Monday, June 29, 2009

ಓ ’ಸಾಥಿ’ ರೇ, ತೇರೆ ಬಿನಾ ಭಿ ಕ್ಯಾ ಜೀನಾ!

ಕಿಶೋರ್ ಕುಮಾರ್ ಹಾಡಿರುವ ಅಚ್ಚುಮೆಚ್ಚಿನ ಹಾಡುಗಳಲ್ಲಿ ಈ ಹಾಡೂ ಒಂದು...


ಹಾಗೂ ’ಗೀತಾ’ ಚಿತ್ರದ ’ಜೊತೆ ಜೊತೆಯಲಿ’ ಹಾಡೂ ಅಂದ್ರೆ ನನಗೆ ತುಂಬಾನೇ ಇಷ್ಟ!



ಈ ಹಿಂದಿ ಹಾಡಿಗೂ, ಗೀತಾ ಚಿತ್ರಗೀತೆಗೂ ಏನು ಸಂಬಂಧ ಅಂದುಕೊಳ್ಳುತ್ತಿದ್ದೀರಾ?
ಇತ್ತೀಚಿಗೆ ಟಿ.ವಿ. ಮಾಧ್ಯಮದವರೂ, ಕನ್ನಡಪ್ರಭ, ಪ್ರಜಾವಾಣಿ ಮುಂತಾದ ಹೆಸರಾಂತ ಪತ್ರಿಕೆಗಳೂ, ಈ "ಜೊತೆ"ಗೆ ಕೈ ಕೊಟ್ಟು "ಸಾಥ್"ನ ಸಾಥಿಗಳಾಗಿದ್ದಾರೆ...
ಈ "ಸಾಥ್" ಪದದ ಬಳಕೆ, "ಜೊತೆ ಜೊತೆಯಲ್ಲಿ" ಎಂಬ ಅದ್ಭುತ ಹಾಡಿನಲ್ಲಿ ಬಳಸಿದ್ದರೆ ಹೇಗಿರುತ್ತಿತ್ತು ಎಂದನಿಸಿತು.
’ಜೊತೆ’ ಎಂಬ ಕನ್ನಡ ಪದವೂ ತೆರೆಮರೆಗೆ ಸರಿಯುತ್ತಿದೆಯೇ?
ನೀವು ಸಾಥ್‍ನ ಸಾಥಿಗಳಾಗಿದ್ದೀರೇ, ಜೊತೆಯ ಜೊತೆಯಲಿರುವವರೇ?

--ಶ್ರೀ

Saturday, June 27, 2009

ಹೂವು ಮತ್ತು ಟೊಂಗೆ



ಕೊನರಿದ
ಹೊಸ ಹೂಗಳ
ಸವಿಯುತ, ಆನಂದದಿ
ನಲಿಯುತ, ಹೊಗಳುತ,
ಹಳೆ ಹೂಗಳ,
ಚಿಗುರಿಸಿದ
ರೆಂಬೆ-ಟೊಂಗೆಗಳ
ಮರೆಯುವುದೆಷ್ಟು ಸುಲುಭ!

Friday, June 26, 2009

ಮನದ ಹೊಗೆ

ಬಾಳಿಗರು ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು...

ಹಾಳು ಧಗೆ ಎಂದು
ಮನದ ಹೊಗೆ
ಹೊರಗೆ ಹಾಕುತ
ಭುಸುಗುಟ್ಟಿದೆ...
ಧಗೆಯ ಮೇಲಿನ
ಹೊಗೆ ಹೊರಹಾಕಿದರೂ
ಮನದಾಳದ ಹೊಗೆ
ಆರುವುದಿಲ್ಲವೆಂಬ ಅರಿವಿತ್ತು...

--ಶ್ರೀ

Tuesday, June 16, 2009

ಕಾಡುವ ಕರಿನೆರಳು

ಕಾಡುವ
ಕರಿನೆರಳನು ದಿಟ್ಟಿಸಿ
ಬೇಗುದಿಯಲಿ
ಸುಡುವುದಕಿಂತ,
ಕಂಗಳನೆತ್ತಿ
ಸುಡುವ ನೇಸರನಲಿ
ನೆಡುವುದು ಲೇಸು...

--ಶ್ರೀ
(೧೭ - ಜೂನ್ - ೨೦೦೯)

Wednesday, June 10, 2009

ಕೊಚ್ಚೆಯಿಂದ ದೂರ ಉಳಿವಿರೇಕೆ?

ಕೊಚ್ಚೆಯ ಕೆಸರು
ಹಚ್ಚಿಕೊಳುವುದೆಂದು
ಬೆಚ್ಚನೆ ಉಳಿವಿರೇಕೆ?
ಕೊಚ್ಚೆಯಲಿಳಿವ
ಕೆಚ್ಚಿರುವವರಿಗೇ
ಮೆಚ್ಚಿ ತಾಗುವುದು ತಾವರೆ...

--ಶ್ರೀ
(೧೦ - ಜೂನ್ - ೨೦೦೯)

Monday, June 8, 2009

ಅರಿವು-ಅಳಿವು

ತಿಳಿ ನೀರೂ ಹರಿಯದೆ ನಿಲಲು
ಕೊಳೆಯುವುದು, ಹಳಸುವುದು...
ತಿಳಿವಿನ ಹರಿವು ನಿಲಲು,
ಅಳಿವಿನ ಉರುಳನು ಎಳೆದಂತಲವೇನು?

--ಶ್ರೀ
(೮ - ಜೂನ್ - ೨೦೦೯)

Friday, June 5, 2009

ತಂಪಾದ ಗುಣಗಳ ಕಂಪು

ತಂಪಾದ ಗುಣಗಳು ದೂರದಲಿರುವ ಗರಿಮೆಗಳ ಮುಟ್ಟುವುದು
ಕಂಪಾದ ಕೇದಗೆಯ ಬಳಿಗೆ ದುಂಬಿಗಳು ತಂತಾನೆ ಬರುವಂತೆ

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||

--ಶ್ರೀ

(೫-ಜೂನ್-೨೦೦೯)

ಸಾಲ ಮಾಡಿ ತುಪ್ಪ ತಿನ್ನು!

ಬರೀ ತುಪ್ಪ ತಿನ್ನೋದು ನನಗೆ ಇಷ್ಟನೇ ಇಲ್ಲ...
ಆದ್ರೂ, ಕೆಳಗಿನ ಸುಭಾಷಿತವನ್ನು ಹಂಸಾನಂದಿಯವರು ಕೊಟ್ಟಾಗ, ನಾನೂ ಒಂದು ಭಾವಾನುವಾದ ಮಾಡಿಬಿಟ್ಟೆ :)

ಬೂದಿಯಾದ ಒಡಲು ಮರಳಿ ಬರುವುದೇನೋ, ಬೆಪ್ಪ!
ತಿಣುಕಿ ಸಾಲ ಮಾಡಿಯಾದ್ರೂ ತಿನ್ನೋ ನೀನು ತುಪ್ಪ!

ಸಂಸ್ಕೃತ ಮೂಲ (ಚಾರ್ವಾಕ):

ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ |
ತಸ್ಮಾತ್ ಸರ್ವ ಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ ||

--ಶ್ರೀ
(೫-ಜೂನ್-೨೦೦೯)

ದೀಪವು ನಿನ್ನದೇ...ಗಾಳಿಯು ನಿನ್ನದೇ...





















ಸ್ಠಳ: ಮನೋಕಾಮನಾ ಮಂದಿರ, ನೇಪಾಳ

ಹಿಮಾಚಲ ಪರ್ಯಟನೆ - ಬೈಜನಾಥ್



ಹಿಮಾಚಲದ ಕಾಂಗ್ರ ಗುಡ್ಡಗಾಡಿನ ತಪ್ಪಲಲ್ಲಿರುವ ಊರು - ಬೈಜನಾಥ್. ಧರ್ಮಶಾಲಾದಿಂದ ಪೂರ್ವಕ್ಕಿರುವ ಈ ಊರು ಬಿನ್ವಾ ಎಂಬ ನದಿಯ ತಟದಲ್ಲಿದೆ. ಬಿಯಾಸ್ ನದಿಯ ಉಪನದಿ ಈ ಬಿನ್ವಾ.
ಊರಿನ ಹೆಸರೇ ಸೂಚಿಸುವಂತೆ ಇಲ್ಲಿ ಬೈಜನಾಥ್ ದೇವಾಲಯವಿದೆ. ಬೈಜನಾಥನೆಂದರೆ ವೈದ್ಯನಾಥ, ಶಿವ.
ಈ ಸ್ಥಳದಲ್ಲಿ ಶಾರದಾ ಲಿಪಿಯಲ್ಲಿ ಬರೆದ ಶಿಲಾಶಾಸನಗಳು ದೊರೆಕಿವೆ. ಈ ಶಿಲಾಶಾಸನಗಳಿಂದ ಈ ಊರಿನ ಹಳೆಯ ಹೆಸರು ’ಕೀರಗ್ರಾಮ’ ಎಂದೂ, ಬಿನ್ವಾ ನದಿಯ ಹಳೆಯ ಹೆಸರು ’ಬಿಂದುಕಾ’ ಎಂದೂ ತಿಳಿದುಬರುತ್ತದೆ. ಈ ಶಿಲಾಶಾಸನಗಳಿಂದ, ಈ ದೇಗುಲವನ್ನು ಕ್ರಿ.ಶ. ೧೨೦೪ರಲ್ಲಿ ಕಟ್ಟಿದರೆಂದೂ ಹೇಳುತ್ತಾರೆ.
ಉತ್ತರ ಭಾರತದ ನಾಗರ ಶೈಲಿಯಲ್ಲಿ ಕಟ್ಟಿರುವ ಸುಂದರ ದೇಗುಲ - ಬೈಜನಾಥ್. ಇಲ್ಲಿ, ವೈದ್ಯನಾಥನ ಎದುರು(ಲಿಂಗಕ್ಕೆ ನೇರವಾಗಿ) ಎರಡು ನಂದಿ ವಿಗ್ರಹಗಳು ಕಾಣಸಿಗುತ್ತವೆ. ಪುಟ್ಟ ಮಂಟಪದೊಳಗೆ ಕುಳಿತ ನಂದಿಯೊಂದಾದರೆ, ಅದರ ಹಿಂದೆ ನಿಂತಿರುವ ನಂದಿಯೊಂದು. ಪಶ್ಚಿಮಕ್ಕೆ ಮುಖ ಮಾಡಿರುವ ಈ ದೇಗುಲದ ಮುಖಮಂಟಪಕ್ಕೆ ನಾಲ್ಕು ಕಂಬಗಳಿವೆ.
ದೇಗುಲದ ಮುಖ್ಯದ್ವಾರದ ಎಡ ಭಾಗಕ್ಕೆ, ನಿಂತಿರುವ ಗಣಪನ ವಿಗ್ರಹವೊಂದು ಕಾಣಸಿಗುತ್ತದೆ. ದೇಗುಲದ ಹೊರಭಾಗದ ಸುತ್ತಲೂ, ಸುಬ್ರಮಣ್ಯ, ಕಾಳಿ, ಪಾರ್ವತಿ ಮುಂತಾದ ಮನಸೆಳೆವ ವಿಗ್ರಹಗಳಿವೆ.

ಈ ಊರಿನಲ್ಲಿ ನಡೆವ ದಸರೆಯಲ್ಲೊಂದು ವೈಶಿಷ್ಟ್ಯವಿದೆ.
ಉತ್ತರ ಭಾರತದಲ್ಲಿ, ಸಾಮಾನ್ಯವಾಗಿ ದಸರೆಯ ಸಮಯದಲ್ಲಿ ಕಾಣಸಿಗುವುದು ’ರಾಮ-ಲೀಲ’ ಉತ್ಸವ. ಈ ಉತ್ಸವದಲ್ಲಿ, ರಾವಣ-ಕುಂಭಕರ್ಣ-ಮೇಘನಾದರ ಬೊಂಬೆಗಳನ್ನು ಸುಡುವುದು ಸರ್ವೇ ಸಾಮಾನ್ಯ.
ಆದರೆ ಈ ಊರಿನಲ್ಲಿ ರಾವಣನನ್ನು ಸುಡುವುದಿಲ್ಲ. ಈ ಸ್ಥಳದಲ್ಲಿ ಬೈಜನಾಥನನ್ನು ಕುರಿತು ರಾವಣ ತಪಗೈದಿದ್ದನೆಂಬುದು ಇಲ್ಲಿಯವರ ನಂಬಿಕೆ. ಇಲ್ಲಿ ಕೂಡ ಕೆಲ ವರ್ಷಗಳ ಹಿಂದೆ ದಸರಾ ಸಮಯದಲ್ಲಿ, ಬೇರೆಡೆಯಂತೆ ದಸರೆಯ ಸಮಯದಲ್ಲಿ ರಾವಣನ ಬೊಂಬೆ ಸುಟ್ಟಾಗ ಉತ್ಸವ ನಡೆಸಿಕೊಟ್ಟವರಿಗೆ ಸಾವಾಯ್ತಂತೆ.
ಇದೇ ರೀತಿ, ಪ್ರತಿ ವರ್ಷವೂ ರಾವಣನನ್ನು ಸುಟ್ಟಾಗ, ಒಂದಿಲ್ಲೊಂದು ಕೆಡುಕಾಗಿ, ಕೊನೆಗೆ ರಾವಣನ ಸುಡುವ ಪ್ರತೀತಿಯನ್ನು ಈಗ ನಿಲ್ಲಿಸಿದ್ದಾರೆ.

ಒಟ್ಟಿನಲ್ಲಿ, ಬೆಟ್ಟದಿಂದ ಸುತ್ತುವರಿದ, ಸಿಂಧೂ ನದಿಯ ಉಪನದಿಯ ಉಪನದಿಯ ತಟದ ಈ ಬೈಜನಾಥ್, ಕುತೂಹಲಭರಿತ ಪ್ರೇಕ್ಷಣೀಯ ಸ್ಥಳ.

--ಶ್ರೀ

Tuesday, June 2, 2009

ಕುಂದು ಬಂದಾಗ ಎದಿರಿಸುವುದು ಹೇಗೆ???

ಕುಂದು ಬಂದಾಗ ಎದಿರಿಸುವುದು ಹೇಗೆಂದು ಎಣಿಸಿರಬೇಕು
ಬೆಂದು ಉರಿವಾಗ ಮನೆ ಬಾವಿಯ ಅಗೆವುದು ತರವೇನು?

ಸಂಸ್ಕೃತ ಮೂಲ:

ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||

(೨-ಜೂನ್-೨೦೦೯)