Monday, December 3, 2012

ಕ್ರಾಂತಿಕಾರಿ ವಿಲಿಯಂ ಯೇಟ್ಸ್ ಮತ್ತು ನನ್ನ ತರಲೆ

ವಿಲಿಯಂ ಯೇಟ್ಸ್’ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.
ಯೇಟ್ಸ್ ಒಬ್ಬ ಪ್ರಖ್ಯಾತ ಐರಿಶ್ ಕ್ರಾಂತಿಕಾರಿ ಸಾಹಿತಿ...ಇವನು ಮೊದ-ಮೊದಲು ಅದ್ಭುತ ನಾಟಕಗಳನ್ನು ಬರೆದು ಜಗತ್ತಿನ ಗಮನ ಸೆಳೆದವನು.
ಈ ನಾಟಕಗಳಿಂದಲೇ ಪ್ರಖ್ಯಾತನಾಗಿ ನೋಬಲ್ ಪ್ರಶಸ್ತಿಯನ್ನು ಕೂಡ ಪಡೆದವನು.
ನೋಬಲ್ ಪ್ರಶಸ್ತಿ ನಾಟಕಗಳಿಗೆ ಬಂತಾದರೂ, ಪ್ರಶಸ್ತಿಯ ನಂತರ ಇವನು ಅದೆಷ್ಟೋ ಕವನಗಳನ್ನು ರಚಿಸಿ ಮತ್ತಷ್ಟು ಪ್ರಖ್ಯಾತನಾದ.
ವಿಮರ್ಶಕರು ಹೇಳುವ ಹಾಗೆ ನಾಟಕದ ಕೃತಿಗಳಿಗಿಂತ ಇವನ ಕವನ ಮೇರು ಮಟ್ಟದ್ದು...
ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಹಾಗೂ ಇಪ್ಪತ್ತನೇ ಶತಮಾನದ ಮೊದಲಿನ ಭಾಗದಲ್ಲಿ ನಡೆದ ಹಲವಾರು ಯುದ್ಧಗಳು ಮತ್ತದರ ವಿದ್ಯಮಾನಗಳು ಇವನ ರಚನೆಗಳಿಗೆ ಸ್ಫೂರ್ತಿಯಾಗಿತ್ತು...
ಇವನ ಕ್ರಾಂತಿಕಾರಿ ಬರಹಗಳಿಂದ ಪ್ರೇರಿತರಾದವರು ಅದೆಷ್ಟೋ...

ಇತ್ತೀಚಿಗೆ ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದಾಗ, ಯೇಟ್ಸ್ ನ "ಪೊಲಿಟಿಕ್ಸ್" ಕವನದ ಅನುವಾದವೊಂದು ನನ್ನ ಕಣ್ಣಿಗೆ ಬಿತ್ತು.
"ಪೊಲಿಟಿಕ್ಸ್" ಕವನವನ್ನು ಓದುತ್ತಿದ ಹಾಗೆ, ನನಗೆ ಮತ್ತೇನೋ ಹೊಳೆದು, ಕೆಳಗಿನ ಸಾಲುಗಳನ್ನು ಬರೆದೆ...

ಯೇಟ್ಸ್ ನ ಮೂಲ ಕವನ "ಪೊಲಿಟಿಕ್ಸ್" ಕೆಳಗಿದೆ.
ನೀವು ಅವನ ಈ ಕವನವನ್ನು ಓದುವಾಗ, ಅಂದಿನ ಕಾಲದ ರಾಜಕೀಯ ವಾತವರಣವನ್ನು ಮನದಲ್ಲಿಟ್ಟುಕೊಳ್ಳಬೇಕು.
ಹಲವಾರು ದೇಶಗಳ ನಡುವೆ ಯುದ್ಧ ಸಾಧ್ಯತೆಗಳಿತ್ತು ಎಂಬುದನ್ನು ಗಮನದಲ್ಲಿಟ್ಟು ಕೊಳ್ಳಬೇಕು...

Politics

HOW can I, that girl standing there,
My attention fix
On Roman or on Russian
Or on Spanish politics?
Yet here's a travelled man that knows
What he talks about,
And there's a politician
That has read and thought,
And maybe what they say is true
Of war and war's alarms,
But O that I were young again
And held her in my arms!

- William Butler Yeats

ಮೇಲಿನ ಗಂಭೀರ ಕವನವನ್ನು ಓದುತ್ತಿದ ಹಾಗೆ, ನನ್ನ ತರಲೆ ಮನಸ್ಸಿಗೆ ಮತ್ತೇನೋ ಹೊಳೆದು, ಕೆಳಗಿನ ಸಾಲುಗಳನ್ನು ಬರೆದಿದ್ದೇನೆ;
ನಿಮ್ಮ ಅನಿಸಿಕೆ ಹೇಳಿ:
***
ಅಲ್ಲಿರುವ ಸುಂದರ ಹುಡುಗಿಯ
ಮೇಲಿಟ್ಟ ಕಂಗಳನ್ನು
ಸರಿಸಲಾಗದೆ
ನಿಂತಿಹನು - ರಾಜತಂತ್ರಜ್ಞ

ಇವನು ನೈಪುಣ್ಯತೆಯಿಂದ
ಕ್ಷಣದಲೇ ಗುರುತಿಸುವನು
ದೇಶದಲ್ಲಾಗುವ
ಯುದ್ಧ-ಅಪಾಯ ಮತ್ತಿತರ ವಿಘ್ನ

ಅವಳನ್ನು ನೋಡುತಲೇ
ಆತನಿಗೆ ಅನಿಸುತಿದೆ
ಅವಳ ರಮಿಸಬೇಕೆಂದು
ಮನದಲ್ಲೆಲ್ಲ ಅವಳದೇ ಯೋಚನೆ...

ಇವ, ಪಕ್ಕಾ
ಬ್ರಹ್ಮಚಾರಿಯೇ ಇರಬೇಕು
ಇಲ್ಲವಾದಲ್ಲಿ ಇವನಿಗೇಕೆ
ತಿಳಿಯದು ಮಹಾಯುದ್ಧದ ಸೂಚನೆ!
***

ಮಹಾಕವಿಯ ಕವನವನ್ನು ತಿರುಚಿ ತರಲೆ ಮಾಡಿದ್ದಕ್ಕೆ ಕ್ಷಮೆ ಇರಲಿ :-)

-ಶ್ರೀ
(೩-ಡಿಸೆಂಬರ್-೨೦೧೨)

ಕೊ:
ಯೇಟ್ಸ್ ನ "ಪೊಲಿಟಿಕ್ಸ್" ಕವನದ ಕೇಶವ ಕುಲಕರ್ಣಿಯವರ ಅನುವಾದ


ಕೊ.ಕೊ:
ಡಾ. ಯು.ಆರ್. ಅನಂತ ಮೂರ್ತಿಯವರು - "ಶತಮಾನದ ಕವಿ ಯೇಟ್ಸ್" ಎಂಬ ಪುಸ್ತಕವನ್ನೇ ಹೊರತಂದು, ಇವನ ಅದೆಷ್ಟೋ ಕವನಗಳ ಅನುವಾದ ಮಾಡಿದ್ದಾರೆ.
ಮೇಲಿನ ಕವನವನ್ನು ಯು,ಆರ್ ಅನಂತ ಮೂರ್ತಿಯವರು ಹೀಗೆ ಅನುವಾದಿಸಿದ್ದಾರೆ.

Sunday, November 11, 2012

ಪ್ರತಿಬಿಂಬ

ಪ್ರಿಯೆ,

ನನ್ನ ಈ ಹೃದಯ
ಇಷ್ಟೊಂದು
ಸುಂದರವೆಂದು
ನಿನ್ನ ಕಂಗಳಳೊಳಗೆ
ಇಣುಕಿ ನೋಡುವವರೆಗೂ
ತಿಳಿದೇ ಇರಲಿಲ್ಲ...

--ಶ್ರೀ

Friday, November 9, 2012

ನಿನ್ನಲ್ಲಿರುವುದು ರಕುತವಲ್ಲ...

ನಲ್ಲೆ,

ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?

--ಶ್ರೀ

Wednesday, November 7, 2012

ತಕರಾರು

ನಲ್ಲೆ,
ನನ್ನ ತರಕಾದ ಕೆನ್ನೆಯ
ಬಗ್ಗೆ ತಕರಾರು ಎತ್ತಬೇಡ
ಗಡ್ಡ ಬೆಳೆಯದಂತೆ
ತಪ್ಪದೇ ಮುಲಾಮು
ಹಚ್ಚದಿದ್ದದ್ದು
ನಿನ್ನ ತಪ್ಪಲ್ಲವೇ?
-ಶ್ರೀ

Tuesday, November 6, 2012

Thursday, November 1, 2012

ಸ್ಯಾಂಡಿ - ಸಂಧ್ಯಾನ -ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!



ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ - ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ...ನೀನೇನು ಯೋಚನೆ ಮಾಡಬೇಡ’ ಅಂದೆ...
’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ - ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು ಅಮ್ಮ...
ಅಮ್ಮನ ಮುಗ್ಧ ಮಾತಿಗೆ ನಕ್ಕು, ’ಹೆಸರು ಇಟ್ಕೊಂಡ್ ಬರಕ್ಕೇ ಆಗತ್ತಾ? ನಾವೇ ಹೆಸರಿಡೋದು...ಹಿಂದೆ ಎಲ್ಲ ’ಲೈಲಾ’ ಬಂದಿದ್ಳು ನೆನಪಿದೆಯಾ?’ ಅಂದೆ...
’ಹೌದಾ...ಲೈಲಾ ಬಂದ್ರೆ ಮಜನೂ ಬರಲಿಲ್ವಾ?’ ಎಂದು ಕೇಳಿದಾಗ, ಅಮ್ಮನ ಮಾತಿಗೆ ನಾನು ಗೊಳ್ಳೆಂದು ನಕ್ಕೆನಾದರೂ, ’ಮಜನೂ’ ಏಕೆ ಬರಲಿಲ್ಲ ಅಥವಾ ಏಕೆ ಮಜನೂ ಮುಂದೇನೂ ಬರೋದಿಲ್ಲ ಅಂತ ಗೊತ್ತಿರಲಿಲ್ಲ...

ಇತ್ತ ಕಡೆ ’ಸ್ಯಾಂಡಿ’ ಅಮೇರಿಕದ ಪೂರ್ವ ಭಾಗದಲ್ಲಿ ಅನಾಹುತವನ್ನು ಮಾಡ್ತಿದ್ರೆ,
ಕೀಟಲೆ ಕೋರರು, "’ಸ್ಯಾಂಡಿ’ ನಮ್ಮ ’ಸಂಧ್ಯ’ನಾ ಇಲ್ಲ ’ಸಂದೀಪ’ನಾ?" ಅಂತ ಫ಼ೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿ, ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ನಡುವೆ ಭಯಂಕರ ಬಿಕ್ಕಟ್ಟನ್ನೇ ಸೃಷ್ಟಿಸಿಬಿಟ್ಟರು...
’ಸ್ಯಾಂಡಿ’ - ’ ಸಂಧ್ಯಾ"ನೇ ಅಂತ ಹೆಂಡತಿಯೊಂದಿಗೆ ವಾಗ್ವಾದ ಮಾಡಿದ ಗಂಡ ಉಪವಾಸ ಬೀಳಬೇಕಾಯ್ತು ಅಂತ ಅನ್ನೋದು ಮತ್ತೊಂದು ಫ಼ೇಸ್ ಬುಕ್ ಕಥೆ...

ಅದೇನೆ ಇರಲಿ, ನನ್ನ ಹೆಂಡತಿ ಕೂಡ, ’ತುಂಬಾ ಮೋಸ...ಹರಿಕೇನ್ ಗೆಲ್ಲಾ ಹುಡುಗೀರ್ ಹೆಸರೇ ಯಾಕಿಡ್ಬೇಕು - ಕಟ್ರೀನಾ ಅಂತೆ...ಲೈಲಾ ಅಂತೆ...ನೀಲಂ ಅಂತೆ...’ ಎಂದಾಗ
ನಾನು ಸುಮ್ಮನೆ ಇರದೆ ’ಅಷ್ಟೂ ಗೊತ್ತಾಗಲ್ವೇನೆ ಯಾಕೇ ಹುಡುಗೀರ್ ಹೆಸರಿಡ್ತಾರೆ ಅಂತ?’ ಎಂದು ಹೇಳ್ಬಿಟ್ಟೆ...ಅವತ್ತು ನನ್ನ ಪಾಡು ಯಾಕೆ ಕೇಳ್ತೀರಾ!
ನನ್ನ ಪಾಡು ಏನೇ ಆದ್ರೂ, ನನ್ನ ಹೆಂಡತಿ ಸ್ಯಾಂಡಿ ಹುಡುಗಿನೇ ಅಂತ ಒಪ್ಕೊಂಡ್ಳಲ್ಲಾ ಅಂತ ನನ್ನಷ್ಟಕ್ಕೇ ನಾನೇ ಸಮಾಧಾನ ಮಾಡ್ಕೊಂಡಿದ್ದೆ!!!

***

ಇಷ್ಟೆಲ್ಲಾ ಓದಿದ ಹೆಣ್ಣು ಮಕ್ಕಳು ಈಗಾಗಲೇ ನನ್ನ ಮೇಲೆ ಮೂರನೇ ಮಹಾ ಯುದ್ಧಕ್ಕೆ ಸಿದ್ಧರಾಗ್ತಿರಬಹುದು, ಹಾಗಾಗಿ ಮುಖ್ಯವಾದ ವಿಷಯ ಮೊದಲೇ ಹೇಳಿ ಬಿಡ್ತೀನಿ...
ಎಲ್ಲಾ ಹರಿಕೇನ್ ಗಳೂ/ಸೈಕ್ಲೋನ್‍ಗಳೂ, ಹೆಣ್ಣು ಮಕ್ಕಳ ಹೆಸರು ಇಟ್ಕೊಂಡಿರಲ್ಲ...
ಮುಂದೆ ’ಆಕಾಶ’ ನೂ ಬರ್ತಾನೆ ’ಸಾಗರ್’ ಕೂಡ ಬರ್ತಾನೆ ಆದ್ರೆ ಸದ್ಯಕ್ಕಲ್ಲ ...ಆದ್ರೆ ’ಮಜನೂ’ ಬರೋದು ಮಾತ್ರ ತುಂಬಾನೇ ಡೌಟು...

"ಅದೇನು ಅಷ್ಟೊಂದು ಕಾನ್ಫಿಡೆನ್ಸ್ ನಿಂದ ಹೇಳ್ತಿದೀರಾ?" ಅಂತೀರಾ? ಅದಕ್ಕೆ ಕಾರಣ ಇದೆ...

ಪ್ರತಿಯೊಂದು ಸೈಕ್ಲೋನ್ ಬರೋದಕ್ಕೂ ಮುಂಚೇನೆ ಮುಂದೆ ಏನು ಬರತ್ತೇ ಅನ್ನೋದನ್ನ ಮೊದಲೇ ನಿರ್ಧಾರ ಮಾಡಿ ಆಗಿರತ್ತೆ...
ಇದು ಏನಪ್ಪಾ ಇದು ಅಂತ ತಲೆ ಕೆರ್ಕೋ ಬೇಡಿ...
ನಮ್ಮ ’ಪ್ರಭವ’, ’ವಿಭವ’ ಅಂತ ಅರವತ್ತು ಸಂವತ್ಸರಗಳ ಹೆಸರಿದೆಯಲ್ಲಾ, ಅದೇ ರೀತಿ...

"ರೀ, ಸಾಕು ಸುಮ್ನೆ ಬುರಡೆ ಬಿಡಬೇಡಿ, ನಾವು ಚಿಕ್ಕವರಾಗಿದ್ದಾಗ ಇದು ಯಾವ ಹೆಸ್ರೂ ಕೇಳೇ ಇರಲಿಲ್ಲ...ಪ್ರಭವ-ವಿಭವ ಅಂತೇ...ಆ ರೀತಿ ಇದ್ದಿದ್ರೆ ನಮ್ಮ ಅಪ್ಪನೋ ತಾತನೋ ಹೇಳ್ತಿದ್ರು ಅಲ್ವಾ" ಅಂತ ಅಂದ್ರಾ?
ಅದಕ್ಕೂ ಕಾರಣ ಇದೆ...ನಮ್ಮ ಭಾರತದಲ್ಲಿ ಸೈಕ್ಲೋನ್ ಹೆಸರಿಡುವ ಪ್ರತೀತಿ ಶುರುವಾಗಿದ್ದು ೨೦೦೪ರಲ್ಲಿ...
ಮೊದಲು ಬಂದಿದ್ದು ’ಒನಿಲ್’ ಆಮೇಲೆ ’ಅಗ್ನಿ’ ಆದರೆ ನೀವು ಎಲ್ಲ ಹೆಸರೂ ಕೇಳಿರಬೇಕು ಅಂತ ಏನು ಇಲ್ಲ...
ಯಾಕೇ ಅಂದ್ರೆ ಪ್ರತಿ ವರ್ಷ ಹತ್ತಾರು ಸೈಕ್ಲೋನ್ ಗಳೂ ಹರಿಕೇನ್ ಗಳೂ ಬಂದು ಹೋಗ್ತಾ ಇರತ್ತೆ...ದಿನ ಪತ್ರಿಕೆಯಲ್ಲಿ ಬರೋದು ಏನಿದ್ರೂ ನಮ್ಮ ನಿತ್ಯ-ಜೀವನಕ್ಕೆ ತಟ್ಟುವಂತಹವುಗಳು ಮಾತ್ರ...
ಹಾಗಾಗಿ ’ಲೈಲಾ’ ’ಕಟ್ರೀನಾ’ ’ಐರೀನ್’ ಗಳ ನೆನಪು ನಮಲ್ಲಿ ಹೆಚ್ಚು ಕಾಲ ಉಳಿಯುತ್ತೆ...

’ಅದು ಸರಿ, ನಮ್ಮ ಬಾಲಿವುಡ್ ನಲ್ಲಿ ಕಟ್ರೀನಾ ಈಗಾಗ್ಲೇ ಇದಾಳೆ, ಸೈಕ್ಲೋನ್ ಕಟ್ರೀನಾ ಬೇಡ’ ಅಂದ್ರಾ?
ತಥಾಸ್ತು! ನಮ್ಮ ದೇಶಕ್ಕೆ ಕಟ್ರೀನಾ ’ಶಾಪ’ ತಟ್ಟಲ್ಲ ಬಿಡಿ!

"ಏನ್ರೀ ಈಗ ತಾನೆ ಲಿಸ್ಟ್ ಇದೇ ಅಂದ್ರೀ, ಈಗ ಕಟ್ರೀನಾ ಬರಲ್ಲ ಅಂತೀರಾ? ಸುಮ್ನೆ ತಲೇ ಕೇಡಿಸ್ಬೇಡ್ರೀ" ಅಂದ್ರಾ?
ಅದು ಹಾಗಲ್ಲ ಕಣ್ರೀ, ನಮ್ಮ ಭೂಮಿಯಲ್ಲಿರೋ ಬೇರೆ ಬೇರೆ ಸಾಗರ/ಸಮುದ್ರಗಳನ್ನು ವಿವಿಧ ಪ್ರಾಂತ್ಯಗಳಾಗಿ ವಿಂಗಡನೆ ಮಾಡಿದ್ದಾರೆ...
ಪ್ರತಿಯೊಂದು ಪ್ರಾಂತ್ಯದಲ್ಲೂ ಸೈಕ್ಲೋನ್/ಹರಿಕೇನ್ ಗಳ ಒಂದು ಪಟ್ಟಿ ಇರತ್ತೆ, ಹಾಗಾಗಿ ’ಕಟ್ರೀನಾ’ ಶಾಪ ಏನಿದ್ರೂ ಅಟ್ಲಾಂಟಿಕ್ ಪ್ರದೇಶಕ್ಕೇ ಸೀಮಿತ...
ನಮ್ಮ ನೀಲಂ ನೃತ್ಯ ಏನಿದ್ರೂ ಹಿಂದೂ ಮಹಾ ಸಾಗರದಲ್ಲಿ ಮಾತ್ರ!

ಈ ಹೆಸರಿಡೋ ಪದ್ಧತಿ ಮೊದಲು ಶುರುವಾಗಿದ್ದು ಆಕಸ್ಮಿಕವಾಗಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ "ಅಂತ್ಜೆ" ಎಂಬ ಒಂದು ಪ್ರಸಿದ್ಧ ಹಡಗು ಹರಿಕೇನ್ ನಿಂದ ಮುಳಿಗಿದಾಗ...
ಆಗ ಜನ "ಅಂತ್ಜೆ" ಹರಿಕೇನ್ ಎಂದು ಕರೆಯಲು ಆರಂಭಿಸಿದರಂತೆ...

ನಂತರ ಇಪ್ಪತ್ತನೇ ಶತಮಾನದ ಮಧ್ಯದಲ್ಲಿ ಪ್ರತಿಯೊಂದು ಹರಿಕೇನ್‍ಗೂ ಹೆಸರಿಡಲು ಆರಂಭಿಸಿದರಂತೆ...
ಮೊದ-ಮೊದಲಿಗೆ ಬರೀ ಹುಡುಗಿಯರ ಹೆಸರೇ ಇತ್ತಂತೆ...ಇದಾದ ಮೇಲೆ ಹವಾಮಾನ ಕೇಂದ್ರದಲ್ಲಿದ್ದವರಿಗೆ ಉಪವಾಸವೇ ಗತಿಯಾಯ್ತೇನೋ ೧೯೭೯ರಲ್ಲಿ ಹುಡುಗರ ಹೆಸರನ್ನೂ ಸೇರಿಸಿದರಂತೆ...
ಈಗ ಅಟ್ಲಾಂಟಿಕ್ ಸಾಗರದಲ್ಲಿ ಹುಟ್ಟುವ ಹರಿಕೇನ್ ಗಳಿಗೆ ಹುಡುಗಿಯರ ಮತ್ತು ಹುಡುಗರ ಹೆಸರನ್ನು ಒಂದಾದಮೇಲೆ ಮತ್ತೊಂದು ಬರುವಂತೆ ಬದಲಾಯಿಸಿದ್ದಾರೆ...

ಈಗ ಪ್ರಪಂಚದಲ್ಲಿರುವ ವಿಭಾಗಳು ಇವು:
೧. ಕೆರಿಬಿಯನ್, ಮೆಕ್ಸಿಕೋ ಮತ್ತು ಉತ್ತರ ಅಟ್ಲಾಂಟಿಕ್ ವಿಭಾಗ
೨. ಈಶಾನ್ಯ ಪೆಸಿಫಿಕ್ ವಿಭಾಗ
೩. ಉತ್ತರ-ಮಧ್ಯ ಪೆಸಿಫಿಕ್ ವಿಭಾಗ
೪. ವಾಯುವ್ಯ ಪೆಸಿಫಿಕ್ ಮತ್ತು ದಕ್ಷಿಣ ಚೀನಾ ಸಮುದ್ರ ವಿಭಾಗ
೫. ಆಸ್ಟ್ರೇಲಿಯಾ ವಿಭಾಗ
೬. ನಾಡಿಸ್ ವಿಭಾಗ (ದಕ್ಷಿಣ ಪೆಸಿಫಿಕ್‍ನ ಕೆಲವು ಭಾಗಗಳು)
೭. ಪೋರ‍್ಟ್ ಮೋರ್ಸ್‍ಬಯ್ ವಿಭಾಗ
೮. ಜಕಾರ್ತಾ ವಿಭಾಗ
೯. ಉತ್ತರ ಹಿಂದೂ ಮಹಾಸಾಗರ ವಿಭಾಗ
೧೦.ನೈರುತ್ಯ ಹಿಂದೂ ಮಹಾ ಸಾಗರ ವಿಭಾಗ


ಪ್ರತಿಯೊಂದು ವಿಭಾಗದ ಹವಾಮಾನಕ್ಕೂ ಒಂದು ಮುಖ್ಯ ಕಚೇರಿಯಿದ್ದು, ಉತ್ತರ ಹಿಂದೂ ಮಹಾಸಾಗರ ವಿಭಾಗಕ್ಕೆ ದೆಹಲಿಯಲ್ಲಿ ಮುಖ್ಯ ಕಚೇರಿ ಇದೆ...
ಈ ವಿಭಾಗದ ಸೈಕ್ಲೋನ್‍ಗಳಿಗೆ ಭಾರತ, ಪಾಕಿಸ್ತಾನ, ಶ್ರೀಲಂಕ, ಮಾಲ್ಡೀವ್ಸ್, ಮ್ಯಾನ್‍ಮಾರ್, ಥೈಲಾಂಡ್ ಮತ್ತು ಓಮನ್ ದೇಶದವರು ಸೇರಿ ಹೆಸರಿಟ್ಟಿದ್ದಾರೆ.

ಈ ಪಟ್ಟಿ ಇಲ್ಲಿದೆ:


ಭಾರತೀಯ ಹವಾಮಾನ ಇಲಾಖೆ ಜನತೆಗೆ ಹೊಸ ಹೆಸರನ್ನು ಸೂಚಿಸಬಹುದಾದ ಅವಕಾಶ ಕೊಡುತ್ತದೆಯಾದರೂ, ೨೦೦೪ರಲ್ಲಿ ಸಿದ್ಧಪಡಿಸಿರುವ ಪಟ್ಟಿಯನ್ನು ಈ ಸದ್ಯದಲ್ಲಿ ಬದಲಾಯಿಸುವುದು ಅನುಮಾನ...
ಹಾಗಾಗಿ, ಸೈಕ್ಲೋನ್ ಲೈಲಾ-’ಸೈಕ್ಲೋನ್’ ಮಜನೂನ ಸದ್ಯಕ್ಕಂತೂ ಸೇರೋಕಾಗೋದಿಲ್ಲ...!

ಇವೆಲ್ಲಾ ವಿಷಯ ಓದಿ ನಿಮಗೆ ಇನ್ನೂ ಸಮಾಧಾನ ಆಗಲಿಲ್ಲವಾದಲ್ಲಿ, ಹೆಚ್ಚಿನ ವಿಷಯಗಳಿಗೆ ಇಲ್ಲಿ ಚಿಟಕಿಸಿ:
http://www.wmo.int/pages/prog/www/tcp/Storm-naming.html

ಇಷ್ಟೆಲ್ಲ ಕಥೆ ಹೇಳಿದ್ದಾಯ್ತು, ಹೇಳೋದ್ದನ್ನೇ ಮರೆತಿದ್ದೇ...
ಸ್ಯಾಂಡಿ - ಸಂಧ್ಯಾನೇ ಅಂತ ಕನ್ಫರ್ಮ್ ಆಯ್ತು ಯಾಕೇ ಅಂದ್ರೆ ಅವಳ ಹಿಂದೆ ಬಂದಿದ್ದು ರಾಫಲ್ ಮುಂದೆ ಬರೋವ್ನು ಟೋನಿ...! :-)
--ಶ್ರೀ
ಹೆಚ್ಚಿನ ಮಾಹಿತಿಗೆ:
http://www.wmo.int
ಚಿತ್ರ ಕೃಪೆ: http://www.imd.gov.in/
ಸ್ಯಾಂಡಿ ಚಿತ್ರಕೃಪೆ: http://www.telegraph.co.uk

ಕಿರಿದಾದ ಲೋಕ



ಇನಿಯ,
ನಿನ್ನ
ಈ ಎದೆಯ
ಮೇಲೆ
ತಲೆಯನು
ಪ್ರತಿ ಬಾರಿ
ಆನಿಸಿದಾಗಲೆಲ್ಲ
ಈ ಪ್ರಪಂಚ
ಅದೆಷ್ಟು ಕಿರಿದು
ಎಂದು ಅನಿಸುವುದೇಕೇ?

--ಶ್ರೀ
(ನವಂಬರ್ ೧ ೨೦೧೨)

ಚಿತ್ರ ಇಲ್ಲಿಂದ ಹೆಕ್ಕಿದ್ದು: http://thehomelook.blogspot.com/2010/07/lets-go-to-bed-honey.html

Sunday, April 1, 2012

ಸಿಂಹಮುಖಿ - ಕಥೆ

ತುಸು ಕೆಂಪಾದ ಆ ದೊಡ್ಡ ಕಣ್ಣುಗಳು ನೂರಾರು ಟಿ.ವಿ ಪರದೆಗಳನ್ನು ಒಮ್ಮೆಲೇ ನೋಡುತ್ತಿತ್ತು ...

ಆರು ಅಡಿ ಎರಡು ಅಂಗುಲ ಎತ್ತರ...
ವಯಸ್ಸು ಐವತ್ತು ದಾಟಿದ್ದರೂ, ಒಂದೂ ಬಿಳಿ ಕೂದಲಿಲ್ಲದ, ನೀಟಾಗಿ ಎಣ್ಣೆ ಹಾಕಿ ಬಾಚಿದ ತಲೆ...
ಗಂಟಿಕ್ಕಿದ ಹುಬ್ಬು...ಹುಬ್ಬಿನ ಮಧ್ಯದಿಂದಲೇ ಶುರುವಾದ ದಪ್ಪನೆ ಕೆಂಪು ನಾಮ...ಗಿಡುಗನ ಮೂಗು...
ಮೂಗಿನಡಿಯಲ್ಲಿ ದಪ್ಪ ಮೀಸೆ...ಕಪ್ಪಿಟ್ಟ ತುಟಿಯ ಮಧ್ಯೆ ಪೈಪ್...
ಕೊಂಚ ಬೊಜ್ಜಿದ್ದರೂ, ಎತ್ತರಕ್ಕೆ ತಕ್ಕುದಾದ ದೇಹವನ್ನು ಹೊಂದಿದ್ದ ರಾಜ ನರಸಿಂಹ ರೆಡ್ಡಿಯನ್ನು ನೋಡಿದವರಿಗೆ ಬ್ಲಾಕ್ ಅಂಡ್ ವೈಟ್ ಸಿನಿಮಾದ ವಿಲನ್ ನೆನಪಿಗೆ ಬಂದರೆ ತಪ್ಪಿಲ್ಲ...

ಭುಸುಗುಡುವ ಹಾವಂತೆ ಹೊಗೆಯುಗುಳುತ್ತಾ ನಿಂತಿದ್ದ ರಾಜ ನರಸಿಂಹ ರೆಡ್ಡಿಯ ಮೊಬೈಲ್ ಬಡಿದುಕೊಂಡಿತು...
ನಂಬರ್ ಯಾವುದು ಎಂದು ಗುರುತಿಸದಿದ್ದರೂ ಎಂದಿನ ಜೋರಿನ ಧಾಟಿಯಲ್ಲಿ ಅಬ್ಬರಿಸಿದ...
"ಹಲೋ..."...
ಅತ್ತ ಕಡೆಯಿಂದ ತಡವರಿಸುವ ಧ್ವನಿ...
"ಸಾರ್... ನಾನು....ನಾನು...ವೆಂಕಟ ರಾಜು..."
ಧ್ವನಿಯನ್ನು ಗುರುತಿಸದ ರೆಡ್ಡಿಗೆ ಎಂದಿನಂತೆ ಬಲು ಬೇಗ ಕೋಪ ಬಂತು...
"ಯಾರ್ರೀ ವೆಂಕಟರಾಜು...? ನಾನು ಬಿಝಿ ಇದ್ದೀನಿ...ಸರಿಯಾಗಿ ಹೇಳಿ..."
ಆ ಬದಿಯಿಂದ ಗಡಿಬಿಡಿಯಿಂದ ಉತ್ತರ ಬಂತು...
"ಸಾರಿ ಸಾರ್....ನಾನು... ವೆಂಕಟರಾಜು...ಹೋದ ವಾರ ತಾನೆ ನಿಮ್ಮ ಚಾನಲ್ ಸೇರಿದೆನಲ್ಲ ಸಾರ್...
ನೀವು ಹೇಳಿದ ಹಾಗೆ ಡಾಕ್ಯುಮೆಂಟರಿ ತೆಗೆಯೋದಿಕ್ಕೆ ಚಾರ್ ಮಿನಾರ್ ಕಡೆ ಕ್ಯಾಮರಮನ್ ವಿಜಿ ಸರ್ ಜೊತೆ ಹೋಗ್ತಿದ್ದೆ ಸಾರ್...
ದಾರೀಲಿ ಟಿ.ಆರ್.ಎಸ್ ಪುಂಡರು ಒಂದಷ್ಟು ಕಾಲೇಜು ಹುಡುಗ್ರನ್ನ ಸೇರಿಸ್ಕೊಂಡು ಮತ್ತೆ ತೆಲಾಂಗಣ ಗಲಾಟೆ ಶುರು ಮಾಡಿದಾರೆ ಸಾರ್...ಗಲಾಟೆ ಜೋರಾಗೇ ನಡೀತಿದೆ ಸಾರ್...
ಮ್ಯಾಟರ್ ಸೀರಿಯಸ್ ಆಗೋ ಹಾಗಿದೆ ಸಾರ್...ವಿಜಿ ಸರ್ ಈಗಾಗ್ಲೇ ವಿಡಿಯೋ ರೆಕಾರ್ಡಿಂಗ್ ಶುರು ಮಾಡಿದಾರೆ... ಸಾರ್..."
ಮಧ್ಯದಲ್ಲೇ ಮಾತನ್ನು ತುಂಡರಿಸಿ ಫಟ್ಟನೆ ನುಡಿದ ರಾಜ ನರಸಿಂಹ ರೆಡ್ಡಿ...
"ನೋಡ್ರೀ...ಈ ನ್ಯೂಸ್ ಇಟಂ ನಮ್ ಚಾನಲ್ ನಲ್ಲಿ ಇನ್ನೈದು ನಿಮಿಷದಲ್ಲಿ ಲೈವ್ ಹೋಗಬೇಕು...ಬೇಗ ಅರೇಂಜ್ ಮಾಡಿ...ನಮ್ಮ ಸ್ಟುಡಿಯೋ ಎಡಿಟರ್ ಗೆ ಈಗ್ಲೆ ಹೇಳ್ತೀನಿ, ಈ ನ್ಯೂಸ್ ತಕ್ಷಣ ಬ್ರಾಡ್ ಕ್ಯಾಸ್ಟ್ ಮಾಡೋದಿಕ್ಕೆ"
ಹೊಸ ಕೆಲಸಕ್ಕೆ ಸೇರಿದ ಒಂದು ವಾರದಲ್ಲೇ ರೆಡ್ಡಿಗಳ ಕೋಪದ ಅನುಭವ ಆಗಿದ್ದ ವೆಂಕಟರಾಜು ತಡವರಿಸುತ್ತಾ, ಬೆವರುತ್ತಾ ಒಮ್ಮೆ ತಿರುಪತಿ ದೇವರನ್ನು ಮನದಲ್ಲೇ ನೆನೆದು ಹೇಳಿದ...
"ಸಾರ್...ಸಾರ್...ಹೀಗೆ ನಿಮಗೆ ಗೊತ್ತಿರೋ ಹಾಗೆ ನನಗೆ ಈ ಕೆಲ್ಸ ಹೊಸದು ಸಾರ್...ಎಕ್ಸ್ ಪೀರಿಯನ್ಸ್ ಇರೋ ಸೀನಿಯರ್ಸ್ ನ ಯಾರನ್ನಾದ್ರೂ ಈ ಕಡೆಗೆ ಕಳಿಸಕ್ಕೆ ಆಗತ್ತಾ...ನನಗೆ ಪೊಲಿಟಿಕಲ್ ಕವರೇಜ್ ಹ್ಯಾಂಡಲ್ ಮಾಡಕ್ಕೆ ಗೊತ್ತಿಲ್ಲ...ಬರೀ ಡಾಕ್ಯುಮೆಂಟರಿ ಮಾಡಿ ಅಷ್ಟೆ ಗೊತ್ತು ನನಗೆ..."
ಈ ಮಾತನ್ನು ಕೇಳುತ್ತಲೇ, ವೆಂಕಟರಾಜು ಫೋನ್ ಕಿತ್ತು ಬರೋ ಹಾಗೆ ರೆಡ್ಡಿ ಕೂಗಿದ..
"ರೀ...ನಿಮಗೆ ತಲೆಗಿಲೆ ಇದ್ಯೇನ್ರೀ...ನೀವು ಇರೋ ಏರಿಯಾಲಿ ಗಲಾಟೆ ಮಾಡ್ತಿದಾರೆ ಅಂತೀರ...ಹೇಗ್ರಿ ಬೇರೆ ಅವರನ್ನ ಈಗ್ಲೇ ಕಳಿಸೋದು??? ಹೋಗ್ಲೀ...ಅದು ಬಿಡಿ...ನೀವ್ ನಮ್ ಚಾನಲ್ ಕಡ್ಲೆಪುರೀ ತಿನ್ನಕ್ಕಾ ಸೇರಿದ್ದು...? ಜಾಸ್ತಿ ಮಾತಾಡ್ದೇ ಜವಾಬ್ದಾರಿ ತೊಗೊಂಡು ಕವರ್ ಮಾಡಿ...ವಿಜಿ ಇದ್ದಾರಲ್ಲ ಅವರು ಸೀನಿಯರ್, ಅವರಿಗೆ ತುಂಬಾ ಎ಼ಪ್ಸೀರಿಯನ್ಸ್ ಇದೆ...ಗೈಡ್ ಮಾಡ್ತಾರೆ....ಅಲ್ರೀ... ಇಂಥಾದೆಲ್ಲ ನಡೆಯತ್ತೇ ಅಂತ ನಿಮಗೆ ನಮ್ ಚಾನಲ್ ಸೇರಿದಾಗ ಟ್ರೈನಿಂಗ್ ಕೊಡಿಸಿಲ್ವೇನ್ರೀ??? ನಾಳೆ ಈ ನ್ಯೂಸ್ ಇಟಂ ಕಂಟಿನ್ಯೂ ಆದ್ರೆ, ಅಥವಾ ಗಲಭೆ ಕಡಿಮೆ ಆದ್ರೆ ಬೇರೆ ಅವರನ್ನ ಕಳಿಸಿದ್ರಾಯ್ತು...ನೋಡ್ರೀ...ನೀವ್ ಅದೇ ಜಾಗದಲ್ಲಿ ಈಗಾಗ್ಲೇ ಇರೋದ್ರಿಂದ ನಮ್ ಸಿಂಹಮುಖಿಯಲ್ಲೇ ಮೊದಲು ಈ ಇಟಂ ಬರ್ಬೇಕು...ನನಗೆ ನೀವು ಏನ್ ಮಾಡ್ತೀರೋ ಗೊತ್ತಿಲ್ಲ...ನಮ್ ಚಾನಲ್ ನಲ್ಲೇ ಬೆಸ್ಟ್ ಕವರೇಜ್ ಬರಬೇಕು..."
ವೆಂಕಟರಾಜು ಕರೆಯನ್ನು ತುಂಡರಿಸಿದ ರೆಡ್ಡಿ ’ಬಿಟ್ಟಿ ಕೂಳು ತಿನ್ನಕ್ಕೆ ನಮ್ ಚಾನಲ್ ಬೇಕಂತೆ...ದರಿದ್ರ ಮುಂಡೇವು...’ ಎಂದು ಗೊಣಗುತ್ತಾ ಎಡಿಟರ್ ಬಳಿ ಸರಸರನೆ ಹೋದ...

***
ತೆಲಾಂಗಣ ವಿಷಯದಿಂದಾಗಿ ಹೈದರಬಾದ್ ಹೃದಯ ಭಾಗ ಹೊತ್ತಿ ಉರಿದಿದ್ದರಿಂದ ರೆಡ್ಡಿಗೆ ಇಡೀ ದಿನ ಬಿಡುವಿಲ್ಲದಾಗಿತ್ತು...
ಟಿ.ಆರ್.ಎಸ್ ಗುಂಪು ಕಂಡ ಕಂಡ ಕಡೆ ಬೆಂಕಿ ಇಟ್ಟಿದ್ದರು...ಕೋಟ್ಯಾಂತರ ಆಸ್ತಿ ನಷ್ಟವಾಗಿತ್ತು...ಹಲವಾರು ಜನರಿಗೆ ಗಂಭೀರ ಗಾಯಗಳಾಗಿದ್ದವು...
ಕಲ್ಲು ತೂರಾಟದಿಂದ ಹಲವರ ಸ್ಥಿತಿ ಚಿಂತಾಜನಕವಾಗಿತ್ತು...
ರಾತ್ರಿಯಾದರೂ ಧಾಂದಲೆ ನಿಲ್ಲದೆ ಮುಂದುವರೆದಿತ್ತು...ಹೈದರಬಾದ್ ಉರಿಯುತ್ತಿತ್ತು...
***
ಸುಮಾರು ರಾತ್ರಿ ಹನ್ನೊಂದೂವರೆಗೆ ರೆಡ್ಡಿ ಸುಸ್ತಾಗಿ ಮನೆಗೆ ಬಂದರೂ, ಬಂದೊಡನೆ ಪೈಪ್ ಸೇದುತ್ತಾ, ಟಿ.ವಿ ಚಾನಲ್ ಬದಲಾಯಿಸತೊಡಗಿದ...
ಸುಮಾರು ಇಪ್ಪತ್ತೆರಡು ವರುಷಗಳಿಂದ ರೆಡ್ಡಿಗಳೊಡನೆ ಸಂಸಾರ ಸಾಗಿಸುತ್ತಿದ್ದ ಹೆಂಡತಿ ಪದ್ಮಪ್ರಭಾಗೆ ಈ ರೀತಿ ದಿನಗಳಲ್ಲಿ ಪತಿಯ ಜೊತೆ ಹೆಚ್ಚು ಮಾತನಾಡಿಸಬಾರದು ಎಂದು ಅರಿವಿತ್ತು...
ಮೆಲ್ಲನೆ ಊಟ ಬಡಿಸಿದಳು...ಊಟ ಮಾಡುತ್ತಾ ಟಿ.ವಿ ನೋಡುತ್ತಿದ್ದ ರಾಜ ನರಸಿಂಹ ರೆಡ್ಡಿ ತನ್ನ ಚಾನಲ್ "ಸಿಂಹ ಮುಖಿ"ಯಲ್ಲಿ ಬೇರೆ ಚಾನಲ್ ಗಳಿಗಿಂತ ತೆಲಾಂಗಣ ಧಾಂದಲೆ ಕವರೇಜ್ ಚೆನ್ನಾಗಿಯೇ ಇದ್ದದ್ದನ್ನು ಗಮನಿಸಿದ್ದ...
ವೆಂಕಟರಾಜು ಬಗ್ಗೆ ಬೆಳಗ್ಗೆ ಬೈದುಕೊಂಡರೂ ಚೆನ್ನಾಗಿ ನಿಭಾಯಿಸಿದ್ದಕ್ಕೆ ಹೆಂಡತಿಗೆ ಟಿ.ವಿ ಕಡೆ ತೋರುತ್ತಾ..."ಲೇ ಪ್ರಭಾ...ನೋಡೇ... ನಮ್ ಚಾನಲ್ ನೋಡೇ ...ಬೇರೆ ಚಾನಲ್ ನೋಡೆ...
ನಮ್ ಚಾನಲ್ ನಲ್ಲಿ ಇನ್ನೂ ಹೊಸ ಹುಡುಗನ್ನ ಹಾಕ್ಕೋಂಡಿದೀನಿ...ಅವನೇ ಬೇರೇ ಚಾನಲ್ ನಲ್ಲಿ ಇರೋ ಸೀನಿಯರ್ಸ್‍ಗಿಂತಾ ಎಷ್ಟ್ ಚೆನ್ನಾಗಿ ಕವರ್ ಮಾಡಿದಾನೆ.. ಅಲ್ನೋಡು..."
ಪತಿಗೆ ಊಟ ಬಡಿಸುವುದರಲ್ಲಿ ಮಗ್ನಳಾಗಿದ್ದ ಪದ್ಮಪ್ರಭಾ ಟಿ.ವಿ ಕಡೆ ಹೊರಳಿದಳು...
ಟಿ.ವಿ.ಯಲ್ಲಿ ತೆಲಾಂಗಣ ರಾಜ್ಯ ಹೋರಾಟಕ್ಕಾಗಿ ಬೆಂಕಿ ಸುಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡವನ ಸುದ್ದಿಯನ್ನು ದಣಿದಿದ್ದ ವೆಂಕಟರಾಜು ವಿವರಿಸುತ್ತಿದ್ದ...
ಸುಟ್ಟು ಕರುಕಲಾಗಿ ಗುರುತು ಸಿಕ್ಕದ ದೇಹದ ಚಿತ್ರಣ ಬರುತ್ತಿತ್ತು...ಆ ಘೋರ ದೃಶ್ಯವನ್ನು ಹೆಚ್ಚು ಸಮಯ ಟಿ.ವಿ.ಯಲ್ಲಿ ನೋಡಲಾಗದೇ ಮತ್ತೆ ಊಟ ಬಡಿಸಲು ತಿರುಗಿದಳು ಪದ್ಮಪ್ರಭಾ...
"ನೋಡೇ ಅವ್ನೇ ಹೊಸ ಹುಡ್ಗ...ನೋಡು...ಹೆಂಗ್ ಹುಡ್ಕಿದೀನೀ...ಬೇರೆ ಚಾನಲ್ ಸೀನಿಯರ್ಸ್ ಗೇ ನೀರು ಕುಡಿಸೋ ಹಾಗಿದಾನೆ ಹುಡುಗ...
’ಸಿಂಹ ಮುಖಿ’ ಅಂದ್ರೇ ಏನಂದ್ಕೊಂಡಿದೀಯಾ...ರತ್ನಗಳನ್ನ ಕಷ್ಟಪಟ್ಟು ಹುಡುಕಿ ತಂದಿದೀನಿ" ಎಂದು ಸಿಂಹಮುಖಿ ಬಗ್ಗೆ ಎಂದಿನಂತೆ ಅಭಿಮಾನದಿಂದ ಹೇಳಿದ...
ಪದ್ಮಪ್ರಭಾ ಏನನ್ನೂ ಹೇಳದೆ ಸುಮ್ಮನೆ ಪತಿಯ ಎಂಜಲು ಎತ್ತಿ ತಾನು ಊಟ ಮಾಡಲು ಅಡಿಗೆ ಮನೆಗೆ ನಡೆದಳು...

ಮಲಗಲು ಸಿದ್ಧತೆ ನಡೆಸುತ್ತಿದ್ದ ನರಸಿಂಹ ರೆಡ್ಡಿಗೆ ಪದ್ಮಪ್ರಭಾ ಬೇರೇನನ್ನೋ ಹೇಳಬೇಕೆಂದು ಚಡಪಡಿಸುತ್ತಿದ್ದುದು ಗಮನಕ್ಕೆ ಬಂತು...
"ಏನೇ ಅದು...ಏನ್ ಹೇಳು..."
"ಏನಿಲ್ಲ ಬಿಡಿ...ನೀವು ಸುಸ್ತಾಗಿದೀರ ಮಲಕ್ಕೊಳ್ಳಿ..."
"ಇರ್ಲಿ ಹೇಳೇ..."
"ಅದು...ನಮ್ ತೇಜು ಅವರ ಹೊಸ ಕಾಲೇಜ್ ಫ್ರ್ಂಡ್ಸ್ ಸಾಯಿ ಸುದರ್ಶನ್ ಮತ್ತು ಕಲ್ಯಾಣ ರಾಮು ಜೊತೆ ನಾಗಾರ್ಜುನ ಸಾಗರ ಡಾಂ ಮತ್ತು ಎತ್ತಿಪೋತಲ ಫಾಲ್ಸ್ ನೋಡೋಕೆ ಬೆಳಿಗ್ಗೆ ಹೋದ ರೀ...
ಅಲ್ಲೇ ರೆಸಾರ್ಟ್ ನಲ್ಲಿ ಒಂದೆರಡು ದಿನ ಇದ್ದು ಬರ್ತಾರಂತೆ"...
"ಹೋಗಿ ಮಜಾ ಮಾಡಿಕೊಂಡು ಬರಲಿ ಬಿಡು...ಕಾಲೇಜಿನಲ್ಲಿ ಇವೆಲ್ಲ ಮಾಡ್ಬೇಕಾದ್ದೆ...ನೀರು ಕಡೆ ಹುಷಾರು ಅಂತ ಹೇಳಿದಿಯಾ ತಾನೆ?"
ಎಂದು ಮಗನ ಬಗ್ಗೆ ಕಾಳಜಿಯಿಂದ ಹೇಳುವಷ್ಟರಲ್ಲೇ ರೆಡ್ಡಿಯ ಮೊಬೈಲ್ ಬಡಿದುಕೊಂಡಿತು...
ಮುಂದೆ ಏನನ್ನೋ ಹೇಳಬೇಕೆಂದುಕೊಂಡರೂ, ಈ ರೀತಿ ದಿನಗಳಲ್ಲಿ ರಾತ್ರಿಯೆಲ್ಲಾ ಫೋನ್ ಬರುತ್ತಲೇ ಇರುತ್ತದೆ ಎಂದು ತಿಳಿದಿದ್ದ ಪದ್ಮಪ್ರಭಾ ಮಲಗಿದಳು...

ಆ ಕಡೆಯಿಂದ ಫೋನಿನಲ್ಲಿ
"ಸಾರ್ ನಾನು ವೆಂಕಟರಾಜು...ಪ್ಯಾಕ್ ಅಪ್ ಮಾಡಿ ಮನೆಗೆ ಹೊಗ್ತಿದೀವಿ ಸಾರ್..."
"ಒಕೆ ...ಗುಡ್ ಜಾಬ್ ರಾಜು..."
ತಗ್ಗಿದ ದನಿಯಲ್ಲಿ ವೆಂಕಟರಾಜು ಕೇಳಿದ..."ಸಾರ್... ನಾಳೆ ಕೊಂಚ ಲೇಟ್ ಆಗಿ ಬರಬಹುದಾ...ತುಂಬಾ ಸುಸ್ತಾಗಿದೆ..."
"ಹೂನ್ರೀ...ನಾಳೆ ಬೆಳಗ್ಗೆ ಏನಾದ್ರೂ ಈ ಇಟಂ ಮುಂದುವರಿದ್ರೆ ಸುಭಾಷ್ ಗೆ ಕವರ್ ಮಾಡಕ್ಕೆ ಹೇಳ್ಬಿಡಿ...ಅವರಿಗೆ ಈ ರೀತಿ ವಿಷಯಗಳಲ್ಲಿ ಅಭ್ಯಾಸ ಇದೆ...ಮಧ್ಯಾಹ್ನದ ಮೇಲೆ ನೀವೇ ಮಾಡ್ರೀ...ಚೆನ್ನಾಗಿ ನಡೆಸಿದೀರ ಇವತ್ತು...ಸರಿನಾ...".
"ಒಕೆ ಸಾರ್...ಥ್ಯಾಂಕ್ಯು ಸಾರ್ ...ಸಾರ್...ನಾಳೆ ಈ ಇಟಂ ಕಂಟಿನ್ಯೂ ಆಗೋ ರೀತಿ ಇದೇ ಸಾರ್...ಬೇರೆ ಬೇರೆ ಸಣ್ಣ ಪಾರ್ಟಿಗಳ ಸಪೋರ್ಟ್ ಸಿಕ್ಕಿದೆ ಅಂತ ಸುಭಾಷ್ ಸರ್ ಫೋನ್ ಮಾಡಿದ್ರು..."
"ಒಕೆ ಸರಿ...ನಾಳೆ ಮಾತಾಡೋಣ..."
ಫೋನ್ ಇಟ್ಟ ರಾಜ ನರಸಿಂಹ ರೆಡ್ಡಿಗೆ, ಇನ್ನು ಒಂದು ವಾರ-ಹತ್ತುದಿನಕ್ಕಾಗುವಷ್ಟು ಸುದ್ದಿ ಸಿಗಲಿದೆ ಎಂದನಿಸಿ ಒಂದು ರೀತಿ ಖುಷಿಯಾಯಿತು...
ಚಾನಲ್‍ನಲ್ಲಿ ತೆಲಾಂಗಣ ವಿಷಯವಾಗಿ ಯಾವ ಯಾವ ಪ್ರೋಗ್ರಮ್ ಮಾಡಬಹುದು ಎಂದು ಮನದಲ್ಲೇ ಯೋಜಿಸುತ್ತಾ ನಿದ್ದೆಗೆ ಜಾರಿದ...

***
ಮಧ್ಯಮ ವರ್ಗದಲ್ಲಿ ಹುಟ್ಟಿದ ರಾಜ ನರಸಿಂಹ ರೆಡ್ಡಿ ಓದಿದ್ದು ಎಂ.ಎ ಫಿಲಾಸಫಿ ...
ಸದಾ ಮೂಗಿನ ತುದಿಯಲ್ಲೇ ಕೋಪ...ಮೊದಲಿಂದಲೂ ರಾಜ ನರಸಿಂಹ ರೆಡ್ಡಿ ಛಲವಂತನಾಗಿದ್ದ ...ಜೀವನದಲ್ಲಿ ಏನಾದರೂ ಸಾಧಿಸಲೇ ಬೇಕೆಂಬ ಅದಮ್ಯ ಆಸೆ...

ಇಪ್ಪತ್ತೆರಡು ವರ್ಷಗಳ ಹಿಂದೆ ಪದ್ಮಪ್ರಭಾ ಜೊತೆ ಮದುವೆ ನಡೆದಾಗ, ರೆಡ್ಡಿ, ಎಲ್.ಐ.ಸಿಯಲ್ಲಿ ಸಾಮಾನ್ಯ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ...
ಮದುವೆಯಾಗಿ ಒಂದು ವರ್ಷಕ್ಕೇ ಹುಟ್ಟಿದ ಮಗುವಿಗೆ ’"ರವಿತೇಜಸಿಂಹ ರೆಡ್ಡಿ" ಎಂದು ಹೆಸರಿಟ್ಟ...
ತೇಜುವಿಗೆ ಇನ್ನೂ ಮೂರು ತಿಂಗಳಿರಬಹುದು, ವರದಕ್ಷಿಣೆಯಾಗಿ ಬಂದ ಜಮೀನೆಲ್ಲಾ ಮಾರಿ, ಗೆಳೆಯರೊಂದಿಗೆ ಹೊಸ ದಿನಪತ್ರಿಕೆ ಶುರುಮಾಡಿದಾಗ ಮನೆಯವರೆಲ್ಲರಿಗೂ ಕಕ್ಕಾಬಿಕ್ಕಿ...
ಮಗಳನ್ನು ಕೊಟ್ಟ ಪದ್ಮಪ್ರಭಾಳ ಮನೆಯವರಿಗಂತೂ ವಿಪರೀತ ಕೋಪ ಬಂದಿತ್ತು...
ಪತ್ರಿಕೋದ್ಯಮದಲ್ಲಿ ಯಾವುದೇ ಅನುಭವ ಇಲ್ಲದ ರೆಡ್ಡಿಗೆ ಕಷ್ಟ ಕಾಲಕ್ಕಾಗಲಿ ಎಂದು ಕೊಟ್ಟ ಜಮೀನು ಮಾರಿದಾಗ ಮಗಳ ಭವಿಷ್ಯ ಹೇಗೋ ಎಂದು ದಿಗಿಲಾಗಿತ್ತು...
ಹಿರಿಯರೆಂದುಕೊಂಡು ರೆಡ್ಡಿಗೆ ಬುದ್ದಿ ಹೇಳಲು ಬಂದವರು ಮುಖಕ್ಕೆ ಮಂಗಳಾರತಿ ಎತ್ತಿಸಿಕೊಂಡು ಹೋಗಿದ್ದರು...

ಅನುಭವವಿಲ್ಲದೇ ದಿನಪತ್ರಿಕೆ ವ್ಯವಹಾರಕ್ಕಿಳಿದ ರೆಡ್ಡಿಗೆ ಮೊದಲಿನ ದಿನಗಳಲ್ಲಿ ತೀರ ಕಷ್ಟವಾಗಿತ್ತು..
ಸುಮಾರು ಒಂದು ವರ್ಷ ದಿನಪತ್ರಿಕೆ ನಡೆಸುವುದಕ್ಕೆ ಒಂದು ಮೂಲ ರೂಪ ಸಿದ್ಧತೆ ಪಡೆಸಿ ಸುಮಾರಾಗಿ ನಡೆಸುವಷ್ಟರಲ್ಲೇ, ಗೆಳೆಯರೆಲ್ಲ ಒಬ್ಬೊಬ್ಬರಾಗಿ ಕೈ ಬಿಟ್ಟರು...
ಸುದ್ದಿ ಸಂಪಾದನೆ, ವ್ಯವಹಾರ ನಡೆಸುವುದು, ಹಂಚಿಕೆ, ಪತ್ರಿಕೆ ಬಗ್ಗೆ ಪ್ರಚಾರ ಮಾಡುವುದು ಎಲ್ಲ ಜವಾಬ್ದಾರಿಗಳೂ ಒಟ್ಟೊಟ್ಟಿಗೆ ಬಂದು ತಲೆಯ ಮೇಲೆ ಬಿತ್ತು...
ಇನ್ನೂ ಸರಿಯಾಗಿ ಕಣ್ಣು ಬಿಡದ ದಿನಪತ್ರಿಕೆ, ಮುಚ್ಚಬೇಕಾದ ಸ್ಥಿತಿ...
ಛಲ ಬಿಡದೆ ಕಷ್ಟದ ದಿನಗಳನ್ನು ಎದುರಿಸಿದ ರಾಜ ನರಸಿಂಹ ರೆಡ್ಡಿ ಈಗ ಪತ್ರಿಕೆಯಲ್ಲದೇ, ’ಸಿಂಹ ಮುಖಿ’ ಎಂಬ ನ್ಯೂಸ್ ಚಾನಲ್ ನ ಮುಖ್ಯಸ್ಥ...
ಇನ್ನೂ ಕೇಬಲ್ ಟಿ.ವಿ ಆರಂಭವಾದ ದಿನಗಳಲ್ಲೇ ರೆಡ್ಡಿ ’ಸಿಂಹ ಮುಖಿ’ಯೊಂದಿಗೆ ಟಿ.ವಿ. ಮಾಧ್ಯಮಕ್ಕೆ ಇಳಿದಿದ್ದು...
ಆಗಲೂ ಹೊಸ ಚಾನಲ್ ಎಂದರೆ ಎಲ್ಲರಿಂದಲೂ ವಿರೋಧ-ತಿರಸ್ಕಾರದ ನುಡಿಗಳೇ..
ರಾಜ ನರಸಿಂಹ ರೆಡ್ಡಿಯ ಬೆವರಿನ ಪ್ರತಿಫಲವಾಗಿ, ’ಸಿಂಹ ಮುಖಿ’ ಆಂಧ್ರದ ನಂಬರ್ ಒನ್ ನ್ಯೂಸ್ ಚಾನಲ್ ಎಂದು ಪ್ರಖ್ಯಾತಿಗಳಿಸಿತ್ತು...
ಮಾಧ್ಯಮ ರಂಗದಲ್ಲಿ ಬಹು ಬೇಗ ಬೆಳೆದ ರೆಡ್ಡಿ, ’ಸಿಂಹ ಮುಖಿ’ಯಲ್ಲದೇ ಇತರೇ ಮನೋರಂಜನಾ ಚಾನಲ್ ಗಳ ಒಡೆಯನಾಗಿದ್ದ...

***

ಬೆಳಿಗ್ಗೆ ಹತ್ತು ಗಂಟೆ...
’ಸಿಂಹ ಮುಖಿ’ಯಲ್ಲಿ ತೆಲಾಂಗಣ ಗಲಾಟೆಯಿಂದಾಗಿ ಎಂದಿಗಿಂತ ಹೆಚ್ಚು ಚಟುವಟಿಕೆಯಿಂದ ಕೂಡಿದೆ...ವಿವಿಧ ಮೂಲಗಳಿಂದ ಸುದ್ದಿ ಪ್ರವಾಹವೇ ಹರಿದಿದೆ...
ರಾಜ ನರಸಿಂಹ ರೆಡ್ಡಿ ತನ್ನ ಅನುಭವದಿಂದ ಎಲ್ಲವನ್ನೂ ಸಲೀಸಾಗಿ ನಿರ್ವಹಿಸುತ್ತಿದ್ದಾನೆ...
ಎಡಿಟರ್ ಬಳಿ ನಿಂತಿದ್ದ ರಾಜ ನರಸಿಂಹ ರೆಡ್ಡಿಯ ಬಳಿ ವೆಂಕಟರಾಜು ಬಂದು ತಲೆತಗ್ಗಿಸಿ ನಿಂತ...ಕೈಯಲ್ಲೊಂದು ಕವರ್ ಇದೆ...ಅದನ್ನೆಲ್ಲ ಗಮನಿಸದೆ ರೆಡ್ಡಿ, ವೆಂಕಟರಾಜು ಪಕ್ಕಕ್ಕೆ ಬಂದು ಬೆನ್ನು ತಟ್ಟಿದ..
’ಶಭಾಷ್! ನೆನ್ನೆ ಒಳ್ಳೇ ಕೆಲ್ಸ ಮಾಡಿದೀರ್ರೀ...ಇವತ್ತು ಸುಭಾಷ್ ಹೋಗಿದಾರೆ..ನೀವು ಲೇಟ್ ಆಗಿ ಬರ್ತೀನಿ ಅಂತ ಹೇಳಿದ್ರೀ ಅಲ್ವೇ? ಬೇಗ ಬಂದಿದ್ದು ಒಳ್ಳೇದೇ ಆಯಿತು...
ಬೇರೆ ಕಡೆಯಿಂದ ಹೊಸ ನ್ಯೂಸ್ ಬರ್ತಾ ಇರೋದನ್ನ ಒಂದು ಫಾರ್ಮಾಟ್ ಗೆ ಹಾಕ್ಬೇಕು...ಬನ್ನಿ..."

ಮಾಡಬೇಕಾದ ಕೆಲಸಗಳ ಉದ್ದನೆ ಪಟ್ಟಿಯನ್ನೇ ರಾಜ ನರಸಿಂಹ ರೆಡ್ಡಿ ಹೇಳುತ್ತಿದ್ದರೂ, ಏನನ್ನೂ ಕೇಳದೆ ಗರ ಬಡಿದವರ ಹಾಗೆ ನಿಂತಿದ್ದಾನೆ ವೆಂಕಟ ರಾಜು...
ಕೊನೆಗೂ ವೆಂಕಟರಾಜುವಿನ ವಿಚಿತ್ರ ನಡವಳಿಕೆ ರಾಜ ನರಸಿಂಹ ರೆಡ್ಡಿಯ ಗಮನಕ್ಕೆ ಬಂತು....
"ಯಾಕ್ರೀ...ಏನಾಯ್ತು..ಹುಷಾರಿಲ್ವಾ? ಲೇಟ್ ಆಗಿ ಬನ್ನಿ ಪರ್ವಾಗಿಲ್ಲ ಅಂತ ಹೇಳಿದ್ನಲ್ಲ...ಏನಾಯ್ತು???"
"ಸಾರ್...ಸಾರ್..." ಮುಂದೆ ಮಾತಡಲಾಗದೆ ಕೈಗೆ ಕವರ್ ಕೊಟ್ಟ...
ರಾಜ ನರಸಿಂಹ ರೆಡ್ಡಿ ಕವರ್ ಒಡೆದು ಲೆಟರ್ ಓದುತ್ತಿದ್ದಂತೆ ಆಶ್ಚರ್ಯ ಮತ್ತು ಕೋಪ ಒಟ್ಟೊಟ್ಟಿಗೇ ಬರುತ್ತಿದೆ...ಏರು ಧ್ವನಿಯಲ್ಲಿ ಕೇಳಿದ
"ಏನ್ರೀ...ಹುಡುಗಾಟ ಆಡ್ತೀರಾ? ರೆಸಿಗ್ನೇಶನ್ ಕೊಡೋಂತದ್ದೇನಾಯ್ತು??? ಟ್ರೈನಿಂಗ್ ಕೊಟ್ಟಿದ್ದೆಲ್ಲಾ ವೇಸ್ಟ್ ಮಾಡಕ್ಕೆ ಆಗತ್ತೇನ್ರೀ? ನೂರಾ-ಎಂಟು ಕೆಲಸ ಇದೆ ಈಗ...ನೋಡಿ...ಏನಿದ್ರೂ ಸಂಜೆ ಬನ್ನಿ ಮಾತಾಡೋಣ"
ರೆಸಿಗ್ನೇಶನ್ ಲೆಟರ್ ವೆಂಕಟರಾಜು ಕೈಯೊಳಗೆ ತುರುಕಿ ಮುಂದಿನ ಮಾತನ್ನು ಕೇಳದೆ ಸರಸರನೆ ಚೇಂಬರ್ ಒಳಗೆ ನಡೆದ...

ಅಷ್ಟರಲ್ಲೇ ರಾಜ ನರಸಿಂಹ ರೆಡ್ಡಿಯ ಫೋನ್ ಮೊಳಗಿತು...
ಪದ್ಮ ಪ್ರಭಾ ಫೋನ್ ಮಾಡುತ್ತಿದಾಳೆ...ಕೋಪದಲ್ಲಿದ್ದ ರೆಡ್ಡಿ ಕಟ್ ಮಾಡಿದ...ಮತ್ತೆ ಪದ್ಮಪ್ರಭಾಳ ಕರೆ ಬರುತ್ತಿದೆ...
ಫೋನ್ ಎತ್ತಿ ಗದುರಿದ, "ಬುಸಿ ಇದ್ದೀನಿ...ಏನು ವಿಷಯ...ಬೇಗ ಹೇಳು..."
ಪದ್ಮಪ್ರಭಾ ಆ ಕಡೆಯಿಂದ ಕೊಂಚ ಗಾಬರಿಯ ದನಿಯಲ್ಲಿ ಹೇಳಿದಳು..."ನಮ್ಮ ತೇಜು ನೆನ್ನೆಯಿಂದ ಫೋನ್ ಮಾಡೇ ಇಲ್ಲ ರೀ...ನನಗೆ ಆತಂಕ ಆಗ್ತಾ ಇದೆ..."
ವೆಂಕಟರಾಜು ರಾಜೀನಾಮೆ ವಿಷಯವೇ ತಲೆಯಲ್ಲಿದ್ದ ರಾಜ ನರಸಿಂಹ ರೆಡ್ಡಿ ಕೋಪವನ್ನು ಪದ್ಮಪ್ರಭಾಳ ಮೇಲೆ ಇಳಿಸಿದ...
"ಅವನೇನು ಸಣ್ಣ ಮಗೂನೇನೇ? ಕಾಲೇಜಿಗೆ ಹೋಗೋ ಹುಡುಗ...ಫ್ರೆಂಡ್ಸ್ ಜೊತೆ ಮಜ ಮಾಡ್ತಾ ಮರೆತಿರಬಹುದು...ಮಾಡ್ತಾನೆ ಬಿಡು...ಸಣ್ಣ ಪುಟ್ಟದ್ದಕ್ಕೆಲ್ಲ ಫೋನ್ ಮಾಡ್ಬೇಡ...
ನಂಗೀಗಾಗ್ಲೇ ಆಫೀಸ್ ವಿಷಯದಲ್ಲಿ ತಲೆ ಚಿಟ್ಟು ಹಿಡೀತಿದೆ...ಹುಚ್ಚು ನನ್ ಮಕ್ಕಳು ನಂ ಕಂಪನೀಗೆ ಸೇರಿಕೊಂಡು ಬಿಡ್ತಾರೆ..." ಎಂದು ಪದ್ಮಪ್ರಭಾಳ ಉತ್ತರಕ್ಕೆ ಕಾಯದೆ ಫೋನ್ ಕಟ್ ಮಾಡಿದ...
ಅತ್ತ ಕಡೆ ಪದ್ಮಪ್ರಭಾ ಏನೂ ಹೇಳಲಾಗದೆ ಆತಂಕದಲ್ಲಿ ಮುಳುಗಿದಳು..

ಆ ದಿನ, ತೆಲಾಂಗಣ ಉರಿ ಕೊಂಚ ತಣ್ಣಗಾದರೂ, ಸಣ್ಣ ಪುಟ್ಟ ಗಲಭೆಗಳಿಂದ ಕೂಡಿತ್ತು...
ಸಿಂಹಮುಖಿಯಲ್ಲಿ ತೆಲಾಂಗಣ ಹೊಸ ರಾಜ್ಯೋದಯದ ಪರವಾಗಿ-ವಿರುದ್ಧವಾಗಿ ಹಲವಾರು ರಾಜಕೀಯ ಮುಖಂಡರ ಸಂದರ್ಶನಗಳು, ಅನಿಸಿಕೆಗಳು ಒಂದರ ಹಿಂದೆ ಒಂದಾಗಿ ಪ್ರಸಾರವಾಗುತ್ತಲೇ ಇತ್ತು...
ಆದರೂ, ಗಲಭೆಗಳು ಕೊಂಚ ಕಡಿಮೆಯಾದದ್ದರಿಂದ, ರಾಜ ನರಸಿಂಹರೆಡ್ಡಿಗೆ ಬಿಡುವಾಗಿ ಮನಸ್ಸು ಕೊಂಚ ಹಗುರಾಗತೊಡಗಿತು...
ತನ್ನ ಚೇಂಬರ್‍ನಲ್ಲಿ ಕುಳಿತು ವೆಂಕಟರಾಜು ಹೊಸಬನಾದರೂ, ಗಲಭೆಯ ನೇರ ಪ್ರಸಾರವನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟದ್ದನ್ನೇ ಮನದಲ್ಲಿ ನೆನೆಯುತ್ತ, ರಾಜೀನಾಮೆ ಕೊಟ್ಟಿದ್ದೇಕೆ ಎಂದು ಪೈಪ್ ಸೇದುತ್ತಾ ಯೋಚಿಸ ತೊಡಗಿದ......
"ಸರ್, ಒಳಗೆ ಬರಬಹುದಾ?" ಎಂದು ಚೇಂಬರ್ ಬಾಗಿಲಿನಿಂದ ವೆಂಕಟರಾಜು ಧ್ವನಿ ಬಂತು...
ವೆಂಕಟರಾಜುವಿನತ್ತ ನೋಡಿ ಒಳಗೆ ಬರುವಂತೆ ತಲೆಯಾಡಿಸಿದ...
"ಸರ್ ಅದು...ಅದು..."
"ವೆಂಕಟರಾಜು ನೇರವಾಗಿ ವಿಷಯಕ್ಕೆ ಬನ್ನಿ...ಏನಾಯ್ತು..."
"ಅದು ನೆನ್ನೆ................................."
ವೆಂಕಟರಾಜು ಹಿಂದಿನ ದಿನ ನಡೆದ ಘಟನೆಯ ಬಗ್ಗೆ ಸುಮಾರು ಇಪ್ಪತ್ತು ನಿಮಿಷ ವಿವರಿಸಿದ...ಮತ್ತೊಮ್ಮೆ ಖಿನ್ನನಾಗಿ ದುಗುಡ ತುಂಬಿದ ಮುಖವನ್ನು ಇಳಿಸಿ ನೆಲ ನೋಡುತ್ತ
"...ಅದಕ್ಕೆ ರಾಜೀನಾಮೆ ಕೊಡಬೇಕೂ ಅಂತ ಅನ್ನಿಸ್ತಿದೆ ಸಾರ್..." ಎಂದು ಉಲಿದ...
ಅಷ್ಟನ್ನೂ ಸಾವಧಾನದಿಂದ ಕೇಳಿದ ರಾಜ ನರಸಿಂಹ ರೆಡ್ಡಿ ಒಂದೆರಡು ನಿಮಿಷ ಸುಮ್ಮನಾದ...ನಂತರ ಸಾವರಿಸಿಕೊಂಡು..."ನೋಡಿ ವೆಂಕಟರಾಜು...ನನಗೆ ನಿಮ್ಮ ಭಾವನೆಗಳು ಅರ್ಥ ಆಗತ್ತೆ...ಆದರೆ ನೀವು ಇಷ್ಟಕ್ಕೆಲ್ಲ ಕುಗ್ಗಬಾರದು...ಮಾಧ್ಯಮದಲ್ಲಿ ಕೆಲಸ ಮಾಡಬೇಕು ಅಂದರೆ ಬರೀ ಬುದ್ಧಿವಂತಿಕೆ ಇದ್ದರೆ ಸಾಲದು, ಎಲ್ಲವನ್ನೂ ಎದುರಿಸುತ್ತೇನೆ ಎಂಬ ಗಟ್ಟಿ ಮನಸ್ಸಿರಬೇಕು...ನಿಮ್ಮ ರೀತಿ ನಾನೂ ವೃತ್ತಿ ಜೀವನದಲ್ಲಿ ಹಲವಾರು ದ್ವಂದ್ವಗಳನ್ನು ಎದುರಿಸಿದ್ದೇನೆ...ಆದರೂ ಕರ್ತವ್ಯವೆಂದು ತಿಳಿದು ಮುಂದುವರೆದು ಇಲ್ಲಿವರೆಗೂ ಬಂದಿದ್ದೇನೆ...ನಿಮ್ಮ ಹಾಗೆ ನಾನೂ ಹಿಮ್ಮೆಟ್ಟಿದ್ದರೆ ಈ ರೀತಿ ಸಿಂಹ ಮುಖಿ ಮತ್ತು ಇತರ ಚಾನಲ್ ಸಮೂಹಗಳ ಒನರ್ ಆಗಲು ಸಾಧ್ಯ ಆಗ್ತಿತ್ತೇ? ಹೇಳಿ...ಒಂದೊಂದು ಸರತಿ ಹೀಗಾಗಿ ಬಿಡತ್ತೆ...ನಿಮಗೆ ಕೆಲಸಕ್ಕೆ ಸೇರಿದ ಹೊಸದರಲ್ಲೇ ಆಘಾತವಾಗುವಂತ ಅನುಭವ ಪಡೆದಿದ್ದೀರಿ...ಈ ವೃತ್ತಿಯಲ್ಲಿ ಹಲವಾರು ಬಾರಿ ರೌಡಿಗಳು, ಪೋಲೀಸರು, ಪುಢಾರಿಗಳು ಎಲ್ಲರನ್ನೂ ಎದುರಿಸಬೇಕಾಗತ್ತೆ...ಹಾಗೆ ಅವರೊಂದಿಗೆ ರಾಜಿ ಕೂಡ ಮಾಡಿಕೊಳ್ಳಬೇಕಾಗತ್ತೆ...ಮೀಡಿಯ ಕೆಲಸ ಅಂದ ಮೇಲೆ ಯಾವಾಗಲೂ ಸಾವನ್ನು ಎದುರಿಸಲು ಸಿದ್ಧನಾಗಿರಬೇಕು...ನಿಮಗೆ ಈ ಫೀಲ್ಡ್ ನಲ್ಲಿ ಒಳ್ಳೆ ಹೆಸರು ಮಾಡೋ ಸಾಮರ್ಥ್ಯ ಇದ್ದ ಹಾಗೇ ಕಾಣತ್ತೆ...ಸುಮ್ಮನೆ ನಿಮ್ಮ ಪ್ರತಿಭೆ ಹಾಳು ಮಾಡಿಕೊಳ್ಳಬೇಡಿ...
ಸಾಮಾನ್ಯವಾಗಿ ಹೊಸಬರಿಗೆ ರಜ ಕೊಡದೇ ಹೋದರೂ, ನಿಮ್ಮ ಮನಸ್ಥಿತಿ ನೋಡಿ ಹೇಳ್ತಿದ್ದೀನಿ...ಬೇಕು ಅಂದ್ರೆ ಇನ್ನೊಂದು ದಿನ ರಜ ತೊಗೊಳ್ಳಿ ಆದ್ರೆ ನಿಮ್ಮಂತವರು ನಮಗೆ ಬೇಕು...ಸಧ್ಯಕ್ಕೆ ನೀವು ಮನೆಗೆ ಹೋಗಿ...ನಾಳಿದ್ದು ಸಿಗೋಣ"
ಎಂದು ವೆಂಕಟರಾಜುವಿಗೆ ಮರುಮಾತಾನಾಡಲು ಬಿಡದೆ ಕಳಿಸಿಕೊಟ್ಟ...

ವೆಂಕಟರಾಜು, ರೆಡ್ಡಿ ಹೇಳಿದ ಮಾತುಗಳ ಬಗ್ಗೆ ಯೋಚಿಸುತ್ತಾ ಮನೆಯತ್ತ ಮೆಲ್ಲನೆ ಸಾಗಿದ...
ಇತ್ತ, ರೆಡ್ಡಿಗೆ ತಾನು ಹೇಳಿದ ಪ್ರೋತ್ಸಾಹದ ಮಾತುಗಳಿಂದ ವೆಂಕಟರಾಜುವಿನ ಮನಸ್ಸನ್ನು ಬದಲಿಸಿ, ರಾಜೀನಾಮೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದೆ ಎಂದೆನಿಸಿ ತನ್ನಷ್ಟಕ್ಕೆ ತಾನೇ ಗೆಲುವಿನ ನಗೆ ನಕ್ಕ...

***
ದಿನದ ಕೆಲಸ ಮುಗಿಸಿ ರಾಜ ನರಸಿಂಹ ರೆಡ್ಡಿ ಮನೆಗೆ ಬರುವ ಹೊತ್ತಿಗೆ ಹತ್ತು ಗಂಟೆ...
ಬಾಗಿಲು ತೆರೆಯುತ್ತಲೇ ಪದ್ಮ ಪ್ರಭ, "ರೀ ತೇಜು ಇಷ್ಟು ಹೊತ್ತಾದ್ರೂ ಫೋನ್ ಮಾಡಲೇ ಇಲ್ಲರೀ...ಅವನಿಗೆ ಫೋನ್ ಮಾಡಿದ್ರೆ ನಾಟ್ ರೀಚಬಲ್ ಅಂತ ಬರ್ತಿದೆ ರೀ...ನನಗೆ ತುಂಬಾ ಭಯವಾಗ್ತಿದೆ...ನೀವು ಬೆಳಗ್ಗೆ ಫೋನ್ ನಲ್ಲಿ ಹೇಳಿದ್ರೆ ತಲೇಗೆ ಹಾಕ್ಕೋಳ್ಲಿಲ್ಲ...ನಂ ತೇಜು ಯಾವತ್ತೂ ಹಾಗೆ ಮಾಡಿದ್ದಿಲ್ಲ ರೀ..." ಎಂದು ಆತಂಕದಿಂದ ಹೇಳಿದಾಗ ಕಣ್ಣುಗಳಲ್ಲಿ ನೀರು ತುಂಬಿತ್ತು...
ಆ ಮಾತು ಕೇಳಿ ರೆಡ್ಡಿ ಕೊಂಚ ಗಲಿಬಿಲಿಯಾದ...
ರೆಡ್ಡಿ ತೇಜುವಿಗೆ ಫೋನ್ ಮಾಡಿದಾಗ ’ನಾಟ್ ರೀಚಬಲ್’ ಎಂದೇ ಬರುತ್ತಿತ್ತು......
"ತೇಜು ಎಲ್ಲಿಗೆ ಹೋಗಿದ್ದು ಹೇಳು? ನಾಗಾರ್ಜುನ ಸಾಗರಕ್ಕೆ ಅಲ್ವಾ? ಅಲ್ಲಿ ಸಿಗ್ನಲ್ ಸಿಗದೇ ಇರಬಹುದು ಅನಿಸತ್ತೆ...ಅವನ ಫ್ರ‍ೆಂಡ್ಸ್ ಗೆ ಫೋನ್ ಮಾಡಿ ಕೇಳಬಹುದಿತ್ತಲ್ಲ?" ಎಂದ...
"ಅವನು ಹೊಸ ಕಾಲೇಜು ಸೇರಿದ್ದು ಮರೆತು ಹೋಯ್ತಾ ನಿಮಗೆ? ಇವರು ನಮ್ ತೇಜುಗೆ ಹೊಸ ಫ್ರೆಂಡ್ಸ್, ಅವರ ನಂಬರ್ ತೇಜು ಇನ್ನೂ ಕೊಟ್ಟಿಲ್ಲ...ಏನ್ರೀ ಮಾಡೋದು? ನೆನ್ನೆ ಸಂಜೆ ಹೊರಟದ್ದು..." ಎನ್ನುತ್ತಾ ಪದ್ಮಪ್ರಭಾ ಸೋಫಾದಲ್ಲಿ ಕುಸಿದಳು...
ರೆಡ್ಡಿ "ಯೋಚನೆ ಮಾಡಬೇಡ...ಏನೂ ಆಗಿರಲ್ಲ...ಹುಡುಗು ಬುದ್ಧಿ ಅಷ್ಟೇ...ಫೋನ್ ಮಾಡ್ತಾನೆ" ಎಂದು ಸಮಾಧಾನ ಹೇಳಿದರೂ ಎದೆಯೊಳಗೆ ಅದೇನೋ ಆತಂಕವೆದ್ದಿತು...
"ಬೆಳಿಗ್ಗೆವರೆಗೂ ನೋಡೋಣ...ಫೋನ್ ಮಾಡಬಹುದು...ಯೋಚನೆ ಮಾಡಬೇಡ" ಎಂದ...

ಮುದ್ದಿನ ಮಗ ತೇಜುವಿನ ಬಗ್ಗೆ ಕೊಂಚ ಚಿಂತೆ ಆದರೂ, ಕೆಲಸದ ಒತ್ತಡದಿಂದ ರಾಜ ನರಸಿಂಹ ರೆಡ್ಡಿಗೆ ಸುಸ್ತಾಗಿದ್ದರಿಂದ ಬಲು ಬೇಗ ನಿದ್ದೆಯಾವರಿಸಿತು...ಇಡೀ ರಾತ್ರಿ ಮಗನ ಚಿಂತೆಯಲ್ಲಿ ಪದ್ಮಪ್ರಭಾ ನಿದ್ದೆಯಿಲ್ಲದೇ ಕಳೆದಳು...

***
ಬೆಳಗಾಗುತ್ತಿದ್ದಂತೆಯೇ, ತೇಜುವಿನ ಫೋನಿಗೆ, ಪದ್ಮಪ್ರಭಾ ಕಡಿಮೆಯೆಂದರೂ ಸುಮಾರು ಮೂವತ್ತು ಬಾರಿ ಕರೆ ಮಾಡಿದ್ದಳು...
"ರೀ...ಇನ್ನೂ ತೇಜು ಫೋನ್ ಮಾಡಿಲ್ಲ...ನಾನು ಎಷ್ಟು ಸರತಿ ಫೋನ್ ಮಾಡಿದ್ರೂ ಅವನ ಫೋನ್ ರೀಚ್ ಆಗ್ತಿಲ್ಲ...ಯಾವ ರಿಸಾರ್ಟ್ ಅಂತ ಕೂಡ ಹೇಳಲಿಲ್ಲ ಹೋಗೋಕೆ ಮುಂಚೆ...ಕೇಳ್ಬೇಕಿತ್ತು.. ಫ್ರೆಂಡ್ ನಂಬರ್ ಕೂಡ ಇಲ್ಲ..ಏನ್ರೀ ಮಾಡೋದು?"
ರಾಜ ನರಸಿಂಹ ರೆಡ್ಡಿ ಏನು ಮಾಡಬಹುದೆಂದು ಯೋಚಿಸಿದ...ಮುದ್ದು ಮಗನ ಬಗ್ಗೆ ಚಿಂತೆಯಿದ್ದರೂ, ಅಂದಿನ ದಿನ ಸಿಂಹ ಮುಖಿಯಲ್ಲಿ ಪ್ರಸಾರವಾಗ ಬೇಕಿದ್ದ ಕಾರ್ಯಕ್ರಮಗಳ ಯೋಜನೆ-ಜವಾಬ್ದಾರಿ ತಲೆಯಲ್ಲಿ ಹಾದು ಹೋಯಿತು...
"ಲೇ, ನಮ್ಮ ತೇಜು ಜೊತೆ ಹೋದ ಆ ಹುಡುಗರ ಹೆಸರು ಹೇಳು.."
"ಸಾಯಿ ಸುದರ್ಶನ್-ಕಲ್ಯಾಣ ರಾಮು ಅನ್ಸತ್ತೆ" ಎಂದಳು ಪದ್ಮಪ್ರಭಾ...
ರೆಡ್ಡಿ ತನ್ನ ಬಲಗೈ ಬಂಟ ಸಿಂಹಮುಖಿ ಪಿ.ಎ. ಭಾನುಕಿರಣ್ ಗೆ ಫೋನ್ ಮಾಡಿದ...
ಭಾನುಕಿರಣ್ ಗೆ ಕೆಲಸ ಕೊಟ್ಟರೆ ಪೂರ್ತಿ ಮುಗಿಸೇ ಹಿಂದಿರುಗುತ್ತಾನೆ ಎಂಬ ವಿಶ್ವಾಸ ರಾಜ ನರಸಿಂಹ ರೆಡ್ಡಿಗೆ.
ಅವನ ಕಾರ್ಯ ದಕ್ಷತೆ ನೋಡಿ, ಸುಮಾರು ೧೦ ವರ್ಷದಿಂದ ತನ್ನ ಬಳಿ ಕೆಲಸಕ್ಕೆ ಇಟ್ಟುಕೊಂಡಿದ್ದ.
"ರೀ ಭಾನುಕಿರಣ್....." ಎಂದು ಪರಿಸ್ಥಿತಿಯನ್ನು ವಿವರಿಸಿ, "ನೀವು ಕಾಲೇಜಿಗೆ ಹೋಗಿ, ಈ ಹುಡುಗರ ಮನೆಯವರ ನಂಬರ್ ತೊಗೊಳ್ಳಿ...ಆಮೇಲೆ ಮನೆಯವರಿಂದ ಹುಡುಗರ ನಂಬರ್ ತೊಗೊಂಡು ತೇಜು ಹೇಗಿದಾನೆ ತಿಳ್ಕೊಂಡು ಹೇಳಿ".

***
ರಾಜ ನರಸಿಂಹ ರೆಡ್ಡಿ ಚಾನಲ್ ಆಫೀಸಿಗೆ ಹೋಗುವಾಗಲೂ, ಹೋದಾದ ಮೇಲೂ ತೇಜು ನಂಬರಿಗೆ ಹಲವು ಬಾರಿ ಫೋನ್ ಮಾಡಿದರೂ, ’ನಾಟ್ ರೀಚಬಲ್’ ಎಂದೇ ಬರುತ್ತಿತ್ತು...

ವೆಂಕಟರಾಜು ರೆಡ್ಡಿಗಳ ಚೇಂಬರ್ ಬಾಗಿಲ ಬಳಿ ನಿಂತು "ಸಾರ್ ಒಳಗೆ ಬರಬಹುದಾ?" ಎಂದ...
ರೆಡ್ಡಿ ಒಪ್ಪಿಗೆ ಸೂಚಿಸುತ್ತಿದಂತೆಯೇ, ಒಳಗೆ ಸರ್ರನೆ ನುಗ್ಗಿದ ವೆಂಕಟರಾಜು ಮುಖದಲ್ಲಿ ಕೊಂಚ ಗೆಲುವಿದೆ....
"ಸಾರ್, ನಿಮ್ಮ ಮಾತುಗಳನ್ನು ಕೇಳಿದ ಮೇಲೆ ನಾನು ರೆಸಿಗ್ನೇಷನ್ ವಾಪಸ್ ತೊಗೊಳ್ತಿದೀನಿ ಸಾರ್" ಎಂದ...
ಆ ಮಾತುಗಳನ್ನು ಕೇಳಿ ನಸುನಗುತ್ತಾ, "ಗುಡ್...ಈವತ್ತು ಮಾಡೋದು ಬೇಕಾದಷ್ಟಿದೆ...ನೋಡಿ ಹೋಗಿ..." ಎಂದ...

ಸುಮಾರು ಹನ್ನೊಂದು ಘಂಟೆ...ಪೈಪ್ ಹಿಡಿದು ಮಗನ ಚಿಂತೆಯಲ್ಲಿ ಮುಳುಗಿದ್ದ ರೆಡ್ಡಿಯ ಮೊಬೈಲ್ ಬಡಿದುಕೊಂಡಿತು...
"ಹೇಳ್ರೀ ಭಾನುಕಿರಣ್, ನಮ್ ತೇಜು ಹುಷಾರಾಗಿದ್ದಾನಾ?"
"ಸಾರ್...ರವಿತೇಜಸಿಂಹ ಅವರು ನಾಗಾರ್ಜುನ ಸಾಗರಕ್ಕೆ ಹೋಗಲೇ ಇಲ್ವಂತೆ ಸಾರ್..."
ಆ ಮಾತು ಕೇಳಿ ಕೊಂಚ ಆತಂಕವಾಯಿತು ರೆಡ್ಡಿಗೆ...
"ಏನ್ರೀ ಹೀಗಂತೀರಾ...ಸರಿಯಾಗಿ ವಿಚಾರಿಸಿದಿರಾ?" ಎಂದ ರೆಡ್ಡಿ.
"ಹುಡುಗರು ನಾಗಾರ್ಜುನ ಸಾಗರಕ್ಕೆ ಹೊರಡಕ್ಕೆ ಮುಂಚೆ ಸುಮಾರು ಹೊತ್ತು ಕಾದು, ಆಮೇಲೆ ರವಿತೇಜಸಿಂಹ ಅವರನ್ನ ಬಿಟ್ಟು ಹೋದರಂತೆ ಸಾರ್...ಆ ಹುಡುಗರು ಮೊನ್ನೆ ಫೋನ್ ಮಾಡಿದಾಗಲೂ ರವಿತೇಜಸಿಂಹ ಅವರ ಮೊಬೈಲ್ ನಾಟ್ ರೀಚಬಲ್ ಅಂತನೇ ಬರ್ತಿತ್ತಂತೆ ಸಾರ್...ಮನೆ ಫೋನ್ ನಂಬರ್ ಇಲ್ದೇ ಇದ್ದಿದ್ರಿಂದ ಮನೆಗೆ ಫೋನ್ ಮಾಡೋದಿಕ್ಕೆ ಆಗಲಿಲ್ವಂತೆ ಸಾರ್..."

ಭಾನುಕಿರಣ್ ಮಾತುಗಳನ್ನು ಕೇಳುತ್ತಿದ್ದಂತೆ ಸಾಮಾನ್ಯವಾಗಿ, ಗಟ್ಟಿ ಮನಸ್ಸಿನ ರಾಜನರಸಿಂಹ ರೆಡ್ಡಿಯ ಮನದಲ್ಲೂ ಕಳವಳ ತುಂಬಿತು...
ಸುಮಾರು ಎರಡು ದಿನದಿಂದ ಮುದ್ದಿನ ಮಗ ಪತ್ತೆ ಇಲ್ಲ...ಏನಾಗಿರಬಹುದೋ ಎಂಬ ಆತಂಕ ಆಯಿತು...
ಪೋಲೀಸ್ ಕಂಪ್ಲೇಂಟ್ ಕೊಡದೇ ಬೇರೆ ದಾರಿಯಿಲ್ಲ ಎಂದು ಯೋಚಿಸಿದ..
ಚಾನಲ್ ಸೀನಿಯರ್ ಒಬ್ಬರನ್ನು ಚೇಂಬರ್ ಗೆ ಕರೆದು ತಾನು ತುರ್ತಾಗಿ ಹೊರಗೆ ಹೋಗ ಬೇಕು, ಸಿಂಹಮುಖಿ ಜವಾಬ್ದಾರಿಯನ್ನು ನೀವು ಇಂದಿನ ಮಟ್ಟಿಗೆ ನೋಡಿಕೊಳ್ಳಿ ಎಂದು ಹೇಳಿ, ತೇಜುವಿನ ಇತ್ತೀಚಿನ ಫೋಟೋ ತರಲು ಮನೆಗೆ ಹೊರಟ...

ರೆಡ್ಡಿಗಳು ಮಧ್ಯಾಹ್ನ ಮನೆಗೆ ಬಂದಿದ್ದನ್ನು ನೋಡಿ ಪದ್ಮಪ್ರಭಾಳಿಗೆ ದಿಗಿಲಾಯಿತು...
"ಏನ್ರೀ ...ನಮ್ಮ ತೇಜು ಸಿಕ್ಕಿದನಾ? ಏನೂ ಆಗಿಲ್ಲ ತಾನೆ?" ಎಂದಳು...
ಸಮಯ ವ್ಯರ್ಥ ಮಾಡದೇ ತೇಜುವಿನ ಫೋಟೋ ತೆಗೆದುಕೊಂಡ ರೆಡ್ಡಿ "ಬಾ, ಕಾರಿನಲ್ಲಿ ಎಲ್ಲ ಹೇಳ್ತೀನಿ..." ಎಂದು ಪೋಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋದ...
ಪದ್ಮಪ್ರಭಾ ಒಬ್ಬನೇ ಮಗನನ್ನು ನೆನೆದು ಒಂದೇ ಸಮನೆ ಅಳುತ್ತಿದ್ದಳು...ರಾಜ ನರಸಿಂಹರೆಡ್ಡಿಗೂ ಬಹಳ ಚಿಂತೆಯಾಗಿತ್ತು...
ಪೋಲೀಸ್ ಸ್ಟೇಷನ್ ನಲ್ಲಿ ಪದ್ಮಪ್ರಭಾ ಮೊನ್ನೆ ಬೆಳಗ್ಗೆಯಿಂದ ತೇಜು ಹೊರಡುವವರೆಗೂ ನಡೆದ ಘಟನೆಯನ್ನು ಅಳುತ್ತಳೇ ವಿವರಿಸಿದಳು...

ಇನ್ಸ್ ಪೆಕ್ಟರ್ ನಾಗ ಹರಿಪ್ರಕಾಶ್ ತಮ್ಮ ಎಂದಿನ ಧಾಟಿಯಲ್ಲಿ ಪ್ರಶ್ನೋತ್ತರ ಮಾಡುತ್ತಿದ್ದಾರೆ, ಪದ್ಮಪ್ರಭಾ ದುಃಖದ ನಡುವೆಯೂ ಉತ್ತರಿಸುತ್ತಿದ್ದಾಳೆ...
"ರವಿತೇಜಸಿಂಹ ಅವರು ಹೊರಟಾಗ ಯಾವ ಮನಸ್ಥಿತಿಯಲ್ಲಿದ್ದರು?"
"ಹೊಸ ಫೆಂಡ್ಸ್ ಜೊತೆ ಮೊದಲನೇ ಟ್ರಿಪ್ ಅಂತ ತುಂಬಾ ಸಂತೋಷವಾಗೇ ಹೊರಟ..."
"ಮನೆಯಲ್ಲೇ ಆಗಲೀ, ಸ್ನೇಹಿತರ ಜೊತೆಯಾಗಲೀ ಯಾವುದಾದರೂ ಜಗಳ-ವಾಗ್ವಾದ ನಡೆದಿತ್ತಾ?"
"ಮನೆಯಲ್ಲಿ ಆ ರೀತಿ ಏನೂ ಆಗಿರಲಿಲ್ಲ...ಸ್ನೇಹಿತರ ಜೊತೆ ಜಗಳ ಆಗಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ...ಆದರೆ ಸಾಮಾನ್ಯವಾಗಿ ಬೇರೆಯವರೊಡನೆ ಜಗಳ ಮಾಡಿಕೊಳ್ಳುತ್ತಿರಲಿಲ್ಲ...ತುಂಬಾ ಸೌಮ್ಯ ಸ್ವಭಾವದವನು"
"ನಿಮಗೆ ಯಾರಾದ್ರೂ ಶತ್ರುಗಳಿದ್ದಾರಾ?"
ಆ ಪ್ರಶ್ನೆ ಕೇಳಿ ರಾಜನರಸಿಂಹರೆಡ್ಡಿಗೆ ಕೋಪ ಬಂತು...
"ರೀ ಮಿಸ್ಟರ್, ನಾನು ಯಾರು ಅಂತ ನಿಮಗಾಗಲೇ ಪರಿಚಯ ಆಗಿದೆ...ನಮ್ಮ ಚಾನಲ್ ಗಳಲ್ಲಿ ನೂರೆಂಟು ವಿಷಯ ಪ್ರಸಾರ ಆಗತ್ತೆ...ಅದು ಎಷ್ಟೋ ಜನಕ್ಕೆ ಇಷ್ಟ ಆಗತ್ತೆ...ಮತ್ತೊಂದಷ್ಟು ಜನಕ್ಕೆ ಕೋಪನೂ ಬರತ್ತೆ...ಯಾರ ಹೆಸರೂ ಅಂತ ಹೇಳೋದು..."
ಎಂದು ಗದರಿದ...
"ಸಾರ್ ಪರಿಸ್ಥಿತಿ ಏನು ಅಂತ ಅರ್ಥ ಮಾಡ್ಕೋಳ್ಳೋದು ನಮ್ಮ ಡ್ಯೂಟಿ...ದಯವಿಟ್ಟು ಸಹಕರಿಸಿ" ಎಂದ ನಾಗ ಹರಿಪ್ರಕಾಶ್ ಮುಂದುವರೆಸಿದ
"ರವಿತೇಜಸಿಂಹ ಅವರು ನಾಪತ್ತೆ ಆದಮೇಲೆ ನಿಮಗೆ ಅಪರಿಚಿತರಿಂದ ಬ್ಲಾಕ್ ಮೈಲ್ ಕರೆ ಏನಾದರೂ ಬಂದಿತ್ತ..."
"ಇಲ್ಲ..."
"ಸರಿ, ಆ ರೀತಿ ಏನಾದರೂ ಬಂದರೆ ನಮಗೆ ತಿಳಿಸಿ..."
ಹೀಗೆ ಇನ್ನೂ ಹತ್ತು ಹಲವು ಪ್ರಶ್ನೆ ಮಾಡಿದನಾಗಹರಿಪ್ರಕಾಶ್, "ಸರಿ, ನಾವು ನಿಮ್ಮ ಮಗನ ಫೋಟೋ ಬೇರೆ ಸ್ಟೇಷನ್ ಗಳಿಗೆ ಕಳಿಸಿ ಕೊಡ್ತೀವಿ...ಸ್ವಲ್ಪ ಟೈಮ್ ಕೊಡಿ...ಈ ಕೇಸ್ ನಾನೇ ಖುದ್ದಾಗಿ ನೋಡ್ಕೋತೀನಿ ಸಾರ್...ನೀವು ಯೋಚನೇ ಮಾಡಬೇಡಿ" ಎಂದ...

ಎಫ್.ಐ.ಆರ್ ಬರೆಸಿ ಸ್ಟೇಷನ್ ನಿಂದ ಮನೆಗೆ ಹೊರಟಾಗ ಸಂಜೆಯಾಗಿತ್ತು...
ರಾಜನರಸಿಂಹರೆಡ್ಡಿಗೂ ಮಗನಿಗೆ ಏನಾಗಿದೆಯೋ ಎಂಬ ಆತಂಕ ಹೆಚ್ಚಾಗಿದ್ದರೂ, ಪದ್ಮಪ್ರಭಾಳಿಗೆ ಏನೂ ಆಗಿಲ್ಲವೇನೋ ಎಂಬಂತೆ ಧೈರ್ಯದಿಂದ ನಡೆದುಕೊಂಡ...
ಪದ್ಮಪ್ರಭಾಳನ್ನು ಮನೆಗೆ ಬಿಟ್ಟು, ರಾಜ ನರಸಿಂಹ ರೆಡ್ಡಿ ಮತ್ತು ಭಾನುಕಿರಣ್ ತೇಜುವಿನ ಹಲವಾರು ಸ್ನೇಹಿತರ ಮನೆಗೆ ಹೋಗಿ ಹುಡುಕಿದ್ದಾಗಿತ್ತು...ತೇಜು ಬಗ್ಗೆ ಯಾವ ವಿಷಯವೂ ಸಿಗಲಿಲ್ಲ...

***
ರಾತ್ರಿ ಸುಮಾರು ಹನ್ನೊಂದು ಗಂಟೆ...
ತೇಜುವಿನ ಪತ್ತೆಯಾಗದೆ ನಿರಾಶನಾಗಿ ಮನೆಯ ಒಳಗೆ ಬರುತ್ತಿದ್ದ ರಾಜ ನರಸಿಂಹ ರೆಡ್ಡಿ ಮೊಬೈಲ್ ಬಡಿದುಕೊಂಡಿತು...ಅಪರಿಚಿತ ನಂಬರ್...
ರೆಡ್ಡಿ "ಹಲೋ...ಯಾರು?" ಎಂದ...
"ಸಾರ್, ನಾನು ನಾಗಹರಿಪ್ರಕಾಶ್..."
"ಏನಾದ್ರೂ ಗೊತ್ತಾಯ್ತಾ ನಮ್ಮ ತೇಜು ಬಗ್ಗೆ..."
"ಇಲ್ಲ ಸಾರ್...ಆದ್ರೇ...ಒಂದೆರಡು ಅನ್-ಇಡೆಂಟಿಫ಼ೈಡ್ ಬಾಡಿ ಬೇರೆ ಬೇರೆ ಕಡೆಯಿಂದ ಸಿಕ್ಕಿದೆಯಂತೆ...ನೀವು ಬರೋದಿಕ್ಕೆ ಆಗತ್ತಾ...? ಸಾರಿ...ಈ ಟೈಂ ನಲ್ಲಿ ಕೇಳ್ತಿದೀನಿ ಅಂತ"
"ಸರಿ ಎಲ್ಲಿಗೆ ಬರಬೇಕು ಹೇಳಿ"
ನಾಗ ಹರಿಪ್ರಕಾಶ್ ಬಳಿ ವಿವರಗಳನ್ನು ಪಡೆದುಕೊಂಡ ರಾಜ ನರಸಿಂಹ ರೆಡ್ಡಿ ತಕ್ಷಣವೇ ಹೊರಟ...
***
ಶವಾಗಾರದಿಂದ ಮನೆಗೆ ವಾಪಸ್ ಬಂದಾಗ ಸುಮಾರು ಮಧ್ಯರಾತ್ರಿ ಎರಡು ಗಂಟೆಯಾಗಿತ್ತು...
ಪದ್ಮಪ್ರಭಾ ಆತಂಕದಿಂದ ಕೇಳಿದಳು..."ನಮ್ಮ ತೇಜೂ ಬಗ್ಗೆ ಏನಾದ್ರೂ ವಿಷಯ ಗೊತ್ತಾಯ್ತೇನ್ರೀ?"
ರಾಜ ನರಸಿಂಹರೆಡ್ಡಿಯ ಮುಖದಲ್ಲಿ ಅತೀವ ದು:ಖದ ಛಾಯೆ ತುಂಬಿದೆ...ಆದರೆ ಪದ್ಮಪ್ರಭಾಳಿಗೆ ಉತ್ತರಿಸಲಿಲ್ಲ...
ಪೈಪ್ ಹೊತ್ತಿಸಿ ಶತಪಥ ಹಾಕುತ್ತಿದ್ದಾನೆ...
ಪದ್ಮಪ್ರಭಾ ಒಂದೆರಡು ಬಾರಿ ತೇಜುವಿನ ಬಗ್ಗೆ ಕೇಳಿದರೂ ರೆಡ್ಡಿ ಉತ್ತರಿಸಲಿಲ್ಲ...
ರೆಡ್ಡಿಗಳ ನಡತೆ ತಿಳಿದಿದ್ದ ಪದ್ಮಪ್ರಭಾಳಿಗೆ, ಈ ರೀತಿ ಸಂದರ್ಭಗಳಲ್ಲಿ ಹೆಚ್ಚು ಕೇಳಬಾರದೆಂದು ತಿಳಿದಿದ್ದರಿಂದ ಸುಮ್ಮನಾದಳು...
ಮುಖ ತೊಳೆದುಕೊಂಡವನೇ ನೇರವಾಗಿ ಬಂದು ಮಲಗಿದ...
ಆಗಲೇ ಸುಮಾರು ಮಧ್ಯರಾತ್ರಿ ಎರಡೂವರೆಯಾದ್ದರಿಂದ ಪದ್ಮಪ್ರಭಾಳಿಗೆ ನಿದ್ದೆಯಾವರಿಸಿತು...
***
ಬೆಳಿಗ್ಗೆ ಆರಕ್ಕೆ ಪದ್ಮಪ್ರಭಾ ಎದ್ದಾಗ ರೆಡ್ಡಿಗಳು ಪಕ್ಕದಲ್ಲಿರಲಿಲ್ಲ...
ಎಲ್ಲಿರಬಹುದು ಎಂದು ಮನೆಯೆಲ್ಲಾ ಹುಡುಕಿದಳು...
ಪದ್ಮಪ್ರಭ ಮೇಲಿರುವ ಕೋಣೆಯಲ್ಲಿರಬಹುದೇನೋ ಎಂದು ಇಣುಕಿದಾಗ ನೋಡಿದ ದೃಶ್ಯದಿಂದ ಒಮ್ಮೆಗೇ ಹೃದಯ ನಿಂತಂತಾಯಿತು...
ರಾಜ ನರಸಿಂಹ ರೆಡ್ಡಿಯ ಆರು ಅಡಿಗಿಂತ ದೊಡ್ಡ ದೇಹ ಫ್ಯಾನ್ ಗೆ ನೇತಾಡುತ್ತಿದೆ...
ಅದನ್ನು ನೋಡುತ್ತಿದ್ದಂತೆಯೇ ’ರೀ.."ಎಂದು ಚೀರುತ್ತಾ ಪದ್ಮಪ್ರಭಾ ಪ್ರಜ್ಞಾಹೀನನಾದಳು...
ಸ್ವಲ್ಪ ಸಮಯದ ನಂತರ ಪದ್ಮಪ್ರಭಾಳಿಗೆ ಪ್ರಜ್ಞೆ ಬಂತು..ಗಾಬರಿಯಲ್ಲೇ ಸಹಾಯಕ್ಕೆ ಕೂಗಿದಳು...
ಅಮ್ಮನವರ ಧ್ವನಿ ಕೇಳಿ ಮನೆಕೆಲಸದಾಳುಗಳು ಮೇಲಿನ ಕೋಣೆಗೆ ಧಾವಿಸಿ ಬಂದು ರೆಡ್ಡಿಯ ದೇಹವನ್ನು ಇಳಿಸಿದರು...
ಅಲ್ಲೇ ಒಂದು ಚೀಟಿ ಇರುವದನ್ನೂ ಗಮನಿಸಿ, ಪದ್ಮಪ್ರಭಾಳಿಗೆ ಕೊಟ್ಟರು...

ರಾಜ ನರಸಿಂಹ ರೆಡ್ಡಿ ಆತ್ಮಹತ್ಯೆಗೆ ಮುಂಚೆ ಪುಟ್ಟ ಪತ್ರವನ್ನು ಬರೆದಿಟ್ಟಿದ್ದಾನೆ...ಪತ್ರವನ್ನು ಓದುತ್ತಿದಂತೆಯೇ ಪದ್ಮಪ್ರಭಾ ಮತ್ತೆ ಪ್ರಜ್ಞಾಹೀನಳಾದಳು...
ಪತ್ರದಲ್ಲಿ ಹೀಗಿತ್ತು:
"ನನ್ನ ಮಗನ ಸಾವಿಗೆ ನಾನೇ ಕಾರಣ...
ನನ್ನ ದುರಾಸೆ ನನ್ನ ಮಗನನ್ನು ಆಹುತಿ ತೆಗೆದುಕೊಂಡಿತು...ನನ್ನ ಮಗನ ಸಾವನ್ನು ಸಿಂಹಮುಖಿಯಲ್ಲಿ ಕಣ್ಣಾರೆ ನೋಡಿ ಆನಂದಿಸಿದ ನಾನೇ ಮಹಾ ಪಾಪಿ...
ಮುಗ್ಧ ತೇಜುವನ್ನು ಪಾಪಿಗಳು ಉರಿಯುವ ಬೆಂಕಿಯಲ್ಲಿ ದೂಕಿದಾಗ ವೆಂಕಟರಾಜು ಕಾಪಾಡಬಹುದಾದ ಪರಿಸ್ಠಿತಿಯಿದ್ದರೂ ಸಿಂಹಮುಖಿಯೇ ನನಗೆ ಮತ್ತು ನನ್ನ ಉದ್ಯೋಗಿಗಳಿಗೆ ಮುಖ್ಯವಾಗಿತ್ತು...
ವೆಂಕಟರಾಜು ಈ ಘಟನೆಯ ಬಗ್ಗೆ ಹೇಳಿಕೊಂಡು ಅವಲತ್ತುಕೊಂಡಾಗ ನಾನು ’ಕರ್ತವ್ಯ’ ಎಂದು ಸೋಗು ಹಾಕಿ ಅವನಲ್ಲಿರುವ ಮನುಷ್ಯತ್ವವನ್ನೂ ಹಾಳುಮಾಡಿದೆ...
ನಾನು ಧನದಾಹಿಯಾಗಿ ಮನುಷ್ಯತ್ವವನ್ನೆಂದೋ ಕಳೆದುಕೊಂಡಿದ್ದೆ...ನನ್ನ ಮಗನ ಸಾವು ನನ್ನ ಕಣ್ಣು ತೆರೆಸಿದೆ...
ನಾನು ಮತ್ತು ನನ್ನ ಸಿಂಹಮುಖಿ, ಈ ರೀತಿ ಅದೆಷ್ಟು ಮಂದಿಯ ಪ್ರಾಣವನ್ನು ಬಲಿ ತೆಗೆದುಕೊಂಡಿದ್ದೇವೋ ತಿಳಿಯದು...ನನ ಜೀವನಕ್ಕೆ ಧಿಕ್ಕಾರವಿರಲಿ..."

--ಶ್ರೀ
(೧-ಏಪ್ರಿಲ್-೨೦೧೨)

Monday, March 12, 2012

ನಲ್ಲೆ, ನೀ ಕನಸ ಕಾಣು...

ನಲ್ಲೆ,
ನೀ ಕನಸ ಕಾಣು...
ನೀ ಕನಸ ಕಾಣು
ಹತ್ತು ಹಲವಾರು...
ನಾನಿರುವೆ ಇಲ್ಲೇ
ನಿನ್ನೊಡನೆ ಸದಾ
ಎಂದೆಂದಿಗೂ
ನಡೆಸಿಕೊಡಲು
ನಿನ್ನ ಕನಸಿನ
ಅಹವಾಲು!

--ಶ್ರೀ
೯-ಮಾರ್ಚ್-೨೦೧೨