ಮೊನ್ನೆ ಸಂಪದ ಮಿತ್ರರೊಬ್ಬರು ಕರೆ ಮಾಡಿದಾಗ, ’ನನ್ನ ಕಂಪ್ಯೂಟರ್‍ನಲ್ಲಿ ಕೆಲವು ಕಡತಗಳಿವೆ, ಇದನ್ನು ನನ್ನ ಕಂಪ್ಯೂಟರ್‍ನಲ್ಲಿ ವೆಬ್ ಹೋಸ್ಟಿಂಗ್ ಮಾಡಿ, ಸಂಪದ.ನೆಟ್ ಮಾದರಿ ಗೆಳೆಯರ ಮನೆಗಳ ಕಂಪ್ಯೂಟರ್ ಪರದೆಗಳಲ್ಲಿ ಮೂಡಿಸಬಹುದಾ?’ ಎಂದು ಪ್ರಶ್ನೆ ಕೇಳಿದರು.
’ನೀವು ಅಂದುಕೊಂಡಷ್ಟು ಸುಲಭವಲ್ಲಾರೀ...ಪ್ರಪಂಚದಲ್ಲಿ ಕೋಟ್ಯಾಂತರ ಕಂಪ್ಯೂಟರ‍್ಗಳಿವೆ. ನೀವು ದಿನವೂ ಸಂಪದವನ್ನು ಓದುತ್ತಿದ್ದರೂ, ಸಂಪದದ ಪುಟಗಳನ್ನು ಓದುವಾಗ, ನಿಮಗೆ ತಿಳಿಯದೆ, ಹಲವಾರು ನೆಟ್‍ವರ್ಕಿಂಗ್ ತಂತ್ರಜ್ಞಾನಗಳನ್ನು ತೆರೆಮರೆಯಲ್ಲಿ ಬಳಸುತ್ತೀರ’ ಎಂದೆ, ಕೆಲವನ್ನು ಫೋನ್‍ನಲ್ಲೇ ವಿವರಿಸಿದೆ. ತಕ್ಷಣವೇ, ’ಹೌದೇ, ಗೊತ್ತೇ ಇರಲಿಲ್ಲ, ನೀವು ಏಕೆ ನೆಟ್‍ವರ್ಕಿಂಗ್ ಬಗ್ಗೆ ಸಂಪದದಲ್ಲಿ ಬರೆಯಬಾರದು?’ ಎಂದು ಕೇಳಿದರು. ಹೀಗಾಗಿ ಈ ಬರಹಮಾಲೆ!
ಮೊದಲೇ ಹೇಳಿ ಬಿಡ್ತೀನಿ, ನೆಟ್‍ವರ್ಕಿಂಗ್ ಅನ್ನೋದು ಸಮುದ್ರ, ನನಗೆ ತಿಳಿದಿರೊಷ್ಟನ್ನ, ಆದಷ್ಟು ಸುಲಭವಾಗಿ ನಿಮಗೆ ಮುಟ್ಟಿಸುವ ಪ್ರಯತ್ನ ಮಾಡ್ತಿದೀನಿ.
ಸರಿ! ಇಷ್ಟು ಪೀಠಿಕೆ ಸಾಕಲ್ವಾ?
ಮೊದಲನೆಯ ಕಂತಿನಲ್ಲಿ, ನಿಮ್ಮ ಮನೆಗಳಲ್ಲಿ ಸಂಪದ ಓದಲಿಕ್ಕೆ ಅಥವಾ ಇಂಟರ‍್ನೆಟ್ ಬಳಸುವುದಕ್ಕೆ ಏನೇನು ಸಾಧನಗಳಿವೆ ಎಂಬುದನ್ನು ಮೇಲ್ಮಟ್ಟದಲ್ಲಿ ತಿಳಿದುಕೊಳ್ಳುವ.
೧. ಕಂಪ್ಯೂಟರ್
೨. ಕಂಪ್ಯೂಟರ್ ಪಕ್ಕದಲ್ಲಿ ಒಂದು ಡಬ್ಬ (ಅಥವಾ ಮೋಡೆಮ್)
ಮೊಡೆಮ್ ಏನು ಮಾಡತ್ತೆ ಅನ್ನೋದು ಸದ್ಯಕ್ಕೆ ಬೇಡ - ಕಂಪ್ಯೂಟರ್ ಪಕ್ಕದ ಒಂದು ಜಾಣ ಡಬ್ಬ ಅಂತ ತಿಳ್ಕೊಳ್ಳಿ ಸಾಕು.
ಮುಂದಿನ ಕಂತುಗಳಲ್ಲಿ ಇದರ ಬಗ್ಗೆ ಬರೀತಿನಿ.
ಕೆಲವು ವರ್ಷಗಳ ಹಿಂದೆ ಐ.ಎಸ್.ಡಿ.ಎನ್ ಮೋಡೆಮ್ ಗಳು ಬಳಕೆಯಲ್ಲಿತ್ತು. ಕಂಪ್ಯೂಟರ‍್ಗೆ ಸೇರಿದ ಹಾಗಿರುವ ಇಂಟರ್ನಲ್ ಮೋಡೆಮ್ ಕೂಡ ಬಳಕೆಯಲ್ಲಿತ್ತು.
ಈಗ ಎ.ಡಿ.ಎಸ್.ಎಲ್ ಮೋಡೆಮ್ ಚಾಲ್ತಿಯಲ್ಲಿದೆ.
(ನೀವು ಇಂಟರ್ನಲ್ ಐ.ಎಸ್.ಡಿ.ಎನ್ ಮೋಡೆಮ್ ಬಳಸುತ್ತಿದ್ದರೆ, ಕಂಪ್ಯೂಟರ್ ಪಕ್ಕ ಡಬ್ಬ ಹುಡುಕಬೇಡಿ Smiling )
ಐ.ಎಸ್.ಡಿ.ಎನ್/ಎ.ಡಿ.ಎಸ್.ಎಲ್ ಈ ರೀತಿಯ ಅಕ್ಷರಗುಛ್ಛ ಏನು ಎಂಬುದೂ ಬೇಡ. ಮುಂದಿನ ಕಂತುಗಳಲ್ಲಿ ಹೇಳ್ತೀನಿ.
೩. ಸ್ಪ್ಲಿಟ್ಟರ್ - ಪುಟಾಣಿ ಡಬ್ಬ. ಈ ಡಬ್ಬ, ಕೆಲವರ ಮನೆಯಲ್ಲಿರದಿರಲೂಬಹುದು.
ಸ್ಪ್ಲಿಟ್ ಅಂದರೆ ಒಡೆಯುವುದು/ಬೇರ್ಪಡಿಸು ಎಂಬ ಅರ್ಥ ಅಲ್ಲವೇ? ಈ ಪುಟಾಣಿ ಸ್ಪ್ಲಿಟ್ಟರ್‍ನ ಕೆಲಸ, ಧ್ವನಿ ಮತ್ತು ಕಂಪ್ಯೂಟರ್‍ಗೆ ಬೇಕಾದ ಮಾಹಿತಿ ಇವೆರಡನ್ನೂ ಬೇರ್ಪಡಿಸುವುದು.
ಕಂಪ್ಯೂಟರ್ ಮತ್ತು ಜಾಣ ಡಬ್ಬ, ಮೋಡೆಮ್ ಇವೆರಡನ್ನು ಒಂದು ವೈರ್ ಬಳಸಿ ಸೇರಿಸಿರುತ್ತಾರೆ.
ಐ.ಎಸ್.ಡಿ.ಎನ್ ಮೋಡೆಮ್‍ಗಳಿಗೆ ಟೆಲಿಫೋನ್ ವೈರ್ ಬಳಸುತ್ತಾರೆ.
ಎ.ಡಿ.ಎಸ್.ಎಲ್ ಮೋಡೆಮ್‍ಗಳಿಗೆ ಟೆಲಿಫೋನ್ ವೈರ‍್ಗಿಂತ ಸ್ವಲ್ಪ ದಪ್ಪನಾದ ವೈರ್ ಬಳಸುತ್ತಾರೆ.
ಈ ದಪ್ಪ ವೈರ್ ತಂತ್ರಜ್ಞಾನ ಹೊಸದೇನಲ್ಲವಾದರೂ, ಮನೆಯಿಂದ ಇಂಟರ‍್ನೆಟ್ ಬಳಕೆ ಮಾಡುವುದಕ್ಕೆ ಕೊಂಚ ಹೊಸತು.
ಇದನ್ನು ಈಥರ‍್ನೆಟ್ ವೈರ್ ಎಂದು ಕರೆಯುತ್ತಾರೆ. ಹೊರ ನೋಟಕ್ಕೆ ಒಂದೇ ವೈರ‍್ನಂತೆ ಕಂಡರೂ, ತುದಿಗಳಲ್ಲಿ ಗಮನಿಸಿ ನೋಡಿದಾಗ ಎಂಟು ಸಣ್ಣ ವೈರ‍್ನಿಂದ ಮಾಡಿರುವುದು ತಿಳಿದು ಬರುತ್ತದೆ.
ಸಾಮಾನ್ಯವಾಗಿ ದಪ್ಪಗಿರೋವ್ರಿಗೆ ಶಕ್ತಿ ಜಾಸ್ತಿ ಅನ್ನೋ ನಂಬಿಕೆ ಇದೆ ಅಲ್ವಾ? ಹಾಗೆ, ಈ ದಪ್ಪ ವೈರ್ ಕೂಡ ಹೆಚ್ಚು ಮಾಹಿತಿ ರವಾನಿಸುವ ಶಕ್ತಿ ಹೊಂದಿರುತ್ತದೆ.
ನಿಮ್ಮ ಬಳಿ ವೈರ್‍ಲೆಸ್ ಎ.ಡಿ.ಎಸ್.ಎಲ್ ಮೋಡೆಮ್ ಇದ್ದಲ್ಲಿ, ನಿಮ್ಮ ಕಂಪ್ಯೂಟರ್ ಮತ್ತು ಮೋಡೆಮ್ ಮಧ್ಯೆ ಯಾವುದೇ ವೈರ್ ಇರುವುದಿಲ್ಲ.
ಬದಲಾಗಿ, ಇವೆರಡೂ ಸಾಧನಗಳೂ, ತರಂಗಗಳ ಮೂಲಕ ಸಂಪರ್ಕ ಸ್ಥಾಪಿಸಿಕೊಳ್ಳುತ್ತದೆ.
ಇನ್ನು, ನಿಮ್ಮ ಎ.ಡಿ.ಎಸ್.ಎಲ್ ಮೋಡೆಮ್‍ನಿಂದ (ಅಥವಾ ಸ್ಪ್ಲಿಟ್ಟರ್ ಎಂಬ ಪುಟ್ಟ ಡಬ್ಬದ ಮೂಲಕ ಹಾದು) ಟೆಲಿಫೋನ್ ವೈರ್ ಮನೆಯಿಂದ ಹೊರಹೊರಟಿರುತ್ತದೆ.
ನಿಮ್ಮ ಮನೆಯಲ್ಲಿರುವ ಸಾಧನಗಳ ಒಟ್ಟಾರೆ ನೋಟ ಹೀಗಿರಬಹುದು.
No comments:
Post a Comment