Monday, February 16, 2009

ಹೀಗೊಂದು ಅಳಲು

[ಈ ಚಿತ್ರಕ್ಕೆ ಕವನ ಬರೆಯಬೇಕೆಂದು ಸಂಪದದಲ್ಲಿ ಹರಿ ಪ್ರಸಾದ್ ನಾಡಿಗ್ ಕರೆ ನೀಡಿದ್ದರು]


ಇಲ್ಲದಿದ್ದರೂ ಪಟದಲಿ
ಎಲ್ಲರಾ ಕವನದಲಿ
ಬೆತ್ತಲ ಮೂರುತಿಗೇ ಮನ್ನಣೆ...
ಅನಂತಾನಂತ ದೂರ
ಬಾನಲಿ ಬತ್ತಿಯಂತುರಿವ
ಕತ್ತಲ ಮೂರುತಿಗೇ ಮನ್ನಣೆ...

ಸನಿಹದಲ್ಲೇ ಇರುವೆ ನಾನು,
ಅನತಿ ದೂರದಲ್ಲೇ...
ಎತ್ತರ ತೆಂಗಿನ ಮರದಷ್ಟಾದರೂ...
ಕವಿಗಳ ನೋಟಕೆ ಬಾರದೇನು ನನ್ನ ಇರವು?
ಕವಿತೆಗೇಕಾಗಲಾರೆ ನಾ ಸ್ಫೂರ್ತಿಯ ಸೆಲೆಯು?

--ಶ್ರೀ

[ಫೆಬ್ರವರಿ ೧೬, ೨೦೦೯]

Wednesday, February 11, 2009

ರವಿಯ ನಿಜ ಬಣ್ಣವೇನು???

ನಾನು ನನ್ನ ಗೆಳೆಯನಿಗೆ ಆಗಸ ತೋರಿ ಹೇಳಿದೆ...
'ಅದೋ ನೋಡು, ಸೂರ್ಯನೆಷ್ಟು ಹಳದಿಯಾಗಿ ಹೊಳೆಯುತ್ತಿದ್ದಾನೆ!'
ಅವನು ತಲೆ ಎತ್ತದೆಯೇ ಗುಡುಗುತ್ತಾನೆ...'ಸೂರ್ಯ ಹಳದಿಯಲ್ಲ, ಕೇಸರಿ!!!'
'ಅಲ್ಲಿ ನೋಡೋ, ಒಮ್ಮೆ...! ಅದೆಷ್ಟು ಸೊಬಗು ಆ ಹೊಂಬಣ್ಣ...'
ಆಗಸ ನೋಡಲು ಮತ್ತದೇ ಉದಾಸೀನ ಅವನಿಗೆ...
'ನಿನಗೆಲ್ಲೋ ತಲೆ ತಿರುಗಿದೆ, ಸೂರ್ಯನೆಂದಾದರು ಹಳದಿಯಾಗುವುದುಂಟೆ...ಅವನೆಂದು ಕೇಸರಿಯೇ...'
ಎಷ್ಟು ವರ್ಷದಿಂದ ನೋಡುತ್ತಿರುವೆ ಇವನನ್ನು...ಇವನು ಜಗಮೊಂಡ...'ನಾ ಹಿಡಿದ ಮೊಲಕ್ಕೆ ಒಂದೇ ಕಿವಿ ಎಂದು ಸಾಧಿಸುವವ' ಎಂದು ಮನದಲ್ಲೆಣಿಸಿದೆ...
ತುಸು ಹೊತ್ತಿನ ನಂತರ ಅವನು ತಲೆ ಎತ್ತಿ, 'ಅಲ್ಲಿ ನೋಡೋ ಮೂರ್ಖ! ಸೂರ್ಯನದೆಷ್ಟು ಕೇಸರಿ' ಎಂದ...
ಆ ವೇಳೆಗಾಗಲೆ ಸಂಜೆಯಾಗಿತ್ತು...

--ಶ್ರೀ
(ಫೆಬ್ರವರಿ ೧೧ ೨೦೦೯)

ಸಂಭಾಷಣೆ...ಈ ಪ್ರೇಮ ಸಂಭಾಷಣೆ...

"ಇಲ್ಲ ಸಲ್ಲದ
ನೆಪವ ಹೂಡಿ
ದೂರವೇಕೆ ಸರಿವೆ?
ನಲ್ಲನಿಲ್ಲಿ
ಹಪಹಪಿಸಿಹನು,
ತೋಳ್ಬಂದಿಯಾಗು
ಬಾ ಚೆಲುವೆ!"

"ಕೊಂಚ ನಿಲ್ಲಿ, ನಲ್ಲ...
ಇದಿನ್ನು ಹೊಸತಲ್ಲ!
ಮೈ ಸೋಕದ, ತುಟಿ ತಾಗದ
ಒಲವ ತುಸು ಸವಿಯಿರಲ್ಲ...
ಅವಸರವೇಕೀಗ
ಹೂಡಲು ಕಾಮನಬಿಲ್ಲ?"

--ಶ್ರೀ
(೬-ಫೆಬ್ರವರಿ-೨೦೦೯)

Tuesday, February 10, 2009

ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!

ಎಳೆ) ರಾಜಕಾರಣಿ: ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!

ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ?

(ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ ಬೆಳಗ್ಗೆ - ಸಂಜೆ ಸೂರ್ಯನ ಕೇಸರಿ ಬಣ್ಣ ಹೆಚ್ಚಾಗಿ ಕಾಣ್ತಾ ಇದೆ ಅದಕ್ಕೆ!

:)
--ಶ್ರೀ
(೧೦-ಫೆಬ್ರವರಿ-೨೦೦೯)

Monday, February 9, 2009

ಕಂಗಾಲಾಗಿರುವೆ ನಾನಿಲ್ಲಿ

ಕಂಗಾಲಾಗಿರುವೆ ನಾನಿಲ್ಲಿ
ನಿನ್ನ ಬರುವಿಕೆಯನ್ನೇ ಕಾಯುತ್ತ...
ಬರಲೇಕೆ ಇಷ್ಟು ತಡ?
ಚಿಂತೆಗಳಿರಲು ನೀ ಹತ್ತಿರ ಸುಳಿಯೆ;
ನೀ ಬರದೆ ಚಿಂತೆಗಳಿಗಿಲ್ಲ ಚಿತೆ...
ಅಪ್ಪಲೆನ್ನನು ಓಡಿ ಬಾರೇ,
ಓ ನಿದ್ರಾ ದೇವಿ!

--ಶ್ರೀ
(೯-ಫೆಬ್ರವರಿ-೯)

Sunday, February 1, 2009

ಇಲ್ಲಿ ಕುಳಿತರೆ ಸ್ವರ್ಗವಂತೆ...


ಇಲ್ಲಿ ಕೂರೆಂದು ಅದೆಷ್ಟು ಮಂದಿ ಹೇಳಿದರೋ ಎನಗೆ!
’ಇಲ್ಲಿ ಕೂರಯ್ಯ, ನಿನಗೆ ಸ್ವರ್ಗವೇ ಧರೆಗಿಳಿದಂತೆ ಕಾಣುವುದು’ ಎಂಬ ಮಾತನ್ನು ಕೇಳಿ ಕೇಳಿ ಕೊನೆಗೆ ತಲೆ ಚಿಟ್ಟೇ ಹಿಡಿದು ಬಂದು ಕುಳಿತಿಹೆನು ನಾನಿಲ್ಲಿ...
ಅದೇನೋ ’ಕವಿ ಕಂಡ ರವಿ’ ಇಲ್ಲೇ ಹುಟ್ಟುವುದಂತೆ! ಕುವೆಂಪು ಕುಳಿತ ’ಕವಿ ಶೈಲ’ವೂ ಈ ಸ್ಥಳದ ಮುಂದೆ ನಾಚಿ ನೀರಾಗುವುದಂತೆ...
ತಿಳಿ ನೀರ ಜಲಲ ಜಲಲ ಧಾರೆ ಹರಿಯುವುದುಂಟಂತೆ...ಇಲ್ಲಿನ ಚೈತ್ರದ ಚಿಗುರೆಲೆಗೆ ಹೊಸ ರಂಗುಂಟಂತೆ...
ಇಲ್ಲಿನ ಹಕ್ಕಿಗಳ ಕಂಠದಲ್ಲಿ ಅದೇನೋ ಹೊಸ ನಾದ, ಹೊಸ ರಾಗವಂತೆ!
ಎಲ್ಲೂ ಇಲ್ಲದ್ದೂ ಇಲ್ಲಿದೆಯಂತೆ...ಇಲ್ಲಿರುವ ಬೆಟ್ಟಗಳ ಮೈಮಾಟವನ್ನು ಬಣ್ಣಿಸಲಾರರಂತೆ, ಒಂದಕಿಂತ ಒಂದ ನೋಡುವುದೇ ಸೊಬಗಂತೆ...
ಒಂದು ನಂದಿಯಂತೆ ಕಂಡರೆ, ಮತ್ತೊಂದು ಕುದುರೆಮುಖವಂತೆ...ಹೀಗೆ ಒಬ್ಬೊಬ್ಬರೂ ಹೇಳಿದ್ದೋ ಹೇಳಿದ್ದು...

ನಾನು ಇಲ್ಲಿಗೆ ಬಂದು ಅದೆಷ್ಟು ಸಮಯ ಕಳಿಯಿತೋ ಕಾಣೆ...ನನಗೆ ಇದಾವುದೂ ಕಾಣುತ್ತಲೇ ಇಲ್ಲ...
ಏನಿದೇ ಇಲ್ಲಿ ಅಂಥದ್ದು! ಅದೇಕೆ ಜನರಿಗೆ ಈ ಜಾಗದ ಬಗ್ಗೆ ಅಷ್ಟೊಂದು ಒಲವು?

ಈ ಜಾಗದಲ್ಲಿ ಹೊಸತನವನ್ನು ಹುಡುಕುತ್ತಾ ತಲ್ಲೀನನಾಗಿದ್ದ ಎನಗೆ, ಮಗುವೊಂದು ಜೋರಾಗಿ ಅತ್ತಾಗಲೇ ಎಚ್ಚರವಾದದ್ದು...
ಪಕ್ಕದಲ್ಲೇ ರಚ್ಚೆ ಹಿಡಿದ ಮಗುವಿಗೆ ತಾಯಿ ಹೇಳಿದ ಮಾತಷ್ಟೆ ಕೇಳುತ್ತಿದೆ,
’ಅಗೋ, ನೋಡು, ಸೂರ್ಯ-ಮಾಮಾ, ಕೆಂಪಗೆ, ಕಿತ್ತಲೆ ಹಣ್ಣಂತೆ ಕಾಣುತ್ತಿದ್ದಾನೆ, ಅದೇನು ಚೆಂದ! ಬೇಕೇನೋ ನಿನಗೆ, ಗುಂಡನೆಯ ಕಿತ್ತಲೆಯ ಹಣ್ಣು?’...
ನನಗೇಕೆ ಕಾಣದಾ ಕಿತ್ತಲೆ ಹಣ್ಣು...ನನಗೂ ಬೇಕದು...ಆದರೆ ಕಾಣದಲ್ಲ...!

ಕಿತ್ತಲೆಯನ್ನೇ ನೆನೆಯುತ್ತಾ ದಿಗಂತವನು ದಿಟ್ಟಿಸಿದೆ ನಾನು ಮತ್ತೆ........ಕಿತ್ತಲೆಯ ಹುಡುಕುತ್ತಾ ಅದೆಷ್ಟು ಹೊತ್ತು ಕಳೆಯಿತೋ ಕಾಣೆ...
ಗದ್ದಲ ಮಾಡುತ್ತ ಹುಡುಗರ ಗುಂಪೊಂದು ಹಾದು ಹೋದಾಗಲೇ ಮತ್ತೆ ಎಚ್ಚರ...
ಗುಂಪಿನಲ್ಲೇ ಇದ್ದವನೊಬ್ಬ ಕೂಗಿದ, ’ಶಬ್ದ ಮಾಡದಿರಿ, ಇಲ್ಲಿ ’ಮಕವಾಕು*’ ಎಂಬ ಹಕ್ಕಿಯ ಇಂಪು ಕೇಳುವುದು’...
ನಾನು ಎಂದೂ ಒಬ್ಬನೇ ಒದರಿಕೊಳ್ಳುವುದೇ ಇಲ್ಲ, ಆದರೂ ಎನ್ನ ಮನಕೇ ಗದರಿದೆ - ’ಸದ್ದು! ಹೊಸ ಹಕ್ಕಿಯ ದನಿಯಂತೆ! ಗಮನವಿಟ್ಟು ಕೇಳು’...
ಊಹೂಂ...ಯಾವ ಹಕ್ಕಿಯ ಶಬ್ದವೂ ಕೇಳದೆನಗೆ...ನನಗೇನಾಗಿದೆ???
ಮತ್ತೆ ಮತ್ತೆ ದಿಟ್ಟಿಸಿ ನೋಡುತ್ತಿದ್ದೇನೆ ಕಿತ್ತಲೆ ಹಣ್ಣು ಬೇಕೆಂದು... ಮೈಯೆಲ್ಲಾ ಕಿವಿಯಾಗಿಸಿ ಹೊಸ ಹಕ್ಕಿಯ ಸವಿ ಕೂಗ ಕೇಳಲು...
ಇಲ್ಲ ಕಿತ್ತಲೆಯೂ ಇಲ್ಲ, ಕೂದನಿಯೂ ಇಲ್ಲ...

ಬಹುಷಃ ಯಾರಿಗೂ ನೋಡಿ ಸುಸ್ತಾಗದಿರಬಹುದು, ನನಗಂತೂ ಇಂದು ನನ್ನ ಸುತ್ತಲಿನ ಪರಿಸರವನ್ನು ನೋಡಿ ನೋಡಿ ದಣಿವಾಗಿದೆಯೆನಗೆ...
ಒಂದೇ ಕಡೆ ಕುಳಿತಿದ್ದರೂ ತಣಿದಿರುವೆ ನಾನು...
ಆದರೂ ನೆನ್ನೆಯಿಂದ ಅದೇನೋ ಆಹ್ಲಾದ...ಈ ದಣಿವಲ್ಲೂ ಹೊಸ ಚೈತನ್ಯವೆನಗೆ...
ಗೆಳೆಯರು ವಿವರಿಸಿದ ’ಸ್ವರ್ಗ’ ನನಗೆ ಈ ಸ್ಥಳದಲ್ಲಿ ಇಂದು ಕಾಣದಿರಬಹುದು, ಆದರೆ ನಾನು ನೆನ್ನೆಯೇ ಸ್ವರ್ಗಕ್ಕೆ ಕಾಲಿಟ್ಟಾಯ್ತಲ್ಲ...!
ನೆನ್ನೆಯೇ ನನ್ನ ಒಲವಿನ ಪ್ರಸ್ತಾಪಕ್ಕೆ ಅವಳ ಒಪ್ಪಿಗೆಯಾಯ್ತಲ್ಲ...ಆದಾದ ಕ್ಷಣದಿಂದ ನನ್ನ ಪ್ರಪಂಚವೇ ಬದಲಾದದ್ದು ಹೇಗೆ?
ಇವಳ ಮಾತೇ ನನಗೆ ಹೊಸ ಹಕ್ಕಿಯ ಹಾಡಾದಾಗ, ಇಲ್ಲೇಕೆ ಕುಳಿತಿದ್ದೀನಿಂದು ನಾನು ಮಕವಾಕುವಿನ ದನಿ ಕೇಳಲು?
ಯಾವ ಕಡೆ ನೋಡಿದರು ಮನದ ಚೆಲುವೆಯ ಮುಖವೇ ಕಂಡಿರುವಾಗ, ಇಲ್ಲಿ ಕಾಣುವ ಕಿತ್ತಲೆ ಹಣ್ಣೇಕೆನಗೆ...
ನನ್ನೊಲುಮೆಯ ಚೆಲುವೆಯೊಂದಿಗೆ ಇನ್ನೊಮ್ಮೆ ಎಂದಾದರೂ ಈ ಸ್ಥಳಕ್ಕೆ ಬರುವ...ಈಗಂತೂ ಜನರು ಹೇಳಿದ್ದೊಂದೂ ಕಾಣದೆನಗೆ...ಒಲವಿನ ಅಮಲೆಂದರೆ ಇದೇ ಏನೋ...

--ಶ್ರೀ

*ಮಕವಾಕು - ನನ್ನ ಕಲ್ಪನೆಯ ಹಕ್ಕಿ

(ಚಿತ್ರ ಕೃಪೆ: ಹರಿ ಪ್ರಸಾದ್ ನಾಡಿಗ್)

ಮಾಸದ ನೆನಪು...

ಮರೆಯಬೇಕೆಂಬ
ಕಹಿ ನೆನಪೊಂದ,
ಮರೆಯಲೇಬೇಕೆಂದು
ಹಟ ಹಿಡಿದು,
ಮರು ನೆನೆದು
ನೆನೆ ನೆನೆದು, ಆ
ಕರಿ ನೆನಪು ಸದಾ
ಮನದಲ್ಲೇ ಮಾಸದೆ
ನೆಲೆ ನಿಲ್ಲುವಂತೆ
ಹೆಪ್ಪುಗಟ್ಟಿಸಿದೆನಲ್ಲ... :(

--ಶ್ರೀ
(೩೦-ಜನವರಿ-೨೦೦೯)