Friday, February 15, 2013

ತಾಳೆ ಮರ, ರಾಜ ಮಾರ್ಗ, ಲಾಸ್ ವೇಗಸ್ ಮತ್ತು ಕಕ್ಕಸು

’ಬೆಂಗಳೂರು’ ಅಂತ ನಮ್ಮೂರಿಗೆ ಹೆಸರು ಹೇಗೆ ಬಂತಪ್ಪಾ ಅಂತ ತುಂಬಾ ಜನ ತಲೆ ಕೆಡಿಸಿಕೊಂಡಿರೋವ್ರು ನಂಗೊತ್ತು...
ಬೆಂಗಳೂರು ಅಂದ್ರೆ, " ’ಬೆಂದ ಕಾಳೂರು’, ಇಲ್ಲಿ ಒಂದಾನೊಂದು ಕಾಲದಲ್ಲಿ ಬೊಂಬಾಟಾಗಿರೋ ಬಿಸಿ-ಬಿಸಿ ಬೆಂದಿರೋ ಕಾಳು ಸಿಗ್ತಿತ್ತಂತೆ, ಬರ್ತಾ ಬರ್ತಾ, ಬೆಂದಕಾಳೂರು ಹೋಗಿ ಬೆಂಗಳೂರು ಆಯ್ತಂತೆ", ಅಂತ ಇವತ್ತಿಗೂ ನಂಬ್ಕೊಂಡಿರೋವ್ರೇ ಜಾಸ್ತಿ. ಕೊಂಚ ಅಲ್ಲಿ-ಇಲ್ಲಿ ಓದಿಕೊಂಡಿರೋವ್ರು, "ಯಾವ್ದೋ ಒಂದು ಅಜ್ಜಿ, ಸಖತ್ತಾಗಿರೋ ಬೆಂದ ಕಾಳೂರಿನ ಕಥೆ ಯಾವಾಗ್ಲೋ ಹೇಳಿದ್ದು, ಈಗ್ಲೂ ಜನ ನಂಬ್ತಾರಲ್ಲ", ಅಂತ ಹೇಳಿ, "ನಮ್ಮೂರು ರಾಜರಿದ್ದ ಊರು, ಇಲ್ಲಿ ಬೆಂಗಾವಲಿನ ಪಡೆ ಇತ್ತು, ಹಾಗಾಗಿ, "ಬೆಂಗಾವಲಿನ ಊರು"-->"ಬೆಂಗಾವಲೂರು", ಇದು ಕಾಲ ಕ್ರಮೇಣ ಬೆಂಗಳೂರು ಆಯಿತು ಎಂದು ವಾದ ಮಾಡೋವ್ರೂ ಸಿಕ್ತಾರೆ. ಇನ್ನೂ ಕೆಲವ್ರು, ಇವೆರಡೂ ಬುರುಡೆ, ನಮ್ಮೂರಿನ ಜಾಗ, ಬೇಂಗೆ ಮರಗಳಿಂದ(ರಕ್ತ ಹೊನ್ನೆ ಮರ/Indian Kino tree/Pterocarpus marsupium) ಇರೋ ಜಾಗವಾಗಿತ್ತು, ಅದಕ್ಕೇ, ಬೇಂಗೆಯಿಂದ ಕೂಡಿದ ಊರು, ಬೆಂಗಳೂರು ಅಂತ ಹೆಸರಾಯ್ತು ಅನ್ನೋವ್ರೂ ಇದಾರೆ. ಇರ್ಲಿ, ಇದ್ರಲ್ಲಿ ಯಾವ್ದು ನಿಜಾನೋ ನಂಗಂತೂ ಗೊತ್ತಿಲ್ಲ...ಆದ್ರೆ, ಈಗ, ಬೆಂಗಳೂರು -ಬರ್-ಬರ್ತಾ ಜನರ ಬಾಯಲ್ಲಿ ಬ್ಯಾಂಗಲೋರ್ ಆಗಿರದಂತೂ ನಿಜ...ಅಲ್ವಾ?

ಇರ್ಲಿ, ನಾನು ಏನೋ ಹೇಳೋಕ್ ಹೋಗಿ ಏನೋ ಹೇಳ್ಬಿಟ್ಟೆ...
ಬೆಂಗ್ಳೂರಿನ ಹೆಸರಿನ ಬಗ್ಗೆ ಅಷ್ಟೊಂದ್ ಜನ ತಲೆ ಕೆಡಿಸಿಕೊಂಡಿರಬೇಕಾದ್ರೆ, ಈಗ ಅಮೆರಿಕಾದಲ್ಲಿ ನಾನಿರೋ ಊರಿನ ಬಗ್ಗೆ ಸ್ವಲ್ಪನಾದ್ರೂ ತಲೆ ಕೆಡಿಸ್ಕೋಬಹುದಲ್ಲ...ಈಗ ನಾನಿರೋ ಊರಲ್ಲಿ ಮತ್ತು ಈ ರಾಜ್ಯದಲ್ಲಿ, ಐತಿಹಾಸಿಕವಾಗಿ ಸ್ಪ್ಯಾನಿಶ್ ಪ್ರಭಾವ ಹೆಚ್ಚಾಗೇ ಇದೆ...ನಮ್ಮ ಮನೆ ಹತ್ರ ಇರೋ, ಒಂದು ರಸ್ತೆ ಹೆಸರು "ಲಾಸ್ ಪಾಮಾಸ್(Las Palmas)" ಅಂತ...ನಾನು ಅದೆಷ್ಟೋ ದಿನದಿಂದ ಇದೇ ರಸ್ತೇಲಿ ಓಡಾಡ್ತಿದ್ರೂ, ಅಲ್ಲೇ ಇರೋ ಅದೆಷ್ಟೋ ತಾಳೆ ಮರಗಳು(Palm trees), ನೋಡಿದ್ರೂ, ರೋಡ್ ಹೆಸರಿಗೂ, ಮರಕ್ಕೂ ತಾಳೆ ಹಾಕಿರಲಿಲ್ಲ! ಇವತ್ತು ಅದ್ಯಾಕೋ ತಲೆಗೆ ಹೊಳೆದು, Palm Trees, ಅನ್ನೋದಿಕ್ಕೆ Palmas ಅಂತ ಸ್ಪ್ಯಾನಿಶ್ ನುಡಿಯಲ್ಲಿ ಇರಬಹುದಾ ಅಂತ ನೋಡಿದ್ರೆ, ಅದು ನಿಜ ಆಯ್ತು! ಇನ್ನು "Las" ಅನ್ನೋ ಪದಕ್ಕೆ ಹೆಚ್ಚಾಗಿ ಅರ್ಥ ಏನು ಇಲ್ಲ, ಇಂಗ್ಲಿಷ್ ನಲ್ಲಿ "The" ಇದ್ಯಲ್ಲಾ ಹಾಗೆ ಅಂತ ಕೂಡ ಗೊತ್ತಾಯ್ತು...ಹೀಗೆ ಓದ್ತಾ ಓದ್ತಾ, "Las" ಅನ್ನೋದು ಬಹುವಚನಕ್ಕೂ, "La" ಅನ್ನೋದನ್ನ ಏಕವಚನಕ್ಕೂ ಸ್ಪ್ಯಾನಿಶ್ ಭಾಷೆಯಲ್ಲಿ ಬಳಸ್ತಾರೆ ಅಂತ ತಿಳ್ಕೊಂಡೆ...ಹಾಗಾಗಿ, "Las Palmas" ಹೆಸರಿನ ಗುಟ್ಟು ರಟ್ಟಾಯ್ತು...ಸರಿ ಒಂದು ರಸ್ತೆ ಹೆಸರನ್ನ crack ಮಾಡಿದ ಮೇಲೆ, ಇನ್ನೂ ಒಂದೆರಡನ್ನ ಮಾಡಬಹುದಾ ಅಂತ ನೋಡಿದೆ...ನಮ್ಮ ಮನೆ ಹತ್ರ, ಇನ್ನೊಂದು ರಸ್ತೆ ಇದೆ, "Paseo Padre" ಅಂತ...ಇದೇನಿರಬಹುದು, ಅಂತ ಹೀಗೆ ಯೋಚಿಸ್ತಿದ್ದಾಗ, ಹೊಳೀತು, Padre ಅಂದ್ರೆ ’ಪಾದ್ರಿ’ ಇರ್ಬೇಕು...ಸರಿ, ಪಾದ್ರಿ ಅಂದ್ರೆ ಯಾರು? ಚರ್ಚ್ ಒಳಗಿರೋ ಅಪ್ಪ ಅಲ್ವೇ(Father)? ತಕ್ಷಣ, ಸ್ಪಾನಿಶ್ ಭಾಷೆನಲ್ಲಿ "Father" ಅನ್ನೋದಿಕ್ಕೆ ಏನು ಹೇಳ್ತಾರೆ ಅಂತ ನೋಡಿದೆ...ತಕ್ಕಳಪ್ಪ, "Padre" ಅಂತ ಉತ್ತರ ಬರೋದಾ...! ಓಕೆ...ಪಾದ್ರಿ ಇದ್ಮೇಲೆ ಚರ್ಚ್ ಸಿಗ್ಬೇಕು ತಾನೇ? ಈ ರಸ್ತೆ, ಒಂದು ಮೈಲಿ ಆಚೆಗೆ, "ಮಿಷನ್ ಸ್ಯಾನ್ ಹೋಸೆ" ಅನ್ನೋ ಜಮಾನದ ಚರ್ಚ್ ಇದೆ...ಈ ’ಪಸಿಯೋ’ ಅನ್ನೋ ಪಾದ್ರಿ ಅಲ್ಲೇ ಇದ್ದಿರ್ಬೇಕು ಅನ್ನೋದು ನನ್ನ ಊಹೆ...ಪಸಿಯೋ ಅನ್ನೋ ಪದಕ್ಕೆ "Walk/stroll" ಅಂತ ಅರ್ಥ ಕೂಡ ಇದೆ...

ಇರ್ಲಿ, ಮತ್ತೆ ಇನ್ನೊಂದು ರೋಡ್ ಹೆಸರು ಅರ್ಥ ಗೊತ್ತಾಗತ್ತೇನೋ ಅಂತ, "El Camino Real" ಅನ್ನೋದೇನಪ್ಪ ಯೋಚಿಸ್ತಿದ್ದೆ...ಗೊತ್ತಾಗ್ಲಿಲ್ಲ...ನನ್ಗೆ ಗೊತ್ತಾಗ್ದಿದ್ರೆ ಏನಂತೆ, ಗೂಗಲ್ ಇದ್ಯಲ್ಲ...ನೋಡಪ್ಪ ಕುತೂಹಲವಾಗಿರೋ ಉತ್ತರ ಬಂತು..."Real" ಅಂದ್ರೆ "Royal" ಅಂತ..."Camino" ಅಂದ್ರೆ ರಸ್ತೆ ಅಂತ ಅರ್ಥ, "El Camino Real" ಅಂದ್ರೆ, ರಾಜ ಮಾರ್ಗ ಅನ್ನಬಹುದು...ಈ ಕ್ಯಾಲಿಫೋರ್ನಿಯದ ರಸ್ತೆ ಆರು ನೂರು ಮೈಲಿ ಉದ್ದದ, ಒಂದಾನೊಂದು ಕಾಲದ ಹೈವೇ! ಹಾಗೆ ನೋಡಿದ್ರೇ, ರಾಜ ಮಾರ್ಗ ಎಲ್ಲಿ ಬೇಕಾದ್ರೂ ಇರಬಹುದು...ಸ್ಪೇನ್ ನಲ್ಲಿ ಹಲವಾರು "El Camino Real" ಗಳು ಇವೆಯಂತೆ...ಅರೇ! "Palm ==>Palmas", "Father==>Padre" ಆಯ್ತು..ಈಗ Real==>Royal ಹೆಚ್ಚು ಕಡಿಮೆ ಒಂದೇ ಥರ ಕೇಳತ್ತಲ್ಲ? ಹಾಗಿದ್ರೆ, ಸ್ಪಾನಿಶ್ ಮತ್ತು ಇಂಗ್ಲಿಶ್ ಅಕ್ಕ-ತಂಗಿ ಭಾಷೆ ಇದ್ದೇ ಇರ್ಬೇಕಲ್ಲ? ಹೇಗಪ್ಪಾ ಇದು ಅಂತ ಇನ್ನೂ ಸ್ವಲ್ಪ ಕೆದಕಿ ನೋಡಿದ್ರೆ, ಸ್ಪಾನಿಶ್ ಒಂದು ಲ್ಯಾಟಿನ್ ಭಾಷೆ, ಹಾಗೂ ಇಂಗ್ಲಿಷ್ ಮತ್ತು ಫ್ರೆಂಚ್ ಲ್ಯಾಟಿನ್ ಭಾಷೆಯಲ್ಲಿರೋ ಹಲವಾರು ಪದಗಳನ್ನು ಬಳಸತ್ತೆ...
ಹಾಗಾಗಿ, ಒಂದೇ ರೀತಿ ಕೇಳೋಂತ ಎಷ್ಟೋ ಪದಗಳನ್ನ ನೋಡಬಹುದು...ಹೇಗೆ ನಮ್ಮ ಕನ್ನಡ-ತಮಿಳ್ ಎರಡೂ, ಅಕ್ಕ-ತಂಗಿ ಭಾಷೆಗಳಾಗಿ, ಹಾಲು/ಪಾಲು, ಕೊಡು/ಕುಡು ಇತ್ಯಾದಿ, ಒಂದೇ ರೀತಿ ಕೇಳೋಂತ ಪದಗಳು ಇದ್ಯೋ ಇಲ್ಲೂ ಹಾಗೇನೆ...

ಆಗ್ಲಿಂದ, ನಮ್ಮ ಮನೇ ಹತ್ತಿರ ಇರೋ ವಿಷಯಗಳನ್ನೆಲ್ಲ ಹೇಳಿ ನಿಮ್ಮ ತಲೇ ತಿಂತಾ ಇದೀನಿ...ಸರಿ, ಕೊನೆದೊಂದು ಹೆಸರನ್ನ crack ಮಾಡಿ ನನ್ನ ಹರಿಕಥೆ ನಿಲ್ಲಿಸ್ತೀನಿ...
ಆಗ್ಲೇ ಹೇಳಿದ್ನಲ್ಲ, "Las" ಅಂದ್ರೆ ಹೆಚ್ಚು ಅರ್ಥ ಏನಿಲ್ಲ, "The" ಅಂತ ಅರ್ಥ ಬರತ್ತೆ ಅಂತ...ಪ್ರಪಂಚ್ದಲ್ಲೇ ಫೇಮಸ್ ಆಗಿರೋ "Las Vegas" ಅಂದ್ರೆ ಏನಪ್ಪ ಅರ್ಥ? ಸ್ಪಾನಿಶ್ ಭಾಷೆಯಲ್ಲಿ Vega ಅಂದ್ರೆ, Fields/meadows ಅಂತ ಅರ್ಥ...ನಮ್ಮ ಕನ್ನಡದಲ್ಲಿ ಬಯಲು/ಹೊಲ ಅನ್ನಬಹುದು, ಅಲ್ವಾ? ನಮ್ಮ ದೇಶದಲ್ಲಿರೋ ಹಳ್ಳಿಗಳಲ್ಲಿ, ಈಗ್ಲೂ ಕಕ್ಕಸು ಮಾಡಕ್ಕೆ, ಬಯಲಿಗೋ/ಹೊಲಕ್ಕೋ ಹೋಗೋದ್ರಿಂದ, ಕಕ್ಕಸು ಮಾಡಕ್ಕೇ ಹೋಗೋವಾಗ "ನಾನು Las Vegas ಹೋಗ್ಬರ್ತೀನಿ" ಅಂತ ಚೊಂಬು ಹಿಡ್ಕೊಂಡ್ ಹೋದ್ರೆ ತಪ್ಪಿಲ್ಲ...!

--ಶ್ರೀ

ಕೊಸರು: ಬೆಂಗಳೂರಿನ ಹೆಸರಿನ ಗುಟ್ಟು ತಿಳ್ಕೋಬೇಕಿದ್ರೆ ಇವನ್ನು ಓದಿ:
http://sallaap.blogspot.com/2008/06/blog-post_04.html
http://sampada.net/article/26376