ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿ
ಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?
ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ
ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ್ದು?
ನಿನ್ನೊಳಗಿನ ಜಗವನ್ನು ಬಿಟ್ಟು ಹೊರಗೆ ಬಾರದೆ ಇದ್ದ ಅಂತರ್ಮುಖಿಯನ್ನಲ್ಲವೇ ನಾ ಮೆಚ್ಚಿದ್ದು?
ನನ್ನ ಮನದ ಮಾತು ನಿನಗೆ ತಲಪುವ ಮುನ್ನ ನಿನ್ನೊಳಗಿನ ಭಾವ ಹೇಗಿತ್ತೋ ಅರಿಯೆ...
ನನ್ನ ಪ್ರೇಮದ ಒಕ್ಕಣೆಗೂ ಮೌನವಾಗೆ ಸಮ್ಮತಿಸಿದ್ದೆಯಲ್ಲವೇ?
ಅಂದಿನಿಂದಲೇ ಶುರುವಾಯ್ತು ಹೊಸ ಅಧ್ಯಾಯ...
ನೀ ಬದಲಾದೆ ಗೆಳತಿ...
ಸಮ್ಮೋಹನಗಳಿಸಿದ ಆ ಮೌನ ಮಾಯವಾಯ್ತಲ್ಲ...
ಈಗ, ನನ್ನೊಡನಿದ್ದಾಗ ನಿನ್ನಧರಕೆ ಬಿಡುವಿಲ್ಲ!
ನಾನಿಲ್ಲದಾಗಲೂ ನಿನ್ನ ಈ ತುಂಟ ತುಟಿಗಳಿಗೆ ಅದೇನೋ ಚಡಪಡಿಕೆ!
ಏಕೆ ಬದಲಾದೆ ಗೆಳತಿ?
ನಿನ್ನೀ ನಿರಂತರ ಮಾತುಗಳಿಂದ ನನಗೆ ಅಮೃತವನೇ ಉಣಿಸಿದರೂ
ಅಂದು ನನ್ನ ಸೆಳೆದ ಮೌನ ನನಗೆ ಗುಲಗಂಜಿಯಷ್ಟು ಹೆಚ್ಚು ಮೆಚ್ಚು...!
--ಶ್ರೀ
(ಜೂನ್ ೨೫, ೨೦೧೦)
No comments:
Post a Comment