
ಮರೆಯಲಾದೀತೆ ನಿನ್ನ...
ಬೆರೆತೆವಂದೇ ನಾವು...ಮರೆಯಲಾದೀತೆ....??? || ಪ ||
ಮುಂಗಾರಿನಂತೆ ಬಂದೆ
ತಂಗಾಳಿ-ಒಲವಧಾರೆ
ಸತತ ನೀ ಉಣಿಸಿದೆ... || ೧ ||
ನಿನ್ನ ತಂಪು-ಕಂಪು ಸೋಕಿ
ನನ್ನ ನಾ ಮರೆತೆನೋ...
ಉನ್ಮಾದದ ಮೋಕ್ಷ ಫಲಿಸಿತೆನಗೆ...|| ೨ ||
ಒಲವೆಲ್ಲೆಡೆ ಸೂಸಿ
ನಮ್ಮ ಬಂಧದಾ ಕಂಪು
ಭುವಿಯ ದಾಟಿತ್ತು || ೩ ||
ಒಲವೆಂಬ ಕಂಪದೇಕೋ
ಹೊಗೆಯಂತೆ ಒಗ್ಗೂಡಿ
ನೇಸರನ(ವಿಧಿಯ) ಕಾಡಿತ್ತು... || ೪ ||
ಉರಿಯಲೇ ಬರೆದ ವಿಧಿ
ವಿರಹದಾ ದೀರ್ಘಪುಟ,
ಕೊನೆಯಿಲ್ಲದಂತೆ ಬರೆದವನವನು... || ೫ ||
ವಿಧಿಯಾಜ್ಞೆಯಂತೆ ಹೊರಟೆ
ನೀ ನನ್ನನು ಬಿಟ್ಟು
ಎಂದಿನಂತೆ ಅಂದು ಕೂಡ ಮಂದಹಾಸ || ೬ ||
ಮುಖವಾಡದ ಹಿಂದೆ
ಕುಣಿದಿದ್ದ ವಿರಹಾಗ್ನಿ
ನನಗೆ ಕಂಡಿತ್ತು-ನನ್ನ ಸುಡುತಿತ್ತು || ೭ ||
ಅಂದು ಹೋದವ ನೀನು
ಇಂದಿಗೂ ಬರಲಿಲ್ಲ
ನಿನ್ನ ಕಾಣುವ ತವಕ ತಣಿದಿಲ್ಲವೋ || ೮ ||
ಎಂದು ಬರುವೆಯೋ ನೀನು
ಒಂದುಗೂಡುವ ಆಸೆ
ಇಂದಿಗೂ ನನ್ನಲಿ ಉರಿಯುತಿಹುದು || ೯ ||
ನಿನ್ನ ಕಂಡದೆಷ್ಟು ವರುಷ
ಉರುಳಿತೋ ನೆನಪಿಲ್ಲ
ನನ್ನಲಿರುವ ಒಲವು ಕುಂದಲಿಲ್ಲ... || ೧೦ ||
ನನ್ನ ಪ್ರತಿ ನಾಡಿಯಲ್ಲಿ
ನಿನ್ನದೇ ಮಿಡಿತವೋ...
ಬದುಕಿರುವೆ ಇಂದು ನಾನು ನಿನ್ನ ನೆನಪಲಿ.... || ೧೧ ||
ಮರೆಯಲಾದೀತೆ ನಿನ್ನ
ಬೆರೆತವಂದೇ ನಾವು...
ನನ್ನಿರುವು ಇಂದಿಗೂ ನಿನ್ನಿರುವಲಿ... || ೧೨ ||
ಚಿತ್ರಕೃಪೆ: http://www.iskconkharghar.com/