರಾಯಗಳನ್ನು, ದಯವಿಟ್ಟು ತಿಳಿಸಿ...

-------*-------

ಇಲ್ಲಿ ಕೇಳೋ ಪುಟಾಣಿ

ಇಲ್ಲಿ ಕೇಳೋ ಪುಟಾಣಿ....ನಡೆಸು ನೀನು ದೇಶದ ದೋಣಿ
ಇಲ್ಲಿ ಕೇಳೋ ಪುಟಾಣಿ....ನಡೆಸಬೇಕು ದೇಶದ ದೋಣಿ

ಇಲ್ಲಿ ಕೇಳೋ ಚಿನ್ನಾರಿ...ದೇಶಕೆ ತೋರು ನೀ ದಾರಿ
ನನ್ನ ಮಾತು ಕೇಳು ಚಿನ್ನಾರಿ...ಭವ್ಯತೆಗೆ ಸಾಗಲಿ ದಾರಿ
ಇಲ್ಲಿ ಕೇಳೋ ಚಿನ್ನಾರಿ...ಭವ್ಯತೆಗೆ ನಡೆಯಲಿ ದಾರಿ

ಹೊಸ ಶಕ್ತಿಯನ್ನು ತುಂಬು ಬಾ....
ನವ ಯುಕ್ತಿಯಲ್ಲಿ ನಡೆಸು ಬಾ...
ಶಕ್ತಿಯನ್ನು ತುಂಬು ಬಾ, ನವ ಯುಕ್ತಿಯಲ್ಲಿ ನಡೆಸು ಬಾ
ನಿನ್ನಿಂದಲೇ ದೇಶೋಧ್ಧಾರ...ಭಾರತವು ಅರಳಲು ಸಾಧ್ಯ...
ನಿನ್ನಿಂದಲೇ ದೇಶದುಧ್ಧಾರಾ...ಭಾರತವು ಬೆಳಯಲು ಸಾಧ್ಯ...

ಇಲ್ಲಿ ಕೇಳೋ ಪುಟಾಣಿ....ಇಲ್ಲಿ ಕೇಳೋ ಪುಟಾಣಿ....
ನಿನ್ನಲ್ಲಿದೆ ನಮ್ಮ ಭವಿಷ್ಯ..
ಪುಟ್ಟ ಕೈಯಲ್ಲಿದೆ ನಮ್ಮ ಭವಿಷ್ಯ...
ಭಾರತವ ನಗಿಸಲು ಸಾಧ್ಯ...
ಭಾರತವ ಬೆಳಗಲು ಸಾಧ್ಯ...

ತುಂಬು ನೀ ನವ ಚೇತನ....
ತುಂಬು ನೀ ಹೊಸ ಹುರುಪನ...
ಆಗಲಿಂದು ನವ ನಿರ್ಮಾಣ
ಭಾರತದ ನವ ನಿರ್ಮಾಣ...

ಇಲ್ಲಿ ಕೇಳೋ ಪುಟಾಣಿ...ನಡೆಸು ನೀನು ದೇಶದ ದೋಣಿ...
ಹಿಡಿ ನೀನು ಚುಕ್ಕಾಣಿ...ನಡೆಸು ನೀನು ದೇಶದ ದೋಣಿ...
ನಡೆಸು ನೀನು ದೇಶದ ದೋಣಿ...

ಅಮ್ಮ

ಅಮ್ಮ

ಇರಲು ಅಮ್ಮನ ಮಡಿಲಲ್ಲಿ
ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ...
ಹೊಡಿ ವೈಕುಂಠಕ್ಕೆ ಗೋಲಿ,
ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ...

(೨೦-ಏಪ್ರಿಲ್-೨೦೦೭)

ಕಾವೇರಿ

ಕಾವೇರಿ

ಕಾವೇರಿ ನಮ್ಮದೆಂದು ನಡೆದಿಹುದು ಘರ್ಷಣೆ
ಬಗೆಹರಿವುದೆಂದೀ ಸಮಸ್ಯೆ? ಶತಮಾನದ ಬವಣೆ

ಕಾವೇರಿ ನಮ್ಮ ತಾಯಿ - ಜನ ಜೀವನದ ನಾಡಿ
ರಾಜಕಾರಣಿಗಳ ಕೈಯಲ್ಲಿ, ಆಗಿರುವಳು ರಾಡಿ

ನೀಚರಲ್ಲಿ ನೀಚರಿವರು - ಇದುವೇ ರಾಜಕಾರಣ
ಕಿಚ್ಚ ಆರಿಸಲು ಬಿಡರು - ಕಿಚ್ಚೇ ಇವರ ಔತಣ

ಸ್ವಾರ್ಥಿಗಳ ಕೈಯ ಕೆಳಗೆ, ಸಾಯುತಿಹರು ರೈತರು
ಇವರ ನೆಮ್ಮದಿಯ ಪಣಕಿಟ್ಟು, ದುಡ್ಡ ಮಾಡುತಿಹರು

ತೀರರಿವರು ಬೆಂದು ಬಸವಳಿದ ಜನರ ದಾಹ
ಇವರ ಚಿಂತೆ ಏನಿದ್ದರೂ, ತಣಿಸಲು ಅಧಿಕಾರದಾ ಮೋಹ

ಏಳಿ! ಎದ್ದೇಳಿ ಜನರೇ! ಇವರಿಗೂ ತಿಳಿಯಬೇಕು ನಮ್ಮ ನೋವು
ತಿರುಗಿಬೀಳಬೇಕು ನಾವು! ಮುಟ್ಟಿಸಿರಿ ಇವರಿಗೂ ಕಷ್ಟದ ಕಾವು

ನಿಲ್ಲಿಸಿರಿ ವಂಚನೆ, ಕಿತ್ತಾಟ, ಇನ್ನೊಬ್ಬರಾ ಮೇಲಿನ ತಿರಸ್ಕಾರ
ಬೇಕೆಂದರೂ ನಾವು ಹೋಗಲಾದೀತೇನು ದೂರ?

ಏಕೆ, ಈ ಕುದಿವ ದ್ವೇಷ? ಹಂಚಿರೆಲ್ಲ ಅಕ್ಕರೆ
ನೆಲೆಸುವುದು ನೆಮ್ಮದಿ, ನಮ್ಮ ಬಾಳು ಸಕ್ಕರೆ

ನಮ್ಮ ರಾಜ್ಯ ಎಂದ ಮನವು ಕಿರಿಯದಾಯಿತಲ್ಲವೇ?
ಒಟ್ಟಾಗಿ ಕಲೆತು ನಾವು ಕಗ್ಗಂಟ ಬಿಡಿಸಬೇಕಲ್ಲವೇ?

ಇಬ್ಬರಿಗೂ ಬೇಕಾಗಿದೆ ಇನ್ನೊಬ್ಬರಾ ಆಸರೆ
ಕೂಡಿ ಬೆಳೆದರೆಂಥ ಚೆನ್ನ! ಸ್ವರ್ಗವೇ ನಮ್ಮ ಕೈ ಸೆರೆ!

(ಜನವರಿ-ಫ಼ೆಬ್ರುವರಿ-೨೦೦೭)

Tuesday, June 12, 2007

ಎಲ್ಲಿರುವೆ??????

ಎಲ್ಲಿರುವೆ?

ಬಹು ದಿನಗಳ ಆಸೆ, ಬರೆಯಲು ಮತ್ತೊಂದು ಕವಿತೆ
ಎಷ್ಟು ಪ್ರಯತ್ನಿಸಿದರೂ ಆಗದು - ನನ್ನಲ್ಲಿ ಶಬ್ದಗಳಾ ಕೊರತೆ?

ಹಿಡಿದೆ ಪೆನ್ನು-ಪೇಪರನ್ನು ಬರೆದೇ ತೀರುತ್ತೇನೆಂದು
ತಿಣುಕಿದೆ ಸಾಲೊಂದ ಬರೆಯಲು - ಕವಿತೆ ಮುಗಿಯುವುದೆಂದು?

ಎಷ್ಟು ಹುಡುಕಿದರೂ ಸಿಗದು ಪದಗಳೊಂದು ನೆಟ್ಟಗೆ
ಎಲ್ಲಿ ಹೋಯಿತೆನ್ನ ಸ್ಫೂರ್ತಿ? ಮನವಾಗಿದೆ ಕೊಟ್ಟಿಗೆ

ವಿಷಯಕೇನು ಕೊರತೆ ಇಲ್ಲ - ಮಾಡಿದೆ ಹಲವು ಯತ್ನ
ಆದರೂ ಸಿಗದು ಫಲ - ಕವಿತಾ ಯಜ್ಞಕ್ಕೆ ನೂರೆಂಟು ವಿಘ್ನ

ಹೊಳೆದ ಸಾಲು ಕಳೆದೇ ಹೋಯ್ತು - ಮತ್ತೆ ಸಿಲುಕದಾಯ್ತು
ಮತ್ತೆ ಮತ್ತೆ ವಿಫಲ ಯತ್ನ - ಆದೆ ಕಡೆಗೆ ಸುಸ್ತು

ಎನೋ....ಕಳೆದುಕೊಂಡ ಭಾವನೆ
ಮನದ ಹೊಯ್ದಾಟ - ಹೇಳಿಕೊಳ್ಳಲಾಗದ ಯಾತನೆ

ಅಳುಕು ತುಂಬಿಹುದು ಮನದಿ - ಅತೃಪ್ತಿಯ ಛಾಯೆ
ಓ ಕವಿತೆ! ಎಲ್ಲಿರುವೆ? ಏನಿದೀ ಮಾಯೆ??

ಅರ್ಧ ಬರೆದೆ - ಅಷ್ಟಕ್ಕೆ ಬಿಟ್ಟೆ - ಇಲ್ಲ ಬುದ್ಧಿಗೆ ಸ್ಥಿಮಿತ
ಹಿಂದೆಂದೂ ಆಗಿಲ್ಲ - ಇದು ಚೂರಿಯ ತಿವಿತ

ಸರ ಸರನೆ ಪದಗಳ ಜೋಡಣೆಯ ಮಾಡುತ್ತಿದ್ದೆ ನಾನೊಮ್ಮೆ
ಈಗ ನಾನಾಗಿರುವೆ ಮಧ್ಯ ದಾರಿಯಲ್ಲಿ ನಿಂತ ಎಮ್ಮೆ

ಮಸ್ತಕದ ಪುಸ್ತಕದಿ ಸಿಗದು ಪದಗಳೆನಗೆ - ಎಂಥಾ ವಿಪರ್ಯಾಸ
ಸಿಕ್ಕ ಪದಕೆ ಸಿಗದು ಅದಕೊಂದು ಪ್ರಾಸ

ಮಸೂರ ಹಿಡಿದರೂ ಸಿಗದು, ಮನವಾಗಿದೆ ಬಿಳಿಹಾಳೆ
ಏಕೆ ಹೀಗಾಯ್ತು?? ಇದೆಂಥಾ ಗೋಳೇ??

ಪದಗಳಾ ಚಿಲುಮೆ - ನನ್ನೊಲುಮೆಯ ಬುಗ್ಗೆ ಕಾಣದಾಗಿದೆ ಏಕೆ?
ಮನದ ಬಾವಿಯು ಇಂದು ಬತ್ತಿಹುದು ಏಕೆ?

ಮನಕೆ ಕವಿದಿದೆ ಮಸುಕು - ಎಲ್ಲವೂ ಮಂಕು
ಎಂದು ನಾ ಸರಿ ಹೋಗುವೆ? ಹಿಡಿದಿದೆ ಬುದ್ಧಿಗೆ ಸೋಂಕು

ಬರೆಯಲೇ ಬೇಕೆಂಬ ಹಟದ ಮುಳ್ಳು ಮನಕೆ ಚುಚ್ಚಿದೆ
ಮುಳ್ಳ ಒಗೆದು - ಗುಣ ಪಡಿಸುವ ಮುಲಾಮು ಇನ್ನೂ ಸಿಕ್ಕದೇ...

ಎಲ್ಲಿ ನೀನು ಅಡಗಿ ಕುಳಿತಿಹೆ? ನನ್ನ ಕೂಗು ಕೇಳದೇ?
ಆಟವೆಷ್ಟು ಆಡುತ್ತೀಯೇ? ಬೇಗ ಹೊರ ಬರಬಾರದೇ?

ಹೆಚ್ಚು ದಿನವಾದರೆ ಆಗುವುದು ಬುದ್ಧಿಗೆ ಭ್ರಮಣೆ
ಮುಖ ತೋರೇ, ನೀನು - ತೀರು ನನ್ನ ಬವಣೆ

ಯಾರಲ್ಲಿ ಹೇಳಲಿ ನಾನು, ನನ್ನ ವೇದನೆ - ಈ ನೋವನ್ನು ತಾಳೆನೇ
ಓಡೋಡಿ ಬಾ ಓ ನನ್ನ ಪ್ರಿಯತಮೆ, ನಿನ್ನ ಬಿಟ್ಟಿರಲಾರೆನೇ....

(೧೪,೧೫-ಫ಼ೆಬ್ರುವರಿ-೨೦೦೭)

ಈ ಕವಿತೆ ಪ್ರೇಮಿಗಳ ದಿನದಂದೆ ಬರೆದದ್ದು ಆಕಸ್ಮಿಕ :)

ಹಳ್ಳಿ ಹುಚ್ಚು

ಹಳ್ಳಿ ಹುಚ್ಚು

ಅಂದು ನಾ ಹೊರಟಿದ್ದೆ ಗಿಜಿ ಗಿಜಿ ರಸ್ತೆಯಲ್ಲಿ ಎಂದಿನಂತೆ
ನನಗೆ ತಿಕ್ಕಲೋ-ಪ್ರಪಂಚಕ್ಕೋ ತಿಳಿಯದಾಗಿತ್ತು

ಹಳ್ಳ ಗುಂಡಿಗಳ ಕಪ್ಪು ಟಾರಿನ ರಸ್ತೆಯೊಂದು
ಹಳ್ಳಿಯ ಮಣ್ಣ ಹಾದಿಯಂತೆ ಕಂಡಿತ್ತು ನನಗೆ ಅಂದು

ಚೀಲ ಹಿಡಿದು ಕಛೇರಿಗೆ ಹೊರಟ ಜನರು
ಗುದ್ದಲಿ-ಸನಿಕೆ ಹಿಡಿದ ರೈತರಂತಿದ್ದರು

ಬೇಕಾದ್ದಕ್ಕಿಂತ ಹೆಚ್ಚೇ ಅಲಂಕೃತಳೀಕೆ - ನೋಡಲು ರತಿ
ಕಂಡಳಂದು ಗಂಡನಿಗಾಗಿ ಬುತ್ತಿ ಹೊತ್ತ ಗರತಿ

ಶಾಲೆಗೆ ಹೊರಟ ಪುಟ್ಟ ಮಕ್ಕಳೆಲ್ಲಾ
ನಗುವ ಸೂರ್ಯಕಾಂತಿಯಂತೆ ಕಂಡರಲ್ಲಾ

ನಗರದ ಕೊಳಚೆ ನೀರಿನ ಕೊಚ್ಚೆ ಕೂಡ
ತಿಳಿನೀರ ಹೊಳೆಯಾಗಿತ್ತು - ಏನಿದೀ ಪವಾಡ!

ದ್ವಿಚಕ್ರಗಳು "ಪೋಂ" "ಪೋಂ" ಶಬ್ದ ಮಾಡುತಿದ್ದರೆ
ಕೇಳಿಸಿತ್ತೆನಗೆ ಹಸುವಿನ "ಅಂಬಾ" ಕರೆ

ಭರ್ರನೆ ಕಾರುಗಳು ಸುತ್ತ ಹೋಗುತಿರಲು
ಎತ್ತಿನ ಬಂಡಿಗಳಂತೆ ಭಾಸವಾಗಿತ್ತು - ನನಗೆ ಖಂಡಿತಾ ಐಲು

ಜನರನ್ನು ಹೊಟ್ಟೆಯಲ್ಲಿರಿಸಿಕೊಂಡು ಬಸ್ಸಲ್ಲಿ ನಿಂತಿತ್ತು
ಒಣ ಹುಲ್ಲ ಗುಡ್ಡದಂತೆ - ಬಣವೆಯಾಗಿ ಕಂಡಿತ್ತು


ವಾಹನಗಳ ದಟ್ಟಣೆ - ವಾಯು ಮಾಲಿನ್ಯ
ಗೋಧೂಳಿಯಂತೆ ಗೋಚರಿಸಿತ್ತು - ನಾನಾಗ ಧನ್ಯ

ಕಂಠಕೌಪೀನಧಾರಿ ಧಿಮಾಕಿನ ಠೊಣಪ
ಕಟ್ಟೆ ಮೇಲೆ ಕಂಡನೆನಗೆ ಶಾಲು ಹೊದ್ದ ಭೂಪ

ರಸ್ತೆಯಲಿ ನಡೆಯುತಿರಲು ಹಲವು ದೀಪದ ಕಂಬ
ಕಂಗೊಳಿಸಿತ್ತು ನನಗದು ಸಾಲ ತೆಂಗ ಬಿಂಬ

ಧೂಮಪಾನ ಮಾಡುತ ನಿಂತ ಒಬ್ಬ ಯುವಕ
ಹಳ್ಳಿ ಕಿಟ್ಟನಂತೆ ಕಂಡಾಗ - ನನಗೆ ಮೈ ನಡುಕ

ಹುಚ್ಚೇ ಹಿಡಿಯಿತೆಂದು ಹೋದೆ ವೈದ್ಯರ ಬಳಿಗೆ
ಅಲ್ಲೂ ನನಗೆ ದಕ್ಕಿತ್ತು ಅಳಲೆಕಾಯ ಗುಳಿಗೆ!!!

(ದಿನ: ೧೨-೨೫-೨೦೦೬)