Tuesday, January 27, 2009

ದಾರಿಯ ತೋರೋ ಸಿರಿ ರಾಮ...



ರಾಮಾಯಣದ ಸುಂದರ ಕಾಂಡವು ಬಹು ಜನಪ್ರಿಯವಾದದ್ದೇ...
ನಾನು ಈ ಸುಂದರ ಕಾಂಡದಲ್ಲಿ ಬಣ್ಣಿಸಿರುವ ಒಂದು ಸನ್ನಿವೇಶವನ್ನು ಭಿನ್ನ ರೀತಿಯಲ್ಲಿ ಚಿತ್ರಿಸ ಬಯಸುತ್ತೇನೆ...

ದಾರಿಯ ತೋರೋ ಸಿರಿ ರಾಮ
ದಾರಿಯ ತೋರೋ ಸಿರಿ ರಾಮ ದಿನವೂ
ಜಪಿಸುವೆ ನಾನು ನಿನ್ನ ನಾಮ...

ಜಾಂಬವನಿಂದಲಿ ಬಲವನು ಅರಿತೆ
ಅಂಬರದಾಚೆಗೆ ಒಮ್ಮೆಲೆ ಬೆಳೆದೆ
ಸಾಗರವನ್ನು ಸುಲಭದಿ ಅಳೆದೆ || ದಾರಿಯ ||

ಮೈನಾಕವನು ಲಂಘಿಸಿ ನಡೆದೆ
ಲಂಕಿಣಿಯನ್ನು ಕುಟ್ಟಿ ನಾ ತರಿದೆ
ಬಿಂಕದಿ ನಾನು ಲಂಕೆಲಿ ಮೆರೆದೆ || ದಾರಿಯ ||

ಗರುವವು ಎಂದು ಮೆಟ್ಟಿತೋ ಅರಿಯೆ
ಮಾತೆಯ ಕಾಣದೆ ಎಲ್ಲೆಡೆ ಅಲೆದೆ
ನಿನ್ನಯ ನಾಮವ ಏತಕೋ ಮರೆತೆ || ದಾರಿಯ ||

ಅನುದಿನ ಸ್ಮರಿಸುವೆ ನಿನ್ನ ನಾಮ...
ಅನುಕ್ಷಣ ನೆನಯುವೆ ನಿನ್ನ ನಾಮ...
ದಾರಿಯ ತೋರೋ ಸಿರಿ ರಾಮ || ದಾರಿಯ ||

(ಈ ರಚನೆ ಅಹಿರ್-ಭೈರವ್/ಚಕ್ರವಾಕ ಧಾಟಿಯಲ್ಲಿದೆ)

--ಶ್ರೀ
(೨೨-ಜನವರಿ-೨೦೦೯)

ಅಮ್ಮನ ಕೋಪ...

ತುಂಟಾಟ ತಾಳದೆ ಮುನಿದು, ದುರುದುರನೆ ದೂರ ಸರಿದಳು ಅಮ್ಮ
ಒಲವೇ ಕಂಡ ಕಂದನಿಗೆ ಅವಳ ಕಂಗಳಲೂ ಕಂಡಿತು ಗುಮ್ಮ

ಅಮ್ಮನವತಾರವ ಕಂಡು ಬೆದರಿ ಥರಥರನೆ ನಡುಗಿದನು ಪುಟ್ಟ
ಚೆನ್ನಿಲ್ಲದಾ ಕೋಪ ಬೇಡವು ಎಂದು ನಿಂತ ನೆಲದೀ ತಾನು ನೆಟ್ಟ

ತಣಿಯದಮ್ಮನ ಕೋಪ, ಬರಳು ಅಮ್ಮನು ಬಳಿಗೆ, ಸರಿಯಿತು ವಿರಸದಾ ಗಳಿಗೆ
ಮುನಿದ ಅಮ್ಮನಾ ಒಲಿಸುವುದು ಹೇಗೆಂದು ಎಣಿಸುತಾ ನಿಂತನೊಂದುಗಳಿಗೆ

ಕಣ್ಕೆಂಪು ಬೇಕಿಲ್ಲ, ಓಲೈಸಬೇಕಲ್ಲ ರಮಿಸಲೋಡಿದನು ಪುಟ್ಟ
ತಪ್ಪಿನರಿತು ತಾನು ಅಮ್ಮನಾ ಬಿಗಿಹಿಡಿದು ಗಳಗಳನೆ ತುಂಟನತ್ತ

ಮುನಿದ ಅಮ್ಮನು ಕೂಡ ಕಂದನಾ ಕಂಗಳಲಿ ಅಳುವ ಸಹಿಸುವುದಿಲ್ಲ
ಇಳಿಯಿತು ಮುನಿಸೆಲ್ಲ, ಬರಸೆಳೆದು ಮಗನ ಇತ್ತಳು ಮುತ್ತ ಸಿಹಿ ಬೆಲ್ಲ

ತುಂಬಿದಾ ಕಂಗಳಲು ಮಗುವು ತುಸು ನಕ್ಕನು, ವಿರಸಕೆ ಜಾಗವಿನ್ನಿಲ್ಲ
ಸಿಹಿ ಒಲವು ಹರಿಯಿತಲ್ಲೆಲ್ಲಾ...ಸಿಹಿ ಒಲವು ಹರಿಯಿತಲ್ಲೆಲ್ಲಾ...

(೧೪-೧೫ ಜನವರಿ ೨೦೦೯)

-ಶ್ರೀ

Wednesday, January 7, 2009

ಕ್ಲಿಕ್ಕಿಸಿದಾಗ...

ಮೌಸ್ ಕ್ಲಿಕ್ಕಿಸೋದು ಪ್ರತಿ ದಿನದ ಗೋಳೇ ಬಿಡಿ...ಬಿಡುವಿದ್ದಾಗ ಕ್ಯಾಮರ ಕ್ಲಿಕ್ಕಿಸೋ ಪ್ರಯತ್ನ...
ಹೇಗಿದೆ ಹೇಳಿ...?

ಬೇಟೆಗೆ ಹೊಂಚು...
(ಹಿಮಾಲಯದ ತಪ್ಪಲಲ್ಲಿ ಕಂಡ ದೊಣ್ಣೆಕೇತ)



ನಾನೇ ರಾಜಕುಮಾರ...!
(ಗೋಪಾಲಸ್ವಾಮಿ ಬೆಟ್ಟದಲ್ಲಿ)



ನನ್ ಟೋಪಿ...ನಿಂಗ್ ಕೊಡಲ್ಲ...!
(ಶೃಂಗೇರಿ ಶಾರದಾ ಪೀಠ)



ಕೆಂಪಾದವೋ ಎಲ್ಲ ಕೆಂಪಾದವೋ...
(ಚಂದ್ರಗಿರಿ, ತಿರುಪತಿ ಬಳಿ)


ನಿಮಗೆ ಯಾವುದು ಮೆಚ್ಚೆನಿಸಿತು ಹೇಳಿ...

--ಶ್ರೀ
(ಕೆಲವನ್ನು ಇಮೇಜ್ ಎಡಿಟರ್‍ನಲ್ಲಿ ಎಡಿಟ್ ಮಾಡಲಾಗಿದೆ...)